ಮತ್ತೆ ಮೊದಲ ಪದವಿಗೆ ಸೇರಿದರೆ ಉಚಿತ ಶಿಕ್ಷಣ!

ಬುಧವಾರ, ಜೂನ್ 19, 2019
25 °C

ಮತ್ತೆ ಮೊದಲ ಪದವಿಗೆ ಸೇರಿದರೆ ಉಚಿತ ಶಿಕ್ಷಣ!

Published:
Updated:

ಬಳ್ಳಾರಿ: ದ್ವಿತೀಯ ಪಿಯುಸಿಯ ನಕಲಿ ಅಂಕಪಟ್ಟಿ ನೀಡಿ ವಿವಿಧ ಪದವಿ ತರಗತಿಗಳಲ್ಲಿ ಓದುತ್ತಿರುವವರು ತಪ್ಪು ಒಪ್ಪಿಕೊಂಡು ಮತ್ತೆ ಮೊದಲ ಪದವಿಗೆ ದಾಖಲಾದರೆ ಉಚಿತ ಶಿಕ್ಷಣ ನೀಡಲು ಇಲ್ಲಿನ ವಿಜಯ ನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ ನಿರ್ಧರಿಸಿದೆ. ವಿಶ್ವವಿದ್ಯಾಲಯದಲ್ಲಿ ಶನಿವಾರ ನಡೆದ ವಿದ್ಯಾವಿಷಯಕ ಪರಿಷತ್‌ ಸಭೆಯಲ್ಲಿ ಸುದೀರ್ಘ ಚರ್ಚೆ ಬಳಿಕ ಕುಲಪತಿ ಪ್ರೊ.ಎಂ.ಎಸ್‌.ಸುಭಾಷ್‌ ಈ ವಿಷಯವನ್ನು ತಿಳಿಸಿದರು.

‘ಎರಡು ಮತ್ತು ಮೂರನೇ ಸೆಮಿಸ್ಟರ್‌ನಲ್ಲಿರುವವರು ದ್ವಿತೀಯ ಪಿಯುಸಿ ಶಿಕ್ಷಣ ಪಡೆದು ಮತ್ತೆ ಮೊದಲನೇ ಸೆಮಿಸ್ಟರ್‌ಗೆ ದಾಖಲಾದರೆ ಅವರು ಪಾವತಿಸಬೇಕಾದ ಎಲ್ಲ ಶುಲ್ಕವನ್ನು ಮನ್ನಾ ಮಾಡಲಾಗುವುದು. ಅಥವಾ ಈಗ ಇರುವ ತರಗತಿಯಲ್ಲೇ ಮುಂದುವರಿಯುವುದಾದರೆ, ಅವರ ಸ್ನಾತಕೋತ್ತರ ಶಿಕ್ಷಣಕ್ಕೂ ಅನುವು ಮಾಡಲಾಗುವುದು. ಆದರೆ ಆ ನಂತರ ಭವಿಷ್ಯದಲ್ಲಿ ಎದುರಾಗುವ ಉದ್ಯೋಗಸಂಬಂಧಿಯಾದ ಎಲ್ಲ ತೊಂದರೆಗಳನ್ನು ಅವರೇ ಎದುರಿಸಬೇಕಾಗುತ್ತದೆ’ ಎಂದು ಕುಲಪತಿ ಸ್ಪಷ್ಟಪಡಿಸಿದರು.

‘ನಕಲಿ ಅಂಕಪಟ್ಟಿ ನೀಡಿದವರು ಪಿಯುಸಿ ಉತ್ತೀರ್ಣರಾಗಿ ಮತ್ತೆ ಪದವಿಗೆ ದಾಖಲಾದರೆ ಶಿಕ್ಷಣ ಶುಲ್ಕವನ್ನು ಮನ್ನಾ ಮಾಡುವ ಸಂಬಂಧ ಎಲ್ಲ ಕಾಲೇಜುಗಳಿಗೂ ಮಾಹಿತಿ ನೀಡಲಾಗುವುದು. ಅದಕ್ಕೂ ಮುನ್ನ ಪ್ರಾಂಶುಪಾಲರ ಸಭೆ ನಡೆಸಲಾಗುವುದು. ಈ ವಿಚಾರವನ್ನು ಸಮಗ್ರವಾಗಿ ವಿಶ್ವವಿದ್ಯಾಲಯದ ವೆಬ್‌ಸೈಟ್‌ನಲ್ಲೂ ದಾಖಲಿಸಲಾಗುವುದು’ ಎಂದರು.

ನಮೂದು ಅಗತ್ಯ: ‘ನಕಲಿ ಅಂಕಪಟ್ಟಿ ನೀಡಿದ ಬಗೆಗಿನ ಮಾಹಿತಿಯನ್ನು ವಿದ್ಯಾರ್ಥಿಗಳ ಅಂಕಪಟ್ಟಿ ಅಥವಾ ಪದವಿ ಪ್ರಮಾಣಪತ್ರದಲ್ಲಿ ನಮೂದಿಸದಿದ್ದರೆ ವಿಶ್ವವಿದ್ಯಾಲಯ ಲೋಪ ಮಾಡಿದಂತಾಗುತ್ತದೆ. ಉದ್ಯೋಗದಾತ ಸಂಸ್ಥೆಗಳು ಆ ಪ್ರಮಾಣಪತ್ರವನ್ನೇ ಪ್ರಮುಖವಾಗಿ ಪರಿಗಣಿಸುವುದರಿಂದ ನಕಲಿ ಅಂಕಪಟ್ಟಿಯ ವಿಷಯವನ್ನು ಮುಚ್ಚಿಡಬಾರದು’ ಎಂದು ಕುಲಪತಿ ಅಭಿಪ್ರಾಯಪಟ್ಟರು.

ಅವರ ಅಭಿಪ್ರಾಯವನ್ನು ಕೆಲವರು ಅನುಮೋದಿಸಿದರೆ, ಇನ್ನೂ ಕೆಲವರು ಒಪ್ಪಲಿಲ್ಲ. ‘ನಕಲಿ ಅಂಕಪಟ್ಟಿ ಸಲ್ಲಿಸಿದ್ದರು ಎಂಬ ಮಾಹಿತಿಯನ್ನು ನಮೂದಿಸಿದರೆ ವಿದ್ಯಾರ್ಥಿಗಳ ಭವಿಷ್ಯಕ್ಕೆ ಕಲ್ಲು ಹಾಕಿದಂತೆ ಆಗುತ್ತದೆ’ ಎಂಬ ಅಭಿಪ್ರಾಯ ವ್ಯಕ್ತವಾಯಿತು.

‘ಉತ್ತಮ ಭವಿಷ್ಯ ಬೇಕು ಎಂದರೆ ವಿದ್ಯಾರ್ಥಿಗಳು ಪಿಯುಸಿ ಉತ್ತೀರ್ಣರಾಗಿ ನಂತರ ಪದವಿಗೆ ಸೇರಿಕೊಳ್ಳಲಿ’ ಎಂದು ಕುಲಪತಿ ಪ್ರತಿಕ್ರಿಯಿಸಿದರು. ಕುಲಸಚಿವರಾದ ಪ್ರೊ.ಎಸ್‌.ಎ.ಪಾಟೀಲ, ಪ್ರೊ.ಹೊನ್ನು ಸಿದ್ಧಾರ್ಥ ಇದ್ದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry