ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೋ ವಿಕಾಸಕ್ಕೆ ಅಧ್ಯಾತ್ಮದ ಬೆಳಕು

Last Updated 29 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: 'ಪರೀಕ್ಷೆ, ಪ್ರಮಾಣಪತ್ರ ಅಷ್ಟೇ ಸಾಕಾಗುವುದಿಲ್ಲ. ಮಕ್ಕಳ ಮಾನಸಿಕ ವಿಕಸನಕ್ಕೆ ಅಧ್ಯಾತ್ಮದ ಬೆಳಕೂ ಬೇಕು. ತಾತ್ವಿಕ ತಳಹದಿಯೂ ಬೇಕು. ಸೌಂದರ್ಯಲಹರೀ ಅಭಿಯಾನದ ಮೂಲಕ ಅದು ಸಾಕಾರವಾಗುತ್ತಿದೆ...'

ಈ ಮಾತು ಹೇಳಿದವರು ಪೀಣ್ಯ ಸರ್ಕಾರಿ ಪ್ರೌಢಶಾಲೆಯ ಸಂಸ್ಕೃತ ಶಿಕ್ಷಕ ನಾರಾಯಣಭಟ್. ರಾಜಾಜಿನಗರ ಭಾಗದ ಹಲವು ಶಾಲೆಗಳಲ್ಲಿ ಮಕ್ಕಳಿಗೆ ಸೌಂದರ್ಯಲಹರೀ ಮತ್ತು ಶ್ರೀ ದಕ್ಷಿಣಾಮೂರ್ತ್ಯಷ್ಟಕಮ್ ಕಲಿಸಿರುವ ಅವರು ವೇದಾಂತ ಭಾರತಿಯ ಹಲವು ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.

'ಸೌಂದರ್ಯಲಹರೀ ಮಹಾಸಮರ್ಪಣೆ' ಕಾರ್ಯಕ್ರಮದಲ್ಲಿ 'ಪ್ರಜಾವಾಣಿ'ಯೊಂದಿಗೆ ಮಾತನಾಡಿದ ಅವರು, ಬೃಹತ್‌ ಕಾರ್ಯಕ್ರಮದ ಯಶಸ್ಸಿನ ಹಿಂದೆ ದುಡಿದವರ ಪ್ರೇರಣೆಯ ಎಳೆ ಹಂಚಿಕೊಂಡರು.

'ವೇದಾಂತ ಭಾರತಿಯ ಜತೆಗೆ ಸಾವಿರಾರು ಸ್ವಯಂಸೇವಕರು ಗೌರವಧನ–ವೇತನ ಪಡೆಯದೆ ಕೆಲಸ ಮಾಡುತ್ತಿದ್ದಾರೆ. ಅಂಥವರ ಪೈಕಿ ನಾನೂ ಒಬ್ಬ. ನಾವು ಶಾಲೆಗಳ ಆಡಳಿತ ಮಂಡಳಿ, ಪ್ರಾಂಶುಪಾಲರು, ಮುಖ್ಯಶಿಕ್ಷಕರನ್ನು ಸಂಪರ್ಕಿಸುತ್ತೇವೆ. ಪ್ರಾರ್ಥನೆಯ ಅವಧಿಯ ನಂತರ 10 ನಿಮಿಷ ಅಥವಾ ನೈತಿಕ ಶಿಕ್ಷಣದ ಅವಧಿಯಲ್ಲಿ 10 ನಿಮಿಷವನ್ನು ನಮಗೆ ಬಿಟ್ಟುಕೊಡುವಂತೆ ಕೋರುತ್ತೇವೆ. ಈವರೆಗೆ ಯಾರೂ ನಮ್ಮ ಕೋರಿಕೆ ನಿರಾಕರಿಸಿಲ್ಲ' ಎಂದು ಹೆಮ್ಮೆಯಿಂದ ಹೇಳಿದರು.

'ಆರಂಭದಲ್ಲಿ ಪದಚ್ಛೇದನ ಮಾಡಿ ಉಚ್ಚಾರಣೆ ಕಲಿಸುತ್ತೇವೆ. ಮಕ್ಕಳು ಶ್ಲೋಕವನ್ನು ಸರಾಗವಾಗಿ ಹೇಳುವಂತಾದ ನಂತರ ವಿದ್ವಾಂಸರು ಶಾಲೆಗೆ ಭೇಟಿ ನೀಡಿ ಅರ್ಥ ವಿವರಿಸುತ್ತಾರೆ. ದಕ್ಷಿಣಾಮೂರ್ತ್ಯಷ್ಟಕ ಪಾರಾಯಣದಿಂದ ಗುರುವಿನ ಮಹಿಮೆ ಗೊತ್ತಾಗುತ್ತೆ. ಸೌಂದರ್ಯಲಹರೀ ಪಾರಾಯಣದಿಂದ ಶಕ್ತಿ-ವಿದ್ಯೆ-ಐಶ್ವರ್ಯ ಪ್ರಾಪ್ತಿಯಾಗುತ್ತೆ ಎಂಬ ನಂಬಿಕೆ ಇದೆ. ನಮ್ಮ ಪ್ರಯತ್ನಕ್ಕೆ ಪಾಲಕರ ಬೆಂಬಲವೂ ಇದೆ' ಎಂದು ಅವರು ವಿವರಿಸಿದರು.

'ನಗರದ ಸಾವಿರಕ್ಕೂ ಹೆಚ್ಚು ಶಾಲೆಗಳಲ್ಲಿ 1.25 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಶ್ಲೋಕಗಳನ್ನು ಕಲಿತಿದ್ದಾರೆ. ಆಸಕ್ತ ವಿದ್ಯಾರ್ಥಿಗಳಿಗೆ ಭಗವದ್ಗೀತೆ ಮತ್ತು ಅಧ್ಯಾತ್ಮ ಚಿಂತನೆಯ ಪರಿಚಯ ಮಾಡಿಕೊಡುವ ವಿವೇಕ ದೀಪಿನಿ ಮತ್ತು ವಿವೇಕ ಉತ್ಕರ್ಷಿಣಿ ಎನ್ನುವ ಪರೀಕ್ಷೆಗಳನ್ನೂ ನಡೆಸುತ್ತೇವೆ’ ಎಂದು ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT