ಶುಕ್ರವಾರ, ಸೆಪ್ಟೆಂಬರ್ 20, 2019
29 °C

‘ಸಿರಿಧಾನ್ಯದಿಂದ ರೈತರಿಗೆ ಅಧಿಕ ಲಾಭ’

Published:
Updated:

ನಾಯಕನಹಟ್ಟಿ: ‘ರೈತರು ಹೆಚ್ಚು ಸಿರಿಧಾನ್ಯಗಳನ್ನು ಬೆಳೆಯುವ ಮೂಲಕ ಅಧಿಕ ಲಾಭವನ್ನು ಗಳಿಸಬಹುದು’ ಎಂದು ಕೃಷಿ ಸಹಾಯಕ ನಿರ್ದೇಶಕ ಎಸ್‌.ಮಾರುತಿ ಹೇಳಿದರು. ಹೋಬಳಿಯ ಮಲ್ಲೂರಹಟ್ಟಿ ಗ್ರಾಮದಲ್ಲಿ ಶುಕ್ರವಾರ ನಡೆದ ನವಣೆ ಕ್ಷೇತ್ರೋತ್ಸವ ಹಾಗೂ ಸಿರಿಧಾನ್ಯ ಕಟಾವು ಯಂತ್ರದ ಪ್ರಾತ್ಯಾಕ್ಷಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಸಿರಿ ಧಾನ್ಯಗಳ ಬೆಳೆಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿವೆ. ಇವುಗಳನ್ನು ಬೆಳೆಯುವುದರಿಂದ ಲಾಭದ ಜೊತೆಗೆ ಮಣ್ಣಿನ ಪೋಷಕಾಂಶವನ್ನೂ ಕಾಪಾಡಿಕೊಳ್ಳಬಹುದು. ಸಿರಿಧಾನ್ಯ ಬೆಳೆಯುಲು ವಿಶೇಷ ಯೋಜನೆಯಡಿ ಪ್ರತಿ ಹೆಕ್ಟೇರ್‌ಗೆ ₹ 1 ಸಾವಿರ ಸಹಾಯಧನವನ್ನು ರೈತರಿಗೆ ನೀಡಲಾಗುತ್ತಿದೆ. ಗರಿಷ್ಠ 5 ಹೆಕ್ಟೇರ್‌ವರೆಗೆ ಸಹಾಯಧನ ಪಡೆಯಬಹುದು’ ಎಂದು ಹೇಳಿದರು.

‘ನವಣೆ, ಆರ್ಕ, ಸಜ್ಜೆ ಸೇರಿ ತೃಣ ಧಾನ್ಯಗಳನ್ನು ಬೆಳೆಯಲು ಹೊಸ ಪ್ರಯೋಗಕ್ಕೆ ರೈತರು ಮುಂದಾಗಬೇಕು. ಸಿರಿಧಾನ್ಯಗಳನ್ನು ನಿರಂತರವಾಗಿ ಬಳಸುವುದುರಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯವಿದೆ’ ಎಂದರು.

‘ಮುಂಗಾರು ಕಟಾವು ಆರಂಭಗೊಂಡಿದೆ. ಕೂಲಿ ಕಾರ್ಮಿಕರು ದೊರೆಯದ ಪರಿಸ್ಥಿತಿಯಲ್ಲಿ ಕೃಷಿ ಯಂತ್ರಧಾರೆ ಯೋಜನೆಯಲ್ಲಿ ಟ್ರ್ಯಾಕ್ಟರ್‌, ಟಿಲ್ಲರ್, ವೀಡರ್ ಸೇರಿದಂತೆ ಹಲವು ಯಂತ್ರಗಳನ್ನು ರಿಯಾಯ್ತಿ ದರದಲ್ಲಿ ಬಾಡಿಗೆ ನೀಡಲಾಗುತ್ತಿದೆ. ಸಿರಿಧಾನ್ಯಗಳ ಪ್ರಮಾಣ ಹೆಚ್ಚಾಗಿರುವುದರಿಂದ ರೀಡರ್ ಎನ್ನುವ ಕಟಾವು ಯಂತ್ರವನ್ನು ರೈತರಿಗೆ ಬಾಡಿಗೆ ನೀಡಲಾಗುತ್ತಿದೆ. ಇದರಿಂದ ಧಾನ್ಯಗಳು ನಷ್ಟವಾಗದಂತೆ ಕಟಾವು ಮಾಡಲು ಸಾಧ್ಯವಿದೆ. ಪ್ರತಿ ಎಕರೆಗೆ ₹ 800 ಬಾಡಿಗೆ ನಿಗದಿಗೊಳಿಸಲಾಗಿದೆ’ ಎಂದು ಹೇಳಿದರು.

ಕೃಷಿ ಅಧಿಕಾರಿ ಎನ್.ಗಿರೀಶ್ ಮಾತನಾಡಿ, ‘ಪ್ರಸಕ್ತ ಸಾಲಿನಲ್ಲಿ ಇಲ್ಲಿನ ರೈತ ಸಂಪರ್ಕ ಕೇಂದ್ರ ವ್ಯಾಪ್ತಿಯಲ್ಲಿ ನವಣೆ ಬಿತ್ತನೆ ಗಣನೀಯವಾಗಿ ಏರಿಕೆಯಾಗಿದೆ. ಹೋಬಳಿಯಲ್ಲಿ 400 ಹೆಕ್ಟೇರ್ ಪ್ರದೇಶದಲ್ಲಿ ನವಣೆ ಬೆಳೆಯಲಾಗಿದೆ. ಮಲ್ಲೂರಹಟ್ಟಿ ಗ್ರಾಮದ ರೈತರು 200 ಎಕರೆ ಪ್ರದೇಶದಲ್ಲಿ ನವಣೆ ಬೆಳೆದಿದ್ದಾರೆ.

ನಿರಂತರವಾಗಿ ಶೇಂಗಾದಿಂದ ನಷ್ಟಕ್ಕೊಳಗಾದ ರೈತರು ಇದೀಗ ಬೆಳೆ ಬದಲಾವಣೆಗೆ ಮುಂದಾಗಿದ್ದಾರೆ’ ಎಂದು ತಿಳಿಸಿದರು. ಗ್ರಾಮ ಪಂಚಾಯ್ತಿ ಸದಸ್ಯ ರಾಜಣ್ಣ ಮುಖಂಡರಾದ ಡಿ.ಜಿ.ಗೋವಿಂದಪ್ಪ, ಚನ್ನಬಸಪ್ಪ, ಮಹಾಂತೇಶ್, ಪಾಲಣ್ಣ, ಶ್ರೀನಿವಾಸ್ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

Post Comments (+)