ಕಾಂಗ್ರೆಸ್‌ನತ್ತ ವಿಜಯಶಂಕರ್ ಹೆಜ್ಜೆ

ಗುರುವಾರ , ಜೂನ್ 27, 2019
26 °C

ಕಾಂಗ್ರೆಸ್‌ನತ್ತ ವಿಜಯಶಂಕರ್ ಹೆಜ್ಜೆ

Published:
Updated:
ಕಾಂಗ್ರೆಸ್‌ನತ್ತ ವಿಜಯಶಂಕರ್ ಹೆಜ್ಜೆ

ಮೈಸೂರು: ಬಿಜೆಪಿ ಹಿರಿಯ ಮುಖಂಡ ಸಿ.ಎಚ್.ವಿಜಯಶಂಕರ್ ಪಕ್ಷ ತೊರೆದಿದ್ದಾರೆ. ಬಹುತೇಕ ಕಾಂಗ್ರೆಸ್ ಸೇರುವ ಸಾಧ್ಯತೆಗಳಿದ್ದು, ಮುಂದಿನ ಲೋಕಸಭೆ ಚುನಾವಣೆಯಲ್ಲಿ ರಾಜಕೀಯ ಭವಿಷ್ಯ ಕಂಡುಕೊಳ್ಳಲು ಮುಂದಾಗಿದ್ದಾರೆ.

ಬಿಜೆಪಿಯಲ್ಲಿ ಪದೇಪದೇ ಮಾಡಿದ ಅಪಮಾನದಿಂದ ಮನನೊಂದು, ಹಿಂದುಳಿದ ವರ್ಗಗಳ ನಾಯಕರನ್ನು ಅವಕಾಶ ವಂಚಿತರನ್ನಾಗಿ ಮಾಡಲಾಗುತ್ತಿದೆ ಎಂಬ ಅಸಮಾಧಾನದಿಂದ ಪಕ್ಷಕ್ಕೆ ವಿದಾಯ ಹೇಳಿದ್ದಾರೆ. ಮುಂದೆ ಕಾಂಗ್ರೆಸ್‌ನಲ್ಲಿ ರಾಜಕೀಯ ನೆಲೆ ಕಂಡುಕೊಳ್ಳಲು ಮುಂದಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈಗಾಗಲೇ ಅವರು ಕಾಂಗ್ರೆಸ್ ಸಂಪರ್ಕದಲ್ಲಿದ್ದು, ಪಕ್ಷ ಸೇರುವುದು ಖಚಿತ. ವಿಧಾನಸಭೆ ಬದಲಿಗೆ ಲೋಕಸಭೆ ಚುನಾವಣೆಯಲ್ಲಿ ಅವಕಾಶ ನೀಡಲಾಗುತ್ತದೆ ಎಂದು ಹೇಳಲಾಗುತ್ತದೆ. ಮಾಜಿ ಸಂಸದ ಎಚ್.ವಿಶ್ವನಾಥ್ ಪಕ್ಷ ತೊರೆದ ನಂತರ ಮೈಸೂರು ಲೋಕಸಭೆ ಕ್ಷೇತ್ರಕ್ಕೆ ಪ್ರಮುಖ ಅಭ್ಯರ್ಥಿಯ ಹುಡುಕಾಟದಲ್ಲಿ ಕಾಂಗ್ರೆಸ್ ಮುಖಂಡರು ತೊಡಗಿದ್ದರು. ಮುಂದಿನ ದಿನಗಳಲ್ಲಿ ವಿಜಯಶಂಕರ್ ಮೂಲಕ ಆ ಸ್ಥಾನ ತುಂಬಲು ಪಕ್ಷದ ವರಿಷ್ಠರು ಮುಂದಾಗಿದ್ದಾರೆ

2009ರಲ್ಲಿ ಮೈಸೂರು ಲೋಕಸಭೆ ಚುನಾವಣೆ ಸೋಲಿನ ನಂತರ ಬಿಜೆಪಿಯಲ್ಲಿ ವಿಜಯಶಂಕರ್‌ ಹಿನ್ನಡೆ ಅನುಭವಿಸುತ್ತಲೇ ಸಾಗಿದರು. ನಂತರದ ದಿನಗಳಲ್ಲಿ ಸಾಕಷ್ಟು ಮುಜುಗರ ಎದುರಿಸಿದ್ದಾರೆ. ಕಳೆದ 2014ರ ಲೋಕಸಭೆ ಚುನಾವಣೆಯಲ್ಲಿ ಮೈಸೂರು ಕ್ಷೇತ್ರದಿಂದ ಟಿಕೆಟ್ ಬಯಸಿದರೂ ಅವಕಾಶ ಸಿಗಲಿಲ್ಲ.

ಅದರ ಬದಲಾಗಿ ಹಾಸನ ಕ್ಷೇತ್ರದಿಂದ ಕಣಕ್ಕಿಳಿಸಲಾಯಿತು. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ಎದುರು ಸೋತು, ಠೇವಣಿ ಕಳೆದುಕೊಂಡು ಮುಖಭಂಗ ಅನುಭವಿಸಿದರು. ಮೈಸೂರಿನಿಂದ ಟಿಕೆಟ್ ನೀಡದಿರುವುದು, ಹಾಸನದಿಂದ ಸ್ಪರ್ಧಿಸುವಂತೆ ಮಾಡಿ ಬಲಿಪಶು ಮಾಡಲಾಯಿತು ಎಂದು ಅಸಮಾಧಾನಗೊಂಡಿದ್ದರು.

ನಂತರದ ದಿನಗಳಲ್ಲೂ ಸರಿಯಾಗಿ ನಡೆಸಿಕೊಳ್ಳಲಿಲ್ಲ ಎಂದು ಸಿಟ್ಟುಗೊಂಡಿದ್ದರು. ಹಿಂದುಳಿದ ವರ್ಗಗಳ ನಾಯಕತ್ವ ತುಳಿಯಲಾಗುತ್ತಿದೆ ಎಂದು ಅತೃಪ್ತರಾಗಿದ್ದರು.

‘ಪಿರಿಯಾಪಟ್ಟಣ ಕ್ಷೇತ್ರ ಹಾಗೂ ಪಕ್ಷದಲ್ಲಿ ಆಗುತ್ತಿದ್ದ ಗೊಂದಲ, ಮುಜುಗರ ತಡೆಯಬೇಕು. ಗೊಂದಲ ಸರಿಪಡಿಸುವಂತೆ ಬಿಜೆಪಿ ಎಲ್ಲಾ ಮುಖಂಡರಿಗೂ ಮನವಿ ಮಾಡಿದರೂ ಸ್ಪಂದಿಸಲಿಲ್ಲ. ರಾಜಕೀಯ ಅಸ್ತಿತ್ವ ಕಳೆದುಕೊಂಡು ಬೀದಿಯಲ್ಲಿ ನಿಲ್ಲುವ ಸ್ಥಿತಿಯನ್ನು ಬಿಜೆಪಿ ಮುಖಂಡರು ತಂದೊಡ್ಡಿದರು. ಇನ್ನೂ ಪಕ್ಷದಲ್ಲಿ ಇದ್ದರೆ ರಾಜಕೀಯ ಭವಿಷ್ಯ ಮಂಕಾಗಲಿದೆ ಎಂಬ ಹಿನ್ನೆಲೆಯಲ್ಲಿ ಪಕ್ಷ ತೊರೆಯುವ ಕಠಿಣ ನಿರ್ಧಾರ ಕೈಗೊಳ್ಳಬೇಕಾಯಿತು’ ಎಂದು ವಿಜಯಶಂಕರ್ ಅವರು ಪಕ್ಷ ತೊರೆದ ಕಾರಣಗಳನ್ನು ಪಟ್ಟಿಮಾಡುತ್ತಿದ್ದಾರೆ.

ಸತತವಾಗಿ ಎರಡು ಬಾರಿ ಲೋಕಸಭೆ ಚುನಾವಣೆಯಲ್ಲಿ ಸೋಲುಕಂಡಿದ್ದರಿಂದ ಮುಂದೆ ವಿಧಾನಸಭೆ ಮೂಲಕ ರಾಜಕೀಯ ಭವಿಷ್ಯ ರೂಪಿಸಿಕೊಳ್ಳುವ ಪ್ರಯತ್ನದಲ್ಲಿ ತೊಡಗಿದ್ದರು. ಪಿರಿಯಾಪಟ್ಟಣ ಕ್ಷೇತ್ರದ ಜತೆಗೆ ಹೆಚ್ಚು ಒಡನಾಟ ಇರುವುದರಿಂದ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ನೀಡುವಂತೆ ಪಕ್ಷದ ಮುಖಂಡರ ಬಳಿ ಬೇಡಿಕೆ ಇಟ್ಟಿದ್ದರು. ಬಿಜೆಪಿ ವರಿಷ್ಠರು ವಿಜಯಶಂಕರ್ ಭಾವನೆಗಳಿಗೆ ಸ್ಪಂದಿಸಲಿಲ್ಲ. ಬದಲಿಗೆ ಪಿರಿಯಾಪಟ್ಟಣಕ್ಕೆ ಮತ್ತೊಬ್ಬ ನಾಯಕನನ್ನು ಬೆಂಗಳೂರಿನಿಂದ ಕಳುಹಿಸಿದರು.

ಬಿಜೆಪಿ ಹೆಸರಿನಲ್ಲಿ ಎರಡು ಕಚೇರಿಗಳಲ್ಲಿ ಚಟುವಟಿಕೆಗಳು ನಡೆಯಲಾರಂಭಿಸಿದವು. ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರಲ್ಲಿ ಮೂಡಿರುವ ಗೊಂದಲ ನಿವಾರಿಸಬೇಕು. ನನಗೆ ಟಿಕೆಟ್ ನೀಡುವುದನ್ನು ಖಚಿತಪಡಿಸಬೇಕು ಎಂದು ಮುಖಂಡರ ಮೇಲೆ ಸತತ ಒತ್ತಡ ಹೇರುತ್ತಲೇ ಬಂದರು.

ಬಿಜೆಪಿ ರಾಜ್ಯ ಮುಖಂಡರು ಗೊಂದಲ ನಿವಾರಿಸಲು ಮುಂದಾಗಲಿಲ್ಲ. ಬದಲಿಗೆ ವಿಜಯಶಂಕರ್ ಮನವೊಲಿಸುವ ಪ್ರಯತ್ನ ನಡೆಸಿದರು. ಪಿರಿಯಾಪಟ್ಟಣದ ಬದಲಿಗೆ ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸುವಂತೆ ಸಲಹೆ ನೀಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವರುಣಾ ಕ್ಷೇತ್ರ ಬಿಟ್ಟು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸ್ಪರ್ಧಿಸಲಿದ್ದು, ಅವರ ಎದುರು ನಿಂತು ಗೆದ್ದರೆ ವರ್ಚಸ್ಸು ವೃದ್ಧಿಸುತ್ತದೆ ಎಂದು ಉತ್ಸಾಹ ತುಂಬುವ ಪ್ರಯತ್ನ ನಡೆದಿತ್ತು.

‘ಹಿಂದೆ ದೇವೇಗೌಡರ ಎದುರು ಹರಕೆಯ ಕುರಿ ಮಾಡಿದರು. ಮುಂದೆ ಸಿದ್ದರಾಮಯ್ಯ ಎದುರೂ ಬಲಿಪಶುಮಾಡುತ್ತಾರೆ. ಹಿಂದುಳಿದ ವರ್ಗದ ನಾಯಕತ್ವ ತುಳಿಯುವ ಕೆಲಸ ಬಿಜೆಪಿಯಲ್ಲಿ ನಡೆಯುತ್ತಿದೆ. ಪಕ್ಷದಲ್ಲಿ ಎಷ್ಟೇ ಪ್ರಯತ್ನ ನಡೆಸಿದರೂ ಅವಕಾಶಗಳು ಸಿಗುವುದಿಲ್ಲ’ ಎಂಬ ಅಸಮಾಧಾನದಿಂದ ಪಕ್ಷ ತೊರೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry