ರಾಜ್ಯ ಹೆದ್ದಾರಿಯಲ್ಲಿ ಗುಂಡಿಗಳ ಕಾರುಬಾರು

ಸೋಮವಾರ, ಜೂನ್ 17, 2019
22 °C

ರಾಜ್ಯ ಹೆದ್ದಾರಿಯಲ್ಲಿ ಗುಂಡಿಗಳ ಕಾರುಬಾರು

Published:
Updated:
ರಾಜ್ಯ ಹೆದ್ದಾರಿಯಲ್ಲಿ ಗುಂಡಿಗಳ ಕಾರುಬಾರು

ಕುಷ್ಟಗಿ: ‘ಪಟ್ಟಣದಿಂದ ಹನುಮಸಾಗರಕ್ಕೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ ಹಾಳಾಗಿದ್ದು, ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ’ ಎಂದು ಸಾರ್ವಜನಿಕರು ದೂರಿದ್ದಾರೆ. ಈ ರಸ್ತೆ ಒಳನಾಡು ಜಲಸಾರಿಗೆ ಮತ್ತು ಬಂದರು ಇಲಾಖೆ ಉಪ ವಿಭಾಗದ ವ್ಯಾಪ್ತಿಗೆ ಸೇರಿದೆ. ಆದರೆ, ರಸ್ತೆ ಹದಗೆಟ್ಟು ವರ್ಷವಾದರೂ ದುರಸ್ತಿ ಮಾಡಿಲ್ಲ.

ಪಟ್ಟಣದ ರಾಷ್ಟ್ರೀಯ ಹೆದ್ದಾರಿಯಿಂದ ಆರಂಭಗೊಳ್ಳುವ ರಸ್ತೆಯಲ್ಲಿ ಗುಂಡಿಗಳದ್ದೆ ಕಾರುಬಾರು. ಗುಂಡಿಗಳಲ್ಲಿ ಮಳೆ ನೀರು ನಿಂತಿದ್ದು, ವಾಹನ ಸವಾರರು ಪರದಾಡಬೇಕಾಗಿದೆ.

ಹನುಮಸಾಗರದವರೆಗಿನ 20 ಕಿ.ಮೀ ರಸ್ತೆಯಲ್ಲಿ ಕೆಲ ವರ್ಷಗಳ ಹಿಂದೆ ಡಾಂಬರೀಕರಣ ಮಾಡಲಾಗಿದೆ. ಆದರೆ, ಕಾಮಗಾರಿಯ ಗುಣಮಟ್ಟ ಕಾಪಾಡಿಲ್ಲ. ಗ್ರಾನೈಟ್ ಸೇರಿದಂತೆ ಮತ್ತಿತರ ಅತಿ ಭಾರದ ವಸ್ತುಗಳನ್ನು ಸಾಗಿಸುವ ವಾಹನಗಳ ಸಂಚಾರದಿಂದಾಗಿ ರಸ್ತೆ ಹಾಳಾಗಿದೆ.

‘ಆಶ್ರಯ ಕಾಲೊನಿ, ನಿಡಶೇಸಿ, ತಳುವಗೇರಾ ಗ್ರಾಮಗಳ ಬಳಿ ರಸ್ತೆ ತೀರಾ ಹದಗೆಟ್ಟಿದೆ. ಶಾಸಕರು, ಸಂಸದರು, ಜಿಲ್ಲಾಡಳಿತದ ಹಿರಿಯ ಅಧಿಕಾರಿಗಳು ಇದೇ ಮಾರ್ಗವಾಗಿ ಸಂಚರಿಸುತ್ತಾರೆ. ಆದರೆ, ರಸ್ತೆಯ ಸ್ಥಿತಿಯನ್ನು ಕಂಡೂ ಕಾಣದಂತೆ ವರ್ತಿಸುತ್ತಾರೆ’ ಎಂಬುವುದು ಸಾರ್ವಜನಿಕರ ಆರೋಪ.

ಎಂಜಿನಿಯರ್ ಹೇಳಿದ್ದು: ಈ ಕುರಿತು ವಿವರಿಸಿದ ಒಳನಾಡು ಜಲಸಾರಿಗೆ ಮತ್ತು ಬಂದರು ಇಲಾಖೆ ಉಪ ವಿಭಾಗದ ಸಹಾಯಕ ಎಂಜಿನಿಯರ್ ರಂಗಪ್ಪ, ‘ಗುಂಡಿ ಮುಚ್ಚುವುದು, ಮುಳ್ಳುಕಂಟಿ ತೆಗೆಯುವುದು ಸೇರಿದಂತೆ ರಸ್ತೆ ನಿರ್ವಹಣೆಯನ್ನು ₹85 ಲಕ್ಷ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲು ಟೆಂಡರ್ ಪ್ರಕ್ರಿಯೆ ನಡೆದಿದೆ. ಅಲ್ಲಲ್ಲಿ ಒಟ್ಟು ನಾಲ್ಕ ಕಿ.ಮೀ ಡಾಂಬರೀಕರಣ ನಡೆಯಲಿದೆ’ ಎಂದರು.

ಅದೇ ರೀತಿ ಚಳಗೇರಾದಿಂದ ಮಿಯಾಪುರ ಕ್ರಾಸ್ ಮತ್ತು ಗುಡೂರು ಕ್ರಾಸ್ ವರೆಗಿನ ರಸ್ತೆಯ ವಿಸ್ತರಣೆಗೆ ₹4 ಕೋಟಿ ಮೊತ್ತದ ಕಾಮಗಾರಿಗೆ ಟೆಂಡರ್ ಕರೆಯಲಾಗಿದ್ದು , ಶೀಘ್ರ ಪ್ರಕ್ರಿಯೆ ಪೂರ್ಣಗೊಳ್ಳಲಿದೆ’ ಎಂದು ವಿವರಿಸಿದರು.

‘ಬದಲಾದ ನಿಯಮಗಳ ಅನುಸಾರ ತುಂಡುಗುತ್ತಿಗೆ ಕೆಲಸ ನೀಡುವಂತಿಲ್ಲ. ಸಣ್ಣಪುಟ್ಟ ನಿರ್ವಹಣೆಗೆ ಇಲಾಖೆಯಲ್ಲಿ ಹಿಂದಿನಂತೆ ಗ್ಯಾಂಗ್‌ಮನ್‌ಗಳಿಲ್ಲ. ಎಲ್ಲ ಕೆಲಸಗಳನ್ನು ಟೆಂಡರ್ ಮೂಲಕ ನಿರ್ವಹಿಸಬೇಕಿದೆ’ ಎಂದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry