ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧರ್ಮಪುರಕ್ಕೆ ಸಿಕ್ಕೀತೆ ತಾಲ್ಲೂಕು, ಪೂರಕ ನಾಲೆ ಭಾಗ್ಯ?

Last Updated 29 ಅಕ್ಟೋಬರ್ 2017, 6:39 IST
ಅಕ್ಷರ ಗಾತ್ರ

ಧರ್ಮಪುರ: ಇಲ್ಲಿನ ಐತಿಹಾಸಿಕ ಕೆರೆಗೆ ಪೂರಕ ನಾಲೆ ಕಲ್ಪಿಸುವುದು ಹಾಗೂ ಧರ್ಮಪುರವನ್ನು ನೂತನ ತಾಲ್ಲೂಕನ್ನಾಗಿ ರಚಿಸುವಂತೆ ಒತ್ತಾಯಿಸಿ ರೈತರು ನಡೆಸುತ್ತಿರುವ ಹೋರಾಟ 100ನೇ ದಿನಕ್ಕೆ ಕಾಲಿಟ್ಟಿದೆ. ಜುಲೈ 24ರಿಂದ ಹೋಬಳಿಯ ರೈತರು ನಿತ್ಯ ಧರಣಿ, ಉರುಳುಸೇವೆ, ಬೈಕ್‌ ರ‍್ಯಾಲಿ, ಪಂಜಿನ ಮೆರವಣಿಗೆ, ಜಾಥಾ ನಡೆಸಿದ್ದಾರೆ. ರಾಜಕೀಯ ಪಕ್ಷದವರು ಹೋರಾಟಕ್ಕೆ ಬೆಂಬಲ ಸೂಚಿಸಿ ಧರಣಿಯಲ್ಲಿ ಪಾಲ್ಗೊಂಡಿದ್ದಾರೆ.

ರೈತ ಮುಖಂಡರಾದ ಶಾಸಕ ಪುಟ್ಟಣ್ಣಯ್ಯ ಸೇರಿ ಅನೇಕರು ಇಲ್ಲಿಗೆ ಬಂದು ಹೋರಾಟದೊಂದಿಗೆ ಕೈಜೋಡಿಸಿದ್ದಾರೆ. ಹೀಗಿದ್ದರೂ ಸ್ಥಳೀಯ ಶಾಸಕ ಡಿ.ಸುಧಾಕರ್‌ ಅವರು ಬರಿ ಆಶ್ವಾಸನೆ ನೀಡುತ್ತಿದ್ದಾರೆಯೇ ಹೊರತು, ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶಾಶ್ವತ ಬರಪೀಡಿತ ಹಣೆಪಟ್ಟಿ ಹೊತ್ತಿರುವ ಧರ್ಮಪುರಕ್ಕೆ ಯಾವುದೇ ಶಾಶ್ವತ ನೀರಾವರಿ ಮೂಲವಿಲ್ಲ. ಧರ್ಮಪುರ ಕೆರೆ ಜಿಲ್ಲೆಯಲ್ಲಿಯೇ ಎರಡನೇ ಅತಿ ದೊಡ್ಡ ಕೆರೆಯಾಗಿದೆ. ಇದು 700 ಹೆಕ್ಟೇರ್‌ ಪ್ರದೇಶ ಹೊಂದಿದೆ. 360 ದಶಲಕ್ಷ ಕ್ಯೂಬಿಕ್‌ ಅಡಿ ನೀರಿನ ಸಂಗ್ರಹ ಸಾಮರ್ಥ್ಯವಿದೆ. ಕೆರೆಯ ಉದ್ದ 1,600 ಮೀ ಇದ್ದು, 900 ಹೆಕ್ಟೇರ್‌ ಅಚ್ಚುಕಟ್ಟು ಪ್ರದೇಶವಿದೆ. ಈ ಕೆರೆ 1982ರಲ್ಲಿ ತುಂಬಿದ್ದೇ ಕೊನೆ; ಇದುವರೆಗೂ ಪೂರ್ಣ ಪ್ರಮಾಣದಲ್ಲಿ ನೀರು ಬಂದಿಲ್ಲ. ಕೃಷಿಯನ್ನೇ ನಂಬಿ ಬದುಕುತ್ತಿರುವ ರೈತರ ಬವಣೆ ಹೇಳದಾಗಿದೆ.

20 ಕಿ.ಮೀ ವ್ಯಾಪ್ತಿಯ ಚಳ್ಳಕೆರೆ ತಾಲ್ಲೂಕಿನ ದೊಡ್ಡಬೀರನಹಳ್ಳಿ, ಟಿ.ಎನ್‌.ಕೋಟೆ, ಓಬಳಾಪುರ, ದೊಡ್ಡಚೆಲ್ಲೂರು, ಹಿರಿಯೂರು ತಾಲ್ಲೂಕಿನ ಹರಿಯಬ್ಬೆ, ಶ್ರವಣಗೆರೆ, ವೇಣುಕಲ್ಲುಗುಡ್ಡ, ಚಿಲ್ಲಹಳ್ಳಿ, ಬೇತೂರು, ಹೊಸಕೆರೆ, ಮದ್ದಿಹಳ್ಳಿ, ಹಲಗಲದ್ದಿ, ಖಂಡೇನಹಳ್ಳಿ, ಶಿರಾ ತಾಲ್ಲೂಕಿನ ಬೆಜ್ಜಿಹಳ್ಳಿ, ಚಿರತಹಳ್ಳಿ, ಲಕ್ಕನಹಳ್ಳಿ, ಹುಲಿಕುಂಟೆ ಗ್ರಾಮಗಳ ನೂರಾರು ರೈತರಿಗೆ ಈ ಕೆರೆ ಜೀವಸೆಲೆಯಾಗಿದೆ. ಕೆರೆಗೆ ನೀರು ಬಾರದೇ ಇರುವುದು ಕುಡಿಯುವ ನೀರಿಗೂ ‘ಬರ’ ಬಂದಿದೆ.

ಹೋರಾಟಕ್ಕೆ ನೂರು ವರ್ಷ: ಪೂರಕ ನಾಲೆ ಕಲ್ಪಿಸಲು 1919ರಿಂದಲೂ ಹೋರಾಟ ನಡೆದಿದೆ. ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದಲ್ಲೇ ಪೂರಕ ನಾಲೆಗೆ ದಿವಾನರು ಪ್ರಸ್ತಾವ ಸಲ್ಲಿಸಿದ್ದರು. ನಂತರ ಚಳ್ಳಕೆರೆ ಶಾಸಕರಾಗಿದ್ದ ಬಿ.ಎಲ್‌.ಗೌಡ ಮೊದಲ ಬಾರಿ ವಿಧಾನಸಭೆಯಲ್ಲಿ ಈ ಬಗ್ಗೆ ಪ್ರಶ್ನಿಸಿದ್ದರು. ಆಗ ಲೋಕೋಪಯೋಗಿ ಸಚಿವರಾಗಿದ್ದ ವೀರೇಂದ್ರ ಪಾಟೀಲ್‌ ಅವರು, ‘ಪೂರಕ ಕಾಲುವೆಗೆ ₹1.12 ಕೋಟಿ ವೆಚ್ಚದ ಯೋಜನೆ ಸಿದ್ಧವಾಗಿದೆ. 6 ಸಾವಿರ ಎಕರೆಗೆ ಇದು ನೀರುಣಿಸಲಿದೆ. ಹಣದ ಲಭ್ಯತೆ ಆಧರಿಸಿ 4ನೇ ಹಣಕಾಸು ಯೋಜನೆಯಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು’ ಎಂದು ಉತ್ತರಿಸಿದ್ದರು.

ಇಚ್ಛಾಶಕ್ತಿ ಕೊರತೆ: ಕೆ.ಎಚ್‌.ರಂಗನಾಥ್‌ ಅವರು ಶಾಸಕರಾಗಿ, ಸಚಿವರಾದಾಗ ಕೆರೆಗೆ ಪೂರಕ ನಾಲೆ ನಿರ್ಮಾಣಗೊಳ್ಳಬಹುದು ಎಂಬ ಜನರ ನಿರೀಕ್ಷೆ ಹುಸಿಗೊಂಡಿತು. ನಂತರ ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಡಿ.ಮಂಜುನಾಥ್‌ ಸಚಿವರಾದರೂ ಅವರ ಕಾಲದಲ್ಲೂ ಈ ಬೇಡಿಕೆ ಈಡೇರಲಿಲ್ಲ ಎಂಬ ಕೊರಗು ನಾಗರಿಕರದ್ದು.

ಪಕ್ಕದ ಶಿರಾ ತಾಲ್ಲೂಕಿನ ಕೆರೆಗಳನ್ನು ತುಂಬಿಸಲು ಸಚಿವ ಟಿ.ಬಿ.ಜಯಚಂದ್ರ ಯೋಜನೆ ರೂಪಿಸಿದ್ದಾರೆ. ಈಗಾಗಲೇ ಮದಲೂರು ಕೆರೆಗೆ ಹೇಮಾವತಿ ನೀರು ಹರಿದಿದೆ. ಭದ್ರಾ ಮೇಲ್ದಂಡೆ ಯೋಜನೆಯಲ್ಲೂ ಸಿಂಹಪಾಲು ದೊರಕಿಸಿಕೊಂಡಿದ್ದಾರೆ. ಆದರೆ, ಇಲ್ಲಿನ ಜನಪ್ರತಿನಿಧಿಗಳಿಗೆ ಏಕೆ ಈ ರೀತಿಯ ಇಚ್ಛಾಶಕ್ತಿ ಇಲ್ಲ’ ಎಂಬುದು ನಾಗರಿಕರ ಪ್ರಶ್ನೆಯಾಗಿದೆ.

2010ರಲ್ಲಿ ರೈತರು 25 ದಿನಗಳ ಕಾಲ ಉಪವಾಸ ಸತ್ಯಾಗ್ರಹ ನಡೆಸಿದ್ದರು. ಆಗ ಸಚಿವರಾಗಿದ್ದ ಡಿ.ಸುಧಾಕರ್‌ ಅವರು ಸ್ಥಳಕ್ಕೆ ಬಂದು, ಸರ್ಕಾರದ ಗಮನ ಸೆಳೆದ ಪೂರಕ ನಾಲೆ ಕಾರ್ಯ ಪ್ರಾರಂಭಿಸುವ ಭರವಸೆಯನ್ನು ನೀಡಿದ್ದರಿಂದ ಉಪವಾಸ ಸತ್ಯಾಗ್ರಹವನ್ನು ರೈತರು ಕೈಬಿಟ್ಟಿದ್ದರು. ಆದರೆ, ಇನ್ನೂ ಈ ಭರವಸೆಯನ್ನು ಈಡೇರಿಸಿಲ್ಲ ಎಂದು ರೈತರು ಅಸಮಾಧಾನ ವ್ಯಕ್ತಪಡಿಸುತ್ತಾರೆ.

ಕೆರೆಯ ಏರಿ ಬಿರುಕು ಬಿಟ್ಟಿದೆ. ಬಳ್ಳಾರಿ ಜಾಲಿ ಗಿಡಗಳು ಬೆಳೆದಿವೆ. ರೈತರ ಹೋರಾಟಕ್ಕೆ ಬರಿ ಆಶ್ವಾಸನೆಗಳ ಮಹಾಪೂರ ಸಿಕ್ಕಿತೇ ಹೊರತು, ಕೆರೆಗೆ ನೀರು ಹರಿಯಲಿಲ್ಲ! ಕೃಷಿಯನ್ನೇ ನಂಬಿದ ರೈತರು ಈಗ ಗುಳೆ ಹೋಗತೊಡಗಿದ್ದಾರೆ.

ವಿ.ವೀರಣ್ಣ, ಧರ್ಮಪುರ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT