‘ಟಿಪ್ಪು ವಸಾಹತು ವಿಸ್ತರಣೆ ವಿರೋಧಿ’

ಗುರುವಾರ , ಜೂನ್ 20, 2019
31 °C
ಸ್ವಾತಂತ್ರ್ಯ ಹೋರಾಟಗಾರನೂ ಅಲ್ಲ, ಪ್ರಜಾಪೀಡಕನೂ ಅಲ್ಲ: ಇತಿಹಾಸ ತಜ್ಞರ ಅಭಿಪ್ರಾಯ

‘ಟಿಪ್ಪು ವಸಾಹತು ವಿಸ್ತರಣೆ ವಿರೋಧಿ’

Published:
Updated:
‘ಟಿಪ್ಪು ವಸಾಹತು ವಿಸ್ತರಣೆ ವಿರೋಧಿ’

ನವದೆಹಲಿ: ಟಿಪ್ಪು ಸುಲ್ತಾನ್‌ ಸ್ವಾತಂತ್ರ್ಯ ಹೋರಾಟಗಾರನೂ ಅಲ್ಲ ಪ್ರಜಾಪೀಡಕನೂ ಅಲ್ಲ. ಬ್ರಿಟಿಷರ ವಸಾಹತು ವಿಸ್ತರಣೆಯ ವಿರೋಧಿ ಎಂದು ಮಾತ್ರ ಆತನನ್ನು ಪರಿಗಣಿಸಬೇಕು ಇತಿಹಾಸ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

‘ಟಿಪ್ಪು ಸುಲ್ತಾನ್‌ನನ್ನು ಪ್ರಜಾಪೀಡಕ ಎಂದು ಕರೆಯುವುದು ಸರಿಯಲ್ಲ. ಅದರ ಜತೆಯಲ್ಲೇ ಆತನನ್ನು ಸ್ವಾತಂತ್ರ್ಯ ಹೋರಾಟಗಾರ ಎಂದೂ ಕರೆಯಲಾಗದು. ಏಕೆಂದರೆ ಆತ ಸ್ವಾತಂತ್ರ್ಯಕ್ಕಾಗಿ ಯಾರ ವಿರುದ್ಧವೂ ದಂಗೆ ಎದ್ದಿರಲಿಲ್ಲ. ಆದರೆ ಬ್ರಿಟಿಷರಿಗೆ ಪ್ರತಿರೋಧ ಒಡ್ಡಿದವರಲ್ಲಿ ಟಿಪ್ಪು ಅತ್ಯಂತ ಪ್ರಮುಖ ವ್ಯಕ್ತಿ’ ಎಂದು ಖ್ಯಾತ ಇತಿಹಾಸ ತಜ್ಞ ಇರ್ಫಾನ್ ಹಬೀಬ್, ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಟಿಪ್ಪುವನ್ನು ಸಾಮೂಹಿಕ ಅತ್ಯಾಚಾರಿ ಮತ್ತು ಕ್ರೂರ ಕೊಲೆಗಡುಕ ಎಂದು ಕರೆಯುವುದೂ ಸರಿಯಲ್ಲ ಎಂದು ಹಬೀಬ್ ಅಭಿಪ್ರಾಯಪಟ್ಟಿದ್ದಾರೆ. ‘ಬ್ರಿಟಿಷರೂ ಟಿಪ್ಪುವನ್ನು ಹಾಗೆ ಕರೆದಿರಲಿಲ್ಲ’ ಎಂದು ಹೇಳಿದ್ದಾರೆ.

‘ಆತ ಬ್ರಿಟಿಷರ ವಿರುದ್ಧ ಹೋರಾಡಿದ ಎಂಬುದಷ್ಟೇ ಮುಖ್ಯವಲ್ಲ. ತನ್ನ ಸೇನೆಯನ್ನು ಆಧುನೀಕರಿಸಿದ್ದ, ಹೊಸ ಶಸ್ತ್ರಗಳನ್ನು ಆವಿಷ್ಕರಿಸಿದ್ದ. ಇದರಿಂದ ಬ್ರಿಟಿಷ್ ಸೇನೆಗೆ ಭಾರಿ ಪ್ರಮಾಣದ ಹಾನಿ ಮಾಡಲು ಸಾಧ್ಯವಾಗಿತ್ತು. ಕೊಡಗು ಮತ್ತು ಮಲಬಾರ್‌ನಲ್ಲಿ ಆತ ತನ್ನ ವಿರುದ್ಧ ಬಂಡೆದ್ದವರನ್ನು ಹತ್ತಿಕ್ಕಿದ್ದು ನಿಜ. ಬಂಡಾಯಗಾರರನ್ನು ಸೆರೆ ಹಿಡಿದಾಗ ಅವರನ್ನು ಕೊಲ್ಲುವ ಬದಲು ಮತಾಂತರಗೊಳಿಸಿದ್ದ. ಆದರೆ ಆತ ಹಲವು ಹಿಂದೂ ದೇವಾಲಯಗಳಿಗೆ ದೇಣಿಗೆ ನೀಡಿದ್ದ ಎಂಬುದನ್ನೂ ಪರಿಗಣಿಸಬೇಕು’ ಎಂದು ಹಬೀಬ್ ಪ್ರತಿಪಾದಿಸಿದ್ದಾರೆ.

‘ಬ್ರಿಟಿಷರ ವಸಾಹತು ವಿಸ್ತರಣೆಯನ್ನು ಟಿಪ್ಪು ತಡೆದ ಎಂಬುದಷ್ಟೇ ಮುಖ್ಯ. ಆತ ಏಕೆ ಹೋರಾಡಿದ? ಹೇಗೆ ಹೋರಾಡಿದ? ಮತ್ತು ಆತನ ಗುರಿ ಯಾವುದಾಗಿತ್ತು ಎಂಬುದು ಮೂರು ಭಿನ್ನ ಪ್ರಶ್ನೆಗಳು ಮತ್ತು ಬಹಳ ದೊಡ್ಡ ಪ್ರಶ್ನೆಗಳು’ ಎಂದು ದೆಹಲಿಯ ಸೇಂಟ್ ಸ್ಟೀಫನ್ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ರೋಹಿತ್ ವಾಂಚೂ ಪ್ರತಿಪಾದಿಸಿದ್ದಾರೆ. ‘ಈ ವಿಚಾರವನ್ನು ಕೋಮುವಾದದ ದೃಷ್ಟಿಕೋನದಿಂದ ನೋಡಲಾಗುತ್ತಿದೆ. ಇತಿಹಾಸವನ್ನು ಹೀಗೆ ಯಾವುದೋ ಒಂದು ಸೀಮಿತ ದೃಷ್ಟಿಕೋನದಿಂದ ನೋಡಬಾರದು’ ಎಂದು ಅದೇ ಕಾಲೇಜಿನ ಇತಿಹಾಸ ಪ್ರಾಧ್ಯಾಪಕಿ ತಸ್ನೀಮ್ ಸುಹ್ರಾವರ್ದಿ ಅಭಿಪ್ರಾಯಪಟ್ಟಿದ್ದಾರೆ.

‘ಟಿಪ್ಪು ಬ್ರಿಟಿಷರ ಎದುರಾಳಿ ಎಂದೇ ಜನಜನಿತ. ಬ್ರಿಟಿಷರ ವಿರುದ್ಧ ಹೋರಾಡಲು ಫ್ರೆಂಚರ ಜತೆ ಕೈಜೋಡಿಸಿದ್ದ. ಆತ ಎಂತಹ ಹೋರಾಟಗಾರ ಎಂದರೆ ಸ್ವತಃ ಆರ್ಥರ್ ವೆಲ್ಲೆಸ್ಲಿಯೇ ಟಿಪ್ಪು ಎದುರು ಹೋರಾಡಿದ್ದ. ಟಿಪ್ಪುವನ್ನು ರಾಷ್ಟ್ರೀಯವಾದಿ ಎಂದು ಬಿಂಬಿಸುವುದು ತರವಲ್ಲ. ಬದಲಿಗೆ ಆತ ಉತ್ತಮ ಹೋರಾಟಗಾರ ಮತ್ತು ತನ್ನ ಕಾಲದ ಚತುರ ಆಡಳಿತಗಾರ ಎಂದೇ ನೋಡಬೇಕು’ ಎಂದು ಜವಾಹರ ಲಾಲ್ ನೆಹರೂ ವಿಶ್ವವಿದ್ಯಾಲಯದ ಇತಿಹಾಸ ಅಧ್ಯಯನ ಕೇಂದ್ರದ ಪ್ರಾಧ್ಯಾಪಕಿ ನೋನಿಕಾ ದತ್ತಾ ಹೇಳಿದ್ದಾರೆ.

* ಭಾರತೀಯರು ವಸಾಹತು ವಿರೋಧಿ ಹೋರಾಟವನ್ನು ಸಂಭ್ರಮಿಸುವುದಾದರೆ, ಟಿಪ್ಪು ಸುಲ್ತಾನ್‌ನನ್ನೂ ಸಂಭ್ರಮಿಸಲೇಬೇಕು

–ಇರ್ಫಾನ್ ಹಬೀಬ್, ಇತಿಹಾಸ ತಜ್ಞ

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry