ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೂರ್ಣ ಪ್ರಮಾಣದ ಬೆಳೆಹಾನಿ ಸಮೀಕ್ಷೆಗೆ ಸೂಚನೆ

Last Updated 29 ಅಕ್ಟೋಬರ್ 2017, 9:20 IST
ಅಕ್ಷರ ಗಾತ್ರ

ರಾಯಚೂರು: ‘ಅತಿವೃಷ್ಟಿಯಿಂದ ಜಿಲ್ಲೆಯಲ್ಲಿ ಆಗಿರುವ ಬೆಳೆಹಾನಿ ಬಗ್ಗೆ ಪೂರ್ಣಪ್ರಮಾಣದ ಸಮೀಕ್ಷೆ ನಡೆಸುವಂತೆ ಈಗಾಗಲೇ ಜಿಲ್ಲಾಧಿಕಾರಿಗೆ ಸೂಚಿಸಲಾಗಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ತನ್ವೀರ್‌ ಸೇಟ್‌ ಹೇಳಿದರು. ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ನಡೆದ ತ್ರೈಮಾಸಿಕ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

‘ಬೆಳೆಹಾನಿ ಪರಿಹಾರ ವಿತರಣೆಯಲ್ಲಿ ಈ ಮೊದಲು ಲೋಪಗಳಾಗಿರುವುದು ಗಮನಕ್ಕೆ ಬಂದಿದೆ. ಈ ಬಾರಿ ಪ್ರತಿ ಜಮೀನಿಗೂ ಭೇಟಿ ಕೊಟ್ಟು ಸಮೀಕ್ಷೆ ಮಾಡಲಾಗುತ್ತಿದೆ. ಹೊಸ ವ್ಯವಸ್ಥೆಯಲ್ಲಿ ಆಧಾರ್‌ ಸಂಖ್ಯೆ ಮತ್ತು ಪಹಣಿಪತ್ರ ಆಧರಿಸಿ ಪರಿಹಾರ ವಿತರಿಸಲಾಗುವುದು. ಉಪವಿಭಾಗಾಧಿಕಾರಿಗಳು ತಹಸೀಲ್ದಾರ್‌ ಅವರಿಂದ ಮಾಹಿತಿ ಪಡೆದು ಹಿಂದೆ ಆಗಿರುವ ಲೋಪಗಳ ಬಗ್ಗೆ ಕ್ರಮ ಕೈಗೊಳ್ಳುತ್ತಾರೆ’ ಎಂದರು.

‘ಸದ್ಯಕ್ಕೆ ತುಂಗಭದ್ರಾ ಜಲಾಶಯದಲ್ಲಿ 85 ಟಿಎಂಸಿ ನೀರಿನ ಸಂಗ್ರಹವಿದೆ. ಅದರಲ್ಲಿ ಶೇ 35ರಷ್ಟು ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳ ಪಾಲು ಬಿಟ್ಟು, ಸುಮಾರು 55 ಟಿಎಂಸಿ ನೀರು ದೊರೆಯಲಿದೆ. ಪ್ರತಿದಿನ ಸುಮಾರು 7 ಸಾವಿರ ಕ್ಯುಸೆಕ್‌ ನೀರನ್ನು ಕಾಲುವೆಗಳಿಗೆ ಹರಿಸಬೇಕು.  ಹೀಗಾಗಿ ಎಷ್ಟು ನೀರು ಬಿಡಬೇಕು? ಎಷ್ಟು ದಿನ ಬಿಡಬೇಕು ಎಂಬುದನ್ನು ನಿರ್ಧರಿಸಲು ಕೂಡಲೇ ಐಸಿಸಿ ಸಭೆ ಕರೆಯುವಂತೆ ಕೇಳಿಕೊಳ್ಳಲಾಗಿದೆ’ ಎಂದು ತಿಳಿಸಿದರು.

‘ಜಿಲ್ಲೆಯಲ್ಲಿ ಕೃತಕ ಮರಳು ಅಭಾವ ಸೃಷ್ಟಿಸಲು ಕೆಲವರು ಷಡ್ಯಂತ್ರ ಮಾಡುತ್ತಿದ್ದಾರೆ. ಒಟ್ಟು 21 ಮರಳು ಬ್ಲಾಕ್‌ಗಳ ಪೈಕಿ ಸದ್ಯ 8 ಬ್ಲಾಕ್‌ಗಳಲ್ಲಿ ಮಾತ್ರ ಮರಳುಗಾರಿಕೆ ನಡೆಯುತ್ತಿದೆ. ಕೂಡಲೇ ಇನ್ನುಳಿದ ಬ್ಲಾಕ್‌ಗಳನ್ನು ಆರಂಭಿಸಲು ತಿಳಿಸಲಾಗಿದೆ. ಸರ್ಕಾರಿ ಕೆಲಸಗಳಿಗೆ ಆದ್ಯತೆ ನೀಡಿ ಮರಳು ಒದಗಿಸಲಾಗುವುದು. ಪ್ರತಿ ಟನ್‌ ಮರಳಿನ ದರ ಗರಿಷ್ಠ ₹1,550 ಎಂದು ನಿಗದಿ ಮಾಡಲಾಗಿದೆ. ಆದರೆ ಮಾನ್ವಿ ಮರಳು ಬ್ಲಾಕ್‌ಗಳಿಗೆ ಕರೆದ ಟೆಂಡರ್‌ನಲ್ಲಿ ₹7 ಸಾವಿರ ದರ ಉಲ್ಲೇಖಿಸಿ ಕೆಲವರು ಟೆಂಡರ್‌ ಹಾಕಿದ್ದಾರೆ.ಇದು ಪರೋಕ್ಷವಾಗಿ ಜನರಿಗೆ ಹೊರೆ ಆಗುತ್ತದೆ. ಇದಕ್ಕೆ ಅವಕಾಶ ನೀಡುವುದಿಲ್ಲ. ಲೋಕೋಪಯೋಗಿ ಇಲಾಖೆಯ ಎಂಜಿನಿಯರುಗಳು ಜಿಲ್ಲಾಧಿಕಾರಿಗಳ ಮೂಲಕ ಮರಳು ಪಡೆದುಕೊಳ್ಳುವಂತೆ ಸೂಚಿಸಲಾಗಿದೆ. ಕೆಲವು ಎಂಜಿನಿಯರುಗಳ ಸಮರ್ಪಕವಾಗಿ ಸ್ಪಂದಿಸದ ಕಾರಣ ಸರ್ಕಾರಿ ಕೆಲಸಗಳು ಕುಂಠಿತವಾಗುತ್ತಿವೆ’ ಎಂದು ಹೇಳಿದರು.

ಮರಳಿಗಿಂತ ಚಿನ್ನವೇ ಅಗ್ಗ: ಜಿಲ್ಲೆಯ ಜನರು ಮರಳು ಪಡೆಯಲು ಜನರು ಪರಿತಪಿಸುತ್ತಿದ್ದಾರೆ. ಚಿನ್ನ ಬೇಕಾದರೆ ಸುಲಭವಾಗಿ ಖರೀದಿಸಬಹುದು. ಆದರೆ ಮರಳು ಖರೀದಿಸಲು ಸಾಧ್ಯವಾಗದ ಪರಿಸ್ಥಿತಿ ಉದ್ಭವಿಸಿದೆ. ಮರಳಿನ ದರವು ದುಬಾರಿ ಆಗಿದೆ ಎಂದು ಜನರು ಹೇಳುತ್ತಿದ್ದಾರೆ. ಆಶ್ರಯ ಮನೆಗಳನ್ನು ಕಟ್ಟಿಕೊಳ್ಳುವುದಕ್ಕೆ ಬಡಜನರು ಸಂಕಷ್ಟ ಅನುಭವಿಸುವಂತಾಗಿದೆ ಎಂದು ಶಾಸಕ ಡಾ.ಶಿವರಾಜ ಪಾಟೀಲ ತಿಳಿಸಿದರು.

ಅಧಿಕಾರಿಗಳ ವಿರುದ್ಧ ಕ್ರಮ: ದೇವದುರ್ಗದ ಗಬ್ಬೂರು, ರಾಯಚೂರಿನ ತಲೆಮಾರು ಹಾಗೂ ಸಿಂಧನೂರಿನ ಉಮಲೊಟಿ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಬೆಳೆಹಾನಿ ಪರಿಹಾರ ವಿತರಣೆಯಲ್ಲಿ ಅವ್ಯಹಾರ ನಡೆದಿದೆ ಎಂದು ಶಾಸಕರು ತಿಳಿಸಿದ್ದಾರೆ. ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು. ಶಾಸಕರು ಮತ್ತು ಸಂಸದರ ಅನುದಾನ ವೆಚ್ಚಕ್ಕೆ ಸಂಬಂಧಿಸಿದಂತೆ ಕೂಡಲೇ ಪ್ರತ್ಯೇಕ ಸಭೆ ನಡೆಸಿ ಪರಿಶೀಲಿಸಲಾಗುವುದು. ಅಂಗವಿಕಲರಿಗೆ ತ್ರಿಚಕ್ರ ಬೈಕ್‌ ಒದಗಿಸಲು ಈಗಾಗಲೇ ಟೆಂಡರ್‌ ಕರೆಯಲಾಗಿದೆ’ ಎಂದು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್‌ ಹೇಳಿದರು.

ರಸ್ತೆ ಸಂಪರ್ಕ ಕಡಿತ:‘ಅತಿವೃಷ್ಟಿಯಿಂದ ರಾಯಚೂರು ಗ್ರಾಮೀಣ ಕ್ಷೇತ್ರದಲ್ಲಿ ಸುಮಾರು 63 ಗ್ರಾಮಗಳಿಗೆ ರಸ್ತೆ ಸಂಪರ್ಕ ಕಡಿತವಾಗಿದೆ. ಎರಡು ತಿಂಗಳಿಂದ ವಿದ್ಯಾರ್ಥಿಗಳು ಶಾಲೆಗಳಿಗೆ ಹೋಗಲು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಪ್ರತಿನಿತ್ಯ ಜನರು ಮನೆಗೆ ಬಂದು ಪ್ರಶ್ನಿಸುತ್ತಿದ್ದಾರೆ. ಸಂಪರ್ಕ ಕಡಿತವಾದ ರಸ್ತೆಗಳಲ್ಲಿ ಕೂಡಲೇ ತುರ್ತು ಕೆಲಸ ಆರಂಭಿಸಬೇಕು’ ಎಂದು ಶಾಸಕ ತಿಪ್ಪರಾಜು ಹವಾಲ್ದಾರ್‌ ತಿಳಿಸಿದರು.

‘ಗ್ರಾಮೀಣ ಕ್ಷೇತ್ರದಲ್ಲಿ ಮಳೆಹಾನಿ ಆಗಿರುವುದನ್ನು ಸರಿಪಡಿಸಲು 99 ಕಾಮಗಾರಿಗಳಿಗೆ ಬೇಡಿಕೆಯನ್ನು ಶಾಸಕರು ಕೊಟ್ಟಿದ್ದಾರೆ. ಆದ್ಯತೆಯಲ್ಲಿ ಅನುದಾನ ಒದಗಿಸಿ ಶಾಶ್ವತ ಪರಿಹಾರಕ್ಕಾಗಿ ರಸ್ತೆ ಕಾಮಗಾರಿ ಆರಂಭಿಸಲಾಗುವುದು’ ಎಂದು ಸಚಿವ ತನ್ವೀರ್‌ ಸೇಟ್‌ ತಿಳಿಸಿದರು.

ವಾರದಿಂದ ಡೆಂಗಿ ಪ್ರಕರಣಗಳು ಹತೋಟಿಗೆ ಬಂದಿವೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ನಾಸೀರ್‌ ತಿಳಿಸಿದರು. ‘ಸಿಂಧನೂರು ತಾಲ್ಲೂಕಿನಲ್ಲಿ ಅತಿ ಹೆಚ್ಚು ಡೆಂಗಿ ಪೀಡಿತರಿದ್ದಾರೆ. ಅವರೆಲ್ಲ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಆರೋಗ್ಯಾಧಿಕಾರಿಯು ಖಾಸಗಿ ಆಸ್ಪತ್ರೆಗಳಿಂದಲೂ ಅಂಕಿ–ಅಂಶ ಸಂಗ್ರಹಿಸಬೇಕು. ಆಸ್ಪತ್ರೆಗಳಿಗೆ ಭೇಟಿ ನೀಡಿ ಪರಿಶೀಲಿಸಬೇಕು’ ಎಂದು ಶಾಸಕ ಹಂಪನಗೌಡ ಬಾದರ್ಲಿ ಸೂಚನೆ ನೀಡಿದರು.

ಶಾಸಕ ತಿಪ್ಪರಾಜು ಹವಾಲ್ದಾರ್‌ ಮಾತನಾಡಿ, ರಾಯಚೂರು ಗ್ರಾಮೀಣ ಕ್ಷೇತ್ರದ ಗ್ರಾಮ ಪಂಚಾಯಿತಿಗಳಲ್ಲಿ ಎಲ್ಲಿಯು ಫಾಗಿಂಗ್‌ ಯಂತ್ರಗಳು ಕೆಲಸ ಮಾಡುತ್ತಿಲ್ಲ. ಆರೋಗ್ಯಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯಿತಿ ಸಿಇಒ ಅವರು ಈ ಬಗ್ಗೆ ಗಮನ ಹರಿಸಬೇಕು ಎಂದು ತಿಳಿಸಿದರು.

ವಿಧಾನ ಪರಿಷತ್‌ ಸದಸ್ಯ ಶರಣಪ್ಪ ಮಟ್ಟೂರ್‌ ಮಾತನಾಡಿ, ‘ಲಾರ್ವಾ ಕೇಂದ್ರಗಳು ಜಿಲ್ಲೆಯಲ್ಲಿ ಎಷ್ಟಿವೆ ಎಂಬು ದನ್ನು ಆಶಾ ಕಾರ್ಯಕರ್ತೆಯರ ಮೂಲಕ ಸಮೀಕ್ಷೆ ಮಾಡಬೇಕು. ಆಶಾ ಕಾರ್ಯಕರ್ತೆಯರಿಗೆ ಸಿಮ್‌ ಕೊಡಲಾಗಿದೆ. ಈಚೆಗೆ ಸಹಾಯಧನ ಹೆಚ್ಚಿಸ ಲಾಗಿದೆ. ಜನರ ಆರೋಗ್ಯ ಕಾಪಾಡಲು ಜಿಲ್ಲಾ ಆರೋಗ್ಯಾಧಿಕಾರಿ ಚುರುಕಾಗಿ ಅವರಿಂದ ಕೆಲಸ ಪಡೆಯಬೇಕು’ ಎಂದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಆದಿಮನಿ ವೀರಲಕ್ಷ್ಮಿ ಪರಮೇಶಪ್ಪ, ಕಾಡಾ ನಿಗಮದ ಅಧ್ಯಕ್ಷ ಹಂಪಯ್ಯ ನಾಯಕ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಭಿರಾಂ ಜಿ.ಶಂಕರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT