ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮಾನುಜನ್‌ ನೆನಪುಗಳ ಲಹರಿ

Last Updated 29 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಎ.ಕೆ. ರಾಮಾನುಜನ್‌ ನನ್ನ ಬದುಕಿನಲ್ಲಿ ಭೇಟಿಯಾದ ಕೆಲವೇ ಕೆಲವು ಮೇಧಾವಿಗಳಲ್ಲಿ ಒಬ್ಬರು. ಅವರು ನನ್ನ ಗುರುಸಮಾನರು. ಬದುಕಿದ್ದಾಗ ಕನ್ನಡ ಸಾಹಿತ್ಯವಲಯ ಅವರನ್ನು ಸರಿಯಾಗಿ ಗುರ್ತಿಸಲಿಲ್ಲ. ಆದರೆ ವಿದೇಶದಲ್ಲಿ ಅವರು ಸಾಕಷ್ಟು ಜನಪ್ರಿಯರಾಗಿದ್ದರು. ತಮ್ಮ ದೇಶದ ಜನರು ಗುರ್ತಿಸಿಲ್ಲ ಎಂಬ ಬೇಸರ ಅವರಿಗಿತ್ತು’ ಎಂದು ಹಿರಿಯ ಸಾಹಿತಿ ಗಿರೀಶ ಕಾರ್ನಾಡ ಅಭಿಪ್ರಾಯಪಟ್ಟರು.

‘ದ ವರ್ಲ್ಡ್‌ ಆಫ್‌ ಎ.ಕೆ. ರಾಮಾನುಜನ್‌’ ಎಂಬ ಗೋಷ್ಠಿಯಲ್ಲಿ ಗ್ವೈಲೆರ್ಮೊ ರೋಡ್ರಿಗಸ್‌ ಮತ್ತು ಚಂದನ್‌ ಗೌಡ ಅವರ ಜತೆ ವೇದಿಕೆ ಹಂಚಿಕೊಂಡ ಅವರು ತಮ್ಮ ಮತ್ತು ರಾಮಾನುಜನ್‌ ಅವರ ಒಡನಾಟವನ್ನು ಮೆಲುಕು ಹಾಕಿದರು.

‘ಕವಿ, ಕಥೆಗಾರ, ಅನುವಾದಕ, ಜಾನಪದ ವಿದ್ವಾಂಸ ಹೀಗೆ ಹಲವು ರೀತಿಗಳಲ್ಲಿ ರಾಮಾನುಜನ್ ನನ್ನನ್ನು ಪ್ರಭಾವಿಸಿದ್ದಾರೆ. ಬರೀ ಅನುವಾದಕರಷ್ಟೇ ಅಲ್ಲ, ಇದುವರೆಗೆ ಹೊರಜಗತ್ತಿಗೆ ಸಂಪೂರ್ಣ ಅಪರಿಚಿತವಾಗಿಯೇ ಉಳಿದಿದ್ದ ಭಾರತೀಯ ಸಾಹಿತ್ಯವನ್ನು ಅವರು ಪರಿಚಯಿಸಿಕೊಟ್ಟರು. ವಚನಗಳು ಮತ್ತು ಶಂಗಂ ಪದ್ಯಗಳ ಅನುವಾದ ಅದಕ್ಕೆ ಒಳ್ಳೆಯ ಉದಾಹರಣೆಗಳು’ ಎಂದು ಅವರು ಹೇಳಿದರು.

‘ಅಡುಗೆ ಮನೆಯಲ್ಲಿ ಅಜ್ಜಿ ಮೊಮ್ಮಗನಿಗೆ ಹೇಳುತ್ತಿದ್ದ ಕಥೆಗಳನ್ನು ಕೇಳಿಸಿಕೊಂಡು ಅದನ್ನು ವಿದ್ವತ್‌ ವಲಯಕ್ಕೆ ಪರಿಚಯಿಸುವ ಕೆಲಸವನ್ನು ರಾಮಾನುಜನ್‌ ಮಾಡಿದರು. ಹಾಗೆ ಅಡುಗೆ ಮನೆಯಲ್ಲಿ ಕೇಳಿದ ಕಥೆಗಳಲ್ಲಿ ಕಥೆಯ ಸ್ಥಳ, ಅದರಲ್ಲಿ ಬರುವ ಪಾತ್ರಗಳೆಲ್ಲವೂ ಅನಾಮಿಕ ಆಗಿರುತ್ತವೆ. ಆದರೆ ಅದೇ ಕೃತಿರೂಪಕ್ಕೆ ಬಂದಾಗ ಅಲ್ಲೊಂದು ರಾಜ್ಯ, ರಾಜರ ಗುರುತುಗಳೆಲ್ಲ ಬರುತ್ತವೆ. ಈ ಬದಲಾವಣೆಯ ಕುರಿತು ಅವರು ಅಚ್ಚರಿಯಿಂದ ಚರ್ಚಿಸುತ್ತಿದ್ದರು’ ಎಂದು ಮೆಲುಕು ಹಾಕಿದರು.

ಎ.ಕೆ. ರಾಮಾನುಜನ್ ಕುರಿತು ಪುಸ್ತಕ ಬರೆದಿರುವ ಸ್ಪೇನ್‌ನ ಲೇಖಕ ಗ್ವೈಲೆರ್ಮೊ ರೋಡ್ರಿಗಸ್‌, ‘ನನ್ನ ಪಾಲಿಗೆ ರಾಮಾನುಜನ್‌ ಮತ್ತು ಅವರ ಕಾವ್ಯ, ಭಾರತೀಯ ಪ್ರಪಂಚವನ್ನು ತೋರಿಸಿದ ಕಿಟಕಿಗಳು’ ಎಂದು ಹೇಳಿಕೊಂಡರು.

‘ನಾನು ಜಗತ್ತಿನ ಹಲವು ದೇಶಗಳ ಸಾಹಿತ್ಯೋತ್ಸವಗಳಲ್ಲಿ ಭಾಗವಹಿಸಿ ರಾಮಾನುಜನ್‌ ಅವರ ಕುರಿತು ಮಾತನಾಡಿದ್ದೇನೆ. ಎಲ್ಲ ಕಡೆಗಳಲ್ಲಿಯೂ ಅವರ ಕುರಿತಾದ ಗೋಷ್ಠಿಗಳಲ್ಲಿ ಪ್ರೇಕ್ಷಕರ ಕುರ್ಚಿಗಳು ಭರ್ತಿಯಾಗಿರುತ್ತವೆ. ಇವು ಅವರ ಜನಪ್ರಿಯತೆಗೆ ಸಾಕ್ಷಿ’ ಎಂದರು.

‘ನವೋದಯ ಕಾವ್ಯ, ನವ್ಯ ಮತ್ತು ನವ್ಯೋತ್ತರ ಕಾವ್ಯಗಳ ನಡುವಿನ ಸೇತುವೆಯಂತೆ ಇದ್ದರು. ಕಾವ್ಯ ಮತ್ತು ಬೌದ್ಧಿಕತೆ ಎರಡೂ ಅವರಲ್ಲಿ ಹದವಾಗಿ ಬೆರೆತಿತ್ತು. ಆದ್ದರಿಂದಲೇ ಅವರ ಕಾವ್ಯಗಳಲ್ಲಿ ಹಲವು ಆಯಾಮಗಳು ಇರುತ್ತವೆ’ ಎಂದು ವಿಶ್ಲೇಷಿಸಿದರು.

ಪ್ರಕಟಣೆಯ ಕುರಿತು ರಾಮಾನುಜನ್‌ ಅವರಿಗೆ ಇದ್ದ ಸಂಕೋಚದ ಬಗ್ಗೆಯೂ ಮಾತನಾಡಿದ ರೋಡ್ರಿಗಸ್‌, ‘ಅವರಿಗೆ ಸ್ವಯಂ ಸೆನ್ಸಾರ್‌ಷಿಪ್‌ ಇತ್ತು. ತಾವು ಬರೆದ ಎಲ್ಲವನ್ನೂ ಅವರು ಪ್ರಕಟಿಸುತ್ತಿರಲಿಲ್ಲ. ತಮ್ಮ ಹಲವು ಪದ್ಯಗಳನ್ನು ಪ್ರಕಟಿಸದೆ ಹಾಗೆಯೇ ಇಟ್ಟುಕೊಂಡಿದ್ದರು’ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಗಿರೀಶ ಕಾರ್ನಾಡ ಅವರು ರಾಮಾನುಜನ್‌ ಅವರ ಪದ್ಯಗಳನ್ನು ನೆನಪಿಸಿಕೊಂಡು ನಿರರ್ಗಳವಾಗಿ ವಾಚಿಸಿ ಪ್ರೇಕ್ಷಕರಿಂದ ಚಪ್ಪಾಳೆ ಗಿಟ್ಟಿಸಿಕೊಂಡರು. ರೋಡ್ರಿಗಸ್‌ ಕೂಡ ರಾಮಾನುಜನ್‌ ಅವರ ಹಲವು ಪದ್ಯ ಮತ್ತು ಗದ್ಯದ ಕೆಲವು ಭಾಗಗಳನ್ನು ವಾಚಿಸಿದರು. ಲೇಖಕ ಚಂದನ್‌ ಗೌಡ ಗೋಷ್ಠಿಯನ್ನು ನಡೆಸಿಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT