ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಯಕಲ್ಪಕ್ಕೆ ಕಾದಿರುವ ಇತಿಹಾಸದ ಪಳೆಯುಳಿಕೆ

Last Updated 29 ಅಕ್ಟೋಬರ್ 2017, 6:26 IST
ಅಕ್ಷರ ಗಾತ್ರ

ಬಾಗೇಪಲ್ಲಿ ತಾಲ್ಲೂಕಿನ ಬಿಳ್ಳೂರು ಸಮೀಪದ ವಂಗಾರ್ಲಪಲ್ಲಿ ಗ್ರಾಮದ ಪಶ್ಚಿಮ ದಿಕ್ಕಿನಲ್ಲಿರುವ ಬೃಹದಾಕಾರದ ಬಂಡೆಯ ಮೇಲೆ ಗುಮ್ಮನಾಯಕನ ಪಾಳ್ಯದ ಪಾಳೇಗಾರರ ಕಾಲದಲ್ಲಿ ಕಲ್ಲಿನಿಂದ ನಿರ್ಮಿಸಿದ ಬುರುಜು (ವರ್ತುಲಾಕಾರದ ಕಟ್ಟಡ) ಈ ಭಾಗದಲ್ಲಿ ಇತಿಹಾಸದ ಪಳೆಯುಳಿಕೆಯಾಗಿ ಜನರ ಗಮನ ಸೆಳೆಯುತ್ತಿದೆ.

ಕ್ರಿ.ಶ.1243ರಲ್ಲಿ ಆಡಳಿತ ನಡೆಸಿದ ಗುಮ್ಮನಾಯಕನ ಪಾಳೇಗಾರ ನರಸಿಂಹನಾಯಕನ ಕಾಲದಲ್ಲಿ ನಿರ್ಮಿಸ ಲಾಗಿದೆ ಎನ್ನಲಾಗುವ ಈ ಬುರುಜು ಪಾಳೆಯಗಾರರ ಮೇಲೆ ದಂಡೆತ್ತಿ ಬರುವ ಶತ್ರುಗಳ ಚಲನವಲನಗಳ ಮೇಲೆ ನಿಗಾ ಇಡುವ ತಾಣವಾಗಿತ್ತು. ರಾಜರು, ಸಾಮಂತರು, ಪಾಳೇಗಾರರು ತಮ್ಮ ಪ್ರಜೆಗಳ ಹಿತರಕ್ಷಣೆ ಹಾಗೂ ಸಂಪತ್ತಿನ ರಕ್ಷಣೆಗಾಗಿ ತಾಲ್ಲೂಕಿನ ಆರ್. ನಲ್ಲಗುಟ್ಲಪಲ್ಲಿ, ವಾಂಗ್ಯಾರ್ಲಪಲ್ಲಿ, ದಿಗವಗೊಲ್ಲಪಲ್ಲಿ ಮುಂತಾದೆಡೆ ಬುರುಜು ನಿರ್ಮಿಸಿದ್ದು ಕಾಣಬಹುದು.

ಪಾಳೇಗಾರರು ಗುಮ್ಮನಾಯಕನ ಪಾಳ್ಯವನ್ನು ಮೈಸೂರು ಒಡೆಯರ ಕಾಲದಲ್ಲಿ ತಾಲ್ಲೂಕು ಕೇಂದ್ರವನ್ನಾಗಿಸಿ ಮಾಡಿಕೊಂಡಿದ್ದರು. ಇಲ್ಲಿಂದ ತಾಲ್ಲೂಕು ವ್ಯಾಪ್ತಿಯ ಪ್ರದೇಶಗಳನ್ನು ತಮ್ಮ ಅಧೀನದಲ್ಲಿಟ್ಟುಕೊಂಡು ಆಡಳಿತ ನಡೆಸುತ್ತಿದ್ದರು ಎನ್ನುವುದು ಇತಿಹಾಸದಿಂದ ತಿಳಿದು ಬರುತ್ತದೆ.

ರಾಜರು, ಸಾಮಂತರು ಮತ್ತು ಪಾಳೇಗಾರರ ನಡುವೆ ಸಮನ್ವಯದ ಕೊರತೆಯಿಂದ ಉಂಟಾಗುತ್ತಿದ್ದ ಒಳಜಗಳ ಆಗಾಗ ದಂಡೆತ್ತಿ ಬಂದು ಕಾದಾಡುವ ಹಂತಕ್ಕೆ ತಲುಪುತ್ತಿದ್ದ ಕಾರಣಕ್ಕೆ ಆಡಳಿತ ನಡೆಸುತ್ತಿದ್ದವರೆಲ್ಲ ತಮ್ಮ ಕೋಟೆ, ಕೊತ್ತಲಗಳ ರಕ್ಷಣೆಗಾಗಿ ಸೈನಿಕರು ಬುರುಜಗಳ ಮೊರೆ ಹೋಗುತ್ತಿದ್ದರು.

ಬುರಜುಗಳ ಒಳಗೆ ಖಜಾನೆಯ ಸಂಪತ್ತು, ಸಿಡಿಮದ್ದು, ಆಯುಧಗಳನ್ನು ಇಟ್ಟು ಅದರ ರಕ್ಷಣೆಗೆ ಸೈನಿಕರನ್ನು ನಿಯೋಜಿಸಲಾಗುತ್ತಿತ್ತು. ಬುರುಜಿನಲ್ಲಿ ಅಲ್ಲಲ್ಲಿ ನಿರ್ಮಿಸಿದ ಕಿಂಡಿಗಳ ಒಳಗೆ ಸೈನಿಕರು ಸದಾ ಶಸ್ತ್ರಾಸ್ತ್ರಗಳನ್ನು ಅಣಿಯಾಗಿಟ್ಟುಕೊಂಡು ವೈರಿಪಡೆಯ ದಾಳಿಯನ್ನು ಎದುರಿಸಲು ಸನ್ನದ್ಧ ಸ್ಥಿತಿಯಲ್ಲಿಡುವುದು ರೂಢಿಯಲ್ಲಿತ್ತು ಎಂದು ಇತಿಹಾಸಜ್ಞರು ವಿವರಣೆ ನೀಡುವರು.

ಸುಮಾರು 45 ಅಡಿ ಎತ್ತರವಿರುವ ಈ ಬುರುಜು ಒಳಗೆ ನೀರು ಸೇದುವ ಬಾವಿ, ಊಟ ತಯಾರಿಸುವ ಮಡಿಕೆ, ಮಣ್ಣಿನ ಪಾತ್ರೆಗಳು, ನಿಧಿ ಬಚ್ಚಿಡುವ ಸ್ಥಳ, ಗಂಗಮ್ಮ ದೇವಿ ಮೂರ್ತಿ ಗೋಚರಿಸುತ್ತವೆ. ‘ಸುತ್ತಮುತ್ತಲಿನ ಗ್ರಾಮಸ್ಥರು ಜಾತ್ರೆ, ಹಬ್ಬ ಹರಿದಿನಗಳಲ್ಲಿ ಗ್ರಾಮ ದೇವತೆಯಾದ ಬುರುಜು ಗಂಗಮ್ಮ ದೇವಿಗೆ ಇಂದಿಗೂ ವಿಶೇಷ ಪೂಜೆ ಸಲ್ಲಿಸುವುದು ವಾಡಿಕೆ. ಗ್ರಾಮಗ ಳಲ್ಲಿ ರೋಗಗಳು ಹರಡಿದರೆ, ಮಳೆಯಾಗ ದಿದ್ದರೆ ಜನರು ಗ್ರಾಮದೇವತೆಗೆ ಮೊರೆ ಹೋಗುತ್ತಾರೆ’ ಎಂದು ಸ್ಥಳೀಯ ನಿವಾಸಿ ಕೆ.ಎಲ್.ಮೋಹನ್‌ ರೆಡ್ಡಿ ಅವರು ವಿವರಿಸುವರು.

‘ಇವತ್ತು ತಾಲ್ಲೂಕಿನ ವಿವಿಧ ಕಡೆ ಇರುವ ಪುರಾತನ ಕಾಲದ ಕೋಟೆ, ಕೊತ್ತಲ, ಬುರುಜುಗಳನ್ನು ಸಂರಕ್ಷಣೆ ಮಾಡುವ ಕೆಲಸಗಳು ನಡೆಯುತ್ತಿಲ್ಲ. ಹೀಗಾಗಿ ಅನೇಕ ಐತಿಹಾಸಿಕ ಸ್ಥಳಗಳು ಅಕ್ರಮ ಚಟುವಟಿಕೆಗಳ ತಾಣಗಳಾಗಿ ಮಾರ್ಪಡುತ್ತಿವೆ’ ಎಂದು ವಂಗಾರ್ಲಪಲ್ಲಿ ನಿವಾಸಿ ಟಿ.ಜಿ.ಜೈಪ್ರಕಾಶ್‌ ಬೇಸರ ವ್ಯಕ್ತಪಡಿಸುತ್ತಾರೆ.

‘ಸುಮಾರು 600 ವರ್ಷಗಳಷ್ಟು ಹಳೆಯದಾದ ಈ ಬುರುಜು ಇಂದು ಅಲ್ಲಲ್ಲಿ ಬಿರುಕು ಬಿಟ್ಟು, ಅವನತಿ ಅಂಚಿನಲ್ಲಿ ತಲುಪಿದೆ. ಆದ್ದರಿಂದ ಪುರಾತತ್ವ ಇಲಾಖೆಯವರು ಇತ್ತ ಗಮನಹರಿಸಿ ಶಿಥಿಲಾವಸ್ಥೆಯಲ್ಲಿರುವ ಬುರುಜಿಗೆ ಕಾಯಕಲ್ಪ ಮಾಡಿ, ಇದ ನ್ನೊಂದು ಪ್ರವಾಸಿ ತಾಣವನ್ನಾಗಿ ಮಾರ್ಪಡಿಸಿ ಮುಂದಿನ ತಲೆಮಾರು ಗಳಿಗೆ ಚರಿತ್ರೆಯ ಕುರುಹುಗಳನ್ನು ಸಂಗ್ರಹಿಸಿಡುವ ಕೆಲಸ ಮಾಡಬೇಕಾಗಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT