ಸಮ್ಮೇಳನ ಕಳೆದುಕೊಂಡವರು ನಾವೇ

ಭಾನುವಾರ, ಮೇ 19, 2019
34 °C

ಸಮ್ಮೇಳನ ಕಳೆದುಕೊಂಡವರು ನಾವೇ

Published:
Updated:

ಹಾವೇರಿ: ‘ಕಷ್ಟಪಟ್ಟು ಪಡೆದ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಆತಿಥ್ಯವನ್ನು ನಾವೇ ಕಳೆದುಕೊಂಡದ್ದು, ಬೇರೆ ಯಾರೂ ಹಾವೇರಿಗೆ ಸಮ್ಮೇಳನ ತಪ್ಪಿಸಲಿಲ್ಲ’ ಎಂದು ಅಖಿಲ ಭಾರತ 83ನೇ ಕನ್ನಡ ಸಾಹಿತ್ಯ ಸಮ್ಮೇಳನದ ನಿಯೋಜಿತ ಅಧ್ಯಕ್ಷ ಚಂದ್ರಶೇಖರ ಪಾಟೀಲ ಹೇಳಿದರು.

ಕರ್ನಾಟಕ ಸಾಹಿತ್ಯ ಅಕಾಡೆಮಿಯು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕ ಮತ್ತು ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದ ಸಹಯೋಗದಲ್ಲಿ ಕಾಗಿನೆಲೆಯಲ್ಲಿ ಶನಿವಾರ ಆಯೋಜಿಸಿದ ‘ಚಂಪಾ: ಅಭಿವ್ಯಕ್ತಿ ಮತ್ತು ವ್ಯಕ್ತಿತ್ವ’ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

‘ವ್ಯವಸ್ಥೆ ಒಂದು ಗಾಡಿಯ ಹಾಗೆ. ಅದಕ್ಕೆ ಆಗಾಗ್ಗೆ ರಿಪೇರಿ, ವಾಶಿಂಗ್ (ಸ್ವಚ್ಛತೆ), ಬಣ್ಣ ಬಳಿಯುವ ಕೆಲಸ ಆಗಬೇಕು. ಕೆಲವೊಮ್ಮೆ ಚಾಲಕನ ಬದಲಾವಣೆಯೂ ಅಗತ್ಯ. ಇಂತಹ ಕೆಲಸವನ್ನು ನೀವು ಮಾಡಿ. ಮತ್ತೆ ಆತಿಥ್ಯ ದೊರಕಿಸಲು ನಾನೂ ಪ್ರಯತ್ನಿಸುತ್ತೇನೆ’ ಎಂದರು.

‘ನಮಗೆ ನಮ್ಮಲ್ಲಿ ಮತ್ತು ಮೌಲ್ಯಗಳಲ್ಲಿ ನಂಬಿಕೆ ಇರಬೇಕು. ಅದು ಸನ್ನಿವೇಶಗಳನ್ನು ಎದುರಿಸುವ ಶಕ್ತಿ ನೀಡುತ್ತದೆ. ಉತ್ತರ ಕರ್ನಾಟಕವು ಶರಣರು ಹಾಗೂ ದಾಸರ ನೆಲ. ಇಲ್ಲಿ ಚಿಂತಕರು, ಹೋರಾಟಗಾರರ ಸಂಖ್ಯೆ ದಕ್ಷಿಣಕ್ಕಿಂತ ಹೆಚ್ಚು’ ಎಂದರು.

‘ಈ ನೆಲದ ರೈತ, ದಲಿತ, ಮಹಿಳೆ, ಪರಿಸರ ಎಲ್ಲವೂ ಕೂಡಿ ‘ಕನ್ನಡ’ ಆಗಿದೆ. ವಚನ ಮತ್ತು ದಾಸ ಸಾಹಿತ್ಯವು ಜನಪರ ಅಭಿವ್ಯಕ್ತಿಯ ದೊಡ್ಡ ಮಾಧ್ಯಮಗಳು. ವಚನದಲ್ಲಿ ಲೌಕಿಕ ಒತ್ತು. ವೈದಿಕ ಪರಂಪರೆಗೆ ನೇರ ಧಿಕ್ಕಾರವಿದೆ. ದಾಸರು ಹಾಡಿನ ಮೂಲಕ ತಿಳಿಸಿದ್ದಾರೆ’ ಎಂದರು.

‘ಹೊಸ ಪೀಳಿಗೆ ಬಗ್ಗೆ ಕೆಲವರು ನಿರಾಸಕ್ತಿಯ ಟೀಕೆ ಮಾಡುತ್ತಾರೆ. ಇಡೀ ದೇಶದಲ್ಲಿ ಯುವಶಕ್ತಿಯು ಬಂಡಾಯ ಪರಂಪರೆಯನ್ನು ಮುಂದುವರಿಸುತ್ತಿದೆ. ಸಾಧ್ಯವಾದರೆ ಕೈ ಜೋಡಿಸಿ’ ಎಂದರು.

ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಅರವಿಂದ ಮಾಲಗತ್ತಿ ಮಾತನಾಡಿ, ‘ಬದಲಾಯಿಸುವ ಮತ್ತು ಸಂಘಟಿಸುವ ಸಕ್ತಿ ಚಂಪಾ ಅವರಲ್ಲಿದೆ. ಒಡೆದು ಕಟ್ಟುವ ಕ್ರಿಯೆಯು ಅವರಿಗೆ ರಕ್ತಗತವಾಗಿ ಬಂದಿದೆ. ಅವರ ಸಾಹಿತ್ಯದ ಮೇಲ್‌ಸ್ತರದಲ್ಲಿ ವ್ಯಂಗ್ಯವಿದ್ದರೆ, ಒಳಗಡೆ ಗಂಭೀರತೆ ಇದೆ’ ಎಂದರು.

‘ತನ್ನನ್ನು ತಾನು ಶ್ರೇಷ್ಠ ಎನ್ನುವುದೇ ಜಾಳುತನ. ಆದರೆ, ಚಂಪಾ ಅವರು ಇತರರ ಜೊತೆ ತನ್ನನ್ನು ತಾನೂ ಟೀಕಿಸಿಕೊಂಡು ಗಟ್ಟಿತನ ತೋರಿದವರು. ಕೆಲವರು ಸಮ್ಮೇಳನದ ಅಧ್ಯಕ್ಷರಾದ ಬಳಿಕ ಹೆಸರಿಗೆ ಬಂದರೆ, ಚಂಪಾ ಆಯ್ಕೆಯಿಂದ ಸಮ್ಮೇಳನಕ್ಕೆ ಗೌರವ ಬಂದಿದೆ’ ಎಂದರು.

ಸಾಹಿತಿ ಧರಣೇಂದ್ರ ಕುರಕುರೆ ಮಾತನಾಡಿ, ‘ಉತ್ತರ ಭಾರತದ ಹಲವು ಭಾಷೆಗಳಲ್ಲಿ ಇಲ್ಲದ ಹೊಸ ಬಗೆಯ ಸಾಹಿತ್ಯವನ್ನು ಚಂಪಾ ನೀಡಿದರು. ಹಲವರು ಅಧ್ಯಕ್ಷತೆ, ಪ್ರಶಸ್ತಿಗಳನ್ನು ಹೊಡೆದುಕೊಂಡರೆ, ಚಂಪಾ ಅರ್ಹತೆಯಿಂದ ಪಡೆದುಕೊಂಡರು’ ಎಂದರು.

ಪ್ರಾಧಿಕಾರದ ಆಯುಕ್ತ ಮಲ್ಲೇಶಪ್ಪ ಹೊರಪೇಟೆ, ಅಕಾಡೆಮಿ ಸದಸ್ಯ ಅಶೋಕ ಬ. ಹಳ್ಳಿಯವರ, ರಿಜಿಸ್ಟ್ರಾರ್ ಸಿ.ಎಚ್. ಭಾಗ್ಯ, ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಲಿಂಗಯ್ಯ ಬಿ. ಹಿರೇಮಠ, ಮಾಜಿ ಶಾಸಕ ಡಿ.ಎಂ. ಸಾಲಿ, ಜಗನ್ನಾಥ ಗೇನಣ್ಣವರ, ಸಿದ್ದಲಿಂಗಪ್ಪ ಬೀಳಗಿ ಇದ್ದರು. ಪತ್ರಕರ್ತ ಮಾಲತೇಶ ಅಂಗೂರ ಹಾಗೂ ವಿವಿಧ ಕಲಾವಿದರು ಜೊತೆಗೂಡಿ ಆಯೋಜಿಸಿದ ಕಲಾ ಪ್ರದರ್ಶನ ಗಮನ ಸೆಳೆಯಿತು.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry