ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದಲ್ಲಿ ಚಿತ್ತ ಧ್ಯಾನ

Last Updated 30 ಅಕ್ಟೋಬರ್ 2017, 9:38 IST
ಅಕ್ಷರ ಗಾತ್ರ

ಮನೆಯವರಿಗೆ ನಾನು ವೈದ್ಯ, ಎಂಜಿನಿಯರ್‌ ಆಗಬೇಕೆಂಬ ಆಸೆ. ಆದರೆ ನನಗೆ ಕೂತರೂ, ನಿಂತರೂ ಚಿತ್ರ ರಚಿಸುವ ಧ್ಯಾನ.

ನಮ್ಮದು ಸಂಪ್ರದಾಯಸ್ಥ ಕುಟುಂಬ. ತಂದೆ ಅರ್ಚಕರಾಗಿದ್ದರು, ಜೊತೆಗೆ ಚೆನ್ನಾಗಿ ಹಾಡು ಹೇಳುತ್ತಿದ್ದರು. ನನ್ನ ತಾಯಿ, ಅಜ್ಜಿ ಒಳ್ಳೆಯ ಚಿತ್ರ ಕಲಾವಿದರು. ಅವರ ಪ್ರತಿಭೆಯ ನನಗೂ ಹರಿದುಬಂದಿತು.

ಮನೆಯಲ್ಲಿ ಇಟ್ಟ ಹೆಸರು ಬಿ.ಕೆ. ಶ್ರೀನಿವಾಚಾರ್ಯ. ಅರಮನೆಯಲ್ಲಿ ರಾಜಾ ರವಿವರ್ಮ ಅವರ ಪೇಟಿಂಗ್‌ಗಳನ್ನು ನೋಡಿ ಪ್ರಭಾವಿತನಾದೆ. ಅವರನ್ನೇ ಮಾನಸ ಗುರು ಎಂದುಕೊಂಡು ಅವರ ಹೆಸರಿನ ಜೊತೆಗೆ ನನ್ನ ಹೆಸರನ್ನು ಸೇರಿಸಿಕೊಂಡೆ. ಅಪ್ಪನ ಆಸೆಯಂತೆ ವೈದ್ಯನಾಗಲಾಗಲಿಲ್ಲ. ಆದರೆ ನನ್ನ ಕಲಾ ಸೇವೆಗೆ ಬೆಂಗಳೂರು ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್‌ ನೀಡಿ, ಹೆಸರಿನೊಂದಿಗೆ ಡಾಕ್ಟರ್‌ ಎಂಬ ಗರಿಮೆ ನೀಡಿದೆ.

ಬಾಲ್ಯದಲ್ಲಿ ಚಿತ್ರ ಬಿಡಿಸುವುದರ ಹೊರತಾಗಿ ನನಗೆ ಬೇರೆ ಯೋಚನೆಯೇ ಇರಲಿಲ್ಲ. ಶಾಲೆ, ಬೀದಿ, ಮನೆ... ಹೀಗೆ ಎಲ್ಲ ಕಡೆಯೂ ಚಿತ್ರ ಬಿಡಿಸಿ ಬೈಸಿಕೊಳ್ಳುತ್ತಿದ್ದೆ. ಶಾಲೆಯಲ್ಲಿ ಎದುರಿಗೆ ಕೂತಿದ್ದ ಸ್ನೇಹಿತರು ಬಿಳಿ ಶರ್ಟ್‌ ಹಾಕಿಕೊಂಡಿದ್ದರೆ ಅದರಲ್ಲಿ ನನ್ನ ಚಿತ್ರವಿರುತ್ತಿತ್ತು. ಹೀಗೆ ವಿದ್ಯಾರ್ಥಿಯೊಬ್ಬನ ಬಟ್ಟೆಯ ಮೇಲೆ ಚಿತ್ರ ಬಿಡಿಸಿದ್ದಾಗ ಶಿಕ್ಷಕರು ಬೆತ್ತದ ಏಟು ಕೊಟ್ಟಿದ್ದರು. ಇದರಿಂದ ಸಿಟ್ಟಿಗೆದ್ದ ನಾನು ಅವರು ಹೊರಗೆ ಹೋದ ನಂತರ ತರಗತಿಯಲ್ಲಿ ಅವರದೇ ಚಿತ್ರ ಬಿಡಿಸಿದ್ದೆ. ಹಳ್ಳಿಯಲ್ಲಿ ಯಾವುದೇ ಮನೆಯಲ್ಲಿ ಬಿಳಿ ಬಣ್ಣದ ಗೋಡೆ ಕಂಡರೆ ಅದರ ಮೇಲೆ ರಾತ್ರಿ ಚಿತ್ರ ಬಿಡಿಸಿರುತ್ತಿದ್ದೆ. ಅವರೆಲ್ಲ ನನ್ನ ತಂದೆಗೆ ದೂರು ಕೊಡುತ್ತಿದ್ದರು. ಇದರಿಂದ ರೋಸಿ ಹೋಗಿದ್ದ ಅಪ್ಪ ಒಮ್ಮೆ ನನ್ನನ್ನು ಕೋಣೆಯಲ್ಲಿ ಕೂಡಿ ಹಾಕಿದ್ದರು. ಮಧ್ಯಾಹ್ನ ಊಟಕ್ಕೆಂದು ಬಾಗಿಲು ತೆಗೆದಾಗ ಗೋಡೆಯ ಮೇಲೆ ಬಿಡಿಸಿದ್ದ ಅವರದೇ ಚಿತ್ರ ಕಂಡು ಬೆರಗಾಗಿದ್ದರು. ಹೀಗೆ ಚಿತ್ರ ಬಿಡಿಸುವುದೇ ನನಗೆ ಧ್ಯಾನವಾಗಿಬಿಟ್ಟಿತ್ತು.

ಮನೆಯಲ್ಲಿ ಕಿರಿಕಿರಿ ಎನಿಸಿದಾಗ ಬೆಂಗಳೂರಿಗೆ ಬಂದುಬಿಟ್ಟೆ. ಸ್ವಲ್ಪ ದಿನದ ನಂತರ ಚೆನ್ನೈಗೆ ಹೋದೆ. ಆಗ ನನಗೆ ಒಂಬತ್ತು ವರ್ಷ. ರೈಲ್ವೆ ನಿಲ್ದಾಣದಲ್ಲಿ ರಾತ್ರಿ ಕಳೆದೆ. ಮಧ್ಯ ರಾತ್ರಿ ರಸ್ತೆಯ ಮೇಲೆ ಹಳ್ಳದ ಚಿತ್ರವೊಂದನ್ನು ಬಿಡಿಸಿದೆ. ಅದನ್ನು ದೂರದಿಂದ ನೋಡುವಾಗ ಥೇಟ್‌ ಹಳ್ಳದಂತೆ ಕಾಣುತ್ತಿತ್ತು. ಬೆಳಗ್ಗಿನ ಜಾವ ನಾನಿದ್ದ ಸ್ಥಳದಲ್ಲಿ ಕಾರು ಬಂದು ನಿಂತಿತು. ಅದರಲ್ಲಿದ್ದ ವ್ಯಕ್ತಿ ಈ ಚಿತ್ರ ಬಿಡಿಸಿದವರ‍್ಯಾರೆಂದು ಕೇಳಿದರು. ನಾನು ಅವರು ಪೊಲೀಸರೆಂದು ಹೆದರಿ ನಾನಲ್ಲ ಎಂದೆ. ಆದರೆ ಕೈಯಲ್ಲಿ ಬಣ್ಣವಿದ್ದುದರಿಂದ ಅವರಿಗೆ ನಾನೇ ಆ ಕೆಲಸ ಮಾಡಿದ್ದೆಂದು ತಿಳಿಯಿತು.

ನನ್ನ ಜೊತೆ ಬರುತ್ತೀಯಾ, ಸಿನಿಮಾಕ್ಕೆ ಕೆಲಸ ಮಾಡುತ್ತೀಯ ಎಂದರು. ಅವರು ನಾಗರೆಡ್ಡಿ ಚಕ್ರಪಾಣಿ ಸ್ಟುಡಿಯೊ ಮಾಲೀಕ. ಆಗ ನನಗೂ ಸಿನಿಮಾ ಹುಚ್ಚು ಇತ್ತು. ಹಾಗಾಗಿ ಒಪ್ಪಿಕೊಂಡೆ. ಪ್ರಸಾಧನ ಕಲಾವಿದ ಪಿತಾಂಬರ್‌ ಅವರ ಮನೆಗೆ ಕರೆದುಕೊಂಡು ಹೋದರು. ಮರುದಿನ ಹೊಸ ಬಟ್ಟೆ, ಹಣೆಗೆ ಕುಂಕುಮ ಹಚ್ಚಿ, ಹರಳೆಣ್ಣೆ ಹಾಕಿ ತಲೆ ಬಾಚಿ ಚಿತ್ರೀಕರಣ ಸ್ಥಳಕ್ಕೆ ಕರೆದುಕೊಂಡು ಹೋದರು. ಚಿತ್ರೀಕರಣ ಸ್ಥಳದಲ್ಲಿ ರಂಗರಾವ್‌, ಎಂ.ಜಿ. ರಾಮರಾವ್‌ ಇದ್ದರು. ಅವರನ್ನೆಲ್ಲ ನೋಡುವುದೇ ಖುಷಿ. ₹250 ಸಂಬಳ ಕೊಡುತ್ತಿದ್ದರು. ಎರಡು ತಿಂಗಳು ಅಲ್ಲಿ ಕೆಲಸ ಮಾಡಿದೆ. ನಂತರ ಚಿತ್ರಕಲೆಯಲ್ಲಿ ಪರಿಣಿತಿ ಪಡೆಯುವ ಸಲುವಾಗಿ ಹೇಳದೇ ಕೇಳದೇ ಅಲ್ಲಿಂದ ಬೆಂಗಳೂರಿಗೆ ಹೊರಟೆ. ನನಗೆ ಚಿತ್ರ ಬಿಡಿಸುವುದು ಬಿಟ್ಟರೆ ಬೇರೆ ಏನೂ ಗೊತ್ತಿರಲಿಲ್ಲ. ಚಿತ್ರ ಬಿಡಿಸಲು ಏನೂ ಸಿಗದಿದ್ದಾಗ ರಸ್ತೆ ಮೇಲೆಯೇ ಬಿಡಿಸುತ್ತಿದ್ದೆ. ನೆಲವೇ ಕಪ್ಪು ಹಲಗೆಯಾಗಿತ್ತು. ರಸ್ತೆ ಬದಿಯ ಕಲಾವಿದನೆಂದು ಹಲವು ಪತ್ರಿಕೆಗಳಲ್ಲಿ ಲೇಖನ ಪ್ರಕಟವಾಗುತ್ತಿತ್ತು. ಆ ಲೇಖನಗಳನ್ನು ಫ್ರೇಮ್‌ ಹಾಕಿಕೊಂಡು ಇಟ್ಟುಕೊಂಡಿದ್ದೇನೆ.

ಕಲಾಮಂದಿರ ಪ್ರಾರಂಭಿಸಿದ ಅ.ನ. ಸುಬ್ಬರಾಯರ ಮಾರ್ಗದರ್ಶನದಲ್ಲಿ ಚಿತ್ರಕಲೆಯ ತರಬೇತಿ ಪಡೆದೆ. ಆಗಷ್ಟೇ ಭಾರತ ಪರ್ಯಟನೆ ಮುಗಿಸಿ ಬಂದಿದ್ದ ನನಗೆ ಅಜಂತಾ ಎಲ್ಲೋರಾ ಕಲೆ ಸ್ಫೂರ್ತಿ ನೀಡಿದ್ದವು. ಸುತ್ತಮುತ್ತಲು ಒಂದು ಆಕರ್ಷಣೀಯ ಸ್ಥಳ ಬೇಕಿತ್ತು. ಆಂಜನೇಯ ಗುಡ್ಡದ ಮೇಲೆ ರಾಮಾಯಣ, ಮಹಾಭಾರತದ ಚಿತ್ರ ಬಿಡಿಸಿದೆ. ಅ.ನ. ಸುಬ್ಬರಾಯರು, ಎ.ಎಸ್. ಮೂರ್ತಿ ಹಾಗೂ ಊರಿನವರೆಲ್ಲಾ ಪ್ರೋತ್ಸಾಹ ನೀಡಿದರು. ನನ್ನ ಚಿತ್ರಗಳನ್ನು ನೋಡೋಕೆ ಇಡೀ ಬೆಂಗಳೂರಿನ ಜನ ಬರುತ್ತಿದ್ದರು. ಅಲ್ಲಿಯ ಕಲ್ಲುಗಳ ಮೇಲೆಲ್ಲ ಚಿತ್ರ ಬಿಡಿಸುತ್ತಿದ್ದೆ. ನಾನು ಹನುಮಂತನಗರದಲ್ಲೇ ಬೆಳೆದದ್ದರಿಂದ ಇದೇ ನನ್ನ ಮನೆ ಅನ್ನುವ ಪ್ರೀತಿ ಇದೆ. ಈಗಲೂ ಅಲ್ಲಿಗೆ ಹೋದಾಗ 10 ವರ್ಷ ಪ್ರಾಯ ಹಿಂದೆ ಹೋಗಿದೆ ಎನ್ನುವಷ್ಟು ಉಲ್ಲಾಸಿತನಾಗುತ್ತೇನೆ. 

ಆಗ ಇದ್ದದ್ದು ಒಂದೇ ಬಸ್ಸು. 10ನೇ ನಂಬರಿನದು. ಬಸ್ ನಿಲ್ದಾಣದಲ್ಲಿ ಜನ ತುಂಬಾ ಇದ್ರೆ ಗುಡ್ಡ ನೋಡಕ್ಕೆ ಬರ‌್ತಾರೆ ಅಂತ ಖುಷಿ ಪಡ್ತಿದ್ದೆವು. ಮಾಸ್ತಿ, ಕೆಂಗಲ್ ಹನುಮಂತಯ್ಯ... ಹೀಗೆ ಹಿರಿಯರೆಲ್ಲ ಬಂದು ಚಿತ್ರ ನೋಡುವಾಗ ಸಂತೋಷವಾಗುತ್ತಿತ್ತು.

ಆಮೇಲೆ ರಾಮ ಆಂಜನೇಯ ಅಪ್ಪಿಕೊಂಡಿರುವ ಚಿತ್ರ ಮಾಡಿಕೊಟ್ಟೆ. 75 ಅಡಿ ಎತ್ತರದ ಮೂರ್ತಿ ಮಾಡಬೇಕು ಅಂದುಕೊಂಡಿದ್ವಿ. ಆದರೆ 35 ಅಡಿ ಎತ್ತರದ ಮೂರ್ತಿ ಮಾಡಲಾಯಿತು. ಅಲ್ಲೊಂದು ದೊಡ್ಡ ಗುಡಿ ನಿರ್ಮಾಣ ಆಗಿರುವ ಕ್ರೆಡಿಟ್ ಕೆಂಗಲ್ ಹನುಮಂತಯ್ಯನವರಿಗೆ ಸಲ್ಲಬೇಕು.

ಆ ಗುಡ್ಡದ ಮೇಲೆ ಎತ್ತರದ ಕಾವಲು ಗೋಪುರ ನಿರ್ಮಾಣ ಮಾಡಬೇಕು. ಅಲ್ಲಿ ನಿಂತು ನೋಡಿದರೆ ಇಡೀ ಬೆಂಗಳೂರು ವೀಕ್ಷಿಸೊ ಥರ ಇರಬೇಕು. ಮತ್ತು ಅಲ್ಲಿರುವ ಕೆಂಪಾಂಬುಧಿ ಕೆರೆಗೆ ಬ್ರಿಡ್ಜ್ ಕಟ್ಟಿ ಕೆರೆಯಲ್ಲಿ ಬೋಟಿಂಗ್ ಎಲ್ಲಾ ಮಾಡಬೇಕು ಎಂಬ ಕಲ್ಪನೆ ಆವಾಗಲೇ ಇತ್ತು. ಆದರೆ ಆ ಯೋಜನೆ ಹಾಗೇ ಉಳಿದು ಹೋಗಿದೆ.

ಬಾಲಿವುಡ್‌ನ ‘ಆದ್ಮಿ’ ಚಿತ್ರದಲ್ಲಿ ಸಹಾಯಕ ಕಲಾ ನಿರ್ದೇಶಕನಾದೆ. ‘ಪ್ರಜಾಮತ’ ಪತ್ರಿಕೆಯಲ್ಲಿ ಕಲಾವಿದನಾಗಿ ಕೆಲಸ ನಿರ್ವಹಿಸುವ ಅವಕಾಶ ಸಿಕ್ಕಿತ್ತು. ಒಮ್ಮೆ ನಾಯಿಯ ಚಿತ್ರ ಬಿಡಿಸಬೇಕಿತ್ತು. ಆದರೆ ಎಷ್ಟೇ ಪ್ರಯತ್ನ ಪಟ್ಟರೂ ಆ ಚಿತ್ರ ನರಿಯಂತೆ ಆಗುತ್ತಿತ್ತು. ಹೊರಗೆ ನಾಯಿ ನೋಡಿಕೊಂಡು ಬರುವ ಎಂದು ಹೋದೆ. ಬರುವಷ್ಟರಲ್ಲಿ ನನ್ನ ಸೀಟಿನಲ್ಲಿ ನೋಟಿಸ್‌ ಇಟ್ಟಿದ್ದರು. ಅದನ್ನು ನೋಡಿ ಕೋಪ ಬಂತು, ಕಲಾವಿದನಿಗೆ ಬಂಧನ ಮಾಡಿದರೆ ಅಂದುಕೊಂಡ ಚಿತ್ರ ಮೂಡುವುದು ಸಾಧ್ಯವಿಲ್ಲ. ಹಾಗಾಗಿ ರಾಜೀನಾಮೆ ಪತ್ರವನ್ನೇ ಚಿತ್ರರೂಪಕ್ಕಿಳಿಸಿ ಹೊರಗೆ ಬಂದೆ.

1961ರಲ್ಲಿ  ಕ್ಯಾನ್ವಾಸ್‌ ಮುಂದೆ ನಿಂತು ಕವಿಯ ಕವಿತೆಯ ಲಯಕ್ಕೆ ಅನುಗುಣವಾಗಿ ಚಿತ್ರರಚಿಸುವ ಪ್ರಯತ್ನಕ್ಕೆ ಮುನ್ನುಡಿ ಬರೆದೆ. ಪ್ರಾರಂಭದಲ್ಲಿ ಇದಕ್ಕೆ ಹಲವರು ಅಣಕವಾಡಿದರು. ಆದರೆ ನಾನು ಜಗ್ಗಲಿಲ್ಲ. ಅದನ್ನು ಮುಂದುವರೆಸಿದೆ. ನಂತರ ಹಿಂದೆ ಅಣುಕಿಸಿದವರೇ ಕಾರ್ಯಕ್ರಮಕ್ಕೆ ಆಹ್ವಾನಿಸುತ್ತಿದ್ದರು.

1989ರಲ್ಲಿ ಮೊದಲ ಬಾರಿಗೆ 24 ಗಂಟೆಗಳವರೆಗೆ ಶತಾವಧಾನಿ ಆರ್‌. ಗಣೇಶ್‌ ಅವರ ಜೊತೆಗೆ ‘ಕಾವ್ಯ ಚಿತ್ರ’ ಜುಗಲ್‌ಬಂದಿ ಕಾರ್ಯಕ್ರಮ ನಡೆಸಿದೆ. ಇದಕ್ಕೆ ಒಳ್ಳೆಯ ಪ್ರತಿಕ್ರಿಯೆ ದೊರೆಯಿತು.

1961ರಲ್ಲಿ ಸದಾಶಿವ ನಗರದಲ್ಲಿ ಕಾಂಗ್ರೆಸ್‌ ಅಧಿವೇಶನ ನಡೆಯುತ್ತಿತ್ತು. ಮಹಾರಾಜರು ಉದ್ಘಾಟನೆ ಮಾಡುವ ಸಲುವಾಗಿ ಬಂದಿದ್ದರು. ನನ್ನ ಮಾವ ಶಿಲ್ಪ ಕಲಾವಿದರು. ಅವರ ಬಳಿ ಮಹಾರಾಜರ ಪರಿಚಯ ಮಾಡಿಕೊಡುವಂತೆ ತಿಳಿಸಿದೆ. ಅದಕ್ಕೆ ಅವರು ಸಿಗುವುದು ಕಷ್ಟವಿದೆ. ನೀನು ಒಂದು ಚಿತ್ರ ಬರೆದುಕೊಡು ಎಂದರು. ನಾನು ಉಗುರಿನಿಂದ ಅವರದೇ ಚಿತ್ರ ಮಾಡಿ ಕೊಟ್ಟೆ. ಅದನ್ನು ನೋಡಿ ಸಂತೋಷದಿಂದ ತಲೆ ಮೇಲೆ ಕೈಯಾಡಿಸಿ ಮುಂದೆ ಹೋದರು. ನಂತರ ತಮ್ಮ ಸೆಕ್ರೆಟರಿ ಬಳಿ 100 ರೂಪಾಯಿ ಕೊಟ್ಟು ಕಳುಹಿಸಿದರು.

‘ಅನುಭವಿಸಿ ಬರೆಯುವುದೇ ಆರ್ಟ್‌, ಇದ್ದುದ್ದನ್ನು ಇದ್ದ ಹಾಗೆ ಬರೆಯುವುದು ಚಾರ್ಟ್‌’ ಎಂಬ ಸಿದ್ಧಾಂತವನ್ನು ನಂಬಿದವನು ನಾನು. ಕಲಾಕೃತಿ ಹೃದಯದಿಂದ ಹೊಮ್ಮಬೇಕು. ‘ಮನಸ್ಸನ್ನು ಟ್ಯೂನ್‌ ಮಾಡು, ಪ್ರಕೃತಿಯ ಅನುಸಂಧಾನವಾಗುತ್ತದೆ. ಕಲೆಯ ಕಣ್ಣು ಅದರಲ್ಲಿ ಬೆರೆಯುತ್ತದೆ’ ಎಂದಿದ್ದರು ದೇವಪ್ರಸಾದ್‌ ರಾಯಚೌದ್ರಿ. ಹಾಗಾಗಿ ಕಲೆಗೆ ಪ್ರೇರಣೆ ನೀಡುವ ಪ್ರತಿಯೊಂದು ವಸ್ತುವನ್ನೂ ಮೊದಲು ಅನುಭವಿಸುತ್ತೇನೆ.

ಅನಿಸಿಕೆಗಳನ್ನು ಮಂಥನ ಮಾಡಿದಾಗ ಸಿಗುವ ರೂಪವನ್ನು ಚಿತ್ರಕ್ಕೆ ಇಳಿಸುತ್ತಿದ್ದೆ. ಜಗದೀಶ್‌ಚಂದ್ರ ಬೋಸ್‌ ಪುಸ್ತಕ ಓದಿದಾಗ ಪರಿಸರದ ಚಿತ್ರ ಬಿಡಿಸಲು ಆಸಕ್ತಿ ಬೆಳೆಯಿತು. ಅದಕ್ಕೂ ಮುಂಚೆ ಭಾರತ ಪ್ರವಾಸದಲ್ಲಿ ಸರ್ವಪಲ್ಲಿ ರಾಧಾಕೃಷ್ಣ ಭೇಟಿ ಮಾಡಿದ್ದೆ. ಅವರಿಗೆ ಚಿತ್ರ ಬರೆದು ತೆಗೆದುಕೊಂಡು ಹೋಗಿದ್ದೆ. ‘ಸಾವಿರ ಚಿತ್ರ ಬರಿ. ಅದು ಆಗಿಲ್ಲವೆಂದರೆ ನೂರು ಚಿತ್ರ ಬಿಡಿಸು. ಅದೂ ಆಗಿಲ್ಲವೆಂದರೆ ಜನಜೀವನದ ಮೇಲೆ ಪರಿಣಾಮ ಆಗುವ ಒಂದು ಚಿತ್ರ ಬರೆ. ದೇವರು ಒಳ್ಳೆಯದು ಮಾಡಲಿ’ ಎಂದಿದ್ದರು. ನನಗೆ ಆ ಪ್ರವಾಸ ಸಾರ್ಥಕ ಎನಿಸಿತು.

ನಾನು ಕೋಲ್ಕತ್ತದಲ್ಲಿದ್ದಾಗ ಕುವೆಂಪು ಪತ್ರ ಬರೆದಿದ್ದರು. ನೇತಾಜಿ ಸುಭಾಷ್‌ಚಂದ್ರ ಅವರನ್ನು ನೆನೆಸಿಕೊ. ಸಭೆ, ಸಮಾರಂಭದಲ್ಲಿ ಕೊ‌ಚ್ಚಿ ಹೋಗಬೇಡ, ನಮ್ರತೆ ಬಿಡಬೇಡ. ಸ್ವಾಮಿ ವಿವೇಕಾನಂದ ಮೆಟ್ಟಿದ ಭೂಮಿಯನ್ನು ಸ್ಪರ್ಶಿಸಿ ಧನ್ಯನಾಗು ಎಂದಿದ್ದರು. ಹೀಗೆ ಹಿರಿಯರು, ಸಾಹಿತಿಗಳಿಂದ ಸಿಕ್ಕ ಮಾರ್ಗದರ್ಶನಗಳು ಪ್ರಭಾವ ಬೀರಿತು.

ಇಷ್ಟು ದಿನದ ನನ್ನ ಜೀವನವನ್ನು ಹಿಂತಿರುಗಿ ನೋಡಿದಾಗ ಖುಷಿ ಎನಿಸುತ್ತದೆ. ಜೀವನದಲ್ಲಿ ಸಾಕಷ್ಟು ಕಷ್ಟಗಳಿದ್ದರೂ, ಕಲಾಸೃಷ್ಟಿಯ ಮುಂದೆ ಅವುಗಳೆಲ್ಲ ಗೌಣವೆನ್ನಿಸುತ್ತಿತ್ತು. ಇಪ್ಪತ್ತೈದನೇ ವಯಸ್ಸಿಗೆ ಅಕ್ಕನ ಮಗಳು ಶಾಂತ ಜೊತೆಗೆ ವಿವಾಹವಾಯಿತು. ಹೆಸರಿಗೆ ತಕ್ಕಂತೆ ಶಾಂತೆ ಅವಳು.

ಪ್ರಕೃತಿಯೇ ನನ್ನ ಕಲೆಗೆ ಪ್ರೇರಣೆ. ಎಷ್ಟು ಚಿತ್ರ ಬಿಡಿಸಿದರೂ ದಾಹ ತೀರುವುದಿಲ್ಲ. ನನ್ನ ಚಿತ್ರಗಳಿಗೆ ರೂಪು ಸಿಕ್ಕಿದೆ ಆದರೆ ತೃಪ್ತಿಯಾಗುವ ಕಲಾಕೃತಿ ಇಲ್ಲಿಯವರೆಗೂ ಬಂದಿಲ್ಲ. ಅದು ಯಾವಾ ಬರುತ್ತದೋ ಗೊತ್ತಿಲ್ಲ. ಅದು ಬಂದಾಗಷ್ಟೇ ನನಗೆ ಸಾರ್ಥಕ್ಯ.

**

ಚಿತ್ರದಲ್ಲರಳಿದ ಭುವನೇಶ್ವರಿ

ಕನ್ನಡ ರಾಜ್ಯೋತ್ಸವ, ಕನ್ನಡ, ಕರ್ನಾಟಕಕ್ಕೆ ಸಂಬಂಧಿಸಿದ ಹಲವು ಚಳವಳಿಗಳಲ್ಲಿ ಭುವನೇಶ್ವರಿ ಚಿತ್ರ ಕಾಣಿಸುತ್ತದೆ. ಈ ಚಿತ್ರ ಬರೆಯಲು ಒಂದು ತಿಂಗಳು ಬೇಕಾಯಿತು. ಇದನ್ನು ರಚಿಸಿದವರು ಬಿ.ಕೆ.ಎಸ್‌. ವರ್ಮಾ ಎನ್ನುವುದು ಬಹುತೇಕರಿಗೆ ತಿಳಿದಿಲ್ಲ. ಈ ಚಿತ್ರದಲ್ಲಿ ಇವರ ಹೆಸರೂ ನಮೂದಾಗಿಲ್ಲ. ‘ಈ ಚಿತ್ರವನ್ನು ಬರೆಸಿದವರು ಸಾ.ಶಿ. ಮರುಳಯ್ಯ ಅವರು. ಇತರ ಕ್ಷೇತ್ರಗಳ ಕಲಾವಿದರಿಗೆ ಹೋಲಿಸಿದರೆ ಚಿತ್ರ ಕಲಾವಿದರಿಗೆ ಅಷ್ಟೊಂದು ಪ್ರಚಾರ ಸಿಗುತ್ತಿಲ್ಲ. ಯಾವುದೇ ಒಂದು ಕವಿಯ ಸಾಲು ತೆಗೆದುಕೊಂಡರೆ ಅವರ ಹೆಸರು ಹಾಕುತ್ತೇವೆ. ಆದರೆ ಚಿತ್ರ ಉಪಯೋಗಿಸಿಕೊಂಡರೆ ಕಲಾವಿದರ ಹೆಸರು ಹಾಕುವುದಿಲ್ಲ. ಇದರಿಂದಾಗಿ ಅನೇಕ ಕಲಾವಿದರು ಬೆಳಕಿಗೆ ಬರಲು ಸಾಧ್ಯವಾಗಿಲ್ಲ’ ಎನ್ನುತ್ತಾರೆ ವರ್ಮಾ.

**

ಜನನ: 5–5–1949

ಜನ್ಮಸ್ಥಳ: ಬುಕ್ಕಸಾಗರ, ಅತ್ತಿಬೆಲೆ ತಾಲ್ಲೂಕು

ತಾಯಿ: ಬಿ.ಎಸ್‌. ಜಯಲಕ್ಷ್ಮಿ

ತಂದೆ: ಕೃಷ್ಣಮಾರ್ಚಾಯರು

ಪತ್ನಿ: ಶಾಂತಿ

ಮಕ್ಕಳು: ಎರಡು ಹೆಣ್ಣು, ಒಂದು ಗಂಡು

ಪ್ರಶಸ್ತಿಗಳು

ರಾಜ್ಯೋತ್ಸವ ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ, ಕರ್ನಾಟಕ ಕಲಾಭೂಷಣ ಪ್ರಶಸ್ತಿ, ವಿದ್ಯಾರತ್ನ ಪ್ರಶಸ್ತಿ, ಶ್ರೀ ಜಯಚಾಮರಾಜೇಂದ್ರ ಒಡೆಯರ್‌ ಪ್ರಶಸ್ತಿ, ಲಲಿತಾಕಲಾ ಅಕಾಡೆಮಿ ಪ್ರಶಸ್ತಿ, ದಸರಾ ಲಲಿತಕಲಾ ವಿಭಾಗದ ಪ್ರಶಸ್ತಿ, ಗೋಕರ್ಣ ಸಂಸ್ಥಾನದ ಸಾರ್ವಭೌಮ ಪ್ರಶಸ್ತಿ, ಇನ್ನೂ ಹಲವಾರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT