ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆನಪುಗಳ ಭಾವಬುತ್ತಿ ‘ಮೆಟೀರಿಯಲ್ ಮೆಮರಿ'

Last Updated 29 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

* ಕಲಾವತಿ ಬೈಚಬಾಳ

ಅಲ್ಲಿ ಕಲಾವಿದರ ಸಿಹಿ ಮಧುರ ನೆನಪುಗಳ ಭಾವಬುತ್ತಿ ಚಿತ್ರಕಲೆ, ಛಾಯಾಚಿತ್ರ, ಮೆಟಲ್‌, ಬರವಣಿಗೆ ರೂಪದಲ್ಲಿ ನೋಡುಗರತ್ತ ಕೈಬೀಸುತ್ತಾ ನಿಂತಿದ್ದವು.

ಸುಮುಖ ಗ್ಯಾಲರಿಯಲ್ಲಿ ನಡೆಯುತ್ತಿರುವ ಈ ಕಲಾ ಪ್ರದರ್ಶನದ ಹೆಸರು ‘ಮೆಟೀರಿಯಲ್‌ ಮೆಮೋರಿ‘. ವಿಭಿನ್ನ ಭೌಗೋಳಿಕ ಹಿನ್ನೆಲೆಯಿಂದ ಬಂದ ಬೆಂಗಳೂರಿನ ಸೃಷ್ಟಿ ಕಲಾ, ವಿನ್ಯಾಸ ಮತ್ತು ತಂತ್ರಜ್ಞಾನ ಸಂಸ್ಥೆಯ ಸಮಕಾಲೀನ ಕಲಾ ಪದವೀಧರರಾದ ಸನಿಕಾ ದೇಶ‍ಪಾಂಡೆ, ಮಧುಲಿಕಾ ಮೋಹನ್‌, ಮರಿಯಾ ಶಕೀರ್‌, ಬರ್ಖಾ ಗುಪ್ತಾ ಮತ್ತು ಮಹಿಕಾ ರಾವ್‌ ಚಿತ್ರ ಪ್ರದರ್ಶನಗೊಳ್ಳಿಲಿದೆ.

'ಮೆಟೀರಿಯಲ್ ಮೆಮೊರಿ' ನಾಲ್ಕು ತಿಂಗಳ ಪ್ರಬಂಧ ಯೋಜನೆಯ ಸಮಯದಲ್ಲಿ ರಚಿಸಲ್ಪಟ್ಟಿದೆ. ಇದು ಸ್ಮರಣೆ, ಭಾಷೆ, ತತ್ತ್ವಶಾಸ್ತ್ರ, ಜ್ಞಾನಗ್ರಹಣ ಪ್ರಕ್ರಿಯೆಯ ಒಂದು ಅಂತರ್‌ಶಿಕ್ಷಣದ ಕೃತಿಗಳ ಸರಣಿಯೂ ಹೌದು. ಕೈಗಾರಿಕೀಕರಣಗೊಂಡ ನಾಗರೀಕತೆಯ ಇಂದಿನ ದಿನಗಳಲ್ಲಿ ಪ್ರಸ್ತುತತೆಯನ್ನು ಪಡೆಯುವ ಸ್ಥಳ ಮತ್ತು ಸ್ವಯಂ ಹಾಗೂ ಅಂತರ್ಗತ ಸ್ವಭಾವದ ನಡುವಿನ ಅಂತರವನ್ನು ಕಡಿಮೆ ಮಾಡುವ ಮೂಲಕ ಹಿಂದಿನ ಅನುಭವಗಳನ್ನು ಇಲ್ಲಿ ಕಂಡುಕೊಳ್ಳಬಹುದು.

ಸನಿಕಾ ದೇಶ‍ಪಾಂಡೆ–ದೃಶ್ಯ ಕಲಾವಿದೆ. ಇವರ ಕಲಾ ಅಭ್ಯಾಸದ ಉದ್ದಕ್ಕೂ ವಿಶಾಲ ವಿಚಾರಗಳು ಮತ್ತು ಅಸ್ತಿತ್ವದಲ್ಲಿರುವ ಒಂದು ವಿಭಿನ್ನ ದೃಷ್ಟಿಕೋನದಿಂದ ವಿಷಯಗಳನ್ನು ನೋಡುವ ಬಗೆ ಇವರ ರೇಖಾಚಿತ್ರಗಳಲ್ಲಿ ಸೆರೆಯಾಗಿವೆ. ನಾವು ಅನುಭವಿಸುವ ಪ್ರತಿಯೊಂದೂ ವಸ್ತುವಿನಿಂದಲೂ ಒಂದೊಂದು ಅನುಭವ ಪಡೆಯುತ್ತೇವೆ. ಅಮೂರ್ತ ಸೃಷ್ಟಿಯ ಪರಿಕಲ್ಪನೆಯಲ್ಲಿ ಆಸಕ್ತಿ ಹೊಂದಿರುವ ಇವರು ತಮ್ಮದೇ ಆದ ವಿಶಿಷ್ಟ ರೇಖಾಚಿತ್ರ ಶೈಲಿಯನ್ನು ಹೊಂದಿದ್ದಾರೆ.

ದೆಹಲಿಯ ಮಧುಲಿಕಾ ಮೋಹನ್‌ (ಕಲ್ಪನಾತ್ಮಕ ಚಿತ್ರ ಕಲಾವಿದೆ ಮತ್ತು ಬರಹಗಾರ್ತಿ) ಜೀವನದ ಪ್ರತಿ ಕ್ಷಣಗಳು, ನಮ್ಮ ಹಿರಿಯರ ಜೀವನ, ಬಾಲ್ಯ, ಆಟವಾಡಿದ ದಿನಗಳು, ಬಳಸಿದ ವಸ್ತುಗಳು, ತುಂಟಾಟ, ಬೆಳೆದು ಬಂದ ರೀತಿ ಎಲ್ಲವನ್ನು ‌‌‌ನೆನಪಿಸುತ್ತವೆ. ನೆನಪುಗಳು ಬತ್ತದ ಚಿಲುಮೆಗಳು, ಆಗಾಗ ಅವು ಮರುಕಳಿಸುತ್ತಿರುತ್ತವೆ. ವಾಸ್ತವ ಜೀವನದ ಮಡಿಲಿಗೆ ನೆನಪುಗಳ ಬುತ್ತಿ ಬಿಚ್ಚಿಟ್ಟಿರುವುದನ್ನು ಇವರ ಛಾಯಾಚಿತ್ರಗಳಲ್ಲಿ ನೋಡಬಹುದು.

ಮರಿಯಾ ಶಕೀರ್‌ (ನಾಗ್‌ಪುರ), ಅವರ ಕಲಾಕೃತಿಗಳು ನಮ್ಮ ಸಂಸ್ಕೃತಿ, ಸಂಪ್ರದಾಯ ನಮ್ಮ ಪೀಳಿಗೆಯ ಬಗ್ಗೆ ವಿವರಿಸುತ್ತವೆ. ಸಂಬಂಧಗಳು ಕಳಚಿ ಬೀಳುತ್ತಿರುವ ಇಂದಿನ ಕಾಲಮಾನದಲ್ಲಿ ಅವುಗಳನ್ನು ಮತ್ತೆ ಗಟ್ಟಿಗೊಳಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಮರೆಯದ ಸಂಬಂಧಗಳ ಸರಪಳಿಯ ಅನುಭವ ಎಲ್ಲಕ್ಕೂ ಮೀರಿದ್ದು ಎನ್ನುವ ಭಾವ ಅವರ ಲೇಸರ್‌ ಕಟ್‌ ಟೆಕ್ಸ್ಟ್‌ ಚಿತ್ರಗಳ ಮೂಕ ವೇದನೆಯಲ್ಲಿ ಕಾಣಬಹುದು.

ದೆಹಲಿಯವರಾದ ಬರ್ಖಾ ಗುಪ್ತಾ, ನಿಸರ್ಗದ ಪ್ರತಿಯೊಂದು‌ ದೃಶ್ಯಗಳನ್ನು ಅನುಭವಿಸುವುದೇ ಒಂದು ಕಲೆ ಎನ್ನುವ ಮನೋಭಾವದವರು. ಮನುಷ್ಯ ಯಾವಾಗಲೂ ಪ್ರಕೃತಿ ಹೇಳಿ ಕೊಡುವ ಪಾಠಗಳನ್ನು ಕಲಿಯುವ ಕಲಿಕಾ ಜೀವಿಯಾಗಿರಬೇಕು. ಹೊಸ ಜನರು, ಸ್ಥಳಗಳು, ಪರಿಶೋಧನೆಗಳಿಂದ ಹೊಸ ಅನುಭವ ಪಡೆಯಬೇಕು. ಆದರೆ ನಾವಿಂದು ನಮ್ಮ ಪ್ರಕೃತಿ ಸೌಂದರ್ಯವನ್ನು ಹಾಳುಮಾಡುತ್ತಿದ್ದೇವೆ. ಮರ ಗಿಡಗಳು ಬೆಳೆಯಲು ಸಾಕಷ್ಟು ಜಾಗ ನೀಡದೆ ಅವನ್ನು ಬಲವಂತಾಗಿ ಇಕ್ಕಟ್ಟಿಗೆ ನೂಕುತ್ತಿದ್ದೇವೆ. ದಿನೇ ದಿನೇ ರೂಪುಗೊಳ್ಳುತ್ತಿರುವ ಗಗನಚುಂಬಿ ಕಟ್ಟಡಗಳ ಸರಮಾಲೆಯಲ್ಲಿ ಅವುಗಳ ಹನನವಾಗುತ್ತಿದೆ. ಪ್ರಕೃತಿ ನಮ್ಮ ಜೀವನದ ಐಶ್ವರ್ಯ ಎಂದು ಬಿಂಬಿಸುವ ಇವರ ವಿಭಿನ್ನ ಆಲೋಚನೆಗಳನ್ನು ಅವರ ರೋಟ್‌ನಿಂಗ್‌ ಪೆನ್‌ ಆನ್‌ ಪೇಪರ್‌ ಚಿತ್ರಕಲೆಯಲ್ಲಿ ಕಾಣಬಹುದು. ಮಿಶ್ರ ಮಾಧ್ಯಮ ಕಲಾಕೃತಿಗಳ ದೇಹ ಸೃಷ್ಠಿ ಇವರ ಚಿತ್ರಕಲೆಯ ಮೂಲ ಗುರಿ. ‌

ಬೆಂಗಳೂರಿನ ಛಾಯಾಚಿತ್ರ ಕಲಾವಿದೆ ಮಹಿಕಾ ರಾವ್‌, ಛಾಯಾಗ್ರಹಣವನ್ನು ಭಾವನೆ, ಕಲ್ಪನೆ ಮತ್ತು ವಾಸ್ತವಗಳನ್ನು ವ್ಯಕ್ತಪಡಿಸುವ ತೀಕ್ಷ್ಣತೆಯ ಒಂದು ಮಾಧ್ಯಮವನ್ನಾಗಿ ಬಳಸಿಕೊಂಡು, ಇದರ ಮೂಲಕ ಜೀವನದಲ್ಲಿ ಧನಾತ್ಮಕ ಯೋಚನೆಗಳನ್ನು ಕಂಡುಕೊಳ್ಳುವ, ನೆನಪುಗಳ ಹಿಂದಿರುವ ಭಾವನೆಯನ್ನು ಅರಿಯುವ ಪ್ರಯತ್ನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ ಎನ್ನುವುದು ಅವರ ಛಾಯಾಚಿತ್ರಗಳಲ್ಲಿ ಎದ್ದು ಕಾಣುತ್ತದೆ.

***

‘ಮೆಟೀರಿಯಲ್ ಮೆಮೊರಿ’ (ಆ್ಯನ್‌ ಎಕ್ಸ್‌ಪ್ರೆಷನ್‌ ಆಫ್‌ ಇಂಡಿವಿಜ್ಯುವಲ್‌ ನೆರೆಟೀವ್‌) ಕಲಾ ಪ್ರದರ್ಶನ: ಸ್ಥಳ– ಸುಮುಖ ಆರ್ಟ್ ಗ್ಯಾಲರಿ, 24/10 ಬಿಟಿಎಸ್‌ ಬಸ್‌ ಡಿಪೋ ಆರ್‌ಡಿ, ವಿಲ್ಸನ್‌ ಗಾರ್ಡ್‌ನ್‌ ಹತ್ತಿರ, ಚಿತ್ರಕಲಾ ಪ್ರದರ್ಶನ ನ.4ರವರೆಗೆ ನಡೆಯಲಿದೆ. ಸಮಯ: ಪ್ರತಿದಿನ ಬೆಳಿಗ್ಗೆ 10.30ರಿಂದ ಸಂಜೆ 6ರವರೆಗೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT