ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೊಮೊಟೊ, ಈರುಳ್ಳಿ ಬೆಲೆಯಲ್ಲಿ ಹೆಚ್ಚಳ

Last Updated 29 ಅಕ್ಟೋಬರ್ 2017, 6:49 IST
ಅಕ್ಷರ ಗಾತ್ರ

ಗದಗ: ದೀಪಾವಳಿ ನಂತರ ತರಕಾರಿ ಬೆಲೆ ಇಳಿಯಬಹುದು ಎಂಬ ನಿರೀಕ್ಷೆ ಹುಸಿಯಾಗಿದೆ. ದಿನನಿತ್ಯದ ಅಡುಗೆಗೆ ಅಗತ್ಯ ಸರ್ಕಾರದ ಈರುಳ್ಳಿ ಮತ್ತು ಟೊಮೊಟೊ ಧಾರಣೆ ಗಗನಮುಖಿ ಯಾಗಿದೆ. ಸದ್ಯ ಟೊಮೆಟೊ ಕೆ.ಜಿಗೆ ₹ 40ರಿಂದ ₹ 50ರವರೆಗೆ ಮಾರಾಟವಾಗುತ್ತಿದೆ. ಉತ್ತಮ ಗುಣಮಟ್ಟದ ದೊಡ್ಡ ಗಾತ್ರದ ಈರುಳ್ಳಿಗೆ ಕೆ.ಜಿಗೆ ₹ 40 ದಾಟಿದ್ದು, ಜನಸಾಮಾನ್ಯರಿಗೆ ಕಣ್ಣೀರು ತರಿಸಿದೆ.

ಹಿರೇಕಾಯಿ, ಬೆಂಡೆಕಾಯಿ, ಚವಳಿಕಾಯಿ, ಗಜ್ಜರಿ, ಎಲೆಕೋಸು, ಮೂಲಂಗಿ, ಹಸಿ­ಮೆಣ­ಸಿ­ನಕಾಯಿ, ಬದನೆ, ಬೀನ್ಸ್‌ ಸೇರಿದಂತೆ ಬಹುತೇಕ ಎಲ್ಲ ತರಕಾರಿಗಳ ಬೆಲೆಯಲ್ಲಿ ಕಳೆದ ಒಂದು ವಾರದಲ್ಲಿ ದುಪ್ಪಟ್ಟು ಏರಿಕೆಯಾಗಿದೆ. ಸದ್ಯ ಎಲ್ಲ ತರಕಾರಿಗಳು ಕೆ.ಜಿಗೆ ಸರಾಸರಿ ₹ 70ರಿಂದ ₹ 80ರವರೆಗೆ ಮಾರಾಟ ಆಗುತ್ತಿದೆ.

ಚಿಲ್ಲರೆ ಮಾರುಕಟ್ಟೆಯಲ್ಲಿ ಅತ್ಯಂತ ಕಳಪೆ ದರ್ಜೆ ಟೊಮೊಟೊ ಹಣ್ಣನ್ನೂ ಸಹ ಕೆ.ಜಿಗೆ ₹ 30ರಿಂದ ₹ 40ರ ತನಕ ಮಾರಾಟ ಮಾಡಲಾಗುತ್ತಿದೆ. ನಿಂಬೆ ಹಣ್ಣಿನ ಗಾತ್ರದ ಈರುಳ್ಳಿ ಗಡ್ಡೆಗಳನ್ನು ಸಹ ಕೆ.ಜಿಗೆ ₹ 30ರಂತೆ ಮಾರಲಾಗುತ್ತಿದೆ.

ಜಿಲ್ಲೆಯಲ್ಲಿ ಹಿಂಗಾರಿನಲ್ಲಿ ನಿರೀಕ್ಷೆಗಿಂತ ಹೆಚ್ಚಿನ ಮಳೆ ಸುರಿದಿದ್ದರಿಂದ ಕೆಲವೆಡೆ ತರಕಾರಿಗಳು ಜಮೀನಿನಲ್ಲೇ ಕೊಳೆತು ಹೋಗಿವೆ. ಇದರಿಂದ ಸ್ಥಳೀಯವಾಗಿ ಮಾರುಕಟ್ಟೆಗೆ ಬರುವ ತರಕಾರಿ ಪ್ರಮಾಣ ಗಣನೀಯವಾಗಿ ಕುಸಿದಿದೆ. ಅತಿವೃಷ್ಠಿಯಿಂದಾಗಿ ತರಕಾರಿ ಗುಣಮಟ್ಟವೂ ಕುಸಿದಿದೆ.

ಬೇರೆ ಜಿಲ್ಲೆಗಳಿಂದ ಬರುತ್ತಿರುವ ಟೊಮೊಟೊ ಒಂದು ಬಾಕ್ಸ್‌ಗೆ (23 ಕೆ.ಜಿ) ₹ 1400ರಿಂದ 1,600ರವರೆ ದರ ಇದೆ. ಇಲ್ಲಿನ ಮುಖ್ಯ ತರಕಾರಿ ಮಾರುಕಟ್ಟೆಗೆ ಪ್ರತಿ ದಿನ ಸರಾಸರಿ 350ರಿಂದ 500 ಬಾಕ್ಸ್‌ ಟೊಮೊಟೊ ಆವಕಾಗುತ್ತಿತ್ತು, ಸದ್ಯ ಇದು 150ರಿಂದ 200 ಬಾಕ್ಸ್‌ಗೆ ಇಳಿದಿದೆ. ಜತೆಗೆ ಸವಣೂರು, ಕೊಪ್ಪಳ, ಹರಿಹರ, ಹಾವೇರಿ ದಾವಣಗೆರೆ, ಅರಸಿಕೆರೆ ಮಾರುಕಟ್ಟೆಯಿಂದ ಬರುವ ತರಕಾರಿ ಪ್ರಮಾಣವೂ ಕಡಿಮೆಯಾಗಿದೆ.

‘ದೀಪಾವಳಿಗೂ ಬೆಲೆ ಏರಿಕೆಗೂ ಸಂಬಂಧವೇ ಇಲ್ಲ, ಮಾರುಕಟ್ಟೆಗೆ ಮಾಲೇ ಬರುತ್ತಿಲ್ಲ’ ಎನ್ನುತ್ತಾರೆ ನಗರದ ತರಕಾರಿ ವ್ಯಾಪಾರಸ್ಥರು. ಜಿಲ್ಲೆಯ ಗ್ರಾಮಾಂತರ ಪ್ರದೇಶಗಳಿಂದ ಸೊಪ್ಪಿನ ಪಲ್ಯೆ ಯೆಥೇಚ್ಛವಾಗಿ ಮಾರುಕಟ್ಟೆಗೆ ಬರುತ್ತಿತ್ತು. ಆದರೆ, ಅತಿ ವೃಷ್ಟಿಯಿಂದಾಗಿ ಮೂಲಂಗಿ, ಮೆಂತೆ, ಸಬ್ಬಸಿಗೆ, ಪಾಲಕ್‌, ಕಿರ್ಕಸಾಲಿ, ರಾಜ
ಗಿರಿ ಸೊಪ್ಪಿನ ಆವಕವೂ ಕಡಿಮೆ ಆಗಿದೆ.

‘₹ 10ಕ್ಕೆ 1 ಕಟ್ಟು ಕೊತ್ತಂಬರಿ ಮಾರುತ್ತಿದ್ದೇವೆ’ ಎಂದು ತರಕಾರಿ ವ್ಯಾಪಾರಿ ಅನ್ವರ್ ಮಾನ್ವಿ ಹೇಳಿದರು. ಗುಂಪು ತರಕಾರಿ ಮಾಯ: ತರಕಾರಿ ಬೆಲೆಯಲ್ಲಿ ಗಣನೀಯ ಏರಿಕೆ
ಯಾದ ಬೆನ್ನಲ್ಲೇ, ನಗರದ ಮುಖ್ಯಮಾರುಕಟ್ಟೆಯ ಸಮೀಪದ ರಸ್ತೆಯಲ್ಲಿ, ಹಳ್ಳಿಗಳಿಂದ ರೈತರು ತರಕಾರಿಗಳನ್ನು ತಂದು, ಚಿಕ್ಕ ಚಿಕ್ಕ ಗುಂಪು ಮಾಡಿ ಮಾರಾಟ ಮಾಡುವುದು ನಿಂತಿದೆ. ಜನರು ₹ 20 ನೀಡಿ ಪಾವ ಕೆ.ಜಿ ಲೆಕ್ಕದಲ್ಲಿ ತರಕಾರಿ ಖರೀದಿಸುತ್ತಿದ್ದಾರೆ.

ತಿಂಗಳ ಹಿಂದೆ ಟೊಮೊಟೊ ಬೆಲೆ ₹ 20 ಇದ್ದುದು ₹ 40, ಈರುಳ್ಳಿ ಬೆಲೆ ₹ 20 ಇದ್ದುದು ₹ 40, ಮೆಣಸಿನಕಾಯಿ ಬೆಲೆ ₹ 40 ಇದ್ದುದು ₹ 70, ಬೆಂಡೆ ಕಾಯಿ ಬೆಲೆ ₹ 30 ಇದ್ದುದು ₹ 70, ಬೀನ್ಸ್‌ ಬೆಲೆ ₹ 60 ಇದ್ದುದು ₹ 80, ಕ್ಯಾಬೇಜ್‌ ಬೆಲೆ ₹ 40 ಇದ್ದುದು ₹ 80, ಬದನೆಕಾಯಿ ಬೆಲೆ ₹ 40 ಇದ್ದುದು ₹ 60, ಆಲೂಗಡ್ಡೆ ಬೆಲೆ ₹ 20 ಇದ್ದುದು ₹ 15, ಹಿರೇಕಾಯಿ ಬೆಲೆ ₹ 40 ಇದ್ದುದು ₹ 60, ಗಜ್ಜರಿ ₹ 30 ಇದ್ದದು ₹ 70ಕ್ಕೆ ತಲುಪಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT