ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಧಾರ್ ಹೇರಿಕೆ ಹೊಸ ಸರ್ಕಾರದ ಸಾಧನೆ: ಜೈರಾಮ್‍‍ ರಮೇಶ್

Last Updated 29 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಆಧಾರ್ ಹೇರಿಕೆಯೇ ಹೊಸ ಸರ್ಕಾರದ ಸಾಧನೆ. ಹಿಂದೆ ಆಧಾರ್‍‍ ವಿರೋಧಿಸಿದ್ದವರು ಈಗ ಅದನ್ನು ದೇಶದ ಜನರ ಮೇಲೆ ಹೇರುತ್ತಿದ್ದಾರೆ' ಎಂದು ಕಾಂಗ್ರೆಸ್‍ ಮುಖಂಡ ಜೈರಾಮ್‍‍ ರಮೇಶ್ ಹೇಳಿದರು.

ಬೆಂಗಳೂರು ಸಾಹಿತ್ಯ ಉತ್ಸವದಲ್ಲಿ ‘ಆಧಾರ್ ಯೋಜನೆ ಅನುಕೂಲವೋ, ಅನನುಕೂಲವೋ’ ವಿಷಯದ ಸಂವಾದದಲ್ಲಿ ಅವರು ಮಾತನಾಡಿದರು.

‘ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸಲು ಇದ್ದ ಲೋಪಗಳನ್ನು ಸರಿಪಡಿಸುವ ಉದ್ದೇಶದಿಂದ ಆಧಾರ್ ಅನ್ನು ಪ್ರಾಯೋಗಿಕವಾಗಿ ಜಾರಿಗೆ ತರಲಾಗಿತ್ತು. ಆದರೆ, ಈಗಿನ ಸರ್ಕಾರ ಆಧಾರ್‍‍ ಯೋಜನೆಯನ್ನು ಅತಿಯಾಗಿ ವಿಜೃಂಭಿಸುತ್ತಿದೆ. ಜನಸಾಮಾನ್ಯರ ಮೇಲೆ ಆಧಾರ್ ಹೇರಿಕೆ ಮಾಡುತ್ತಿರುವುದು ಸರಿಯಲ್ಲ’ ಎಂದರು.

‘ನಮ್ಮ ಸರ್ಕಾರದ ಅವಧಿಯಲ್ಲಿ ಆಧಾರ್‍‍ ಯೋಜನೆ ಆರಂಭಿಸಿದ್ದೆವು. ಆಗ ಯೋಜನೆಯನ್ನು ವಿರೋಧಿಸಿದ್ದ ಬಿಜೆಪಿ ಸರ್ಕಾರ ಈಗ ಆಧಾರ್‍‍ ತಮ್ಮ ಸಾಧನೆ ಎಂದು ಹೇಳುತ್ತಿದೆ. ಆಧಾರ್‍‍ ಅನ್ನು ಸೂಕ್ತ ರೀತಿಯಲ್ಲಿ ಜಾರಿಗೆ ತರುವಲ್ಲಿ ಈಗಿನ ಸರ್ಕಾರ ಸೋತಿದೆ’ ಎಂದು ಹೇಳಿದರು.

‘ಮುಂದಾಲೋಚನೆ ಇಲ್ಲದೆ ಸರ್ಕಾರ ಎಲ್ಲ ಕಡೆಯೂ ಆಧಾರ್ ಹೇರುತ್ತಿರುವುದು ಈ ಯೋಜನೆ ಸೋಲಲು ಕಾರಣ. ಮರಣ ಪ್ರಮಾಣಪತ್ರ ಪಡೆಯಲೂ ಆಧಾರ್ ಬೇಕು ಎಂಬುದು ಅರ್ಥಹೀನ. ಸರ್ಕಾರ ಹೀಗೆ ಅರ್ಥವಿಲ್ಲದಂತೆ ಆಧಾರ್ ಜಾರಿ ಮಾಡುತ್ತಿರುವುದಕ್ಕೆ ನಮ್ಮ ವಿರೋಧವಿದೆಯೇ ಹೊರತು ಆಧಾರ್ ಯೋಜನೆಯ ಬಗ್ಗೆಯಲ್ಲ’ ಎಂದರು.

‘ನಕಲಿ ಪಾಸ್‍‍ಪೋರ್ಟ್, ಮತದಾರರ ನಕಲಿ ಗುರುತಿನ ಚೀಟಿಗಳಿರುವಂತೆ ನಕಲಿ ಆಧಾರ್ ಕಾರ್ಡ್‍ಗಳೂ ಬರಬಹುದೆಂಬ ಕಾರಣಕ್ಕೆ ಈ ಯೋಜನೆಯಲ್ಲಿ ಬಯೋಮೆಟ್ರಿಕ್ ಅಳವಡಿಸಿಕೊಳ್ಳಲಾಗಿತ್ತು. ಆದರೆ, ತುಂಬಾ ವಯಸ್ಸಾಗಿರುವವರು ಆಧಾರ್ ನೋಂದಣಿಗೆ ಹೋದಾಗ ಬಯೋಮೆಟ್ರಿಕ್‍‍ನಲ್ಲಿ ಅವರ ಬೆರಳಚ್ಚು ತೆಗೆದುಕೊಳ್ಳುತ್ತಿರಲಿಲ್ಲ. ಇದು ಈಗಲೂ ಇರುವ ತಾಂತ್ರಿಕ ಸಮಸ್ಯೆ’ ಎಂದು ಹೇಳಿದರು.

ಆಧಾರ್‍‍ ಯೋಜನೆಯ ಮುಖ್ಯ ಯೋಜನಾ ವ್ಯವಸ್ಥಾಪಕರಾಗಿದ್ದ ಸಂಜಯ್‍‍ ಜೈನ್ ಮಾತನಾಡಿ, ‘ಆಧಾರ್ ನೋಂದಣಿ ವೇಳೆ ಪಡೆದ ವೈಯಕ್ತಿಕ ಮಾಹಿತಿಯ ಸುರಕ್ಷತೆಯ ಬಗ್ಗೆ ಅನೇಕರಿಗೆ ಗೊಂದಲಗಳಿವೆ. ಜನರ ಅನುಕೂಲಕ್ಕಾಗಿ ಮಾಹಿತಿಗಳನ್ನು ಸಂಗ್ರಹಿಸಲಾಗಿದೆ. ಮಾಹಿತಿ ಸುರಕ್ಷತೆಯ ಬಗ್ಗೆ ಗೊಂದಲ ಅನಗತ್ಯ. ಸಂಗ್ರಹವಾಗಿರುವ ಭಾರೀ ಪ್ರಮಾಣದ ಮಾಹಿತಿಯನ್ನು ರಕ್ಷಿಸುವುದು ಕೂಡಾ ಸರ್ಕಾರದ ಜಬಾಬ್ದಾರಿ’ ಎಂದರು.

ಹಿಮಾಚಲ ಪ್ರದೇಶದ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಅರುಣ್ ಮೈರಾ ಮಾತನಾಡಿ, ‘ಆಧಾರ್‍‍ ಯೋಜನೆಯ ಜತೆಗೆ ಖಾಸಗಿ ಹಕ್ಕಿನ ವಿಷಯವೂ ಸೇರಿಕೊಂಡಿದೆ. ಹೀಗಾಗಿ ಇನ್ನು ಮುಂದಾದರೂ ಯೋಜನೆಯ ಅನುಷ್ಠಾನದ ಬಗ್ಗೆ ಸರಿಯಾದ ಮಾರ್ಗಗಳನ್ನು ಆರಿಸಿಕೊಳ್ಳಬೇಕು’ ಎಂದರು.

‘ಆಧಾರ್ ಈಸ್ ಸ್ಲೇವರಿ’
ಸಾಹಿತ್ಯ ಉತ್ಸವ ನಡೆಯುತ್ತಿರುವ ಲಲಿತ್ ಅಶೋಕ ಹೋಟೆಲ್‍‍ನ ಶೌಚಾಲಯದಲ್ಲಿನ ಮೂತ್ರಿಗಳಲ್ಲಿ ‘ಆಧಾರ್ ಈಸ್ ಸ್ಲೇವರಿ’ ಎಂಬ ಬರಹದ ಚೀಟಿಗಳನ್ನು ಹಾಕಲಾಗಿತ್ತು. ಆಧಾರ್‍ ಯೋಜನೆಯನ್ನು ವಿರೋಧಿಸುವವರು ಪ್ರತಿಭಟನೆಯ ರೂಪದಲ್ಲಿ ಈ ಚೀಟಿಗಳನ್ನು ಶೌಚಾಲಯದಲ್ಲಿ ಹಾಕಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT