ಈಗ ಮಹಿಳೆಯರ ಸರದಿ...

ಗುರುವಾರ , ಮೇ 23, 2019
24 °C

ಫಲಿತಾಂಶ (ಮುನ್ನಡೆ+ಗೆಲುವು) 0/542LIVE

ಈಗ ಮಹಿಳೆಯರ ಸರದಿ...

Published:
Updated:
ಈಗ ಮಹಿಳೆಯರ ಸರದಿ...

ಸೆಪ್ಟೆಂಬರ್‌ ಮೂರನೇ ವಾರ ಭಾರತ ಮಹಿಳಾ ಹಾಕಿ ತಂಡ ಅಂತರರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿತು. ಯುರೋಪ್‌ ಪ್ರವಾಸಕ್ಕೆ ತೆರಳಿದ್ದ ತಂಡದ ಆಟಗಾರ್ತಿಯರು ಬೆಲ್ಜಿಯಂ ರಾಷ್ಟ್ರೀಯ ಜೂನಿಯರ್ ತಂಡವನ್ನು ಮಣಿಸಿ ಕೇಕೆ ಹಾಕಿದ್ದರು. ಅಂದು ತಂಡದ ತರಬೇತುದಾರರಾಗಿ ಇದ್ದವರು ಶೊರ್ಡ್ ಮ್ಯಾರಿಜ್‌. ಮಹಿಳಾ ತಂಡದ ಕೋಚ್ ಆಗಿ ಅವರ ಕೊನೆಯ ಪಂದ್ಯ ಆಗಿತ್ತು ಅದು.

ಮ್ಯಾರಿಜ್‌ ಪುರುಷರ ತಂಡದ ಕೋಚ್‌ ಹುದ್ದೆ ಅಲಂಕರಿಸಿದ ನಂತರ ಮಹಿಳಾ ತಂಡವನ್ನು ಪಳಗಿಸುವ ಜವಾಬ್ದಾರಿ ಹರೇಂದ್ರ ಸಿಂಗ್‌ ಅವರ ಹೆಗಲಿಗೆ ಬಿತ್ತು. ಭಾರತ ಪುರುಷರ ತಂಡ ಅಕ್ಟೋಬರ್ ಮೂರನೇ ವಾರದಲ್ಲಿ ಏಷ್ಯಾ ಕಪ್‌ ಹಾಕಿ ಚಾಂಪಿಯನ್‌ಷಿಪ್‌ನಲ್ಲಿ ಹತ್ತು ವರ್ಷಗಳ ನಂತರ ಪ್ರಶಸ್ತಿ ಎತ್ತಿ ಹಿಡಿದಾಗ ಮ್ಯಾರಿಜ್ ಗಮನ ಸೆಳೆದರು. ಮಹಿಳಾ ತಂಡದ ಕೋಚ್‌ ಹರೇಂದ್ರ ಸಿಂಗ್ ಕೂಡ ಈಗ ಇದೇ ಹಾದಿಯಲ್ಲಿ ಹೆಜ್ಜೆ ಹಾಕಿದ್ದಾರೆ.

ಜಪಾನ್‌ನ ಕಕಮಿಗಹರದಲ್ಲಿ ನವೆಂಬರ್‌ ಐದರವರೆಗೆ ನಡೆಯಲಿರುವ ಮಹಿಳಾ ಏಷ್ಯಾಕಪ್‌ನಲ್ಲಿ ಪ್ರಶಸ್ತಿ ಗೆಲ್ಲುವ ಲೆಕ್ಕಾಚಾರ ಹಾಕಿದ್ದಾರೆ. ಇದು ಕೈಗೂಡಿದರೆ ಮಹಿಳಾ ತಂಡ ಕೂಡ ಹತ್ತು ವರ್ಷಗಳ ನಂತರ ಪ್ರಶಸ್ತಿ ಎತ್ತಿ ಹಿಡಿದ ಸಾಧನೆ ಮಾಡಿದಂತಾಗುತ್ತದೆ.

ನೆದರ್ಲೆಂಡ್ಸ್ ಮತ್ತು ಬೆಲ್ಜಿಯಂ ಎದುರಿನ ಸರಣಿಯನ್ನು ಮುಗಿಸಿ ಬಂದಿರುವ ತಂಡ ಬೆಂಗಳೂರಿನ ಸಾಯ್‌ನಲ್ಲಿ ಒಂದು ತಿಂಗಳು ತರಬೇತಿ ಪಡೆದಿದೆ. ವಿಶ್ವ ರ‍್ಯಾಂಕಿಂಗ್‌ ಪಟ್ಟಿಯಲ್ಲಿರುವ ಏಷ್ಯಾದ ತಂಡಗಳಲ್ಲಿ ಭಾರತಕ್ಕೆ ನಾಲ್ಕನೇ ಸ್ಥಾನವಿದೆ. ತನಗಿಂತ ಹೆಚ್ಚಿನ ರ‍್ಯಾಂಕ್ ಹೊಂದಿರುವ ಚೀನಾ, ಜಪಾನ್‌ ಮತ್ತು ಕೊರಿಯಾ ತಂಡಗಳು ಟೂರ್ನಿಯಲ್ಲಿ ಆಡುತ್ತಿವೆ. ಇದು ರಾಣಿ ರಾಂಪಾಲ್‌ ನೇತೃತ್ವದ ತಂಡಕ್ಕೆ ದೊಡ್ಡ ಸವಾಲು.

ವಿಶ್ವ ರ‍್ಯಾಂಕಿಂಗ್‌ನಲ್ಲಿ ಭಾರತ 12ನೇ ಸ್ಥಾನದಲ್ಲಿದ್ದು ಚೀನಾ (8), ಕೊರಿಯಾ (9) ಮತ್ತು ಜಪಾನ್‌ (11) ತಂಡಗಳು ಭಾರತಕ್ಕಿಂತ ಮುಂದೆ ಇವೆ.

ಏಷ್ಯಾಕಪ್‌ನಲ್ಲಿ ಭಾರತದ ಮಹಿಳೆಯರು ಸಮಾಧಾನಕರ ಸಾಧನೆ ಮಾಡಿದ್ದಾರೆ. 2004ರಲ್ಲಿ ಪ್ರಶಸ್ತಿ ಗೆದ್ದಿರುವ ತಂಡ ತಲಾ ಎರಡು ಬಾರಿ ರನ್ನರ್‌ ಅಪ್‌, ಮೂರು ಮತ್ತು ನಾಲ್ಕನೇ ಸ್ಥಾನ ಗಳಿಸಿದ್ದಾರೆ. ಆದರೆ ವಿಶ್ವಮಟ್ಟದ ಮಹತ್ವದ ಟೂರ್ನಿಗಳಲ್ಲಿ ಸಾಮರ್ಥ್ಯ ತೋರಿಸಲು ಮಹಿಳಾ ತಂಡಕ್ಕೆ ಸಾಧ್ಯವಾಗಲಿಲ್ಲ. ವಿಶ್ವಕಪ್‌ನಲ್ಲಿ ತಂಡದ ಅತಿದೊಡ್ಡ ಸಾಧನೆ ಎಂದರೆ ನಾಲ್ಕನೇ ಸ್ಥಾನ. ಅದೂ ಒಂದು ಬಾರಿ ಮಾತ್ರ. ಒಲಿಂಪಿಕ್ಸ್‌ನಲ್ಲಂತೂ ನಮ್ಮವರು ಸಾಧನೆ ಮಾಡಿದ್ದು ಬಲು ವಿರಳ. ಒಂದು ಬಾರಿ ನಾಲ್ಕು ಮತ್ತು ಇನ್ನೊಂದು ಬಾರಿ 12ನೇ ಸ್ಥಾನ ಮಾತ್ರ ಗಳಿಸಿತ್ತು.

ಮೊದಲ ಬಾರಿ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಿದ ನಂತರ ಮತ್ತೊಮ್ಮೆ ಈ ‘ವಿಶ್ವ ಕ್ರೀಡಾ ಹಬ್ಬ’ದಲ್ಲಿ ಪಾಲ್ಗೊಳ್ಳಬೇಕಾದರೆ ತಂಡ 35 ವರ್ಷ ಕಾಯಬೇಕಾಗಿತ್ತು. ಕಳೆದ ಬಾರಿ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಿತ್ತು ಎಂಬುದು ಈಗ ತಂಡ ವಿಶ್ವಾಸದ ಅಲೆಯಲ್ಲಿ ತೇಲಾಡಲು ಕಾರಣವಾಗಿದೆ. ವಿಶ್ವಕಪ್‌ಗೆ 2010ರಲ್ಲಿ ಕೊನೆಯದಾಗಿ ಅರ್ಹತೆ ಪಡೆದುಕೊಂಡ ತಂಡ ಕಳೆದ ಬಾರಿ ಈ ಅವಕಾಶವನ್ನು ಪಡೆದುಕೊಂಡಿರಲಿಲ್ಲ. ಆದ್ದರಿಂದ ರಾಣಿ ರಾಂಪಾಲ್‌ ನೇತೃತ್ವದ ತಂಡ ‘ಟ್ರಿಪಲ್’ ಸಾಧನೆಯ ಬೆನ್ನೇರಿ ಹೊರಟಿದೆ.

ಚಿನ್ನದ ಸಾಧನೆ; ಚಕ್‌ ದೇ...

ಒಲಿಂಪಿಕ್ಸ್, ವಿಶ್ವಕಪ್‌ ಮುಂತಾದ ಟೂರ್ನಿಗಳಲ್ಲಿ ಹೆಚ್ಚೇನೂ ಸಾಧನೆ ಇಲ್ಲದಿದ್ದರೂ ಭಾರತದ ಮಹಿಳೆಯರು ಏಷ್ಯಾ ಮತ್ತು ಕಾಮನ್‌ವೆಲ್ತ್ ರಾಷ್ಟ್ರಗಳ ಮಟ್ಟದಲ್ಲಿ ಉತ್ತಮ ಹೆಸರು ಮಾಡಿದ್ದಾರೆ. 1982ರಲ್ಲಿ ನಡೆದ ಚೊಚ್ಚಲ ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನ ಗೆದ್ದು ನಾಯಕಿ ಸೂರಜ್‌ ಲತಾ ದೇವಿ ಗಮನ ಸೆಳೆದಿದ್ದರು. 2002, 2003 ಮತ್ತು 2004ರಲ್ಲಿ ಕ್ರಮವಾಗಿ ಕಾಮನ್‌ವೆಲ್ತ್‌ ಗೇಮ್ಸ್‌, ಆಫ್ರೊ–ಏಷ್ಯನ್‌ ಗೇಮ್ಸ್‌ ಹಾಗೂ ಏಷ್ಯಾ ಕಪ್‌ ಗೆದ್ದ ತಂಡವನ್ನೂ ಅವರೇ ಮುನ್ನಡೆಸಿದ್ದರು.

ಈ ಸಾಧನೆಗಳ ನಂತರ ಭಾರತ ಮಹಿಳಾ ತಂಡದ ಆಟಗಾರ್ತಿಯರು ‘ಚಿನ್ನದ ಹುಡುಗಿಯರು’ ಎಂಬ ಹೆಸರು ಗಳಿಸಿದ್ದರು. ತಂಡವನ್ನು ‘ಚಕ್‌ ದೇ...’ ಎಂದು ಹಾರೈಸುವ ವಿಧಾನವೂ ಬೆಳೆದಿತ್ತು. ಸೂರಜ್‌ ಲತಾದೇವಿ ಅವರ ಸಾಧನೆಯನ್ನು ಪ್ರತಿಬಿಂಬಿಸುವ ಕಾರ್ಯ ಈಗ ರಾಣಿ ಅವರಿಂದ ಆಗಬೇಕು ಎಂಬುದು ಹಾಕಿ ಪ್ರಿಯರ ಹಾರೈಕೆ.

ಒಲಿಂಪಿಕ್ಸ್‌ಗೆ ನೇರ ಪ್ರವೇಶದ ಗುರಿ

ಕೋಚ್ ಹರೇಂದ್ರ ಸಿಂಗ್‌ ಅವರು ಈ ಟೂರ್ನಿಯಲ್ಲಿ ಮೂರು ಗುರಿಗಳನ್ನು ಹೊಂದಿದ್ದಾರೆ. ಮೊದಲನೆಯದು ಏಷ್ಯಾಕಪ್ ಗೆಲ್ಲುವುದು, ಎರಡು ಮತ್ತು ಮೂರನೆಯದು ವಿಶ್ವಕಪ್ ಹಾಗೂ ಒಲಿಂಪಿಕ್ಸ್‌ಗೆ ನೇರ ಪ್ರವೇಶ ಗಿಟ್ಟಿಸಿಕೊಳ್ಳುವುದು. ಇದೇ ಮೊದಲ ಬಾರಿ ಮಹಿಳಾ ತಂಡಕ್ಕೆ ತರಬೇತಿ ನೀಡುತ್ತಿರುವ ಹರೇಂದ್ರ ಸಿಂಗ್ ಈ ಕನಸು ನನಸಾಗುವ ಭರವಸೆ ಹೊಂದಿದ್ದಾರೆ.

‘ಇದು ಸವಾಲಿನ ಗುರಿ. ಆದರೆ ತಲುಪಲು ಸಾಧ್ಯವಿಲ್ಲ ಎಂದು ಹೇಳುವಂತಿಲ್ಲ. ಕಠಿಣ ಶ್ರಮವಹಿಸಿ ನಿಖರ ಗುರಿಯೊಂದಿಗೆ ಅಂಗಣಕ್ಕೆ ಇಳಿದರೆ ಮೂರು ಸಾಧನೆ ಒಟ್ಟೊಟ್ಟಿಗೆ ಮಾಡಬಹುದಾಗಿದೆ. ಶಿಸ್ತುಬದ್ಧ ಅಭ್ಯಾಸ ನಡೆಸಿರುವ ಭಾರತ ಮಹಿಳಾ ತಂಡ ಸುಲಭವಾಗಿ ಈ ಗುರಿ ಮುಟ್ಟುತ್ತಾರೆ ಎಂಬುದರಲ್ಲಿ ಸಂದೇಹ ಇಲ್ಲ’ ಎಂದು ಅವರು ಹೇಳುತ್ತಾರೆ.

ಮಹಿಳಾ ವಿಶ್ವಕಪ್ ಮುಂದಿನ ವರ್ಷ ಲಂಡನ್‌ನಲ್ಲಿ ನಡೆಯಲಿದ್ದು ಒಲಿಂಪಿಕ್ಸ್‌ 2020ರಲ್ಲಿ ಟೋಕಿಯೊದಲ್ಲಿ ನಿಗದಿಯಾಗಿದೆ.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry