ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಕರೂಪದ ಪರಿಹಾರಕ್ಕೆ ಹಕ್ಕೊತ್ತಾಯ

Last Updated 29 ಅಕ್ಟೋಬರ್ 2017, 9:44 IST
ಅಕ್ಷರ ಗಾತ್ರ

ಚಿಕ್ಕಗಲಗಲಿ (ವಿಜಯಪುರ): ಆಲಮಟ್ಟಿಯ ಲಾಲ್‌ ಬಹಾದ್ದೂರ್‌ ಶಾಸ್ತ್ರಿ ಅಣೆಕಟ್ಟೆಯ ಎತ್ತರ ಹೆಚ್ಚಳದಿಂದ ಮುಳುಗಡೆಯಾಗುವ ಒಣ ಬೇಸಾಯದ ಭೂಮಿಗೆ ಎಕರೆಯೊಂದಕ್ಕೆ ₹ 30 ಲಕ್ಷ, ನೀರಾವರಿ ಜಮೀನಿಗೆ ₹ 40 ಲಕ್ಷ ಪರಿಹಾರ ನೀಡುವ ಜತೆಗೆ, ಸಂತ್ರಸ್ಥರಿಗೆ ಏಕ ರೂಪದಲ್ಲಿ ಪರಿಹಾರ ನೀಡಬೇಕು ಎಂಬ ಹಕ್ಕೊತ್ತಾಯ ಮೊಳಗಿತು.

ವಿಜಯಪುರ ಜಿಲ್ಲೆಯ ಗಡಿ ಗ್ರಾಮ ಚಿಕ್ಕಗಲಗಲಿಯ ರಾಮೇಶ್ವರ ದೇವಸ್ಥಾನದ ಸಭಾ ಭವನದಲ್ಲಿ ಶನಿವಾರ ಕೃಷ್ಣಾ ಮೇಲ್ದಂಡೆ ಯೋಜನೆ ಸಂತ್ರಸ್ಥರ ಹಿತರಕ್ಷಣಾ ವೇದಿಕೆ ನೇತೃತ್ವದಲ್ಲಿ ನಡೆದ ಸಂತ್ರಸ್ತರ ಸಭೆಯಲ್ಲಿ ಅವಳಿ ಜಿಲ್ಲೆಯ ಸಂತ್ರಸ್ಥ ರೈತ ಸಮೂಹ ಈ ಹಕ್ಕೊತ್ತಾಯ ಮಂಡಿಸಿತು.

ಸಂತ್ರಸ್ಥರ ಸಮಸ್ಯೆ, ಬೇಡಿಕೆ, ಪರಿಹಾರಕ್ಕೆ ಸಂಬಂಧಿಸಿದಂತೆ ಸುದೀರ್ಘ ಚರ್ಚೆ ಬಳಿಕ 33 ಬೇಡಿಕೆಗಳ ಅಂತಿಮ ಪಟ್ಟಿಯನ್ನು ಸಿದ್ದಪಡಿಸಲಾಯಿತು. ಇದೇ ಸಂದರ್ಭ ವೇದಿಕೆ ವತಿಯಿಂದ ಬಾಧಿತಗೊಳ್ಳುವ ವಿಜಯಪುರ, ಬಾಗಲಕೋಟೆ, ಬೆಳಗಾವಿ ಜಿಲ್ಲೆಗಳ 140 ಗ್ರಾಮಗಳಿಗೆ ಭೇಟಿ ನೀಡಿ ತಯಾರಿಸಿದ ರೈತರ ಬೇಡಿಕೆಗಳ ಪಟ್ಟಿಯನ್ನು ಸಭೆಯಲ್ಲಿ ಮಂಡಿಸಲಾಯಿತು.

ನ 2ರ ಗುರುವಾರ ಸಚಿವ ಸಂಪುಟದ ಉಪ ಸಮಿತಿ ಯೋಜನಾ ಪ್ರದೇಶದಲ್ಲಿ ಅಹವಾಲು ಆಲಿಸಲು ಬರುತ್ತಿದ್ದು, ಆ ಸಂದರ್ಭ ಪ್ರಮುಖ ಸಮಸ್ಯೆ, ಬೇಡಿಕೆ ಬಗ್ಗೆ ಗಮನ ಸೆಳೆಯಲು ಸಭೆಯಲ್ಲಿ ತೀರ್ಮಾನಿಸಲಾಯಿತು.

ಕೃಷ್ಣಾ ಮೂರನೇ ಹಂತದ ಭೂ ಸ್ವಾಧೀನ ಪ್ರಕ್ರಿಯೆಯಲ್ಲಿ 2013ರ ಹೊಸ ಭೂಸ್ವಾಧೀನ ಕಾಯ್ದೆಯನ್ನು ಯಥಾವತ್ತಾಗಿ ಅನುಷ್ಠಾನಗೊಳಿಸಿ ಆ ಪ್ರಕಾರ ಪರಿಹಾರ ನೀಡಬೇಕು. ಈಗಾಗಲೇ ಭೂ ಸ್ವಾಧೀನ ಇಲಾಖೆ ಅಧಿಕಾರಿಗಳ ಕರ್ತವ್ಯಲೋಪದಿಂದಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದು, ಅವರ ಮೇಲೆ ಸೂಕ್ತ ಕ್ರಮ ಕೈಗೊಂಡು, ರೈತರಿಗೆ ನ್ಯಾಯ ಒದಗಿಸಬೇಕು. ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು ಎಂಬ ಹಕ್ಕೊತ್ತಾಯವೂ ಕೇಳಿ ಬಂತು.

ಹಿನ್ನೀರಿನಿಂದ ಸುತ್ತುವರಿದಿರುವ ನಡುಗಡ್ಡೆ, ಫಾರ್ಮ್‌ ಹೌಸ್‌ಗಳನ್ನು ವಶಕ್ಕೆ ತೆಗೆದುಕೊಂಡು ಪರಿಹಾರ ನೀಡಬೇಕು. ಸವಳು–ಜವಳು ಜಮೀನಿಗೂ ಪರಿಹಾರ ಒದಗಿಸುವುದು, ಎಫ್ಆರ್ಎಲ್ 524.256 ಮೀ.ಬದಲು 526.256 ಮೀ.ಗೆ ಭೂ ಸ್ವಾಧೀನಪಡಿಸಿಕೊಂಡು ಪರಿಹಾರ ನೀಡಬೇಕು.

ಮುಳುಗಡೆಯಾಗುವ ಸಂತ್ರಸ್ತರ ಜಮೀನನ್ನು ಭೂ ಮಾಪಕರಿಂದ ನಿಖರವಾಗಿ ಸರ್ವೇ ಮಾಡಿಸಬೇಕು. ಮೂರನೇ ಹಂತದ ಯೋಜನೆಯಲ್ಲಿ ಕಟ್ಟಡಗಳನ್ನು ಸ್ವಾಧೀನಪಡಿಸಿಕೊಂಡು, ಬೆಲೆ ನಿರ್ಣಯಿಸುವ ಸಂದರ್ಭ ಪಿಡಬ್ಲುಡಿ ಎಸ್ಆರ್ ದರಗಳ ಬದಲು, ಮುಳುಗಡೆ ಸಂತ್ರಸ್ತರಿಗಾಗಿಯೇ ಪ್ರತ್ಯೇಕ ದರ ಜಾರಿಗೊಳಿಸಿ ಅನ್ವಯಿಸಬೇಕು.

ರೈತರು ಧಾನ್ಯ ಸಂಗ್ರಹಕ್ಕಾಗಿ ನಿರ್ಮಿಸಿದ ಹಗೆವುಗಳಿಗೂ ಪರಿಹಾರ ನೀಡಬೇಕು. ಬಾಗಲಕೋಟೆ ನಗರವನ್ನು ಪೂರ್ಣ ಪ್ರಮಾಣದಲ್ಲಿ ಸ್ಥಳಾಂತರಿಸಿ ಮುಂದಿನ 50 ವರ್ಷಗಳ ಜನಸಂಖ್ಯೆ ಆಧರಿಸಿ ಮೂಲ ಸೌಕರ್ಯ ಕಲ್ಪಿಸಬೇಕು. ಸಂತ್ರಸ್ಥ ಪ್ರತಿ ಕುಟುಂಬದ ಮಕ್ಕಳ ವಿದ್ಯಾರ್ಹತೆಗನುಗುಣವಾಗಿ ವಿವಿಧ ಇಲಾಖೆಗಳಲ್ಲಿ ನೌಕರಿ ನೀಡಬೇಕು.

ಕೆಜಿಯಿಂದ ಪಿಜಿವರೆಗೆ ಖಾಸಗಿ, ಅನುದಾನಿತ ಸಂಸ್ಥೆಗಳಲ್ಲಿ ಉಚಿತ ಶಿಕ್ಷಣ ಒದಗಿಸಬೇಕು. ಕೂಡಲ ಸಂಗಮ ಮಾದರಿಯಲ್ಲಿ ರಾಮೇಶ್ವರ ದೇವಾಲಯ ಅಭಿವೃದ್ಧಿಪಡಿಸುವುದು ಸೇರಿದಂತೆ ಹಲವು ಬೇಡಿಕೆಗಳಿಗೆ ಹಕ್ಕೊತ್ತಾಯ ಮಂಡಿಸುವ ತೀರ್ಮಾನ ಕೈಗೊಳ್ಳಲಾಯಿತು.

ಶಾಸಕರಾದ ಎಸ್.ಆರ್.ಪಾಟೀಲ, ಎಚ್.ವೈ.ಮೇಟಿ, ಜೆ.ಟಿ.ಪಾಟೀಲ, ಸಂತ್ರಸ್ಥರ ಹಿತರಕ್ಷಣಾ ಸಮಿತಿಯ ನಿಕಟಪೂರ್ವ ಅಧ್ಯಕ್ಷ ಎಸ್.ಟಿ.ಪಾಟೀಲ, ನೂತನ ಅಧ್ಯಕ್ಷ, ಮಾಜಿ ಸಂಸದ ಅಜಯಕುಮಾರ ಸರನಾಯಕ, ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಕುಮಾರ ದೇಸಾಯಿ, ಎಚ್.ಎಸ್.ಕೋರಡ್ಡಿ, ಬಸವರಾಜ ದೇಸಾಯಿ, ಪ್ರಶಾಂತ ಹಿರೇದೇಸಾಯಿ, ಡಾ.ಪ್ರಭುಗೌಡ, ವೆಂಕಣ್ಣ ಮಳಗೇರಿ, ಮಾಜಿ ಶಾಸಕ ಬಾಬುರೆಡ್ಡಿ ತುಂಗಳ, ಬಸವರಾಜ ದೇಸಾಯಿ, ಎಂ.ಆರ್.ದೇಸಾಯಿ, ಗಿರೀಶ ಕೋರಡ್ಡಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT