ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೂರದೃಷ್ಟಿ ಜಯದ ಸೂತ್ರ

ಇಂಗ್ಲೆಂಡ್‌ ಕೋಚ್‌ ಸ್ಟೀವ್ ಕೂಪರ್‌ ಮನದಾಳ
Last Updated 29 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಕೋಲ್ಕತ್ತ: ‘ದೂರದೃಷ್ಟಿ ಇದ್ದರೆ ನಮ್ಮ ತಂಡ ಸೀನಿಯರ್‌ ವಿಶ್ವಕಪ್‌ ಹಾಗೂ ಯುರೋಪಿಯನ್ ಚಾಂಪಿಯನ್‌ಷಿಪ್‌ ಕೂಡ ಗೆಲ್ಲಬಹುದು’ ಎಂದು ಇಂಗ್ಲೆಂಡ್‌ನ  17 ವರ್ಷದೊಳಗಿನವರ ತಂಡದ ಕೋಚ್‌ ಸ್ಟೀವ್‌ ಕೂಪರ್ ಹೇಳಿದ್ದಾರೆ.

ಭಾರತದಲ್ಲಿ ನಡೆದ 17 ವರ್ಷದೊಳಗಿನವರ ಫಿಫಾ ವಿಶ್ವಕಪ್‌ ಫೈನಲ್‌ನಲ್ಲಿ ಇಂಗ್ಲೆಂಡ್ ತಂಡ 5–2 ಗೋಲುಗಳಿಂದ ಸ್ಪೇನ್‌ ಎದುರು ಗೆದ್ದಿತ್ತು. ಮೊದಲ ಬಾರಿಗೆ ವಿಶ್ವಕಪ್ ಜಯಿಸಿತ್ತು.

‘ಇಂಗ್ಲೆಂಡ್‌ ಜೂನಿಯರ್ ತಂಡದಲ್ಲಿ ಭವಿಷ್ಯದ ಆಟಗಾರರು ರೂಪುಗೊಂಡಿದ್ದಾರೆ. ಈಗ ಅವರ ಮೇಲೆ ಒತ್ತಡ ಹಾಗೂ ಭರವಸೆ ಹೆಚ್ಚಿದೆ. ಸೀನಿಯರ್‌ ತಂಡಕ್ಕಾಗಿ ಈಗಲೇ ಕೆಲವು ಮಹತ್ವದ ಯೋಜನೆಗಳನ್ನು ರೂಪಿಸಿದರೆ ವಿಶ್ವಕಪ್ ಗೆಲ್ಲಬಹುದು’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಇಂಗ್ಲೆಂಡ್‌ ಸೀನಿಯರ್‌ ತಂಡ ವಿಶ್ವಕಪ್‌ನಲ್ಲಿ ಒಮ್ಮೆಯೂ ಪ್ರಶಸ್ತಿ ಗೆದ್ದಿಲ್ಲ.

‘ಇಂಗ್ಲೆಂಡ್‌ನಲ್ಲಿ ನಮ್ಮ ತಂಡದ ತಯಾರಿ ಉತ್ತಮವಾಗಿ ನಡೆದಿತ್ತು. ಇದಕ್ಕಾಗಿ ಅಲ್ಲಿಯ ಅಕಾಡೆಮಿಗಳು ಸಾಕಷ್ಟು ಶ್ರಮಿಸಿವೆ. ಹಿಂದಿನ ನಾಲ್ಕು ವರ್ಷದಿಂದ ಯೋಜನೆ ರೂಪಿಸಲಾಗಿದೆ. ಅವರೆಲ್ಲರಿಗೂ ನಾನು ಈ ಟ್ರೋಫಿಯನ್ನು ಅರ್ಪಿಸುತ್ತೇನೆ’ ಎಂದು ಕೂಪರ್ ಹೇಳಿದ್ದಾರೆ.

ಇಂಗ್ಲೆಂಡ್‌ ಟೂರ್ನಿಯಲ್ಲಿ ಆಡಿದ ಏಳು ಪಂದ್ಯಗಳಲ್ಲಿ 23 ಗೋಲುಗಳನ್ನು ದಾಖಲಿಸಿದೆ. ಕ್ವಾರ್ಟರ್ ಹಾಗೂ ಸೆಮಿಫೈನಲ್ ಪಂದ್ಯಗಳಲ್ಲಿ ಚಿಲಿ, ಅಮೆರಿಕ ಹಾಗೂ ಬ್ರೆಜಿಲ್ ತಂಡಗಳನ್ನು ಮಣಿಸಿದೆ. ‘ತಂಡ ತಾಂತ್ರಿಕವಾಗಿ ಬಲಾಢ್ಯ ವಾಗಿದೆ. ಇದರ ಫಲ ನಮಗೆ ದ ಕ್ಕಿದೆ. ವೇಗದ ಆಟ ನಮ್ಮ ತಂಡದ ಶಕ್ತಿ ಯಾಗಿತ್ತು. ಅಭ್ಯಾಸದ ವೇಳೆ ಕೂಡ ನಾವು ‘‘ಪಾಸ್‌, ಪಾಸ್‌, ಪಾಸ್‌‘’ ಎಂಬ ಶಬ್ಧವನ್ನು ಪದೇ ಪದೇ ಹೇಳುತ್ತಿದ್ದೆವು’ ಎಂದರು.

ಶುಭಕೋರಿದ ಮೋದಿ
‘ಭಾರತ ತವರಿನಲ್ಲಿ ನಡೆದ ಫಿಫಾ ವಿಶ್ವಕಪ್‌ನಲ್ಲಿ ಪದಕ ಗೆಲ್ಲದಿದ್ದರೂ ಯುವ ಆಟಗಾರರು ನಮ್ಮ ಮನಸ್ಸು ಗೆದ್ದಿದ್ದಾರೆ. ಅವರಿಗೆ ಅಭಿನಂದನೆಗಳು. ಪ್ರಶಸ್ತಿ ಗೆದ್ದ ಇಂಗ್ಲೆಂಡ್ ತಂಡ ಕೂಡ ಅಪೂರ್ವವಾಗಿ ಆಡಿದೆ. ಮೊದಲ ಪ್ರಶಸ್ತಿ ಜಯಿಸಿದ ಆಟಗಾರರಿಗೆ ಶುಭವಾಗಲಿ’ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.

‘ವಿಶ್ವಕಪ್‌ ಟೂರ್ನಿಯನ್ನು ಭಾರತ ಯಶಸ್ವಿಯಾಗಿ ಆಯೋಜಿಸಿದೆ. ಅಂಗಳದಲ್ಲಿ ಆಟಗಾರರಲ್ಲಿ ಇದ್ದ ಉತ್ಸಾಹ ನೋಡಿ ಸಂತಸವಾಯಿತು’ ಎಂದು ಅವರು ಹೇಳಿದ್ದಾರೆ.

‘ಮನ್‌ ಕಿ ಬಾತ್‌’ ರೇಡಿಯೊ ಕಾರ್ಯಕ್ರಮದಲ್ಲಿ ಮೋದಿ ಕ್ರೀಡಾ ಸಾಧಕರಿಗೆ ಅಭಿನಂದನೆ ಸಲ್ಲಿಸಿದರು. ಏಷ್ಯಾ ಕಪ್‌ ಗೆದ್ದ ಭಾರತ ತಂಡಕ್ಕೆ ಹಾಗೂ ಇಂಡೊನೇಷ್ಯಾ ಓಪನ್ ಹಾಗೂ ಆಸ್ಟ್ರೇಲಿಯಾ ಓಪನ್‌ ಗೆದ್ದ ಶ್ರೀಕಾಂತ್ ಅವರಿಗೂ ಶುಭ ಹಾರೈಸಿದರು.

*
ಭಾರತ ಗುಣಮಟ್ಟದ ಟೂರ್ನಿ ಆಯೋಜಿಸಿದೆ: ರಾಥೋಡ್‌ 
ಕೋಲ್ಕತ್ತ: ‘ಭಾರತದಲ್ಲಿ 17 ವರ್ಷದೊಳಗಿನವರ ಫಿಫಾ ವಿಶ್ವಕಪ್ ಟೂರ್ನಿಯನ್ನು ಯಶಸ್ವಿಯಾಗಿ ಆಯೋಜಿಸಲಾಗಿದೆ. ಆರು ನಗರಗಳಲ್ಲಿ ನಡೆದ ಪಂದ್ಯಗಳು ಭಾರತದ ಫುಟ್‌ಬಾಲ್‌ ಪ್ರಿಯರ ಪಾಲಿಗೆ ಸ್ಮರಣೀಯ’ ಎಂದು ಕ್ರೀಡಾ ಸಚಿವ ರಾಜ್ಯವರ್ಧನ ಸಿಂಗ್ ರಾಥೋಡ್ ಹೇಳಿದ್ದಾರೆ.

‘ಭಾರತದ ಭವಿಷ್ಯದ ಆಟಗಾರರಿಗೆ ಈ ಟೂರ್ನಿ ಸ್ಪೂರ್ತಿದಾಯಕವಾಗಿದೆ. ಈ ರೀತಿಯ ಪ್ರಯತ್ನಗಳು ಇಲ್ಲಿಗೇ ನಿಲ್ಲಬಾರದು. 20 ವರ್ಷದೊಳಗಿನವರ ವಿಶ್ವಕಪ್ ಆಯೋಜನೆಗೂ ಭಾರತ ಮುಂದಾಗಬೇಕು. ಇದರಿಂದ ಭಾರತ ತಂಡ ಕೂಡ ವಿಶ್ವ ಮಟ್ಟದಲ್ಲಿ ಬೆಳೆಯುವ ಅವಕಾಶ ಇದೆ’ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT