ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಕಣ್ಣೀರು ಸಾಕು, ಹೋರಾಟ ಮುಂದುವರೆಯಬೇಕು'

ಗೌರಿ ಲಂಕೇಶ್‍‍ ಒಡನಾಟ ಸ್ಮರಿಸಿದ ಕನ್ಹಯ್ಯಾ ಕುಮಾರ್
Last Updated 29 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಜನವಿರೋಧಿಗಳ ವಿರುದ್ಧದ ಹೋರಾಟದ ಸಂಕೇತ ಗೌರಿ ಲಂಕೇಶ್. ಅವರ ಹತ್ಯೆಯನ್ನು ನೆನೆದು ಕಣ್ಣೀರಿಡುತ್ತಾ ಕೂರುವುದರ ಬದಲು ನಾವು ಅವರ ಹೋರಾಟವನ್ನು ಮುಂದುವರಿಸಬೇಕು' ಎಂದು ಯುವ ಚಳವಳಿಗಾರ ಕನ್ಹಯ್ಯಾ ಕುಮಾರ್ ಹೇಳಿದರು.

ಬೆಂಗಳೂರು ಸಾಹಿತ್ಯ ಉತ್ಸವದಲ್ಲಿ ಚಂದನ್‌ ಗೌಡ ಸಂಪಾದಿಸಿರುವ ಗೌರಿ ಲಂಕೇಶ್ ಬರಹಗಳ ಇಂಗ್ಲಿಷ್ ವಾಚಿಕೆ ‘ದಿ ವೇ ಐ ಸೀ ಇಟ್’ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

‘ಸಾವಿನ ಭಯ ಹೆಚ್ಚಾದಾಗ ಹೋರಾಟದ ಶಕ್ತಿ ಕುಂದುತ್ತದೆ ಎಂದು ಗೌರಿ ಲಂಕೇಶ್ ಹೇಳುತ್ತಿದ್ದರು. ಅವರು ಸಾವಿಗೆ ಅಂಜಿದವರಲ್ಲ. ಮಾರ್ಕ್ಸ್‌ವಾದ ಮತ್ತು ಅಂಬೇಡ್ಕರ್‍‍ವಾದ ಎರಡನ್ನೂ ಅವರು ವಿಮರ್ಶೆಯ ದೃಷ್ಟಿಯಿಂದ ನೋಡುತ್ತಿದ್ದರು’ ಎಂದರು.

‘ಸಮಾಜ ಸಂವೇದನೆಯನ್ನು ಕಳೆದುಕೊಳ್ಳುತ್ತಿರುವ ಕಾಲದಲ್ಲಿ ನಾವಿದ್ದೇವೆ. ಸಮಾಜ ಸಂವೇದನೆಯನ್ನು ಕಳೆದುಕೊಂಡಾಗ ಜಡತ್ವದ ಕಡೆಗೆ ನಡೆಯುತ್ತದೆ. ಗೌರಿ ಲಂಕೇಶ್, ಪಾನ್ಸಾರೆ, ದಾಭೋಲ್ಕರ್, ಕಲಬುರ್ಗಿ ಅವರ ಹತ್ಯೆಗಳು ಇಂಥ ಜಡ ವಾತಾವರಣದ ಕಾರಣದಿಂದ ಆದಂಥವು. ಸಮಾಜ ಜಡಗೊಂಡಾಗ ಜನವಿರೋಧಿ ಕೃತ್ಯಗಳು ಹೆಚ್ಚಾಗುತ್ತವೆ. ಸಂವೇದನೆಯನ್ನು ಉಳಿಸಿಕೊಂಡರೆ ಪ್ರೀತಿ, ಒಗ್ಗಟ್ಟು ಸಾಧ್ಯವಾಗುತ್ತದೆ’ ಎಂದರು.

‘ನಾನು ಜೈಲಿಗೆ ಹೋಗಿ ಬಂದ ಸಂದರ್ಭದಲ್ಲಿ ನನ್ನ ಗೆಳೆಯರೂ ನನ್ನನ್ನು ದೂರ ಇಟ್ಟಿದ್ದರು. ಆದರೆ, ಗೌರಿ ಲಂಕೇಶ್ ಅಮ್ಮನಾಗಿ ನನ್ನ ಬೆನ್ನಿಗೆ ನಿಂತರು’ ಎಂದು ಭಾವುಕರಾದರು.

‘ಅವರು ನನ್ನನ್ನು ಸ್ವೀಟಿ ಎಂದು ಕರೆಯುತ್ತಿದ್ದರು. ಅವರ ಸಾವನ್ನು ನೆನಪಿಸಿಕೊಂಡಾಗ ತುಂಬಾ ದುಃಖವಾಗುತ್ತದೆ. ಆದರೆ, ನಾನು ಕಣ್ಣೀರಿಡುವುದಿಲ್ಲ. ನಮ್ಮ ಮುಂದಿನ ಹೋರಾಟದ ಶಕ್ತಿ ಗೌರಿ. ಅವರು ಇನ್ನಿಲ್ಲ ಎಂದುಕೊಂಡು ನಾವು ಕಣ್ಣೀರಿಡಬಾರದು’ ಎಂದರು.

ಮಲಯಾಳಂ ಲೇಖಕ ಪಾಲ್‍‍ ಝಕಾರಿಯಾ ಮಾತನಾಡಿ, ‘ಸಮಾಜದಲ್ಲಿ ನಿರ್ಭೀತ ವಾತಾವರಣ ಸೃಷ್ಟಿಯಾಗಬೇಕು. ಆದರೆ, ಈಗ ಅಂತಹ ವಾತಾವರಣ ಇಲ್ಲ. ಹೀಗಾಗಿ ಗೌರಿಯಂಥವರನ್ನು ನಾವು ಕಳೆದುಕೊಳ್ಳುತ್ತಿದ್ದೇವೆ’ ಎಂದರು.

*
ಹಾಲೂಡದೆಯೂ ಗೌರಿ ಲಂಕೇಶ್ ನನಗೆ ತಾಯಿಯಾಗಿದ್ದರು. ಈ ಕನ್ಹಯ್ಯನನ್ನು ಹೆತ್ತಿದ್ದು ಒಬ್ಬ ತಾಯಿಯಾದರೆ, ಬೆಳೆಸಿದ್ದು ಗೌರಿ ಅಮ್ಮ.
-ಕನ್ಹಯ್ಯಾ ಕುಮಾರ್,
ಯುವ ಚಳವಳಿಗಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT