ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಐಟಿ ಎಂಬುದು ತೋರಿಕೆಯ ಜಗತ್ತು’

ಕನ್ನಡ ಸಣ್ಣಕಥೆಗಳ ಕುರಿತ ಗೋಷ್ಠಿಯಲ್ಲಿ ಕಥೆಗಾರ ವಿಕ್ರಮ್ ಹತ್ವಾರ್ ಅಭಿಪ್ರಾಯ
Last Updated 29 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಐಟಿ ಜಗತ್ತು ಬೆಂಗಳೂರನ್ನು ಆಳುತ್ತಿದೆ ಎಂಬ ಭಾವ ಹಲವರಲ್ಲಿ ಇದೆ. ಆದರೆ ಅದೊಂದು ಭ್ರಮೆ. ಐಟಿ ಕೂಡ ಒಂದು ತೋರಿಕೆಯ ಜಗತ್ತು. ಅದರ ಒಳಗಿನ ಸಂಕಟಗಳು ಬೇರೆಯದೇ ಆಗಿರುತ್ತವೆ’ ಎಂದು ಕಥೆಗಾರ ವಿಕ್ರಮ್ ಹತ್ವಾರ್ ಹೇಳಿದರು.

ಬೆಂಗಳೂರು ಸಾಹಿತ್ಯ ಉತ್ಸವದ ಎರಡನೇ ದಿನ ಕನ್ನಡ ಸಣ್ಣಕಥೆಗಳ ಕುರಿತಾದ ಗೋಷ್ಠಿಯಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.

ಸಂವಾದವನ್ನು ನಡೆಸಿಕೊಟ್ಟ ಕಥೆಗಾರ ಅಬ್ದುಲ್ ರಶೀದ್ ಅವರ ಪ್ರಶ್ನೆಗೆ ಉತ್ತರಿಸುತ್ತಾ ‘ನನ್ನ ಬಾಲ್ಯ ಕಳೆದಿದ್ದು ಬೆಂಗಳೂರಿನ ಶಿವಾಜಿನಗರದಲ್ಲಿ. ಎಂಜಿನಿಯರಿಂಗ್ ಮಾಡಿದ್ದು ಎಂ.ಎಸ್. ರಾಮಯ್ಯ ಕಾಲೇಜಿನಲ್ಲಿ. ಆಗೆಲ್ಲ ನನಗೆ ಜಾತಿ, ದ್ವೇಷ ಇಂಥ ವಿಷಯಗಳು ಗೊತ್ತೇ ಇರಲಿಲ್ಲ. ಸಾಹಿತಿಗಳು ಎಂದರೆ ಶ್ರೇಷ್ಠರು ಎಂಬ ನಂಬಿಕೆ ಇತ್ತು. ಸಾಹಿತ್ಯ ಲೋಕ ಪ್ರವೇಶಿಸಿದ ಮೇಲೆ ನಿರಾಸೆಯಾಯ್ತು. ನಿಜವಾಗಿ ನಾನು ಜಾತಿಯ ವಿಷವನ್ನು ಕಂಡಿದ್ದು ಸಾಹಿತ್ಯಲೋಕದಲ್ಲಿ’ ಎಂದು ಬೇಸರ ವ್ಯಕ್ತಪಡಿಸಿದರು.

ಬದುಕಿನ ಅನುಭವ ಮತ್ತು ಸೃಜನಶೀಲ ಬರವಣಿಗೆಯ ಸಂಬಂಧದ ಕುರಿತೂ ಮಾತನಾಡಿದ ಅವರು ‘ಹಲವು ಸಲ ನಾವು ಬದುಕಿನಲ್ಲಿ ತೀವ್ರವಾಗಿ ಅನುಭವಿಸಿದ್ದರ ಕುರಿತು ಬರೆಯಲು ಸಾಧ್ಯವಾಗುವುದೇ ಇಲ್ಲ. ಕೆಲವು ವರ್ಷಗಳ ಹಿಂದೆ ಮಲ್ಲೇಶ್ವರದಲ್ಲಿ ಬಾಂಬ್‌ ಸ್ಫೋಟ ನಡೆದಾಗ ನಾನು ಅಲ್ಲಿಯೇ ಇದ್ದೆ. ಆದರೆ ಆ ಘಟನೆಯ ಕುರಿತು ಇದುವರೆಗೆ ಏನನ್ನೂ ಬರೆಯುವುದು ಸಾಧ್ಯವಾಗಿಲ್ಲ’ ಎಂದು ಉದಾಹರಣೆ ಸಮೇತ ವಿವರಿಸಿದರು.

‘ಇಂದಿನ ಪೀಳಿಗೆಯ ಬರಹಗಾರರಿಗೂ ಸಾಹಿತ್ಯ ಪರಂಪರೆಯ ಕುರಿತು ಗೌರವವಿದೆ’ ಎಂದ ಅವರು, ‘ನಾವೆಲ್ಲರೂ ಪರಂಪರೆಯ ಬಗ್ಗೆ ತಿಳಿದುಕೊಂಡಿದ್ದೇವೆ. ಅದರ ಕುರಿತು ಗೌರವವೂ ಇದೆ. ಆದರೆ ಹಾಗೆ ಗೌರವ ಇರಿಸಿಕೊಂಡೇ ಅದಕ್ಕೆ ಭಿನ್ನವಾದ ದಾರಿಯನ್ನು ಹಿಡಿಯುವುದು ಲೇಖಕನ ಪ್ರಜ್ಞಾಪೂರ್ವಕ ಆಯ್ಕೆಯಾಗಿರುತ್ತದೆ’ ಎಂದರು.

ಬದುಕಿನಲ್ಲಿ ಹೆಚ್ಚು ಕಷ್ಟವನ್ನು ಕಾಣದವರೂ 'ಸಾಹಿತ್ಯ ಖಡ್ಗದಂತಾಗಬೇಕು, ಹರಿತ ಅಲುಗಾಗಬೇಕು' ಎಂದೆಲ್ಲ ಹೇಳುತ್ತಿರುವಾಗ ನಿಜವಾಗಿಯೂ ಕಷ್ಟದ ಬದುಕಿನಿಂದ ಬಂದ ನೀವು ಹೇಗೆ ಅಷ್ಟೊಂದು ಸಂಯಮದಿಂದ ಬರೆಯಲು ಸಾಧ್ಯವಾಯಿತು ಎಂಬ ಪ್ರಶ್ನೆಗೆ ಉತ್ತರಿಸಿದ ಕತೆಗಾರ್ತಿ ಶಾಂತಿ ಕೆ. ಅಪ್ಪಣ್ಣ, ತಾವು ಸಾಹಿತ್ಯದತ್ತ ಹೊರಳಿಕೊಂಡ ಸಂದರ್ಭವನ್ನು ಮೆಲುಕು ಹಾಕಿದರು.

‘ಬದುಕು ನನಗೆ ಸಂಯಮವನ್ನು ಕಲಿಸಿದೆ. ಸಮಾಧಾನವಾಗಿ ಹೇಳುವ ಮಾತು ಮತ್ತು ಆವೇಗ, ಆವೇಶದಿಂದ ಹೇಳುವ ಮಾತು ಒಂದೇ ಎಂದಾದರೆ ಸಂಯಮದಿಂದ ಹೇಳುವುದೇ ಒಳ್ಳೆಯದು’ ಎಂದು ಅಭಿಪ್ರಾಯಪಟ್ಟರು.

‘ಬರವಣಿಗೆಯ ಸೃಜನಶೀಲ ಒತ್ತಡ'ದ ಬಗ್ಗೆ ಮಾತನಾಡಿದ ಕಥೆಗಾರ ಕರ್ಕಿ ಕೃಷ್ಣಮೂರ್ತಿ,'ಭಾರತದಲ್ಲಿಸ್ವಾತಂತ್ರ್ಯಾನಂತರದ ಐವತ್ತು ವರ್ಷಗಳಲ್ಲಿ ಆದಷ್ಟು ಬದಲಾವಣೆ ಕಳೆದ ಹತ್ತು ವರ್ಷಗಳಲ್ಲೇ ಆಗಿದೆ. ಹಾಗೆಂದು ಅಂದು ನಮ್ಮನ್ನು ಕಾಡುತ್ತಿರುವ ಜಾತಿ, ಬಡತನ, ದ್ವೇಷ, ಶೋಷಣೆಗಳೇ ಇಂದಿಗೂ ಇವೆ. ಹಳೆಯ ಬವಣೆಗಳೇ ಹೊಸ ವೇಷ ಹಾಕಿಕೊಂಡು ಬಂದಿವೆ. ಕಾರ್ಪೋರೆಟ್ ವಲಯವೂ ಇದಕ್ಕೆ ಹೊರತಲ್ಲ. ಇಂದು ನಾವು ಅವುಗಳ ಕುರಿತಾಗಿಯೇ ಬರೆಯುತ್ತಿದ್ದೇವೆ’ ಎಂದು ಹೇಳಿದರು.

‘ಹಿಂದಿನ ಸಾಹಿತಿಗಳಿಗೆ ಉದಾತ್ತ ಪಾತ್ರಗಳನ್ನು ಸೃಷ್ಟಿಸುವ ಮಹತ್ವಾಕಾಂಕ್ಷೆ ಇತ್ತು. ಅವರಿಗೆ ಪರಂಪರೆಯಿಂದ ದೊರೆತ ಮಾದರಿಗಳೂ ಇದ್ದವು. ಆದರೆ ಇಂದಿನ ಬಹುತೇಕ ಸಾಹಿತಿಗಳು ತಾವೇ ಹೆಣದ ಕೋಶದೊಳಗೆ ಸಿಕ್ಕಿಹಾಕಿಕೊಂಡು ಅವುಗಳಿಗೆ ತಮ್ಮನ್ನು ಸೀಮಿತಗೊಳಿಸಿಕೊಂಡಿದ್ದಾರೆ. ಉದಾತ್ತ ಆದರ್ಶ ನಾಯಕ ಇಂದಿನ ಸಾಹಿತ್ಯದಿಂದ ಅದೃಶ್ಯನಾಗಿದ್ದಾನೆ’ ಎಂದು ಅಭಿಪ್ರಾಯಪಟ್ಟರು.

ಬಹುತೇಕ ಇಂಗ್ಲಿಷ್‌ಮಯವೇ ಆಗಿದ್ದ ಸಾಹಿತ್ಯ ಉತ್ಸವದಲ್ಲಿನ ಈ ಕನ್ನಡ ಗೋಷ್ಠಿಯಲ್ಲಿ ಪ್ರೇಕ್ಷಕರಿಗಿಂತ ಖಾಲಿ ಕುರ್ಚಿಗಳ ಸಂಖ್ಯೆಯೇ ಹೆಚ್ಚಾಗಿತ್ತು.

*
ಐಷಾರಾಮಿಯಾಗಿ ಬದುಕುತ್ತಿರುವವನು ಹಸಿವಿನ ಬಗ್ಗೆ ಬರೆದಷ್ಟು ತೀವ್ರವಾಗಿ ಹಸಿದವನು ಬರೆಯಲು ಸಾಧ್ಯವಾಗುವುದಿಲ್ಲ.
–ಶಾಂತಿ ಕೆ. ಅಪ್ಪಣ್ಣ,
ಕಥೆಗಾರ್ತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT