ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೋಡಿ ಮುಕ್ತ ಜಿಲ್ಲೆಗೆ ತಿಂಗಳ ಗಡುವು

Last Updated 29 ಅಕ್ಟೋಬರ್ 2017, 8:24 IST
ಅಕ್ಷರ ಗಾತ್ರ

ಕೋಲಾರ: ‘ನವೆಂಬರ್‌ ಅಂತ್ಯದೊಳಗೆ ಜಿಲ್ಲೆಯನ್ನು ಪೋಡಿ ಮುಕ್ತಗೊಳಿಸಬೇಕು. ಬಗರ್ ಹುಕುಂ ಸಾಗುವಳಿದಾರರಿಗೆ ಭೂಮಂಜೂರಾತಿ ಪತ್ರ ನೀಡಬೇಕು. ಇಲ್ಲದಿದ್ದರೆ ತಕ್ಕ ಶಾಸ್ತಿ ಮಾಡುತ್ತೇನೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಆರ್.ರಮೇಶ್‌ಕುಮಾರ್ ಅಧಿಕಾರಿಗಳಿಗೆ ಖಡಕ್‌ ಎಚ್ಚರಿಕೆ ನೀಡಿದರು. ನಗರದಲ್ಲಿ ಶನಿವಾರ ನಡೆದ ವಿವಿಧ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

‘ಮುಖ್ಯಮಂತ್ರಿ ಸಿದ್ದರಾಮಯ್ಯ ಡಿಸೆಂಬರ್‌ನಲ್ಲಿ ಜಿಲ್ಲೆಗೆ ಆಗಮಿಸಲಿದ್ದಾರೆ. ಅಷ್ಟರೊಳಗೆ ಜಿಲ್ಲೆಯು ಪೋಡಿಮುಕ್ತ ಜಿಲ್ಲೆಯಾಗಿ ಘೋಷಣೆಯಾಗಿರಬೇಕು’ ಎಂದು ತಾಕೀತು ಮಾಡಿದರು. ‘ಅಧಿಕಾರಿಗಳು ಉದ್ದೇಶ ಪೂರ್ವಕವಾಗಿ ಕೆಲಸ ವಿಳಂಬ ಮಾಡಿ, ಕಾಸು ಕೊಟ್ರೇನೆ ಕೆಲಸ ಆಗೋದು ಎನ್ನುವ ಸ್ಥಿತಿಗೆ ರೈತರನ್ನು ದೂಡುತ್ತಾರೆ. ಅಂತಹ ಅಧಿಕಾರಿಗಳಿಗೆ ಏನು ಶಿಕ್ಷ ಕೊಡಬೇಕು ಎಂದು ನನಗೆ ಗೊತ್ತು. ಸಾಕಷ್ಟು ಕಾಲಾವಕಾಶ ನೀಡಿ ತಾಳ್ಮೆಯಿಂದ ಕಾಯುತ್ತಿದ್ದೇನೆ. ಇನ್ನು ಸಹಿಸುವುದಿಲ್ಲ’ ಎಂದು ಸಿಡಿಮಿಡಿಯಾದರು.

‘ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ನಿರ್ಮಿಸಲಾಗಿರುವ ಮನೆಗಳ ಸಕ್ರಮಕ್ಕೆ ಅಧಿಕಾರಿಗಳು ಸಮರೋಪಾದಿಯಲ್ಲಿ ಕಾರ್ಯ ನಿರ್ವಹಿಸಬೇಕು. ನಯಾ ಪೈಸೆ ಖರ್ಚಿಲ್ಲದೆ ರೈತರ ಮನೆ ಬಾಗಿಲಿಗೆ ದಾಖಲೆಪತ್ರಗಳನ್ನು ಅಂಚೆ ಮೂಲಕ ಕಳುಹಿಸಬೇಕು. ಅನಧಿಕೃತವಾಗಿ ಮನೆ ನಿರ್ಮಿಸಿಕೊಂಡವರಿಗೂ ಹಕ್ಕುಪತ್ರ ದೊರೆಯಬೇಕು. ಇದು ಸರ್ಕಾರದ ಸಂಕಲ್ಪ’ ಎಂದು ಹೇಳಿದರು.

ಅನ್ನ ಕಿತ್ತುಕೊಳ್ಳಬೇಡಿ: ‘ಬಗರ್ ಹುಕುಂ ಸಾಗುವಳಿಯಲ್ಲಿ ರೈತರು ಅರ್ಜಿ ಹಾಕಿಕೊಂಡು ವರ್ಷಗಳೇ ಕಳೆದಿವೆ. ಆದರೆ, ಅಧಿಕಾರಿಗಳು ಆ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ಬದುಕಲು ದಾರಿ ಇಲ್ಲದವರು ಜೀವನಕ್ಕಾಗಿ ಒಂದಿಷ್ಟು ಜಮೀನು ಒತ್ತುವರಿ ಮಾಡಿ ಸಾಗುವಳಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಅವರ ಅನ್ನ ಕಿತ್ತುಕೊಳ್ಳಬೇಡಿ. ಸಾಗುವಳಿದಾರರಿಗೆ ಭೂಮಿ ಮಂಜೂರು ಮಾಡಿ ದಾಖಲೆಪತ್ರ ಒದಗಿಸುವುದು ಕಂದಾಯ ಇಲಾಖೆ ಜವಾಬ್ದಾರಿ. ದಾಖಲೆಪತ್ರ ಇಡಬೇಕಾದದ್ದು ತಹಶೀಲ್ದಾರ್ ಕಚೇರಿಯ ಕೆಲಸ’ ಎಂದು ತಿಳಿಸಿದರು.

‘ಬಗರ್‌ ಹುಕುಂ ಸಾಗುವಳಿ ಸಂಬಂಧ ಎಲ್ಲ ತಾಲ್ಲೂಕು ತಹಶೀಲ್ದಾರ್‌ಗಳಿಂದ ಮಾಹಿತಿ ಪಡೆದ ಸಚಿವರು, ಯಾವುದೇ ಸಬೂಬು ಹೇಳದೆ ಕಾರ್ಯ ನಿರ್ವಹಿಸಿ. ಪೋಡಿ ಸಮಸ್ಯೆಗಳನ್ನು ಶೀಘ್ರ ಬಗೆಹರಿಸಬೇಕು’ ಎಂದು ಸೂಚಿಸಿದರು.

‘ಜಿಲ್ಲೆಯಲ್ಲಿ ಯಾವುದೇ ಬಡವ ತನಗೆ ಪಡಿತರ ಚೀಟಿ ಸಿಕ್ಕಿಲ್ಲ ಎಂದು ದೂರು ನೀಡಬಾರದು. ಸರ್ಕಾರ ಘೋಷಣೆ ಮಾಡಿದ ಅನ್ನಭಾಗ್ಯ ಯೋಜನೆಯ ಫಲ ಎಲ್ಲ ಬಡವರಿಗೂ ಸಿಗಬೇಕು. ಗ್ರಾಮಾಂತರ ಪ್ರದೇಶದಲ್ಲಿ ಪಡಿತರದಾರರಿಗೆ ತೊಂದರೆಯಾಗದಂತೆ ಗ್ರಾಮಗಳಲ್ಲೇ ಆಹಾರ ಪದಾರ್ಥ ವಿತರಿಸಲು ಕ್ರಮ ಕೈಗೊಳ್ಳಿ’ ಎಂದು ತಿಳಿಸಿದರು.

ರೈತರಿಗೆ ನೆಮ್ಮದಿ: ‘ಬೇರೆ ಜಿಲ್ಲೆಗಳಲ್ಲೂ ಬಗರ್‌ ಹುಕುಂ ಮತ್ತು ಪೋಡಿ ಸಮಸ್ಯೆ ಇದೆ. ತಾಲ್ಲೂಕು ಕಚೇರಿಗೆ ಬರುವ ರೈತರ ಪೈಕಿ ಶೇ 90ರಷ್ಟು ಮಂದಿ ಇದೇ ಸಮಸ್ಯೆ ಹೊತ್ತು ಬರುತ್ತಾರೆ. ಈ ಸಮಸ್ಯೆಗಳು ಬಗೆಹರಿದರೆ ರೈತರಿಗೆ ನೆಮ್ಮದಿ. ಒಂದು ತಿಂಗಳೊಳಗೆ ಪೋಡಿ ಮತ್ತು ಅಕ್ರಮ -ಸಕ್ರಮ ಸಮಸ್ಯೆ ಬಗೆಹರಿಸಲಾಗುತ್ತದೆ’ ಎಂದು ಜಿಲ್ಲಾಧಿಕಾರಿ ಜಿ.ಸತ್ಯವತಿ ಭರವಸೆ ನೀಡಿದರು.

‘ತಹಶೀಲ್ದಾರ್‌ಗಳು ಮತ್ತು ಸರ್ವೆ ಇಲಾಖೆ ಮೇಲ್ವಿಚಾರಕರು ಸಮರ್ಪಕ ಮಾಹಿತಿ ನೀಡದಿದ್ದರಿಂದ ಅಸಮಾಧಾನಗೊಂಡ ಜಿಲ್ಲಾಧಿಕಾರಿ, ಸುಮ್ಮನೆ ಸಬೂಬು ಹೇಳಬೇಡಿ. ಶ್ರದ್ಧೆಯಿಂದ ಕೆಲಸ ಮಾಡಿ. ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ಜಂಟಿ ಸರ್ವೆ ಮಾಡಿ’ ಎಂದು ಸೂಚಿಸಿದರು.

‘ಸಮಾಜ ಕಲ್ಯಾಣ ಇಲಾಖೆಯಲ್ಲಿ ಯಾವುದೂ ಸರಿಯಿಲ್ಲ. ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಸಂಬಂಧಿಸಿದ ಮೂರ್ನಾಲ್ಕು ವರ್ಷಗಳ ಹಿಂದಿನ ಕಡತಗಳನ್ನು ಆಡಳಿತಾತ್ಮಕ ಒಪ್ಪಿಗೆಗಾಗಿ ಎರಡು ದಿನದ ಹಿಂದೆ ನನಗೆ ಸಲ್ಲಿಸಿದ್ದಾರೆ. ಆ ಕಡತಗಳಿಗೆ ಹೇಗೆ ಸಹಿ ಮಾಡಲಿ’ ಎಂದು ಸಚಿವರ ಗಮನಕ್ಕೆ’ ತಂದರು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಬಿ.ಬಿ.ಕಾವೇರಿ, ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ವಿದ್ಯಾಕುಮಾರಿ, ಉಪ ವಿಭಾಗಾಧಿಕಾರಿ ಶುಭಾ ಕಲ್ಯಾಣ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT