ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಮತೆಯ ಮಡಿಲು

Last Updated 29 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರಿನ ಮಧ್ಯಭಾಗದಲ್ಲಿ 400 ಎಕರೆ ಪ್ರದೇಶದಲ್ಲಿ 1909ರಲ್ಲಿ ಸ್ಥಾಪಿತಗೊಂಡ ಭಾರತೀಯ ವಿಜ್ಞಾನ ಸಂಸ್ಥೆ (ಇಂಡಿಯನ್ ಇನ್‌ಸ್ಟಿಟ್ಯೂಟ್‌ ಆಫ್ ಸೈನ್ಸ್) ದೇಶಕ್ಕೇ ಒಂದು ಮಾದರಿ ಸಂಸ್ಥೆ. ಸ್ನಾತಕೋತ್ತರ ಪದವಿ ಹಾಗೂ ಇತರೆ ಸಂಶೋಧನಾ  ವ್ಯಾಸಂಗಗಳಿಗಾಗಿ ಇರುವ ಕಟ್ಟಡಗಳನ್ನು ಹೊರತುಪಡಿಸಿ ಉಳಿದ ಹೆಚ್ಚಿನ ಭಾಗ ಮಿನಿ- ಅರಣ್ಯದಂತೆಯೇ ಇರುವುದೂ, ಇದರ ಹೆಗ್ಗಳಿಕೆ.

110ಕ್ಕೂ ಮಿಗಿಲಾದ ವೈವಿಧ್ಯಮಯ ಸಸ್ಯಗಳು ಇಲ್ಲಿದ್ದು, ಅನೇಕ ಪ್ರಾಣಿ ಪಕ್ಷಿಗಳಿಗೂ ಇದೊಂದು ನೆಚ್ಚಿನ ತಾಣವಾಗಿದೆ. ಸಾಮಾನ್ಯವಾಗಿ ಜನ ಜಂಗುಳಿಯ ಮಧ್ಯೆಯೇ ವಾಸಿನುವ ಪರಿಚಿತ ತಳಿಯ ಸಾಧಾರಣ ಮಂಗಗಳೂ ಇಲ್ಲಿ ಸ್ವಚ್ಛಂದವಾಗಿ ಜೀವಿಸುತ್ತಿವೆ. ಇವುಗಳ ಸಂತತಿ ಈಗೀಗ ಕ್ಷಣಿಸುತ್ತಾ ಬಂದಿದೆಯೆಂದು ತಿಳಿದು ಬಂದಿದೆಯಾದರೂ, ಇಲ್ಲಿನ ಮರಗಿಡಗಳ ಆಶ್ರಯದಲ್ಲಿ ನೂರಾರು ಮಂಗಗಳ ಕುಟುಂಬಗಳು ಹೆದರಿಕೆಯಿಲ್ಲದೇ ಹಾರಾಡುತ್ತಿರುತ್ತವೆ.

ಅಂತಹುದೊಂದು ತಾಯಿ - ಮಗು ಮಂಗಗಳ ಮಮತೆಯ ದೃಶ್ಯವನ್ನು ಕ್ಯಾಮೆರದಲ್ಲಿ ಸೆರೆಹಿಡಿದವರು, ಅಲ್ಲಿಯೇ ಮಣ್ಣು ಮತ್ತು ಜಲ ಸಂಪನ್ಮೂಲ ವಿಭಾಗದಲ್ಲಿ ವಿಜ್ಞಾನಿಯಾಗಿರುವ, ಕುಮಾರಾಪಾರ್ಕಿನ ನಿವಾಸಿ ರಾಘು ಜಾಣ. ಬಾಲ್ಯದಿಂದಲೂ  AGFA- C* ICK III ಬಳಸುತ್ತಿದ್ದ ಅವರು ಡಿಜಿಟಲ್ ಯುಗ ಬಂದಮೇಲೆ, ಸೋನಿ-S* T A* PHA 77 ಕ್ಯಾಮೆರಾ ಮತ್ತು ಟೆಮರಾನ್ ಜೂಂ ಲೆನ್ಸ್ ಬಳಸುತ್ತಾರೆ. ಪ್ರಕೃತಿ, ವನ್ಯಜೀವಿ, ಲ್ಯಾಂಡ್‌ಸ್ಕೇಪ್ ಚಿತ್ರಣದಲ್ಲಿ ಆಸಕ್ತರಾಗಿ ಹವ್ಯಾಸವನ್ನು ಬೆಳಸಿಕೊಂಡಿದ್ದಾರೆ. ಇಲ್ಲಿ ಅವರು ಬಳಸಿದ ಜೂಂ ಲೆನ್ಸ್ 150- 600 ಎಂ.ಎಂ.ನಲ್ಲಿ  600 ಎಂ.ಎಂ.

ಫೋಕಲ್ ಲೆಂಗ್ತ್ ಮತ್ತು ಎಕ್ಸ್‌ಪೋಶರ್ ವಿವರ ಇಂತಿವೆ: ಅಪರ್ಚರ್  f 6.3, ಷಟರ್ ವೇಗ 1/60 ಸೆಕೆಂಡ್, ಐ.ಎಸ್.ಒ. 250. ಟ್ರೈಪಾಡ್ ಮತ್ತು ಫ್ಲಾಶ್ ಬಳಸಿಲ್ಲ.

ಈ ಚಿತ್ರದ ಗುಣಾತ್ಮಕ ವಿಶೇಷವನ್ನು‌ ಅವಲೋಕಿಸಿದಾಗ ಗುರುತಿಸಬಲ್ಲ ಕೆಲವು ಅಂಶಗಳು ಇಂತಿವೆ:

* ತಾಯಿ- ಮಗು ಮಂಗಗಳ ಈ ಅನ್ಯೋನ್ಯ ದೃಶ್ಯವನ್ನು ಅವುಗಳಿಗೆ ಅರಿವಿಲ್ಲದಂತೆಯೇ ದೂರದಿಂದ ಕ್ಲಿಕ್ಕಿಸಲು 600 ಎಂ.ಎಂ. ಜೂಂಲೆನ್ಸ್ ಬಳಸಿದ್ದು ಸಮರ್ಪಕವಾದದ್ದೇ. ಅಷ್ಟು ದೊಡ್ಡ ಜೂಂ ಲೆನ್ಸ್‌ನ್ನು ಟ್ರೈಪಾಡ್ ಇಲ್ಲದೇ ಬಳಸಿ ಪ್ರಾಣಿ- ಪಕ್ಷಿಗಳನ್ನು ಚಿತ್ರವನ್ನು ಕ್ಲಿಕ್ಕಿಸಿದಾಗ, ಚಿತ್ರ ಶೇಕ್ ಆಗುವುದೇ ಹೆಚ್ಚು. ಇಲ್ಲಿಯೂ ಸ್ವಲ್ಪಮಟ್ಟಿಗೆ ಆ ತೊಂದರೆ ಗೋಚರಿಸುತ್ತಿದೆ. ಅಂತಹ ಸಂದರ್ಭದಲ್ಲಿ, ಮೊದಲು ಷಟರ್ ವೇಗವನ್ನು ಕನಿಷ್ಠ 1/ 250 ಸೆಕೆಂಡ್‌ಗೆ ಅಳವಡಿಸಿ, ಅದಕ್ಕೆ ಪೂರಕವಾದ ಅಪರ್ಚರ್‌ ಅನ್ನು  f5.6 ಅಥವಾ ಐ.ಎಸ್.ಒ 400 ಇಟ್ಟು ಕ್ಲಿಕ್ಕಿಸುವುದು ಹೆಚ್ಚು ಸಮಂಜಸ.

* ಈ ಭಂಗಿಯನ್ನು ಪೋರ್ಟ್ರೇಟ್‌ ಮೋಡಿನಲ್ಲಿ ಸೆರೆಹಿಡಿದಿರುವುದರಿಂದ, ಮಂಗಗಳೆರಡೂ ಇಡೀ ಚೌಕಟ್ಟನ್ನು ಆವರಿಸಿವೆ. ಒಂದು ವಿಧದಲ್ಲಿ ಪ್ರಾಣಿಸಂಗ್ರಹಾಲಯದ - ಶೂಟಿಂಗ್ ತರಹ (ಟೈಟ್ – ಫ್ರೇಮ್).  ಹಿಂಬದಿಯಲ್ಲಿ ಮತ್ತು ಮುಂಬದಿಯಲ್ಲಿ IISC  ಪರಿಸರದ ರೂಪುರೇಷೆಗಳೂ ಕಾಣಿಸುವಂತಿದ್ದರೆ, ಚಿತ್ರಣದ ಮೌಲ್ಯವೇ ಹೆಚ್ಚುತ್ತಿತ್ತು. ಅಂದರೆ, ಲ್ಯಾಂಡ್‌ಸ್ಕೇಪ್‌ ಮೋಡಿನಲ್ಲಿ (ಹಾರಿಜಾಂಟಲ್ ಚೌಕಟ್ಟು) ಸಂಯೋಜಿಸಿ ಕ್ಲಿಕ್ಕಿಸಬಹುದಿತ್ತು.

* ತುಂಡಾದ ಬಲಕೈನಲ್ಲೇ ತನ್ನ ಮರಿಯನ್ನು ಅಪ್ಪಿಕೊಂಡಿರುವ ತಾಯಿ ಮಂಗ ಹಾಗೂ, ಬೆಚ್ಚನೆಯ ತಾಯಿ ಮಡಿಲಿನ ಆಸರೆ ಆ ಮರಿಗೆ. ಅವುಗಳ ಅನ್ಯೋನ್ಯತೆಗೆ ಕನ್ನಡಿ ಹಿಡಿಯುವಂತೆ ಆ ಅನನ್ಯವಾದ ಕ್ಷಣವನ್ನು ಸುಂದರವಾಗಿ ಸೆರೆಹಿಡಿಯುವಲ್ಲಿ, ರಾಘು ಜಾಣ ಗೆದ್ದಿದ್ದಾರೆ.

* ತಾಯಿಯ ಮಡಿಲಲ್ಲಿ ಹುದುಗಿಕೊಂಡಿರುವ ಮರಿಯ ಕಣ್ಣಿನ ದೃಷ್ಟಿ, ಅಮ್ಮನ ನೋಟದೆಡೆಗೇ ಇದ್ದು ಭಾವನೆಗೆ ಪುಷ್ಟಿ ನೀಡಿವೆ.

* ಕಲಾತ್ಮಕವಾಗಿ ಕೆಲವು ಅಂಶಗಳು ಇಲ್ಲಿ ಗಮನಾರ್ಹ. ಈ ಚಿತ್ರ, ನೋಡುಗನ ಕಣ್ಣು ಮತ್ತು ಮನಸ್ಸನ್ನು ಒಮ್ಮೆಲೇ ತನ್ನೆಡೆಗೆ ಸೆಳೆಯಬಲ್ಲ ಪ್ರಭಾವದ (ಇಂಪ್ಯಾಕ್ಟ್) ಅಂಶವನ್ನು ಹೊಂದಿದೆ. ಮಧುರವಾದ ಭಾವನೆಯನ್ನು ಸೂಸುವ ಈ ಚಿತ್ರ, ಪುನಃ ಪುನಃ ನೋಡಲು ಆಹ್ವಾನಿಸುವ ಆಸಕ್ತಿದಾಯಕ ಗುಣವನ್ನೂ ಹೊಂದಿದೆ. ಮನತಟ್ಟುವ ಚೋದಕತೆ (ಇನ್ಫಿನಿಟಿ), ಚೈತನ್ಯ ಶೀಲತೆ (ವೈಟ್ಯಾಲಿಟಿ), ಅಖಂಡತೆ (ಯೂನಿಟಿ) ಇಲ್ಲಿ ಕಂಡು ಬರುತ್ತವೆ.

* ಒಂದು ಕೊರತೆಯೆಂದರೆ, ಚಿತ್ರಣದ ಸಾಮರಸ್ಯ (ಬ್ಯಾಲೆನ್ಸ್) ಸಾಲದು. ಚೌಕಟ್ಟಿನಾಚೆಗೆ ಎರಡೂ ಮಂಗಗಳು ನೋಡುತ್ತಿರುವುದರಿಂದ, ಆ ಭಾವನೆಗೆ ಪೂರಕವಾಗಬಲ್ಲ ಏನಾದರೂ ವಸ್ತು ಆ ದಿಕ್ಕಿನಲ್ಲಿ (ಎಡಭಾಗದಲ್ಲಿ) ಇದ್ದಿದ್ದರೆ ಎಂಬ ಭಾವನೆಯನ್ನೂ ಮೂಡಿಸುತ್ತದೆ. ಅಂದರೆ ಅಡ್ಡವಾದ ಚೌಕಟ್ಟಿನಲ್ಲಿ (ಹಾರಿಜಾಂಟಲ್ ಫ್ರೇಂ) ಕ್ಲಿಕ್ಕಿಸಿದ್ದರೆ ಇಡೀ ದೃಶ್ಯಕ್ಕೇ ಸಾಮರಸ್ಯ ದೊರಕಿ ಚಿತ್ರ ಮತ್ತಷ್ಟು ಅರ್ಥಪೂರ್ಣವಾಗುತ್ತಿತ್ತೇನೊ.

***

ಬೆಂಗಳೂರಿನ ಬದುಕನ್ನು ಬಿಂಬಿಸುವ ಛಾಯಾಚಿತ್ರಗಳನ್ನು ‘ಚೌಕಟ್ಟು’  ಅಂಕಣಕ್ಕೆ ನೀವೂ ಕಳುಹಿಸಬಹುದು. ಗುಣಮಟ್ಟದ ಚಿತ್ರಗಳನ್ನು ಆಯ್ಕೆಮಾಡಿ, ಅನುಭವಿಗಳ ವಿಶ್ಲೇಷಣೆಯೊಂದಿಗೆ ಪ್ರಕಟಿಸಲಾಗುವುದು. ಇಮೇಲ್:metropv@prajavani.co.in, ಮಾಹಿತಿಗೆ: 25880636

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT