ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್ಲಿ ನೋಡಿದರಲ್ಲಿ ಪೊಲೀಸರು

Last Updated 29 ಅಕ್ಟೋಬರ್ 2017, 6:15 IST
ಅಕ್ಷರ ಗಾತ್ರ

ಬೀದರ್‌: ಬೀದರ್‌–ಕಲಬುರ್ಗಿ ರೈಲು ಮಾರ್ಗ ಉದ್ಘಾಟನೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಭಾನುವಾರ ನಗರಕ್ಕೆ ಬರುತ್ತಿರುವ ಕಾರಣ ನಗರಕ್ಕೆ ಪೊಲೀಸ್‌ ಸರ್ಪಗಾವಲು ಹಾಕಲಾಗಿದೆ. ಎಲ್ಲಿ ನೋಡಿದರಲ್ಲಿ ಪೊಲೀಸರೇ ಕಾಣುತ್ತಿದ್ದಾರೆ.

ಒಬ್ಬರು ಡಿಸಿಪಿ, ತಲಾ ಐವರು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ, ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ, 23 ಡಿವೈಎಸ್‌ಪಿ, 128 ಪಿಎಸ್‌ಐ, 67 ಸಿಪಿಐ, 128 ಪಿಎಸ್‌ಐ, ಬೀದರ್, ಕಲಬುರ್ಗಿ ಹಾಗೂ ಯಾದಗಿರಿ ಜಿಲ್ಲೆಯ 2,200 ಪೊಲೀಸ್‌ ಸಿಬ್ಬಂದಿ, 500 ಗೃಹ ರಕ್ಷಕರು, ಕ್ಷಿಪ್ರ ಕಾರ್ಯಾಚರಣೆ ಪಡೆ, ಕೆಎಸ್‌ಆರ್‌ಪಿ 12 ತುಕ್ಕಡಿ, ಜಿಲ್ಲಾ ಸಶಸ್ತ್ರಪಡೆಯ 18 ತುಕ್ಕಡಿ, ಭಯೋತ್ಪಾದಕ ನಿಗ್ರಹ ದಳವನ್ನು ಬಂದೋಬಸ್ತ್‌ಗೆ ನಿಯೋಜಿಸಲಾಗಿದೆ.

ಕ್ರೀಡಾಂಗಣ ಸುತ್ತಲೂ ಪೊಲೀಸ್‌ ಕಾವಲನ್ನು ಬಿಗಿಗೊಳಿಸಲಾಗಿದೆ. ನಗರದ ಸುತ್ತಮುತ್ತ ನಾಕಾ ಬಂದಿ ಮಾಡಲಾಗಿದೆ. ಪೊಲೀಸರು ಬೇರೆ ಊರುಗಳಿಂದ ನಗರಕ್ಕೆ ಬರುವ ಪ್ರತಿಯೊಂದು ವಾಹನವನ್ನೂ ಪರಿಶೀಲನೆ ಮಾಡುತ್ತಿದ್ದಾರೆ. ಕ್ರೀಡಾಂಗಣ ಬಳಿ ನಾಲ್ಕು ಅಗ್ನಿಶಾಮಕ ದಳದ ವಾಹನಗಳನ್ನು ನಿಲುಗಡೆ ಮಾಡಲಾಗಿದೆ.

‘ಕಾರ್ಯಕ್ರಮಕ್ಕೆ ಎಲ್ಲರೂ ಬರಿಗೈಯಲ್ಲಿ ಬರಬೇಕು. ನೀರಿನ ಬಾಟಲಿ, ಕಪ್ಪು ಬಟ್ಟೆ ಹಾಗೂ ಎಲೆಕ್ಟ್ರಾನಿಕ್‌ ವಸ್ತುಗಳನ್ನು ತರಬಾರದು. ಸಮಾರಂಭ ನಡೆಯುವ ಸ್ಥಳದಿಂದ ಎರಡು ಕಿ.ಮೀ. ಅಂತರದಲ್ಲೇ ತಪಾಸಣೆ ನಡೆಸಲಾಗುವುದು’ ಎಂದು ಈಶಾನ್ಯ ವಲಯ ಐಜಿಪಿ ಅಲೋಕಕುಮಾರ ತಿಳಿಸಿದ್ದಾರೆ.

ಕ್ರೀಡಾಂಗಣ ಪಕ್ಕದ ನಂದಿ ಕಾಲೊನಿ, ಜ್ಯೋತಿ ಕಾಲೊನಿ ಹಾಗೂ ಜಿಲ್ಲಾ ರಂಗ ಮಂದಿರ ಹಿಂಭಾಗದ ಪ್ರದೇಶಕ್ಕೆ ಭೇಟಿ ನೀಡಿ ಮನೆಗಳ ಮಾಲೀಕರ ಆಧಾರ್‌ ಸಂಖ್ಯೆ ಪಡೆದುಕೊಂಡಿದ್ದಾರೆ. ಒಂದು ತಿಂಗಳ ಹಿಂದೆ ಬಾಡಿಗೆ ಪಡೆದಿರುವವರ ವಿವರ ಪಡೆದಿದ್ದಾರೆ.

ನೆರೆಯ ಜಿಲ್ಲೆಗಳಿಂದಲೂ ಜನರು ಪಾಲ್ಗೊಳ್ಳಲಿದ್ದಾರೆ. ಸಾರ್ವಜನಿಕರು ಮಾರುಕಟ್ಟೆಗೆ ಬಂದರೆ ತೊಂದರೆ ಆಗಲಿದೆ. ಸಂಚಾರ ದಟ್ಟಣೆ ಹಾಗೂ ಸುರಕ್ಷತೆಯ ದೃಷ್ಟಿಯಿಂದ ಸಂಜೆ ಅಂಗಡಿ ಮುಂಗಟ್ಟುಗಳನ್ನು ಬಂದ್‌ ಮಾಡಿ ಸಹಕಾರ ನೀಡುವಂತೆ ಪೊಲೀಸರು ಮನವಿ ಮಾಡುತ್ತಿದ್ದಾರೆ.

ಬೀದರ್‌–ಉದಗಿರ ರಸ್ತೆಯಲ್ಲಿರುವ ಪ್ರಮುಖ ವೃತ್ತಗಳಲ್ಲಿ ಸ್ವಾಗತ ಕಮಾನುಗಳನ್ನು ನಿರ್ಮಿಸಲಾಗಿದೆ. ಕೆಲವು ಕಡೆ ಕಂಬಗಳಿಗೆ ಬಿಜೆಪಿ ಧ್ವಜಗಳನ್ನು ಕಟ್ಟಲಾಗಿದೆ. ಮೋದಿ ಅವರು ಬರಲಿರುವ ಬೀದರ್‌ ವಾಯುಪಡೆ ವಿಮಾನ ನಿಲ್ದಾಣದಿಂದ ನೆಹರೂ ಕ್ರೀಡಾಂಗಣದ ವರೆಗಿನ ಮಾರ್ಗದಲ್ಲಿ ವಾಹನ ಸಂಚಾರ ನಿಷೇಧಿಸಲಾಗಿದೆ. ಕೆಲವು ರಸ್ತೆಗಳಲ್ಲಿ ಸಂಚಾರ ಮಾರ್ಗಗಳನ್ನು ಬದಲಿಸಲಾಗಿದೆ.

ಉದಗಿರ ರಸ್ತೆ, ಕೆಇಬಿ ರಸ್ತೆ, ಹರಳಯ್ಯ ವೃತ್ತದಲ್ಲಿ ರೋಡ್‌ ಹಂಪ್ಸ್‌ ತೆರವುಗೊಳಿಸಲಾಗಿದೆ. ರಸ್ತೆಯಲ್ಲಿನ ತಂಗುಗುಂಡಿಗಳನ್ನು ಮುಚ್ಚಿ ಡಾಂಬರೀಕರಣ ಮಾಡಲಾಗಿದೆ. ಪ್ರತಿಯೊಂದು ರಸ್ತೆ ತಿರುವಿನಲ್ಲಿ ಒಬ್ಬ ಪಿಎಸ್‌ಐ,ಇಬ್ಬರು ಕಾನ್‌ಸ್ಟೆಬಲ್‌ ಹಾಗೂ ಗೃಹ ರಕ್ಷಕ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT