ಭಾನುವಾರ, ಸೆಪ್ಟೆಂಬರ್ 22, 2019
22 °C

ಬೆಂಗಳೂರಿನಲ್ಲಿ ಐಸಿಸಿ ಸಭೆ ನಾಳೆ

Published:
Updated:

ಆಲಮಟ್ಟಿ: ಕೃಷ್ಣಾ ಅಚ್ಚುಕಟ್ಟು ಪ್ರದೇಶದ ಕಾಲುವೆಗಳಿಗೆ ಹಿಂಗಾರು ಹಂಗಾಮಿಗೆ ನೀರು ಹರಿಸುವ ತೀರ್ಮಾನಕ್ಕಾಗಿ ನೀರಾವರಿ ಸಲಹಾ ಸಮಿತಿ ಸಭೆ (ಐಸಿಸಿ) ಇದೇ 30 ರಂದು ಬೆಂಗಳೂರಿನಲ್ಲಿ ನಡೆಯಲಿದೆ. ಅ 30 ರಂದು ಬೆಂಗಳೂರಿನ ವಿಕಾಸಸೌಧದಲ್ಲಿ ಸಚಿವೆ ಉಮಾಶ್ರೀ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದೆ ಎಂದು ಆಲಮಟ್ಟಿ ಅಣೆಕಟ್ಟು ವಲಯದ ಮುಖ್ಯ ಎಂಜಿನಿಯರ್‌ ಜಗನ್ನಾಥರೆಡ್ಡಿ ತಿಳಿಸಿದರು.

ಜುಲೈ 25 ರಂದು ನಡೆದಿದ್ದ ಐಸಿಸಿಯ ಮೊದಲ ಸಭೆಯಲ್ಲಿ ಅಂದಿನ ಜಲಾಶಯದಲ್ಲಿನ ನೀರಿನ ಸಂಗ್ರಹದ ಆಧಾರದ ಮೇಲೆ ನ. 25 ರವರೆಗೆ ವಾರಾಬಂಧಿಗೆ ಅನುಗುಣವಾಗಿ ಮುಂಗಾರು ಹಂಗಾಮಿಗೆ ಕಾಲುವೆಗೆ ನೀರು ಹರಿಸಲು ತೀರ್ಮಾನಿಸಲಾಗಿತ್ತು.

ಮುಂಗಾರು ಹಂಗಾಮಿಗೆ ನೀರು ಹರಿಸುವುದು ಇನ್ನೂ 25 ದಿನ ಬಾಕಿ ಇದ್ದರೂ, ಸಾಕಷ್ಟು ಮೊದಲೇ ಹಿಂಗಾರು ಹಂಗಾಮಿಗೆ ನೀರು ಹರಿಸುವ ಐಸಿಸಿ ಸಭೆ ನಡೆಯುತ್ತಿರುವುದು ರೈತರ ಹಿತದೃಷ್ಟಿಯಿಂದ ಉತ್ತಮ ಎಂಬುವುದು ಹಲವರ ಅಭಿಪ್ರಾಯ.

ಕಾಲುವೆಗೆ ಜಲಾಶಯದ ನೀರು ಹಿಂಗಾರು ಹಂಗಾಮಿಗೆ ಎಲ್ಲಿಯವರೆಗೆ ಹರಿಸಬೇಕು ಎಂಬುದನ್ನು ನಿರ್ಣಯಿಸುವ ಈ ಸಭೆ ಹಿಂಗಾರು ಬಿತ್ತನೆ ಮಾಡಲು ಉದ್ದೇಶಿಸಿರುವ ರೈತರಿಗೆ ನೀರಿನ ಲಭ್ಯತೆಯ ವಿವರ ಮೊದಲೇ ಗೊತ್ತಾಗಲಿದೆ. ಹೀಗಾಗಿ ರೈತರ ಚಿತ್ತ ಸದ್ಯ ಬೆಂಗಳೂರಿನ ಸಮಿತಿ ಸಭೆಯತ್ತ ನೆಟ್ಟಿದೆ.

ಕಾಲುವೆಗಳ ದುರಸ್ತಿ, ಕಾಲುವೆಗೆ ನೀರು ಬಿಡುವ ವಾರಾಬಂಧಿ ಪದ್ಧತಿ, ಭತ್ತ ಸೇರಿದಂತೆ ಕೆಲ ಬೆಳೆಗಳನ್ನು ಕಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ನಿಷೇಧಿಸುವುದು, ರೈತರಿಂದ ನೀರಿನ ಕರ ವಸೂಲಿ ಮಾಡುವುದು ಸೇರಿದಂತೆ ನಾನಾ ವಿಷಯಗಳ ಚರ್ಚೆ ನಡೆಯುತ್ತವೆ.

ನೀರಿನ ಸದ್ಯದ ಸ್ಥಿತಿಗತಿ: ಈ ಬಾರಿ ಮುಂಗಾರು ಹಂಗಾಮಿಗೆ ನೀರು ಹರಿಸಿದರೂ ಒಳಹರಿವು ನಿರಂತರವಾಗಿದ್ದರಿಂದ ಜಲಾಶಯ ಇನ್ನೂ ಭರ್ತಿಯಾಗಿಯೇ ಇದೆ. ಆಲಮಟ್ಟಿಯಲ್ಲಿ ಪೂರ್ಣ 123 ಟಿಎಂಸಿ ಅಡಿ ನೀರು ಸಂಗ್ರಹವಿದ್ದು, ನಾರಾಯಣಪುರ ಜಲಾಶಯದಲ್ಲಿಯೂ 32.60 ಟಿಎಂಸಿ ಅಡಿ ನೀರು ಸಂಗ್ರಹವಿದೆ. ಆಲಮಟ್ಟಿಯಲ್ಲಿ 5080 ಕ್ಯುಸೆಕ್‌ ಒಳಹರಿವು ಇದೆ.

ಶನಿವಾರ ಎರಡು ಜಲಾಶಯ ಸೇರಿ ಡೆಡ್‌ಸ್ಟೋರೇಜ್‌ ಹೊರತುಪಡಿಸಿ ಬಳಕೆ ಯೋಗ್ಯ 123 ಟಿಎಂಸಿ ಅಡಿ ನೀರು ಲಭ್ಯವಿದೆ. ಅದರಲ್ಲಿ ಮುಂದಿನ ಜೂನ್‌ವರೆಗೆ ಕುಡಿಯುವ ನೀರು, ಕೈಗಾರಿಕೆ, ಕೂಡಗಿ ಎನ್‌ಟಿಪಿಸಿ, ಶಕ್ತಿನಗರದ ಆರ್‌ಟಿಪಿಎಸ್‌ಗೆ ನೀರು ಹಾಗೂ ಮುಂಗಾರು ಹಂಗಾಮಿಗೆ ನ 25 ರವರೆಗೆ ನೀರು ಹರಿಸುವುದು ಸೇರಿದಂತೆ ಇನ್ನೀತರ ಒಟ್ಟಾರೇ 40 ಟಿಎಂಸಿ ಅಡಿ ನೀರು ಅಗತ್ಯ ಇದೆ.

ಹಿಂಗಾರು ಹಂಗಾಮಿಗೆ ಕಾಲುವೆಗೆ ನೀರು ಹರಿಸಲು ಸುಮಾರು 80 ಟಿಎಂಸಿ ಅಡಿಯಷ್ಟು ನೀರು ಲಭ್ಯವಾಗುವ ಸಾಧ್ಯತೆಯಿದೆ. ಒಟ್ಟಾರೇ ಕೃಷ್ಣಾ ಅಚ್ಚುಕಟ್ಟು ಪ್ರದೇಶದ ಕಾಲುವೆಗೆ ನೀರು ಹರಿಸಲು ನಿತ್ಯ ಕನಿಷ್ಟ 1 ಟಿಎಂಸಿ ಅಡಿ ನೀರು ಬೇಕಾಗುತ್ತದೆ, ಹೀಗಾಗಿ ವಾರಾಬಂಧಿ ಅನುಗುಣವಾಗಿ ನೀರು ಹರಿಸಲು ತೀರ್ಮಾನಿಸಿದರೆ ಫೆಬ್ರುವರಿ 28 ರವರೆಗೂ ನೀರು ಹರಿಸಲು ಯಾವುದೇ ತೊಂದರೆಯಾಗುವುದಿಲ್ಲ ಎಂದು ಕೆಬಿಜೆಎನ್‌ಎಲ್‌ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

 

Post Comments (+)