ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀ ಕ್ಷೇತ್ರ ಧರ್ಮಸ್ಥಳದ ಸೇವೆ ಶ್ಲಾಘನೀಯ: ನರೇಂದ್ರ ಮೋದಿ

Last Updated 29 ಅಕ್ಟೋಬರ್ 2017, 9:18 IST
ಅಕ್ಷರ ಗಾತ್ರ

ಶ್ರೀ ಕ್ಷೇತ್ರ ಧರ್ಮಸ್ಥಳ (ಉಜಿರೆ): ಅನಕ್ಷರತೆ, ಬಡತನ ತುಂಬಿರುವ ದೇಶದಲ್ಲಿ, ಡಿಜಿಟಲ್ ವ್ಯವಹಾರ ಹೇಗೆ ನಡೆಯುತ್ತದೆ ಎಂದು ವಿದ್ವತ್ ಪೂರ್ಣ ವ್ಯಕ್ತಿಗಳು ಟೀಕಾ ಪ್ರಹಾರ ಮಾಡಿದ್ದರು. 12 ಲಕ್ಷ ಸ್ವಸಹಾಯ ಸಂಘದ ಸದಸ್ಯರಿಗೆ ರುಪೇ ಕಾರ್ಡ್ ನೀಡುವ ಮೂಲಕ ವೀರೇಂದ್ರ ಹೆಗ್ಗಡೆ ಟೀಕಾಕಾರರಿಗೆ ಸ್ಪಷ್ಟ ಉತ್ತರ ನೀಡಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ತಿಳಿಸಿದರು.

ಶ್ರೀ ಕ್ಷೇತ್ರ ಧರ್ಮಸ್ಥಳದ ಮಂಜುನಾಥ ಸ್ವಾಮಿ ಸನ್ನಿಧಿಯಲ್ಲಿ ರುದ್ರಾಭಿಷೇಕ ನೆರವೇರಿಸಿದ ಬಳಿಕ ಉಜಿರೆಯ ರತ್ನವರ್ಮ ಕ್ರೀಡಾಂಗಣದಲ್ಲಿ ನಡೆದ ರುಪೇ ಕಾರ್ಡ್ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು  ಮಾತನಾಡಿದರು.

ಅನಕ್ಷರತೆ, ಬಡತನ ತುಂಬಿರುವ ಈ ದೇಶದಲ್ಲಿ ಕೆಳಮಟ್ಟದಿಂದ ಡಿಜಿಟಲ್ ವ್ಯವಸ್ಥೆಯನ್ನು ಆರಂಭಿಸುವ ಮೂಲಕ ಹೆಗ್ಗಡೆ ಅವರು, ದೇಶ ನಿರ್ಮಾಣದ ಕೆಲಸ ಮಾಡುತ್ತಿದ್ದಾರೆ.  ಅಧ್ಯಾತ್ಮದ ಉನ್ನತಿಗೆ ತಲುಪಿರುವ ವೀರೇಂದ್ರ ಹೆಗ್ಗಡೆ ಅವರನ್ನು ಸನ್ಮಾನಿಸಲು ವ್ಯಕ್ತಿಗತವಾಗಿ ನಾನು ಅತ್ಯಂತ ಚಿಕ್ಕವ. ಆದರೆ ದೇಶದ 125 ಕೋಟಿ ಜನರ ಪ್ರತಿನಿಧಿಯಾಗಿ ಅವರನ್ನು ಸನ್ಮಾನಿಸುವ ಮೂಲಕ ಧನ್ಯತೆ ಅನುಭವಿಸುತ್ತಿದ್ದೇನೆ ಎಂದರು.

ನಿರಂತರವಾಗಿ 50 ವರ್ಷ ಜನಸೇವೆಯಲ್ಲಿ ನಿರಂತರವಾಗಿ ಕೆಲಸ ಮಾಡುತ್ತಿರುವ ಹೆಗ್ಗಡೆ ಅವರು, ಭಗವದ್ಗೀತೆಯ ಸಂದೇಶದ ಸಾಕಾರ ಮೂರ್ತಿಯಾಗಿದ್ದಾರೆ. ಸದಾ ಹಸನ್ಮುಖಿ ಆಗಿರುವ ಅವರಲ್ಲಿ ಒಂದು ಕ್ಷಣವೂ ಆಯಾಸ ಕಾಣುವುದಿಲ್ಲ ಶ್ಲಾಘಿಸಿದರು.

ವಿಶ್ವದಲ್ಲಿ ಎದುರಾಗಲಿರುವ ಮಾನವ ಸಂಪನ್ಮೂಲದ ಕೊರತೆಯನ್ನು ನೀಗಿಸಲು ಕೌಶಲವನ್ನು ಅಭಿವೃದ್ಧಿ ಪಡಿಸುವುದು ಅತ್ಯಂತ ಅವಶ್ಯಕ. ವಿಶ್ವದ, ದೇಶದ ದೊಡ್ಡ ದೊಡ್ಡ ಶಿಕ್ಷಣ ಸಂಸ್ಥೆಗಳು, ಧರ್ಮಸ್ಥಳಕ್ಕೆ ಬಂದು ಅಧ್ಯಯನ ಮಾಡಬೇಕು. ಲಕ್ಷಾಂತರ ಜನರ ಬದುಕಿಗೆ ಆಸರೆಯಾಗಿರುವ ಧರ್ಮಸ್ಥಳ ಸಂಸ್ಥೆ ಅಳವಡಿಸಿಕೊಂಡಿರುವ ಕಾರ್ಯಕ್ರಮಗಳನ್ನು ತಿಳಿದುಕೊಳ್ಳಬೇಕು ಎಂದರು.

ಜಗತ್ತಿನಲ್ಲಿ ನೀರಿನ ಸಮಸ್ಯೆ ಎದುರಿಸುವ ಆತಂಕ ಎದುರಾಗಿದೆ. ನಮ್ಮ ಹಿರಿಯರು ನೀಡಿರುವ ಪ್ರಾಕೃತಿಕ ಸಂಪತ್ತನ್ನು ನಮ್ಮ ಮುಂದಿನ ಪೀಳಿಗೆಗೆ ಬಿಟ್ಟು ಹೋಗುವುದು ನಮ್ಮ ಕರ್ತವ್ಯ. ಆಮ್ಲಜನಕ ನೀಡುವ ಮರವನ್ನು ಬೆಳೆಸುವುದು ನಮ್ಮ ಜವಾಬ್ದಾರಿ. ಕ್ಷಣಿಕ ಲಾಭಕ್ಕಾಗಿ ಭೂತಾಯಿಯ ಒಡಲಲ್ಲಿ, ವಿಷವನ್ನು ಹಾಕುತ್ತಲೇ ಇದ್ದೇವೆ. 2022 ರ ಹೊತ್ತಿಗೆ ಯೂರಿಯಾ ಬಳಕೆಯನ್ನು ಶೇ ೫೦ ಕ್ಕೆ ಇಳಿಸುವ ಸಂಕಲ್ಪ ಮಾಡಬೇಕು. ಕರ್ನಾಟಕದಂತಹ ರಾಜ್ಯದಲ್ಲಿ ಬರ ಸ್ಥಿತಿ ನಿರ್ಮಾಣವಾಗುತ್ತಿದೆ. ರೈತರು ಹನಿ ನೀರಾವರಿ ವ್ಯವಸ್ಥೆ ಅಳವಡಿಸಿಕೊಳ್ಳಬೇಕು. ಮುತ್ತಿಗಿಂತ ಮೌಲ್ಯಯುತವಾದ ಹನಿ ನೀರನ್ನು ಸದ್ಬಳಕೆ ಮಾಡಬೇಕು ಎಂದು ಮೋದಿ ಜನರಿಗೆ ಕರೆ ಕೊಟ್ಟರು.

ಬ್ಯಾಂಕ್ ಖಾತೆಗಳಿಗೆ ಆಧಾರ್ ಜೋಡಣೆ ಮಾಡುವ ಮೂಲಕ, ಬೇರೆಯವರ ಜೇಬು ಸೇರುತ್ತಿದ್ದ ₹57ಸಾವಿರ ಕೋಟಿ ಹಣ, ಈಗ ಫಲಾನುಭವಿಗಳಿಗೆ ನೇರವಾಗಿ ತಲುಪುತ್ತಿದೆ. ಇದರಿಂದ ಕುಪಿತರಾಗಿರುವ ಜನರು ಮೋದಿಯನ್ನು ಮೆಚ್ಚಲು ಸಾಧ್ಯವೇ ಎಂದು ಪ್ರಶ್ನಿಸಿದ ಅವರು, ಅಧಿಕಾರ ಇರಲಿ, ಬಿಡಲಿ, ದೇಶ ಹಾಳಾಗಲು ಬಿಡುವುದಿಲ್ಲ ಎಂದು ಮೋದಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT