ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೋಹಿತ್‌, ಕೊಹ್ಲಿ ಶತಕದ ಸೊಬಗು

ನ್ಯೂಜಿಲೆಂಡ್‌ಗೆ ನಿರಾಸೆ; ಭಾರತಕ್ಕೆ ಸರಣಿ; ಬೂಮ್ರಾ ಮೋಡಿ
Last Updated 29 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಕಾನ್ಪುರ: ಆರಂಭಿಕ ಆಟಗಾರ ರೋಹಿತ್‌ ಶರ್ಮಾ ಮತ್ತು ವಿರಾಟ್‌ ಕೊಹ್ಲಿ ಭಾನುವಾರ ಗ್ರೀನ್‌ ಪಾರ್ಕ್‌ ಅಂಗಳದಲ್ಲಿ ಸುರಿಸಿದ ರನ್‌ ಮಳೆಯಲ್ಲಿ ಕಾನ್ಪುರದ ಕ್ರಿಕೆಟ್‌ ಪ್ರೇಮಿಗಳು ಮಿಂದೆದ್ದರು.

ಇವರ ದ್ವಿಶತಕದ ಜೊತೆಯಾಟದ ಮೋಡಿಯಿಂದ ಭಾರತ ತಂಡ ಅಂತಿಮ ಏಕದಿನ ಪಂದ್ಯದಲ್ಲಿ 6 ವಿಕೆಟ್‌ಗಳಿಂದ ಜಯದ ತೋರಣ ಕಟ್ಟಿತು. ಈ ಮೂಲಕ 3 ಪಂದ್ಯಗಳ ಸರಣಿಯನ್ನು 2–1ರಲ್ಲಿ ಕೈವಶ ಮಾಡಿಕೊಂಡಿತು.

ವಿರಾಟ್‌ ಕೊಹ್ಲಿ ಬಳಗ ಸತತ ಏಳನೇ ಸರಣಿ ಗೆದ್ದ ಹಿರಿಮೆಗೂ ಗ್ರೀನ್‌ ಪಾರ್ಕ್‌ ಅಂಗಳ ಸಾಕ್ಷಿಯಾಯಿತು.

ಮೊದಲು ಬ್ಯಾಟ್‌ ಮಾಡಿದ ಆತಿಥೇಯ ತಂಡ 50 ಓವರ್‌ಗಳಲ್ಲಿ 6 ವಿಕೆಟ್‌ಗೆ 337ರನ್‌ ಕಲೆಹಾಕಿತು. ಗುರಿ ಬೆನ್ನಟ್ಟಿದ ಕಿವೀಸ್‌ ನಾಡಿನ ತಂಡ ರೋಚಕ ಘಟ್ಟದಲ್ಲಿ ಮುಗ್ಗರಿಸಿತು. ಕೇನ್‌ ವಿಲಿಯಮ್ಸನ್‌ ಪಡೆ 7 ವಿಕೆಟ್‌ಗೆ 331ರನ್‌ ಕಲೆಹಾಕಿತು.

ಸಂಕಷ್ಟ: ಬ್ಯಾಟಿಂಗ್‌ ಆರಂಭಿಸಿದ ಭಾರತ ಶಿಖರ್‌ ಧವನ್‌ (14) ವಿಕೆಟ್‌ ಬೇಗನೆ ಕಳೆದುಕೊಂಡಿತು. ಹಿಂದಿನ ಪಂದ್ಯದಲ್ಲಿ ಅರ್ಧಶತಕ ಗಳಿಸಿ ಮಿಂಚಿದ್ದ ಧವನ್‌ಗೆ ಟಿಮ್‌ ಸೌಥಿ ರಟ್ಟೆ ಅರಳಿಸಲು ಅವಕಾಶ ನೀಡಲಿಲ್ಲ.

ಕೊಹ್ಲಿ–ರೋಹಿತ್‌ ಜೊತೆಯಾಟದ ರಂಗು: ಧವನ್‌ ಔಟಾದಾಗ ತಂಡದ ಖಾತೆಯಲ್ಲಿ 29ರನ್‌ಗಳಿದ್ದವು. ಈ ಹಂತದಲ್ಲಿ ರೋಹಿತ್‌ ಮತ್ತು ಕೊಹ್ಲಿ ಕಿವೀಸ್‌ ನಾಡಿನ ತಂಡಕ್ಕೆ ‘ವಿರಾಟ’ ರೂಪದ ದರ್ಶನ ನೀಡಿದರು. ಹಿಂದಿನ ಎರಡು ಪಂದ್ಯಗಳಲ್ಲೂ ವೈಫಲ್ಯ ಕಂಡಿದ್ದ ಶರ್ಮಾ ಈ ಪಂದ್ಯದಲ್ಲಿ ಅಬ್ಬರಿಸಿದರು.

ಆರಂಭದಲ್ಲಿ ಎಚ್ಚರಿಕೆಯಿಂದ ಆಡಿದ ಅವರು ಅವಕಾಶ ಸಿಕ್ಕಾಗಲೆಲ್ಲಾ ಚೆಂಡನ್ನು ಬೌಂಡರಿ ಗೆರೆ ದಾಟಿಸುವುದನ್ನು ಮರೆಯಲಿಲ್ಲ. ಇನ್ನೊಂದೆಡೆ ಕೊಹ್ಲಿ ಕೂಡ ಗರ್ಜಿಸಿದರು. ಈ ಜೋಡಿಯನ್ನು ಬೇರ್ಪಡಿಸಲು ಪ್ರವಾಸಿ ತಂಡದ ನಾಯಕ ವಿಲಿಯಮ್ಸನ್‌ ಬೌಲಿಂಗ್‌ನಲ್ಲಿ ಪದೇ ಪದೇ ಬದಲಾವಣೆ ಮಾಡಿದರೂ ಯಾವುದೇ ಪ್ರಯೋಜನವಾಗಲಿಲ್ಲ.

ಎರಡನೇ ವಿಕೆಟ್‌ಗೆ 48 ಎಸೆತಗಳಲ್ಲಿ 50ರನ್‌ ದಾಖಲಿಸಿದ ಈ ಜೋಡಿ ಆ ನಂತರವೂ ಮೋಡಿ ಮಾಡಿತು. ಪಾನೀಯ ವಿರಾಮಕ್ಕೆ 17 ಓವರ್‌ಗಳಲ್ಲಿ 1 ವಿಕೆಟ್‌ಗೆ 91ರನ್‌ ಗಳಿಸಿದ್ದ ಭಾರತ  ಆ ನಂತರ ರನ್‌ ಗಳಿಕೆಯ ವೇಗ ಹೆಚ್ಚಿಸಿಕೊಂಡಿತು. ಇದಕ್ಕೆ ಕಾರಣವಾಗಿದ್ದು ರೋಹಿತ್‌ ಮತ್ತು ಕೊಹ್ಲಿ ಆಟ. ಇವರು 106 ಎಸೆತಗಳಲ್ಲಿ ಶತಕದ ಜೊತೆಯಾಟ ಪೂರೈಸಿದರು.

59 ಎಸೆತಗಳಲ್ಲಿ ಅರ್ಧಶತಕ ಗಳಿಸಿದ ಕೊ‌ಹ್ಲಿ ಆ ನಂತರವೂ ಮಿಂಚಿನ ಆಟ ಆಡಿ ಶತಕದ ಸಂಭ್ರಮ ಆಚರಿಸಿದರು. ರೋಹಿತ್‌ ಕೂಡ ಏಕದಿನ ಮಾದರಿಯಲ್ಲಿ 15ನೇ ಶತಕದ ಬಾರಿಸಿ ತವರಿನ ಅಭಿಮಾನಿಗಳ ಪ್ರೀತಿಗೆ ಪಾತ್ರರಾದರು. ರೋಹಿತ್‌ 106 ಎಸೆತಗಳಲ್ಲಿ ಮೂರಂಕಿಯ ಗಡಿ ಮುಟ್ಟಿದರು.

ಇವರು ಔಟಾದ ನಂತರ ಮಹೇಂದ್ರ ಸಿಂಗ್‌ ದೋನಿ (25; 17ಎ, 3ಬೌಂ) ಮತ್ತು ಕೇದಾರ್‌ ಜಾದವ್‌ (18; 10ಎ, 1ಬೌಂ, 1ಸಿ) ತಂಡದ ಮೊತ್ತ ಹೆಚ್ಚಿಸಿದರು.

ಗುರಿ ಬೆನ್ನಟ್ಟಿದ ಕಿವೀಸ್‌ ನಾಡಿನ ತಂಡ ಉತ್ತಮ ಆರಂಭ ಪಡೆದರೂ ಕೊನೆಯಲ್ಲಿ ವಿಕೆಟ್‌ ಕಳೆದುಕೊಂಡು ಸಂಕಷ್ಟ ಅನುಭವಿಸಿತು.

*

ಕೊಹ್ಲಿ 9 ಸಹಸ್ರ ರನ್‌ಗಳ ಸರದಾರ
ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ ಭಾನುವಾರ ಕ್ರಿಕೆಟ್‌ ಲೋಕದಲ್ಲಿ ಹೊಸ ಮೈಲುಗಲ್ಲು ಸ್ಥಾಪಿಸಿದರು. ಅವರು ಏಕದಿನ ಮಾದರಿಯಲ್ಲಿ ವೇಗವಾಗಿ 9,000ರನ್‌ ಗಳಿಸಿದ ವಿಶ್ವದ ಮೊದಲ ಬ್ಯಾಟ್ಸ್‌ಮನ್‌ ಎಂಬ ಹಿರಿಮೆ ತಮ್ಮದಾಗಿಸಿಕೊಂಡರು.

ನ್ಯೂಜಿಲೆಂಡ್‌ನ ಕಾಲಿನ್‌ ಡಿ ಗ್ರ್ಯಾಂಡ್‌ಹೋಮ್‌ ಬೌಲ್‌ ಮಾಡಿದ 37ನೇ ಓವರ್‌ನ ಕೊನೆಯ ಎಸೆತವನ್ನು ಶಾರ್ಟ್‌ ಥರ್ಡ್‌ ಮ್ಯಾನ್‌ನತ್ತ ಬೌಂಡರಿ ಗೆರೆ ದಾಟಿಸಿ ಈ ಸಾಧನೆ ಮಾಡಿದರು. ಇದಕ್ಕಾಗಿ 194 ಇನಿಂಗ್ಸ್‌ ತೆಗೆದುಕೊಂಡ ಕೊಹ್ಲಿ, ದಕ್ಷಿಣ ಆಫ್ರಿಕಾದ ಎ.ಬಿ.ಡಿವಿಲಿಯರ್ಸ್‌, ದಾಖಲೆಯನ್ನು ಅಳಿಸಿ ಹಾಕಿದರು. ಡಿವಿಲಿಯರ್ಸ್‌ 205 ಇನಿಂಗ್ಸ್‌ಗಳಲ್ಲಿ 9 ಸಾವಿರ ರನ್‌ ಬಾರಿಸಿದ ಹಿರಿಮೆ ಹೊಂದಿದ್ದರು.

ಈ ಪಂದ್ಯದಲ್ಲಿ ಕೊಹ್ಲಿ 32ನೇ ಏಕದಿನ ಶತಕದ ಸಂಭ್ರಮವನ್ನೂ ಆಚರಿಸಿದರು. 96 ಎಸೆತಗಳಲ್ಲಿ ಅವರು ಮೂರಂಕಿಯ ಗಡಿ ದಾಟಿದ್ದು ವಿಶೇಷ.

ಕೊಹ್ಲಿ, ಏಕದಿನ ಮಾದರಿಯಲ್ಲಿ ಒಂಬತ್ತು ಸಹಸ್ರ ರನ್‌ ಗಳಿಸಿದ ಭಾರತದ ಆರನೇ ಆಟಗಾರ ಎನಿಸಿದ್ದಾರೆ. ಸಚಿನ್‌ ತೆಂಡೂಲ್ಕರ್‌, ರಾಹುಲ್‌ ದ್ರಾವಿಡ್‌, ಸೌರವ್‌ ಗಂಗೂಲಿ, ಮಹಮ್ಮದ್‌ ಅಜರುದ್ದೀನ್‌ ಮತ್ತು ಮಹೇಂದ್ರ ಸಿಂಗ್‌ ದೋನಿ ಮೊದಲು ಈ ಸಾಧನೆ ಮಾಡಿದ್ದರು. ಜೊತೆಗೆ ಈ ಸಾಧನೆ ಮಾಡಿದ ವಿಶ್ವದ 19ನೇ ಆಟಗಾರ ಕೂಡ.

*

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT