ಹಿಪ್ಪುನೇರಳೆ ಬೆಳೆಗೆ ಹುಳು ಬಾಧೆ

ಮಂಗಳವಾರ, ಜೂನ್ 18, 2019
24 °C

ಹಿಪ್ಪುನೇರಳೆ ಬೆಳೆಗೆ ಹುಳು ಬಾಧೆ

Published:
Updated:
ಹಿಪ್ಪುನೇರಳೆ ಬೆಳೆಗೆ ಹುಳು ಬಾಧೆ

ಶಿಡ್ಲಘಟ್ಟ: ತಾಲ್ಲೂಕಿನ ಬಹುತೇಕ ಕಡೆ ಹಿಪ್ಪುನೇರಳೆ ತೋಟಗಳಿಗೆ ಹುಳು ಬಿದ್ದು ಬೆಳೆ ಹಾಳಾಗಿವೆ. ಈ ಬಗ್ಗೆ ರೇಷ್ಮೆ ಇಲಾಖೆಯ ಅಧಿಕಾರಿಗಳು ಪರಿಶೀಲನೆ ನಡೆಸಬೇಕು ಎಂದು ರೈತರಾದ ಸಂಜೀವಪ್ಪ, ರಾಮಣ್ಣ, ನಾರಾಯಣಸ್ವಾಮಿ ಒತ್ತಾಯಿಸಿದ್ದಾರೆ.

ಹಿಂದೆ ತೀವ್ರ ಮಳೆಗಳ ಕೊರತೆ ನಡುವೆಯೂ ಟ್ಯಾಂಕರ್‌ ಮೂಲಕ ನೀರು ಹಾಯಿಸಿ ಹಿಪ್ಪುನೇರಳೆ ತೋಟ ಸಂರಕ್ಷಣೆ ಮಾಡಿಕೊಂಡಿದ್ದೇವೆ. ರೇಷ್ಮೆ ಬೆಳೆಯನ್ನೇ ನಂಬಿ ಜೀವನ ಮಾಡಿಕೊಂಡಿದ್ದೇವೆ. ಇತ್ತೀಚೆಗೆ ಬಿದ್ದ ಮಳೆಯ ನಂತರ ಎಲ್ಲ ತೋಟಗಳಲ್ಲಿ ಹುಳು ಬಿದ್ದು ಹಾಳಾಗಿದೆ. ಹಿಪ್ಪುನೇರಳೆ ಗಿಡಗಳಲ್ಲಿನ ಚಿಗುರೆಲೆಗಳನ್ನು ತಿನ್ನುತ್ತಿರುವ ಹುಳುಗಳು ಕಾಂಡದವರೆಗೂ ಅಲ್ಲಲ್ಲಿ ಎಲೆಗಳನ್ನು ತಿಂದು ಹಾಕುತ್ತಿರುವುದರಿಂದ ರೇಷ್ಮೆಹುಳುಗಳಿಗೆ ಸೊಪ್ಪು ನೀಡಲು ಯೋಗ್ಯವಾಗಿಲ್ಲ. ಬೆಳೆಯ ಇಳುವರಿ ಬರುತ್ತಿಲ್ಲ ಎಂದು ಅಳಲು ತೋಡಿಕೊಂಡರು.

ಸತತವಾಗಿ ಮೂರ್ನಾಲ್ಕು ವರ್ಷಗಳಿಂದ ಮಳೆ ಬಾರದೆ ಬಿತ್ತನೆ ಮಾಡಿದ ಬೆಳೆ ಕೈ ಸೇರದೆ ರೈತರು ಕಂಗಾಲಾಗಿದ್ದಾರೆ. ಹುಬ್ಬ, ಉತ್ತರ ಹಾಗೂ ಚಿತ್ತ ಮಳೆಗಳು ಸಕಾಲಕ್ಕೆ ಸುರಿದ ಕಾರಣ ರೈತ ಸಮೂಹದಲ್ಲಿ ಸಂತಸದ ವಾತಾವರಣವಿತ್ತು. ಆದರೆ ಅದು ಬಹಳ ಕಾಲ ಉಳಿಯುವ ಸೂಚನೆಗಳು ಕಾಣುತ್ತಿಲ್ಲ. ಕೊಳವೆಬಾವಿ ಕೊರೆಯಿಸಿ, ಬೆಳೆ ನಿರ್ವಹಿಸಲು ₹ 7 ರಿಂದ 8 ಲಕ್ಷದವರೆಗೆ ಸಾಲ ಮಾಡಿ ರೇಷ್ಮೆ ಕೃಷಿಯಲ್ಲಿ ಬಂಡವಾಳ ಹೂಡಲಾಗಿದೆ. ಈಗ ನಷ್ಟದ ಹೊರೆ ಆತಂಕ ನಿರ್ಮಿಸಿದೆ ಎಂದು ತಿಳಿಸಿದರು.

ಇಷ್ಟು ದಿನ ತೀವ್ರ ಉಷ್ಣಾಂಶದಿಂದ ಹಿಪ್ಪುನೇರಳೆ ಎಲೆಗಳಲ್ಲಿದ್ದ ನೀರಿನಾಂಶ ಕಡಿಮೆಯಾಗಿ, ಬೆಳೆಗಳು ಸರಿಯಾಗಿ ಬೆಳವಣಿಗೆ ಆಗುತ್ತಿಲ್ಲ. ಎಲೆಗಳು ಗಡುಸಾಗಿವೆ. ಮಳೆಯಾದ ನಂತರ ಪರಿಸ್ಥಿತಿ ಸುಧಾರಿಸಲಿದೆ ಎಂಬ ವಿಶ್ವಾಸದಲ್ಲಿದ್ದಾಗಲೇ ಹುಳುಗಳು ಕಾಣಿಸಿಕೊಂಡು ತೋಟ ಹಾಳು ಮಾಡುತ್ತಿವೆ. ತೋಟದಿಂದ ತೋಟಕ್ಕೆ ವಿಸ್ತರಿಸಿಕೊಂಡು ಬೆಳೆಗಳನ್ನು ಹಾಳು ಮಾಡುತ್ತಿವೆ. ಔಷಧಿ ಸಿಂಪಡಿಸಿದರೂ ನಿಯಂತ್ರಣಕ್ಕೆ ಬರುತ್ತಿಲ್ಲ. ಬೆಳೆ ಕೈಕೊಟ್ಟರೆ ಸಾಲದ ಹೊರೆ ಹೆಚ್ಚಾಗಲಿದೆ. ಜೀವನ ನಡೆಸುವುದು ಹೇಗೆಂಬ ಭಯ ಕಾಡುತ್ತಿದೆ ಎಂದು ತಿಳಿಸಿದರು.

ಹಿಂದೊಮ್ಮೆ ಹಿಪ್ಪುನೇರಳೆ ಬೆಳೆಗೆ ಈ ಭಾಗದಲ್ಲಿ ಭಾರಿ ಬೇಡಿಕೆ ಇತ್ತು. ನಿಧಾನವಾಗಿ ರೇಷ್ಮೆ ಉತ್ಪಾದನೆ ಮರೆಯಾಗುತ್ತಿದೆ. ಕೃಷಿ ಚಟುವಟಿಕೆಗಳಲ್ಲಿ ಸಾಕಷ್ಟು ಬದಲಾವಣೆ ಆಗಿದೆ. ಗುಣಮಟ್ಟದ ರೇಷ್ಮೆ ಉತ್ಪಾದನೆಗೆ ಅಷ್ಟೇ ಉತ್ತಮವಾದ ಹಿಪ್ಪುನೇರಳೆ ಬೇಕು. ಅದನ್ನು ಗಮನದಲ್ಲಿ ಇಟ್ಟುಕೊಂಡು ರೇಷ್ಮೆ ಸಂಶೋಧನಾಲಯಗಳು ರೇಷ್ಮೆ ಹುಳುವಿನ ಹಲವು ಹೊಸ ತಳಿಗಳನ್ನು ಅಭಿವೃದ್ಧಿಪಡಿಸಿವೆ.

ಆದರೆ ರೇಷ್ಮೆಗೆ ಮುಖ್ಯವಾಗಿ ಬೇಕಾಗಿರುವ ಹಿಪ್ಪುನೇರಳೆಗೆ ಸರ್ಕಾರ ಸಕಾಲಿಕ ಪ್ರೋತ್ಸಾಹ ಮಾಡುತ್ತಿಲ್ಲ, ಈಗ ನಷ್ಟವಾದರೆ ಇಲಾಖೆಯ ಅಧಿಕಾರಿಗಳ ಮೂಲಕ ಪರಿಶೀಲನೆ ನಡೆಸಿ ವರದಿ ತರಿಸಿ, ರೋಗ ನಿವಾರಣೆಗಾಗಿ ತುರ್ತು ಕ್ರಮ ಕೈಗೊಳ್ಳಬೇಕು ಎಂದು ರೈತರು ಒತ್ತಾಯಿಸಿದ್ದಾರೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry