ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರ್ಮದ ನೆಲೆವೀಡಿಗೆ ನಾಡಿನ ದೊರೆ

Last Updated 29 ಅಕ್ಟೋಬರ್ 2017, 8:45 IST
ಅಕ್ಷರ ಗಾತ್ರ

ಮಂಗಳೂರು: ಪ್ರಧಾನಿ ನರೇಂದ್ರ ಮೋದಿಯವರನ್ನು ಎದುರುಗೊಳ್ಳಲು ಶ್ರೀ ಕ್ಷೇತ್ರ ಧರ್ಮಸ್ಥಳ ಸಂಭ್ರಮದೊಂದಿಗೆ ಸಜ್ಜುಗೊಂಡಿದೆ. ಪ್ರಧಾನಿಯವರ ಉಪಸ್ಥಿತಿಯಲ್ಲಿ ಭಾನುವಾರ ನಡೆಯುವ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ (ಎಸ್‌ಕೆಡಿಆರ್‌ಡಿಪಿ) ಸಮಾವೇಶಕ್ಕಾಗಿ ಉಜಿರೆ ಪಟ್ಟಣದಲ್ಲಿ ಅದ್ದೂರಿ ಸಿದ್ಧತೆಗಳನ್ನು ಮಾಡಲಾಗಿದೆ.

ಮೋದಿಯವರು ಪ್ರಧಾನಿ ಹುದ್ದೆಯಲ್ಲಿರುವಾಗಲೇ ಧರ್ಮಸ್ಥಳಕ್ಕೆ ಭೇಟಿ ನೀಡುತ್ತಿರುವ ಮೊದಲಿಗರು. ಹೀಗಾಗಿ ಧರ್ಮಸ್ಥಳದಲ್ಲಿ ಸಂಭ್ರಮ ಮನೆ ಮಾಡಿದೆ. ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ, ಅವರ ಕುಟುಂಬ, ಮಂಜುನಾಥ ಸ್ವಾಮಿ ದೇವಾಲಯದ ಆಡಳಿತ ವ್ಯವಸ್ಥೆಯ ಭಾಗವಾಗಿರುವವರು, ಎಸ್‌ಕೆಡಿಆರ್‌ಡಿಪಿ ಆಡಳಿತ ಮಂಡಳಿ, ಸದಸ್ಯರು, ಶ್ರೀ ಮಂಜುನಾಥೇಶ್ವರ ಸಮೂಹ ಸಂಸ್ಥೆಗಳ ಸಿಬ್ಬಂದಿ ಸೇರಿದಂತೆ ಸಾವಿರಾರು ಮಂದಿ ಪ್ರಧಾನಿಯ ಸ್ವಾಗತಕ್ಕೆ ಕಾತರದಿಂದ ಕಾಯುತ್ತಿದ್ದಾರೆ.

ಪ್ರಧಾನಿ ಭೇಟಿ ನಿಮಿತ್ತ ಶನಿವಾರ ರಾತ್ರಿ 9 ಗಂಟೆಯಿಂದ ಧರ್ಮಸ್ಥಳದ ದೇವಾಲಯದ ಆವರಣಕ್ಕೆ ಸಾರ್ವಜನಿಕರ ಪ್ರವೇಶ ನಿಷೇಧಿಸಲಾಗಿದೆ. ದೇವಸ್ಥಾನ ಸೇರಿದಂತೆ ಧರ್ಮಸ್ಥಳದಾದ್ಯಂತ ಬಿಗಿ ಪೊಲೀಸ್‌ ಭದ್ರತೆ ಕಲ್ಪಿಸಲಾಗಿದೆ. ಪ್ರಧಾನಿಯವರ ಭೇಟಿ ಮತ್ತು ವಿಶೇಷ ಪೂಜೆಗೆ ದೇವಾಲಯದಲ್ಲಿ ಸಿದ್ಧತೆಗಳನ್ನು ಆರಂಭಿಸಲಾಗಿದೆ.
ಜರ್ಮನ್‌ ತಂತ್ರಜ್ಞಾನದ ಚಪ್ಪರ: ಎಸ್‌ಕೆಡಿಆರ್‌ಡಿಪಿ ಸದಸ್ಯರ ಬೃಹತ್‌ ಸಮಾವೇಶಕ್ಕೆ ಉಜಿರೆಯ ರತ್ನವರ್ಮ ಹೆಗ್ಗಡೆ ಕ್ರೀಡಾಂಗಣದಲ್ಲಿ ಸಕಲ ಸಿದ್ಧತೆ ಮಾಡಲಾಗಿದೆ.

ಎಸ್‌ಕೆಡಿಆರ್‌ಡಿಪಿಯ 60,000 ಸದಸ್ಯರು ಸೇರಿದಂತೆ ಒಂದು ಲಕ್ಷ ಜನರು ಸಮಾವೇಶದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಬೆಂಗಳೂರಿನ ಉಡುಪ ಎಂಟರ್‌ಪ್ರೈಸಸ್‌ ವೇದಿಕೆ ಮತ್ತು ಚಪ್ಪರ ನಿರ್ಮಾಣ, ಧ್ವನಿ ಮತ್ತು ಬೆಳಕು ಹಾಗೂ ತಡೆಬೇಲಿ ನಿರ್ಮಾಣದ ಕೆಲಸ ನಿರ್ವಹಿಸಿದೆ. ಜರ್ಮನಿಯ ತಂತ್ರಜ್ಞಾನ ಆಧರಿಸಿ ನಿರ್ಮಿಸಿರುವ ಬಿಳಿ ಹಾಗೂ ತಿಳಿಹಸಿರು ಬಣ್ಣದ ಚಪ್ಪರದಲ್ಲಿ 35,000 ಆಸನಗಳ ವ್ಯವಸ್ಥೆ ಮಾಡಲಾಗಿದೆ. ಕ್ರೀಡಾಂಗಣದ ಮೆಟ್ಟಿಲುಗಳ ಮೇಲೆ ಸೇರಿದಂತೆ 60,000 ಜನರು ಕುಳಿತುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ.

‘ಚಪ್ಪರವನ್ನು ಹಲವು ವಿಭಾಗಗಳನ್ನಾಗಿ ವಿಭಜಿಸಲಾಗಿದೆ. ಹೆಚ್ಚಿನ ಜನರು ಕಾರ್ಯಕ್ರಮಕ್ಕೆ ಬಂದರೆ ಕೆಳಗಿನ ಇನ್ನೊಂದು ಕ್ರೀಡಾಂಗಣದಲ್ಲಿ ಕುಳಿತು ವೀಕ್ಷಿಸಲು ವ್ಯವಸ್ಥೆ ಮಾಡಿದ್ದೇವೆ. ಅಲ್ಲಿ ಹತ್ತು ಎಲ್‌ಇಡಿ ಪರದೆಗಳನ್ನು ಅಳವಡಿಸಿ ಸಭಾ ಕಾರ್ಯಕ್ರಮದ ನೇರ ಪ್ರಸಾರ ಮಾಡಲಾಗುವುದು’ ಎಂದು ಕಾರ್ಯಕ್ರಮದ ವೇದಿಕೆ ಮತ್ತು ಚಪ್ಪರ ನಿರ್ಮಾಣ ಕಾಮಗಾರಿಯ ಉಸ್ತುವಾರಿಯಾಗಿರುವ ಎಸ್‌ಕೆಡಿಆರ್‌ಡಿಪಿ ಪ್ರಾದೇಶಿಕ ನಿರ್ದೇಶಕ ಮಹಾವೀರ ಅಜ್ರಿ ‘ಪ್ರಜಾವಾಣಿ’ಗೆ ತಿಳಿಸಿದರು.

ಊಟದ ವ್ಯವಸ್ಥೆ: ಸಮಾವೇಶಕ್ಕೆ ದೂರದ ಊರುಗಳಿಂದ ಜನರು ಬರುತ್ತಿದ್ದಾರೆ. ಅವರಿಗಾಗಿ ಊಟದ ವ್ಯವಸ್ಥೆ ಮಾಡಲಾಗುತ್ತಿದೆ. ಉಜಿರೆ ಜನಾರ್ದನ ಸ್ವಾಮಿ ದೇವಸ್ಥಾನದ ಮೈದಾನದಲ್ಲಿ ಅಡುಗೆ ಮತ್ತು ಊಟ ಬಡಿಸುವ ವ್ಯವಸ್ಥೆ ಮಾಡಲಾಗಿದೆ. 60,000 ಜನರಿಗೆ ಊಟ ಸಿದ್ಧಪಡಿ ಸಲಾಗುವುದು. ಅನ್ನ, ಸಾಂಬಾರ್‌ ಮತ್ತು ಒಂದು ಬಗೆಯ ಸಿಹಿ ವಿತರಿಸಲು ಎಸ್‌ಕೆಡಿಆರ್‌ಡಿಪಿ ವ್ಯವಸ್ಥೆ ಮಾಡಿದೆ ಎಂದು ಅವರು ಮಾಹಿತಿ ನೀಡಿದರು.

ಶಿವಮೊಗ್ಗ, ಚಿಕ್ಕಮಗಳೂರು, ಉತ್ತರ ಕನ್ನಡ, ಕೊಡಗು, ಹಾಸನ ಸೇರಿದಂತೆ ಸಮೀಪದ ಜಿಲ್ಲೆಗಳ ಜನರು ಶನಿವಾರ ರಾತ್ರಿಯೇ ಧರ್ಮಸ್ಥಳ ತಲುಪುವ ಸಾಧ್ಯತೆ ಇದೆ. ಉಳಿದವರು ಭಾನುವಾರ ಬೆಳಿಗ್ಗೆ ತಲುಪುವರು. ಕಾರ್ಯಕ್ರಮಕ್ಕೆ ಬರುವ ಜನರಿಗೆ ನೆರವಾಗಲು 6,000ದಷ್ಟು ಸ್ವಯಂಸೇವಕರನ್ನು ನಿಯೋಜಿಸಲಾಗಿದೆ ಎಂದರು.

ವಾಹನ ನಿಲುಗಡೆ ಎಲ್ಲೆಲ್ಲಿ?
ಸಮಾವೇಶಕ್ಕೆ ವಿವಿಧ ಜಿಲ್ಲೆಗಳಿಂದ 1,000 ಬಸ್‌ಗಳು ಬರುವ ನಿರೀಕ್ಷೆ ಇದೆ. ಕಾರು, ದ್ವಿಚಕ್ರ ವಾಹನ ಸೇರಿದಂತೆ ಭಾರಿ ಸಂಖ್ಯೆಯ ವಾಹನಗಳು ಭಾನುವಾರ ಬೆಳಿಗ್ಗೆ ಉಜಿರೆ ಪ್ರವೇಶಿಸಲಿವೆ. ಈ ವಾಹನಗಳ ನಿಲುಗಡೆಗೆ ನಾಲ್ಕು ಸ್ಥಳಗಳನ್ನು ಗುರುತಿಸಲಾಗಿದೆ. ಸಭಾ ಕಾರ್ಯಕ್ರಮ ನಡೆಯುವ ಕ್ರೀಡಾಂಗಣದ ಬಳಿಗೆ ಯಾವುದೇ ಖಾಸಗಿ ವಾಹನಗಳಿಗೆ ಪ್ರವೇಶ ಇರುವುದಿಲ್ಲ.

ಜನಾರ್ದನ ಸ್ವಾಮಿ ದೇವಸ್ಥಾನದ ಎದುರಿನ ಮೈದಾನ, ಎಸ್‌ಡಿಎಂ ಪ್ರಾಥಮಿಕ ಶಾಲಾ ಮೈದಾನ, ಎಸ್‌ಡಿಎಂ ಕಾಲೇಜು ಮೈದಾನ ಮತ್ತು ಅಜ್ಜರಕಾಡು ಮೈದಾನಗಳಲ್ಲಿ ವಾಹನಗಳ ನಿಲುಗಡೆಗೆ ಅವಕಾಶವಿದೆ. ಉಜಿರೆ ದ್ವಾರದಿಂದ ರತ್ನವರ್ಮ ಹೆಗ್ಗಡೆ ಕ್ರೀಡಾಂಗಣದವರೆಗೆ ಎಲ್ಲರೂ ನಡೆದುಕೊಂಡೇ ಬರಬೇಕು.

3,000 ಪೊಲೀಸ್‌ ನಿಯೋಜನೆ
ಪ್ರಧಾನಿಯವರ ಭೇಟಿ ವೇಳೆ ಭದ್ರತೆ ಒದಗಿಸಲು 3,000 ಪೊಲೀಸರನ್ನು ನಿಯೋಜಿಸಲಾಗಿದೆ. ಎಸ್‌ಪಿ ದರ್ಜೆಯ ಹತ್ತು ಅಧಿಕಾರಿಗಳು ಬಂದೋಬಸ್ತ್‌ ನೇತೃತ್ವ ವಹಿಸಿದ್ದಾರೆ. ಸಬ್‌ ಇನ್‌ಸ್ಪೆಕ್ಟರ್‌ ಹಂತದಿಂದ ಡಿವೈಎಸ್‌ಪಿ ದರ್ಜೆಯವರೆಗಿನ 200 ಅಧಿಕಾರಿಗಳು ಭದ್ರತಾ ತಂಡದಲ್ಲಿದ್ದಾರೆ. ಪ್ರಧಾನಿಯವರ ಭದ್ರತೆಗಾಗಿ ವಿಶೇಷ ಭದ್ರತಾ ದಳದ (ಎಸ್‌ಪಿಜಿ) 160 ಮಂದಿ ಅಧಿಕಾರಿ, ಸಿಬ್ಬಂದಿ ನಿಯೋಜಿಸಲಾಗಿದೆ. ಎಸ್‌ಪಿಜಿ ಹಿರಿಯ ಅಧಿಕಾರಿ ಎಂ.ಕೆ.ಗುಪ್ತ ಈ ತಂಡದ ನೇತೃತ್ವ ವಹಿಸಿದ್ದಾರೆ

ಗುರುತಿನ ಚೀಟಿ ಕಡ್ಡಾಯ: ಚಪ್ಪರದೊಳಗೆ ಅತಿಗಣ್ಯರು, ಗಣ್ಯರು ಮತ್ತು ಸಾರ್ವಜನಿಕರಿಗೆ ಪ್ರತ್ಯೇಕ ಸ್ಥಳಗಳನ್ನು ಗುರುತಿಸಲಾಗಿದೆ. 500 ಮಂದಿಗೆ ಅತಿಗಣ್ಯರ ಪಾಸ್‌ ಮತ್ತು 3,000 ಮಂದಿಗೆ ಗಣ್ಯರ ಪಾಸ್‌ ವಿತರಿಸಲಾಗಿದೆ. ಈ ಎಲ್ಲರೂ ಪಾಸ್‌ಗಳನ್ನು ತರುವುದು ಕಡ್ಡಾಯ. ಉಳಿದವರು ಗುರುತಿನ ಚೀಟಿಯೊಂದಿಗೆ ಬರಬೇಕು.

ಚಪ್ಪರ ಪ್ರವೇಶಕ್ಕೆ ಎಂಟು ಕಡೆ ಅವಕಾಶವಿದೆ. ಎಲ್ಲ ಕಡೆಗಳಲ್ಲೂ ಭದ್ರತಾ ಸಿಬ್ಬಂದಿ ತಪಾಸಣೆ ಮಾಡಿ, ಒಳಕ್ಕೆ ಬಿಡುತ್ತಾರೆ. ನೀರಿನ ಬಾಟಲಿ, ಮೊಬೈಲ್‌ ಚಾರ್ಜರ್‌, ಪವರ್‌ ಬ್ಯಾಂಕ್‌, ಸಿಗರೇಟು, ಬೀಡಿ, ಬೆಂಕಿಪೊಟ್ಟಣ ತರುವಂತಿಲ್ಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT