ನಾಲ್ಕು ಚಿನ್ನಕ್ಕೆ ಮುತ್ತಿಕ್ಕಿದ ಕರ್ನಾಟಕ

ಬುಧವಾರ, ಜೂನ್ 26, 2019
28 °C
ಅಗ್ರಸ್ಥಾನಕ್ಕೇರಿದ ಕರ್ನಾಟಕ

ನಾಲ್ಕು ಚಿನ್ನಕ್ಕೆ ಮುತ್ತಿಕ್ಕಿದ ಕರ್ನಾಟಕ

Published:
Updated:
ನಾಲ್ಕು ಚಿನ್ನಕ್ಕೆ ಮುತ್ತಿಕ್ಕಿದ ಕರ್ನಾಟಕ

ಜಮಖಂಡಿ: ಕರ್ನಾಟಕದ ವಿಶ್ವನಾಥ ಗಡಾದ ಮತ್ತು ದಾನಮ್ಮ ಚಿಚಖಂಡಿ ಅವರು ಇಲ್ಲಿ ನಡೆಯುತ್ತಿರುವ 22ನೇ ರಾಷ್ಟ್ರೀಯ ಸೈಕ್ಲಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಭಾನುವಾರ ತಲಾ ಒಂದು ಚಿನ್ನದ ಪದಕ ಗೆದ್ದರು. ಎರಡನೇ ದಿನ ಆತಿಥೇಯರಿಗೆ ಒಟ್ಟು ನಾಲ್ಕು ಚಿನ್ನದ ಪದಕಗಳು ಒಲಿದವು.

ರಾಷ್ಟ್ರೀಯ ಸೈಕ್ಲಿಂಗ್ ಫೆಡರೇಷನ್‌ ಮತ್ತು ರಾಜ್ಯ ಸೈಕ್ಲಿಂಗ್‌ ಸಂಸ್ಥೆಯ ಆಶ್ರಯದಲ್ಲಿ ನಡೆಯುತ್ತಿರುವ ಚಾಂಪಿಯನ್‌ಷಿಪ್‌ನ ವೈಯಕ್ತಿಕ ಸ್ಪರ್ಧೆಯ 10 ಕಿ.ಮೀ ಬಾಲಕರ ಹಾಗೂ ಬಾಲಕಿಯರ ಜೂನಿಯರ್ ವಿಭಾಗಗಳಲ್ಲಿ ಕ್ರಮವಾಗಿ ವಿಶ್ವನಾಥ ಹಾಗೂ ದಾನಮ್ಮ ಪದಕದ ಸಾಧನೆ ಮಾಡಿದರು.

ಮೊದಲ ದಿನ ಮಹಾರಾಷ್ಟ್ರದ ಸ್ಪರ್ಧಿಗಳ ಪ್ರಾಬಲ್ಯದ ಎದುರು ಮಂಕಾಗಿದ್ದ ಅತಿಥೇಯರು ಎರಡನೇ ದಿನ ಸೈಕಲ್‌ ವೇಗ ಹೆಚ್ಚಿಸಿಕೊಂಡರು. ವೈಯಕ್ತಿಕ ವಿಭಾಗದಲ್ಲಿ ಎರಡು ಚಿನ್ನ, ಒಂದು ಕಂಚು ಹಾಗೂ ತಂಡ ವಿಭಾಗದಲ್ಲಿ ಎರಡು ಚಿನ್ನದ ಪದಕಗಳು ರಾಜ್ಯದ ಸೈಕ್ಲಿಸ್ಟ್‌ಗಳ ಪಾಲಾದವು. ಮೊದಲ ಎರಡು ದಿನಗಳ ಅಂತ್ಯಕ್ಕೆ ಕರ್ನಾಟಕ ಆರು ಚಿನ್ನ, ಮೂರು ಬೆಳ್ಳಿ ಹಾಗೂ ಮೂರು ಕಂಚು ಜಯಿಸಿ ಪದಕದ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.

ಸೀನಿಯರ್‌ ತಂಡಕ್ಕೆ ನಿರಾಸೆ: ಪುರುಷರ ಹಾಗೂ ಮಹಿಳೆಯರ ಎಲೀಟ್‌ ವಿಭಾಗದಲ್ಲಿ ರಾಜ್ಯ ತಂಡ ನಿರಾಸೆ ಅನುಭವಿಸಿತು. ನವೀನ್‌ ಜಾನ್‌ ನೇತೃತ್ವದ ಪುರುಷರ ತಂಡ ಐದನೇ ಸ್ಥಾನ ಪಡೆದರೆ, ಏಷ್ಯನ್‌ ಚಾಂಪಿಯನ್‌ಷಿಪ್ ಬೆಳ್ಳಿ ಪದಕ ವಿಜೇತೆ ಮೇಘಾ ಗುಗಾಡ ನೇತೃತ್ವದ ಮಹಿಳೆಯರ ತಂಡ ಕೂಡ ಹಿನ್ನಡೆ ಅನುಭವಿಸಿತು. ರೈಲ್ವೇಸ್ ತಂಡ ಈ ಎರಡೂ ವಿಭಾಗದಲ್ಲಿ ಚಿನ್ನ ತನ್ನದಾಗಿಸಿಕೊಂಡಿತು.

ಪುರುಷರ 40 ಕಿ.ಮೀ. ಜೂನಿಯರ್‌ ವಿಭಾಗದಲ್ಲಿ ವೆಂಕಪ್ಪ ಕೆಂಗಲಗುತ್ತಿ, ಸಂಗೂ ನಾಯಕ್, ರಾಜು ಬಾಟಿ ಹಾಗೂ ಜಿ.ಟಿ.ಗಂಗರಡ್ಡಿ ಒಳಗೊಂಡ ಕರ್ನಾಟಕ ತಂಡ ಮೊದಲ ಸ್ಥಾನ ಪಡೆಯಿತು. ನಿಗದಿತ ಗುರಿಯನ್ನು ತಂಡ 50 ನಿಮಿಷ. 52.019 ಸೆಕೆಂಡುಗಳಲ್ಲಿ ಮುಟ್ಟಿತು. ಮಹಿಳೆಯರ 30 ಕಿ.ಮೀ ಜೂನಿಯರ್ ವಿಭಾಗದಲ್ಲಿ ಮೇಘಾ ಗುಗಾಡ, ರಾಜೇಶ್ವರಿ ಡುಳ್ಳಿ, ಸಾವಿತ್ರಿ ಹೆಬ್ಬಾಳಟ್ಟಿ, ದಾನಮ್ಮ ಗುರವ ಅವರನ್ನೊಳಗೊಂಡ ತಂಡ ಮಹಾರಾಷ್ಟ್ರದ ಸ್ಪರ್ಧಿಗಳನ್ನು ಹಿಂದಿಕ್ಕಿ ಚಿನ್ನದ ಪದಕಕ್ಕೆ ಮುತ್ತಿಕ್ಕಿತು.

ಎರಡನೇ ದಿನದ ಫಲಿತಾಂಶ: ವೈಯಕ್ತಿಕ ವಿಭಾಗ: ಬಾಲಕರ ಸಬ್‌ಜೂನಿಯರ್ 10 ಕಿ.ಮೀ: ವಿಶ್ವನಾಥ ಗಡಾದ (ಕರ್ನಾಟಕ, 12ನಿ:10.771 ಸೆ.)–1, ಮುಲ್ಲಾ ರಾಮ್ (ರಾಜಸ್ಥಾನ, 12ನಿ: 25.207 ಸೆ.)–2, ವಿಶ್ವಜೀತ್ ಸಿಂಗ್ (ಪಂಜಾಬ್, 12ನಿ: 26.695 ಸೆ.)–3.

ಬಾಲಕಿಯರ ಸಬ್‌ಜೂನಿಯರ್ 10 ಕಿ.ಮೀ: ದಾನಮ್ಮ ಚಿಚಖಂಡಿ (ಕರ್ನಾಟಕ, 15ನಿ: 42.183 ಸೆ.)–1, ಎನ್.ಅನಿತಾ (ಮಧ್ಯಪ್ರದೇಶ, 16ನಿ:02.461 ಸೆ.)–2, ಸಹನಾ ಕುಡಿಗನೂರ (ಕರ್ನಾಟಕ, 16ನಿ:10.362 ಸೆ.)–3.

ತಂಡ ವಿಭಾಗ:  ಪುರುಷರ ಜೂನಿಯರ್ ವಿಭಾಗ 40 ಕಿ.ಮೀ ಟೀಮ್ ಟ್ರಯಲ್ಸ್‌: ಕರ್ನಾಟಕ (50ನಿ:52.019ಸೆ.)–1, ರಾಜಸ್ಥಾನ (51ನಿ: 42.013 ಸೆ.)–2, ಪಂಜಾಬ್ (52ನಿ:38 ಸೆ.)–3.

ಮಹಿಳೆಯರ ಜೂನಿಯರ್ ವಿಭಾಗ–30 ಕಿ.ಮೀ ಟೀಮ್ ಟ್ರಯಲ್: ಕರ್ನಾಟಕ (44ನಿ:32.802 ಸೆ.)–1, ಮಹಾರಾಷ್ಟ್ರ (46ನಿ:33.581ಸೆ)–2, ಅಸ್ಸಾಂ (46ನಿ:58.440 ಸೆ)–3.

ಪುರುಷರ ಎಲೀಟ್‌ ವಿಭಾಗ–60 ಕಿ.ಮೀ ಟೈಮ್ ಟ್ರಯಲ್: ರೈಲ್ವೇಸ್ (1 ಗಂಟೆ, 13 ನಿಮಿಷ, 04.177 ಸೆಕೆಂಡ್)–1, ಸರ್ವಿಸಸ್ (1 ಗಂಟೆ, 14ನಿಮಿಷ, 56.281 ಸೆಕೆಂಡ್)–2, ಪಂಜಾಬ್ (1 ಗಂಟೆ, 15 ನಿಮಿಷ, 14.024 ಸೆಕೆಂಡ್)–3.

ಮಹಿಳೆಯರ ಎಲೀಟ್‌ ವಿಭಾಗ–40 ಕಿ.ಮೀ ಟೈಮ್ ಟ್ರಯಲ್: ರೈಲ್ವೇಸ್ (1ಗಂಟೆ, 119 ಸೆ)–1, ಕೇರಳ (1ಗಂಟೆ,01 ನಿಮಿಷ, 58 ಸೆ)–2, ಮಹಾರಾಷ್ಟ್ರ (1 ಗಂಟೆ, 02 ನಿಮಿಷ, 09.219 ಸೆ)–3.

ಸಚಿವರಿಂದ ಸೈಕಲ್ ಕೊಡುಗೆ

ಬಾಲಕರ ಸಬ್‌ಜೂನಿಯರ್ ವೈಯಕ್ತಿಕ ವಿಭಾಗದಲ್ಲಿ ಚಿನ್ನ ಗೆದ್ದ ವಿಶ್ವನಾಥ ಹಾಗೂ ಪುರುಷರ ಜೂನಿಯರ್‌ ವಿಭಾಗದಲ್ಲಿ ಚಿನ್ನ ಪಡೆದ ತಂಡದಲ್ಲಿದ್ದ ಸಂಜೂ ನಾಯಕ್ ಇಬ್ಬರೂ ವಿಜಯಪುರದ ಕ್ರೀಡಾ ಹಾಸ್ಟೆಲ್ ವಿದ್ಯಾರ್ಥಿಗಳು. ವಿಜಯಪುರ ಜಿಲ್ಲೆ ಸಿಂದಗಿ ತಾಲ್ಲೂಕು ಗಣಿಹಾರದ ಕೃಷಿ ಕುಟುಂಬದ ವಿಶ್ವನಾಥ ಹಾಗೂ ಸಂಜೂ ನಾಯಕ್‌ಗೆ ರೇಸ್ ಸೈಕಲ್ ಕೊಡಿಸಲು ಪೋಷಕರಿಗೆ ಸಾಧ್ಯವಾಗಿರಲಿಲ್ಲ. ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ ತಲಾ ₨ 3 ಲಕ್ಷ ವೆಚ್ಚದಲ್ಲಿ ಕೊಡಿಸಿದ್ದ ಸೈಕಲ್‌ಗಳೊಂದಿಗೆ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಂಡಿದ್ದರು.

ಮೂವರಿಗೆ ಗಾಯ: ಪುರುಷರ 60 ಕಿ.ಮೀ ಎಲೀಟ್‌ ವಿಭಾಗದಲ್ಲಿ ಸೈಕಲ್‌ಗಳು ಪರಸ್ಪರ ಹಿಂಬದಿಯಿಂದ ಡಿಕ್ಕಿ ಹೊಡೆದ ಕಾರಣ ಕೆಳಗೆ ಬಿದ್ದ ಸರ್ವಿಸಸ್ ತಂಡದ ಮಂಜಿತ್ ಚಾಪ್ರಾ ಹಾಗೂ ಓಂಪ್ರಕಾಶ್ ಗಾಯಗೊಂಡರು. ಸೈಕಲ್‌ಗೆ ಹಾನಿಯಾದರೂ ಇಬ್ಬರೂ ರೇಸ್ ಮುಂದುವರೆಸಿದರು. ತಂಡ ಬೆಳ್ಳಿ ಪದಕ ಪಡೆಯಿತು. ಸಮೀಪದ ಕುಂಬಾರಹಳ್ಳದ ಬಳಿ ನಾಯಿ ಅಡ್ಡ ಬಂದ ಪರಿಣಾಮ ಕೆಳಗೆ ಬಿದ್ದು ಮಹಾರಾಷ್ಟ್ರದ ಸ್ಪರ್ಧಿಯೊಬ್ಬರು ಗಾಯಗೊಂಡರು. ಆಂಧ್ರದ ಸಲೀಂ ಶೇಖ್‌ ಸ್ಪರ್ಧೆಯ ವೇಳೆ ಬಿದ್ದು ಕೈಮುರಿದುಕೊಂಡರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry