ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಾಚೀನ ಕನ್ನಡದತ್ತ ಸಂಶೋಧಕರ ನಿರಾಸಕ್ತಿ!

Last Updated 29 ಅಕ್ಟೋಬರ್ 2017, 9:29 IST
ಅಕ್ಷರ ಗಾತ್ರ

ಶಿವಮೊಗ್ಗ: ಪ್ರಾಚೀನ ಕನ್ನಡ ಸಾಹಿತ್ಯದ ವಿಷಯಗಳ ಕುರಿತು ಸಂಶೋಧನೆ ಕೈಗೆತ್ತಿಕೊಳ್ಳಲು ಈಗಿನ ಸಂಶೋಧನಾ ವಿದ್ಯಾರ್ಥಿಗಳು ಆಸಕ್ತಿ ತೋರುತ್ತಿಲ್ಲ.
ಕುವೆಂಪು ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳು ಸಂಶೋಧನೆ ಆಯ್ಕೆ ಮಾಡಿಕೊಂಡ ಇತ್ತೀಚಿನ ಅಂಕಿ–ಅಂಶಗಳು ಪ್ರಾಚೀನ ಕನ್ನಡ ಸಾಹಿತ್ಯದ ಕಡೆಗಣನೆಯ ವಿಷಯ ದೃಢೀಕರಿಸುತ್ತವೆ.

ಇಂದಿನ ಬಹುತೇಕ ಸಂಶೋಧಕರು ಪ್ರಾಚೀನ, ಮಧ್ಯಕಾಲೀನ ಕನ್ನಡ ಸಾಹಿತ್ಯ ಮತ್ತು ಕಾಲಘಟ್ಟದಿಂದ ದೂರವುಳಿದು, ಕೇವಲ ಆಧುನಿಕ ಕನ್ನಡ ಸಾಹಿತ್ಯದ ಕಡೆಗೆ ಹೆಚ್ಚು ಒಲವು ತೋರುತ್ತಿದ್ದಾರೆ. ಸುಲಭವಾಗಿ ನಿಲುಕುವ ಲೇಖಕರು, ಕವಿಗಳು, ಪ್ರದೇಶಗಳು, ವರ್ತಮಾನಕ್ಕೆ ಸಂಬಂಧಿಸಿದ ವಿಷಯಗಳು ಕನ್ನಡ ಸಂಶೋಧಕರ ಆಯ್ಕೆಯ ವಿಷಯಗಳಾಗುತ್ತಿವೆ. ನೈಜ ಸಂಶೋಧನೆಗಿಂತ ಮೂರ್ನಾಲ್ಕು ವರ್ಷದಲ್ಲಿ ಡಾಕ್ಟರೇಟ್ ಪಡೆಯುವ ಧಾವಂತ ವಿಷಯಗಳ ಆಯ್ಕೆಯಲ್ಲಿ ಎದ್ದು ಕಾಣುತ್ತದೆ.

9 ಸಂಶೋಧನಾರ್ಥಿಗಳು: ಕುವೆಂಪು ವಿಶ್ವವಿದ್ಯಾನಿಲಯದ ಕನ್ನಡ ಭಾರತಿಯಲ್ಲಿ 91 ವಿದ್ಯಾರ್ಥಿಗಳು, ಸಹ್ಯಾದ್ರಿ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ 38 ವಿದ್ಯಾರ್ಥಿಗಳು ಸಂಶೋಧನೆಯಲ್ಲಿ ತೊಡಗಿದ್ದಾರೆ. ಒಟ್ಟು 129 ಸಂಶೋಧನಾರ್ಥಿಗಳಲ್ಲಿ ಕೇವಲ 9 ವಿದ್ಯಾರ್ಥಿಗಳು ಮಾತ್ರ ಪ್ರಾಚೀನ ಕನ್ನಡ ವಿಷಯ ಆಯ್ಕೆ ಮಾಡಿಕೊಂಡಿದ್ದಾರೆ.

ಏಕೆ ಈ ಮನೋಸ್ಥಿತಿ?: ಆಧುನಿಕ ಕನ್ನಡ ಸಾಹಿತ್ಯಕ್ಕೆ ಇರುವ ಇತಿಹಾಸ ಕೇವಲ ಒಂದೂವರೆ ಶತಮಾನ. ಈ ಕಾಲಘಟ್ಟ ತುಂಬಾ ಕಡಿಮೆ ಅವಧಿ. ನಿರ್ದಿಷ್ಟ ವಿಷಯಗಳನ್ನು ಮುಂದುವರಿಸಿಕೊಂಡು ಹೋಗುವ ಗಟ್ಟಿತನ ಹೊಸಗನ್ನಡ ಸಾಹಿತ್ಯದಲ್ಲಿ ಅಷ್ಟಕಷ್ಟೇ. ಹಾಗಾಗಿ, ಸಂಶೋಧಕರು ಅತ್ಯಂತ ಸುಲಭವಾದ, ಪದವಿ ನಿಮಿತ್ತ ಹಾಗೂ ಪರಿಮಿತ ಕಾಲದಲ್ಲಿ ಸಂಶೋಧನೆ ಮುಗಿಸಲು ಪ್ರಾಚೀನ ಕನ್ನಡ ಸಾಹಿತ್ಯದ ಸಂಶೋಧನೆಯ ಗೋಜಿಗೆ ಹೋಗುತ್ತಿಲ್ಲ. ಪರಿಣಾಮ ಪ್ರಾಚೀನ ಸಾಹಿತ್ಯದ ಸಂಶೋಧನೆಗಳು ಕುಂಠಿತವಾಗಿವೆ ಎನ್ನುತ್ತಾರೆ ಕುವೆಂಪು ವಿಶ್ವವಿದ್ಯಾಲಯ ನಿವೃತ್ತ ಕನ್ನಡ ಪ್ರಾಧ್ಯಾಪಕ ಡಾ.ಕುಮಾರ ಚಲ್ಯ.

ಅರ್ಥೈಸಿಕೊಳ್ಳುವುದು ಕಷ್ಟ: ಪ್ರಾಚೀನ ಕನ್ನಡ ಸಾಹಿತ್ಯ ಹಳೆಗನ್ನಡದಲ್ಲಿ, ಮಧ್ಯಕಾಲೀನ ಕನ್ನಡ ಸಾಹಿತ್ಯ ನಡುಗನ್ನಡದಲ್ಲಿ ಇರುವ ಕಾರಣ ಈಗಿನ ವಿದ್ಯಾರ್ಥಿಗಳಿಗೆ ಓದಿ ಅರ್ಥೈಸಿಕೊಳ್ಳುವ ತಾಳ್ಮೆ, ಸಂಯಮ ಇಲ್ಲವಾಗಿದೆ. ಹಾಗಾಗಿಯೇ ಕನ್ನಡ ಭಾಷೆ ಮತ್ತು ಸಾಹಿತ್ಯ ತನ್ನ ಶ್ರೀಮಂತಿಕೆ ಕಳೆದುಕೊಳ್ಳುತ್ತಿದೆ ಎಂಬುದು ಚಲ್ಯ ಅವರ ವಿಶ್ಲೇಷಣೆಯಾಗಿದೆ.

ಪ್ರಾಧ್ಯಾಪಕರ ಕೊರತೆ: ಪ್ರಾಚೀನ ಕನ್ನಡದ ನಿರಾಸಕ್ತಿ ಕೇವಲ ಸಂಶೋಧನೆಯಲ್ಲಿ ಮಾತ್ರ ಕಾಣುತ್ತಿಲ್ಲ. ಅಧ್ಯಯನ ಮತ್ತು ಬೋಧನೆಯಲ್ಲೂ ನಿರಾಸಕ್ತಿ ಕಾಣುತ್ತಿದೆ. ವಿಶ್ವವಿದ್ಯಾಲಯಗಳಲ್ಲಿ, ಶಾಲೆ-ಕಾಲೇಜುಗಳಲ್ಲಿ ಪ್ರಾಚೀನ ಕನ್ನಡ ಸಾಹಿತ್ಯ ಸರಿಯಾಗಿ ಹೇಳಿ ಕೊಡುವ ಪ್ರಾಧ್ಯಾಪಕರ ಕೊರತೆ ಇದೆ ಎನ್ನುವುದು ವಿದ್ಯಾರ್ಥಿಗಳು ಹಾಗೂ ಪೋಷಕರ ಅಳಲು.

ಹಿರಿಯ ವಿದ್ವಾಂಸರು ಹೇಳುವುದೇನು? : ಹಳಗನ್ನಡ ಸವಿಯಾದುದು. ಮಹಾಕಾವ್ಯಗಳು ನಿತ್ಯ ನೂತನ. ಬೋಧಕರು ಮತ್ತು ವಿದ್ಯಾರ್ಥಿಗಳಿಗೆ ಪ್ರಾಚೀನ ಕನ್ನಡ ಸಾಹಿತ್ಯದ ಪರಂಪರೆ ಮತ್ತು ಅದರ ಸಮಗ್ರತೆಯ ಕಲ್ಪನೆಯೇ ಇಲ್ಲವಾಗುತ್ತಿದೆ. ಪರಿಣಾಮ ಶಾಲೆ ಕಾಲೇಜುಗಳಲ್ಲಿ ಹಳಗನ್ನಡವನ್ನು ತಪ್ಪು ತಪ್ಪಾಗಿ ಓದಲಾಗುತ್ತಿದೆ. ಪ್ರಾಧ್ಯಾಪಕರು ಸಹ ಅವುಗಳ ಶಬ್ದ, ವಾಕ್ಯರಚನೆಯ, ಭಾವದ ಸಂಪತ್ತು ಹೇಳಿಕೊಡುತ್ತಿಲ್ಲ. ಹಳಗನ್ನಡ ಕಾವ್ಯದ ಸೌಖ್ಯ ವಿದ್ಯಾರ್ಥಿಗಳಿಗೆ ಮನದಟ್ಟು ಮಾಡುವ ಕೆಲಸ ಮಾಡುತ್ತಿಲ್ಲ ಎಂದು ಹಿರಿಯ ವಿದ್ವಾಂಸರು ದೂರುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT