ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕೊಂಕು ನುಡಿದವರಿಗೆ ಉತ್ತರ ಸಿಕ್ಕಿದೆ’

Last Updated 29 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಉಜಿರೆ (ದಕ್ಷಿಣ ಕನ್ನಡ): ‘ಕಳೆದ ನವೆಂಬರ್‌ನಲ್ಲಿ ಡಿಜಿಟಲ್‌ ಇಂಡಿಯಾ ಜಾರಿಗೆ ಮುಂದಾದಾಗ ಕೊಂಕು ನುಡಿದಿದ್ದ ವಿದ್ವತ್‌ಪೂರ್ಣ ಜನರಿಗೆ ಈಗ ತಕ್ಕ ಉತ್ತರ ಸಿಕ್ಕಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಇಲ್ಲಿನ ರತ್ನವರ್ಮ ಹೆಗ್ಗಡೆ ಕ್ರೀಡಾಂಗಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ (ಎಸ್‌ಕೆಡಿಆರ್‌ಡಿಬಿ) ವತಿಯಿಂದ ಹಮ್ಮಿಕೊಂಡಿದ್ದ ಸಮಾವೇಶದಲ್ಲಿ ಸಂಸ್ಥೆಯ 12 ಲಕ್ಷ ಸದಸ್ಯರಿಗೆ ರೂಪೇ ಕಾರ್ಡ್‌ ವಿತರಿಸುವ ಮತ್ತು ಸ್ವಸಹಾಯ ಗುಂಪುಗಳಲ್ಲಿ ನಗದುರಹಿತ ವಹಿವಾಟು ಜಾರಿಗೊಳಿಸುವ ಯೋಜನೆಗೆ ಚಾಲನೆ ನೀಡಿ ಮಾತನಾಡಿದರು.

‘ಭಾರತದಂತಹ ದೇಶದಲ್ಲಿ ನಗದುರಹಿತ ವಹಿವಾಟು ಸಾಧ್ಯವೇ ಇಲ್ಲ ಎಂದು ಕೆಲವರು ತಿಂಗಳುಗಟ್ಟಲೆ ವಿರೋಧ ವ್ಯಕ್ತಪಡಿಸಿದ್ದರು. ದೇಶದಲ್ಲಿ ಬಡತನವಿದೆ, ಅನಕ್ಷರತೆ ಇದೆ, ಹೆಚ್ಚಿನ ಜನರ ಬಳಿ ಮೊಬೈಲ್‌ ಇಲ್ಲ ಎಂಬ ಕಾರಣ ಮುಂದಿಟ್ಟು ವಿದ್ವತ್‌ಪೂರ್ಣ ವ್ಯಕ್ತಿಗಳು ನನ್ನ ವಿರುದ್ಧ ಟೀಕಾಪ್ರಹಾರ ಮಾಡಿದ್ದರು. ಗ್ರಾಮೀಣ ಪ್ರದೇಶದ 12 ಲಕ್ಷ ಮಹಿಳೆಯರಿಗೆ ರೂಪೇ ಕಾರ್ಡ್‌ ವಿತರಿಸಿ, ಡಿಜಿಟಲ್‌ ವಹಿವಾಟಿಗೆ ಮುನ್ನುಡಿ ಬರೆಯುವ ಮೂಲಕ ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಟೀಕಾಕಾರರಿಗೆ ಉತ್ತರ ನೀಡಿದ್ದಾರೆ’ ಎಂದು ಹೇಳಿದರು.

ಕೈಯ್ಯಲ್ಲಿ ಹೆಚ್ಚು ನಗದು ಇಟ್ಟುಕೊಳ್ಳುವ ಪರಿಪಾಠ ಸಾಮಾಜಿಕ ಪಿಡುಗುಗಳನ್ನು ಪೋಷಿಸುತ್ತದೆ. ನಗದು ಹೆಚ್ಚಿದ್ದರೆ ಸಮಾಜದೊಳಗೆ ಸಮಸ್ಯೆಗಳೂ ಹೆಚ್ಚುತ್ತವೆ. ಕಡಿಮೆ ನಗದು ಹೊಂದಿರುವ ಸಮಾಜವನ್ನು ರೂಪಿಸುವುದು ತಮ್ಮ ಸರ್ಕಾರದ ಗುರಿ. ಅಂತಹ ಸಮಾಜವೊಂದರ ನಿರ್ಮಾಣಕ್ಕೆ ಧರ್ಮಸ್ಥಳ ಕೈಜೋಡಿಸಿದೆ. ಜಗತ್ತು ಕಲ್ಲಿನ ನಾಣ್ಯದಿಂದ ಡಿಜಿಟಲ್‌ ಕರೆನ್ಸಿಯವರೆಗೆ ಮುನ್ನಡೆದುಕೊಂಡು ಬಂದಿದೆ. ಸ್ವಯಂ ಉತ್ತರದಾಯಿತ್ವ ತರುವ ದಿಸೆಯಲ್ಲಿ ಡಿಜಿಟಲ್‌ ಇಂಡಿಯಾ ಪರಿಣಾಮಕಾರಿ ಅಸ್ತ್ರವಾಗಲಿದೆ ಎಂದರು.

‘ನೇರ ನಗದು ವರ್ಗಾವಣೆ ಪದ್ಧತಿ ಜಾರಿಯಿಂದ ಸಾಮಾಜಿಕ ಭದ್ರತಾ ಯೋಜನೆಗಳಲ್ಲಿ ಭಾರಿ ಬದಲಾವಣೆ ಆಗಿದೆ. ₹ 57,000 ಕೋಟಿ ಮೊತ್ತ ಮಧ್ಯವರ್ತಿಗಳ ಜೇಬು ಸೇರುವುದು ತಪ್ಪಿದೆ. ಈಗ ಫಲಾನುಭವಿಗಳ ಬ್ಯಾಂಕ್‌ ಖಾತೆಗೆ ನೇರವಾಗಿ ಹಣ ಸಂದಾಯವಾಗುತ್ತಿದೆ. ಇದರಿಂದ ಕುಪಿತರಾಗಿರುವವರು ನನ್ನನ್ನು ಮೆಚ್ಚಲು ಸಾಧ್ಯವೇ. ಅಧಿಕಾರ ಇರಲಿ, ಬಿಡಲಿ ದೇಶ ಹಾಳಾಗಲು ಬಿಡುವುದಿಲ್ಲ’ ಎಂದು ಪ್ರಧಾನಿ ಹೇಳಿದರು.

ಜೆಮ್‌ ವ್ಯಾಪ್ತಿಗೆ ಬನ್ನಿ: ‘ದೇಶೀಯ ಉತ್ಪನ್ನಗಳಿಗೆ ಸರ್ಕಾರದ ಮಾರುಕಟ್ಟೆ ಒದಗಿಸಲು ಕೇಂದ್ರ ಸರ್ಕಾರ ಆರಂಭಿಸಿರುವ ಗವರ್ನ್‌ಮೆಂಟ್‌ ಇ–ಮಾರ್ಕೆಟ್‌ಪ್ಲೇಸ್‌ (ಜೆಮ್‌) ವ್ಯಾಪ್ತಿಗೆ 15 ರಾಜ್ಯಗಳು ಬಂದಿವೆ. ಕರ್ನಾಟಕ ಇನ್ನೂ ಈ ಯೋಜನೆಗೆ ಸೇರಿಲ್ಲ. ಮುಖ್ಯಮಂತ್ರಿಯವರು ಆದಷ್ಟು ಬೇಗನೆ ರಾಜ್ಯವನ್ನು ಜೆಮ್‌ ವ್ಯಾಪ್ತಿಗೆ ತರಬೇಕು. ಸ್ವಸಹಾಯ ಗುಂಪುಗಳೂ ಜೆಮ್‌ನಲ್ಲಿ ನೋಂದಣಿ ಮಾಡಿಸಬೇಕು’ ಎಂದು ಆಹ್ವಾನ ನೀಡಿದರು.

ಜಗತ್ತಿನಲ್ಲಿ ಎದುರಾಗಲಿರುವ ಮಾನವ ಸಂಪನ್ಮೂಲದ ಕೊರತೆ ನೀಗಿಸಲು ಕೌಶಲ ಅಭಿವೃದ್ಧಿಪಡಿಸಬೇಕಿದೆ. ಶ್ರೀ ಕ್ಷೇತ್ರ ಧರ್ಮಸ್ಥಳವು ರುಡ್‌ಸೆಟ್‌ ಸೇರಿದಂತೆ ವಿವಿಧ ಯೋಜನೆಗಳ ಮೂಲಕ ಕೈಗೊಂಡಿರುವ ಕೌಶಲ ಅಭಿವೃದ್ಧಿ ಯೋಜನೆಗಳು ಮಾದರಿಯಾಗಿವೆ ಎಂದರು.

ರಸಗೊಬ್ಬರ ಮಿತಬಳಕೆ: ‘ಕ್ಷಣಿಕ ಲಾಭದ ಆಸೆಗಾಗಿ ನಾವು ಭೂಮಿಗೆ ರಾಸಾಯನಿಕ ಮತ್ತು ರಸಗೊಬ್ಬರ ಸುರಿಯುತ್ತಿದ್ದೇವೆ. 2022ರ ವೇಳೆಗೆ ಯೂರಿಯಾ ರಸಗೊಬ್ಬರದ ಬಳಕೆಯನ್ನು ಶೇಕಡ 50ಕ್ಕೆ ಮಿತಿಗೊಳಿಸಬೇಕಿದೆ. ಮಳೆಯ ಕೊರತೆಯಿಂದ ಕರ್ನಾಟಕ ಬರದ ಪರಿಸ್ಥಿತಿ ಎದುರಿಸುತ್ತಿದೆ. ಹನಿ ನೀರಾವರಿ ಅಳವಡಿಸಿಕೊಳ್ಳುವ ಮೂಲಕ ನೀರಿನ ಮಿತ ಬಳಕೆಗೆ ನಾಂದಿ ಹಾಡಬೇಕಿದೆ’ ಎಂದು ಕರೆ ನೀಡಿದರು.

‘ಸಮುದ್ರ ಕಳೆ ಬೆಳೆಯಿರಿ’
‘ಮಂಗಳೂರಿನ ಸುತ್ತ ಸಮುದ್ರ ಆವರಿಸಿದೆ. ಇಲ್ಲಿ ಹೆಚ್ಚಿನ ಸಂಖ್ಯೆಯ ಮೀನುಗಾರರ ಕುಟುಂಬಗಳಿವೆ. ಮಳೆಗಾಲದ ಅವಧಿಯಲ್ಲಿ ಮೀನುಗಾರಿಕೆಗೆ ರಜೆ ಇರುತ್ತದೆ. ಈ ಅವಧಿಯಲ್ಲಿ ಲಾಭದಾಯಕ ಸಮುದ್ರ ಕಳೆ ಬೆಳೆಯಲು ಎಸ್‌ಕೆಡಿಆರ್‌ಡಿ‍ಪಿ ಉತ್ತೇಜನ ನೀಡಬೇಕು’ ಎಂದು ಪ್ರಧಾನಿ ಸಲಹೆ ನೀಡಿದರು.

‘ಸಮುದ್ರ ಕಳೆಗೆ ಔಷಧ ಉದ್ಯಮದಲ್ಲಿ ಬೇಡಿಕೆ ಇದೆ. ಅತ್ಯಂತ ಪೌಷ್ಠಿಕಾಂಶಯುಕ್ತವಾದ ಗೊಬ್ಬರವಾಗಿಯೂ ಬಳಸಬಹುದು. ಸರ್ಕಾರದ ಹಂತದಲ್ಲಿ ಈ ಯೋಜನೆ ಜಾರಿಗೆ ನಾನು ಯತ್ನಿಸಿಲ್ಲ. ಅಲ್ಲಿ ನೆಪ ಹೇಳುವವರು ಜಾಸ್ತಿ. ನೀವು ಈ ಕಾರ್ಯಕ್ರಮವನ್ನು ಕೈಗೆತ್ತಿಕೊಳ್ಳಿ’ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಅವರಲ್ಲಿ ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT