ಎರಡು ಸರ್ಕಾರಿ ಹುದ್ದೆ: ನೌಕರನಿಗೆ ನೋಟಿಸ್‌ ಜಾರಿ

ಭಾನುವಾರ, ಮೇ 26, 2019
22 °C

ಎರಡು ಸರ್ಕಾರಿ ಹುದ್ದೆ: ನೌಕರನಿಗೆ ನೋಟಿಸ್‌ ಜಾರಿ

Published:
Updated:

ಮೇಲುಕೋಟೆ: ಎರಡು ಸರ್ಕಾರಿ ಸಂಸ್ಥೆಗಳ ಪೂರ್ಣಕಾಲಿಕ ಹುದ್ದೆಗಳಲ್ಲಿ ಕೆಲಸ ಮಾಡುತ್ತಿದ್ದ ನೌಕರನಿಗೆ ಸಂಸ್ಕೃತ ವಿವಿ.ಕುಲಪತಿ ಪದ್ಮಾಶೇಖರ್ ನೋಟಿಸ್‌ ಜಾರಿ ಮಾಡಿದ್ದಾರೆ. ಮೇಲುಕೋಟೆ ಸಂಸ್ಕೃತ ಸಂಶೋಧನಾ ಸಂಸ್ಥೆ ಹಾಗೂ ಚೆಲುವನಾರಾಯಣಸ್ವಾಮಿ ದೇವಾಲಯಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಕರಗಂ ರಂಗಪ್ರಿಯ ಅವರಿಗೆ ಈಗ ಸಂಕಷ್ಟ ಎದುರಾಗಿದೆ.

ಅವರು ಎರಡು ಹುದ್ದೆ ನಿರ್ವಹಿಸುತ್ತಿರುವ ಬಗ್ಗೆ ಸಾರ್ವಜನಿಕರು ದೂರು ಸಲ್ಲಿಸಿದ ಕಾರಣ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಪದ್ಮಾಶೇಖರ್ ಅ. 22ರೊಳಗೆ ದೇಗುಲದ ಹುದ್ದೆ ತೊರೆದು ಅಲ್ಲಿ ಪಡೆದ ಎಲ್ಲ ವೇತನ ಮರುಪಾವತಿ ಮಾಡುವಂತೆ ಸೂಚಿಸಿದ್ದರು. ಆದರೆ, ರಂಗಪ್ರಿಯ ನ.10ರವರೆಗೆ ರಜೆ ಕೋರಿಕೆ ನೀಡಿದ್ದರು.

ಆದರೆ, ರಜೆ ಮುಗಿಸಿ ಕರ್ತವ್ಯಕ್ಕೆ ಹಾಜರಾಗಬೇಕಿದ್ದರೆ ದೇಗುಲದ ಹುದ್ದೆ ತೊರೆದು, ವೇತನ ಮರುಪಾವತಿಸಿದ ದೃಢೀಕರಣ ಸಲ್ಲಿಸಬೇಕು ಎಂದು ನೋಟಿಸ್‌ನಲ್ಲಿ ಸೂಚಿಸಿದ್ದಾರೆ ಎಂದು ಸಂಸ್ಕೃತ ಸಂಶೋಧನಾ ಸಂಸ್ಥೆಯ ಕುಲಸಚಿವ ಕುಮಾರ್ ಪತ್ರಕರ್ತರಿಗೆ ಮಾಹಿತಿ ನೀಡಿದ್ದಾರೆ.

ಸಂಸ್ಕೃತ ಸಂಶೋಧನಾ ಸಂಸ್ಥೆಯಲ್ಲಿ ಕೆ.ಸಿ.ಎಸ್.ಆರ್ ನಿಯಮಾವಳಿಯ ಅನ್ವಯ ಸಂಶೋಧಕರಾಗಿಯೂ ಮತ್ತು ಚೆಲುವನಾರಾಯಣಸ್ವಾಮಿ ದೇವಾಲಯದಲ್ಲಿ ಸ್ಥಾನೀಕರಾಗಿ ಏಕಕಾಲದಲ್ಲಿ ಕರ್ತವ್ಯ ನಿರ್ವಹಿಸುತ್ತ ಎರಡೂ ಕಡೆ ವೇತನ ಪಡೆಯುತ್ತಿದ್ದ ರಂಗಪ್ರಿಯ ವಿರುದ್ಧ ಧಾರ್ಮಿಕ ದತ್ತಿ ಇಲಾಖೆಯ ಈ ಹಿಂದಿನ ಪ್ರಕರಣಗಳು ಮತ್ತು ಸುತ್ತೋಲೆಯಂತೆ ಶಿಸ್ತುಕ್ರಮ ಕೈಗೊಳ್ಳುವಂತೆ ಹಲವು ಮಂದಿ ದೂರು ನೀಡಿದ್ದರು. ಮುಖ್ಯಮಂತ್ರಿ, ಧಾರ್ಮಿಕ ದತ್ತಿ ಇಲಾಖೆ ಆಯುಕ್ತರು ತಕ್ಷಣ ಕಾನೂನು ಕ್ರಮ ಜರುಗಿಸಲು ಸೂಚಿಸಿದ್ದರು.

ಆದರೆ, ಚೆಲುವನಾರಾಯಣಸ್ವಾಮಿ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಕಚೇರಿ ಸಿಬ್ಬಂದಿ ಮಾತ್ರ ಈ ಬಗ್ಗೆ ಕ್ರಮ ಜರುಗಿಸದೆ ಸುಮ್ಮನಿದ್ದಾರೆ. ಧಾರ್ಮಿಕ ದತ್ತಿ ಇಲಾಖೆ ಆಯುಕ್ತರು, ಮುಖ್ಯಮಂತ್ರಿಯ ಪತ್ರವನ್ನೂ ನಿರ್ಲಕ್ಷ್ಯಿಸಿ ರಂಗಪ್ರಿಯ ಅವರಿಗೆ ಮಾಸಿಕ ವೇತನ ನೀಡುತ್ತಿದ್ದಾರೆ.

ದೇವಾಲಯದ ಹುದ್ದೆಗೆ ರಾಜೀನಾಮೆ ನೀಡುವ ಬದಲು ಸಹೋದರನನ್ನು ಸ್ಥಾನೀಕರ ಹುದ್ದೆಗೆ ನೇಮಕ ಮಾಡುವಂತೆ ಕೋರಿ ರಂಗಪ್ರಿಯ ದೇವಾಲಯಕ್ಕೆ ಮನವಿ ನೀಡಿದ್ದಾರೆ. ಆದರೆ ಈ ಮನವಿಯನ್ನು ಪುರಸ್ಕರಿಸದೆ ಕಾನೂನು ರೀತಿ ಕ್ರಮ ಕೈಗೊಳ್ಳಬೇಕು ಎಂದು ನಾಗರಿಕರು ಒತ್ತಾಯಿಸಿದ್ದಾರೆ. ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಕಚೇರಿ ಸಿಬ್ಬಂದಿಯ ವಿಳಂಬ ನೀತಿ ಭ್ರಷ್ಟಾಚಾರದ ಮತ್ತೊಂದು ಮುಖ. ಈ ಬಗ್ಗೆ ಎ.ಸಿ.ಬಿಗೆ ದೂರು ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry