7

ಖರೀದಿಗೆ ಅವಕಾಶ ಕಲ್ಪಿಸಿದ ವಹಿವಾಟು

ಕೆ. ಜಿ. ಕೃಪಾಲ್
Published:
Updated:
ಖರೀದಿಗೆ ಅವಕಾಶ ಕಲ್ಪಿಸಿದ ವಹಿವಾಟು

ಷೇರುಪೇಟೆಯ ನಡಿಗೆಯು ಕಲ್ಪನಾತೀತ. ಯಾವ ಸಂದರ್ಭದಲ್ಲಿ ಎಂತಹ ಅವಕಾಶಗಳನ್ನು ಕಲ್ಪಿಸಿಕೊಡುತ್ತದೆ ಎಂಬುದನ್ನು ಮುಂಚಿತವಾಗಿ ಊಹಿಸುವುದು ಸಾಧ್ಯವಿಲ್ಲವಾದ ಕಾರಣ ಅದನ್ನು ವಿಸ್ಮಯಕಾರಿ ಎಂದು ವರ್ಗಿಕರಿಸುವರು.

ಮತ್ತೊಂದು ಪ್ರಮುಖ ವಿಚಾರವೆಂದರೆ, ಭವಿಷ್ಯದ ಘಟನೆಗಳನ್ನು ವರ್ತಮಾನಕ್ಕೆ ಭಟ್ಟಿ ಇಳಿಸಿ, ಅದಕ್ಕೆ ಮೌಲೀಕರಣ ಮಾಡುವ ತಾಣವೇ ಷೇರು ವಿನಿಮಯ ಕೇಂದ್ರ ಎಂಬುದು ದೃಢೀಕರಿಸಿದ  ಚಟುವಟಿಕೆ ಈ ವಾರ ಪ್ರದರ್ಶಿತವಾಗಿದೆ. ಈ ವಾರದ ಆರಂಭಿಕ ದಿನಗಳಲ್ಲಿ ಪೇಟೆಯು ಬ್ಯಾಂಕಿಂಗ್ ವಲಯದಲ್ಲಿ ಭಾರಿ ಮೌಲ್ಯಯುತ ಖರೀದಿಗೆ ಅವಕಾಶ ಮಾಡಿಕೊಟ್ಟು ಮತ್ತೆರಡು ದಿನಗಳಲ್ಲಿ ಅದೇ ಷೇರಿಗೆ ಭರ್ಜರಿ ಲಾಭದ ನಗದೀಕರಣಕ್ಕೆ ಅವಕಾಶ ಮಾಡಿಕೊಟ್ಟಿದೆ. ಆ ಸಂದರ್ಭದಲ್ಲಿ ಮಾರಾಟ ಮಾಡಲು ಹಿಂಜರಿದವರನ್ನು ಅವಕಾಶ ವಂಚಿತರನ್ನಾಗಿ ಮಾಡಿದೆ.

ಇದು 2016 ರ ಮೇ ತಿಂಗಳಲ್ಲಿ ಎನ್‌ಪಿಎ ಕಾರಣ ಎಲ್ಲಾ ಬ್ಯಾಂಕಿಂಗ್ ಷೇರುಗಳು ಕನಿಷ್ಠ ದರಕ್ಕೆ ಕುಸಿದಿದ್ದವು,  ಹೆಚ್ಚಿನ ಬದಲಾವಣೆ ಇಲ್ಲದಿದ್ದರೂ 2017 ರ ಮೇ ತಿಂಗಳಲ್ಲಿ ಈ ಬ್ಯಾಂಕಿಂಗ್ ಷೇರುಗಳ ಬೆಲೆ ಸುಮಾರು ಎರಡರಿಂದ ಮೂರು ಪಟ್ಟು ಹೆಚ್ಚಾಗಿತ್ತು.  ಆದರೆ ಈ ವಾರ ಕಂಡಂತಹ ಏರಿಕೆ ಮಾತ್ರ ಅನಿರೀಕ್ಷಿತ ಮಟ್ಟದ್ದು.  ಇದಕ್ಕೆ ಕಾರಣ ಒಳ್ಳೊಳ್ಳೆ ಕಂಪನಿ ಷೇರುಗಳನ್ನು ಹಣವು ಹುಡುಕಿಕೊಳ್ಳುತ್ತಿದೆ. ಮತ್ತು ಷೇರಿನ ದರಗಳು ಏರಿಕೆ ಕಂಡಾಗ ಪೇಟೆಗಳು ಗರಿಷ್ಠದಲ್ಲಿರುವ ಈ ಸಮಯದಲ್ಲಿ ಕ್ಷಿಪ್ರಗತಿಯ ಲಾಭದ ನಗದೀಕರಣ ಕ್ರಿಯೆಗೆ ಕಾರಣವಾಗಿದೆ.

ಕೇಂದ್ರ ಹಣಕಾಸು ಸಚಿವರು ಸರ್ಕಾರಿ ವಲಯದ ಬ್ಯಾಂಕ್‌ಗಳಿಗೆ ಅಗತ್ಯವಿರುವ ಬಂಡವಾಳವನ್ನು ಒದಗಿಸುವ ಯೋಜನೆ ಮತ್ತು ಮೂಲಸೌಕರ್ಯಗಳ ಸುಧಾರಣೆಗಾಗಿ ಹಲವಾರು ಯೋಜನೆ ಪ್ರಕಟಿಸಿದ ಕಾರಣ ಬುಧವಾರ ಬ್ಯಾಂಕಿಂಗ್ ವಲಯದ ದಿಗ್ಗಜ ಕಂಪನಿ ಭಾರತೀಯ ಸ್ಟೇಟ್ ಬ್ಯಾಂಕ್ ₹ 72 ರಷ್ಟು ಏರಿಕೆ ಕಂಡರೆ, ಹಿಂದಿನ ದಿನಗಳಲ್ಲಿ ನಿರಂತರವಾಗಿ ಕುಸಿಯುತ್ತಿದ್ದ ಕೆನರಾ ಬ್ಯಾಂಕ್ ಷೇರು ಕಲ್ಪನೆ ಮಾಡಿಕೊಳ್ಳದ ರೀತಿಯಲ್ಲಿ ಅಂದರೆ ಅಂದು ಒಂದೇ ದಿನ ₹ 120 ಕ್ಕೂ ಹೆಚ್ಚಿನ ಏರಿಕೆ ಪ್ರದರ್ಶಿಸಿತು. 

ಬುಧವಾರ ಮುಂಬೈ ಷೇರು ವಿನಿಮಯ ಕೇಂದ್ರದ ಸಂವೇದಿ ಸೂಚ್ಯಂಕ 33,117 ಅಂಶ ತಲುಪಿ ಸಾರ್ವಕಾಲಿಕ ದಾಖಲೆ ನಿರ್ಮಿಸಿದೆ.  ಅಂದು ಸಂವೇದಿ ಸೂಚ್ಯಂಕವು 435 ಅಂಶಗಳ ಭರ್ಜರಿ ಏರಿಕೆ ದಾಖಲಿಸಿದೆ.  ಅಂದು ಬ್ಯಾಂಕಿಂಗ್ ವಿಶೇಷವಾಗಿ ಸರ್ಕಾರಿ ಸ್ವಾಮ್ಯದ ಬ್ಯಾಂಕಿಂಗ್ ಕಂಪನಿಗಳು ಪ್ರದರ್ಶಿಸಿದ್ದ ಭಾರಿ ಏರಿಕೆಯು ಈ ಏರಿಕೆಗೆ ಕಾರಣವಾಗಿದೆ.   ಗುರುವಾರ ಮೂಲಾಧಾರಿತ ಪೇಟೆಯ ಚುಕ್ತಾ ದಿನವಾದ್ದರಿಂದ, ಶೂನ್ಯ ಮಾರಾಟಗಾರರ ಖರೀದಿಯು ಸಹ ಈ ರೀತಿಯ ಅಸಹಜ ಏರಿಕೆ ಕಾಣುವಂತಾಗಿದೆ.

ಒಟ್ಟಾರೆ ಈ ವಾರ ಸಂವೇದಿ ಸೂಚ್ಯಂಕವು 767 ಅಂಶಗಳ ಏರಿಕೆಯಿಂದ ವಿಜೃಂಭಿಸಿದರೆ,  ಮಧ್ಯಮ ಶ್ರೇಣಿ  ಸೂಚ್ಯಂಕ 303 ಅಂಶಗಳ ಹಾಗೂ  ಕೆಳಮಧ್ಯಮ  ಶ್ರೇಣಿ ಸೂಚ್ಯಂಕ 222 ಅಂಶಗಳ  ಏರಿಕೆಯಿಂದ ಜೊತೆಗೂಡಿದವು. ವಿದೇಶಿ ವಿತ್ತೀಯ ಸಂಸ್ಥೆಗಳು 25 ರಂದು ಸುಮಾರು ₹3,582 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದ ಕಾರಣ ವಾರದಲ್ಲಿ ಒಟ್ಟು ₹1,177 ಕೋಟಿ ಮೌಲ್ಯದ ಷೇರು ಖರೀದಿಸಿದಂತಾ

ಗಿದೆ. ಸ್ವದೇಶಿ ವಿತ್ತೀಯ ಸಂಸ್ಥೆಗಳು ₹277 ಕೋಟಿ ಮೌಲ್ಯದ ಷೇರು ಖರೀದಿಸಿವೆ.  ಪೇಟೆಯ ಬಂಡವಾಳ ಮೌಲ್ಯ ₹142.42 ಲಕ್ಷ ಕೋಟಿಗೆ ಏರಿಕೆ ಕಂಡಿದೆ.

ಹೊಸ ಷೇರು:  ನ್ಯೂ ಇಂಡಿಯಾ ಆಶುರನ್ಸ್ ಕಂಪನಿ ಲಿಮಿಟೆಡ್ ಸರ್ಕಾರಿ ವಲಯದ ಸಾಮಾನ್ಯ ವಿಮಾ ಕಂಪೆನಿಯಾಗಿದ್ದು, ₹5 ರ ಮುಖಬೆಲೆಯ ಷೇರನ್ನು ₹770 ರಿಂದ ₹800 ರ ಅಂತರದಲ್ಲಿ ನವೆಂಬರ್ 1 ರಿಂದ 3 ರವರೆಗೂ ಆರಂಭಿಕ ಷೇರು ವಿತರಣೆ ಮಾಡಲಿದೆ. ರಿಟೇಲ್ ಹೂಡಿಕೆದಾರರಿಗೆ ಪ್ರತಿ ಷೇರಿಗೆ ₹30ರ ರಿಯಾಯ್ತಿ ನೀಡಲಿದೆ.  ಅರ್ಜಿಯನ್ನು 18 ಮತ್ತು ಅದರ ಗುಣಕಗಳಲ್ಲಿ ಸಲ್ಲಿಸಬಹುದು.

ಖಾದಿಮ್ ಇಂಡಿಯಾ ಲಿಮಿಟೆಡ್ ಕಂಪನಿಯು ನವೆಂಬರ್ 2 ರಿಂದ 6 ರವರೆಗೂ ಪ್ರತಿ ಷೇರಿಗೆ ₹745 ರಿಂದ ₹750 ರ ಅಂತರದಲ್ಲಿ ಆರಂಭಿಕ ಷೇರು ವಿತರಿಸಲಿದೆ. ₹10 ರ ಮುಖಬೆಲೆಯ ಈ ಷೇರಿಗೆ ಅರ್ಜಿಯನ್ನು 20 ಮತ್ತು ಅದರ ಗುಣಕಗಳಲ್ಲಿ ಸಲ್ಲಿಸಬಹುದಾಗಿದೆ.

ಎಚ್‌ಡಿಎಫ್‌ಸಿ ಸ್ಟ್ಯಾಂಡರ್ಡ್ ಲೈಫ್ ಇನ್ಶುರನ್ಸ್‌ ಕಂಪನಿ ಲಿಮಿಟೆಡ್ ನವೆಂಬರ್ 7 ರಿಂದ 9 ರವರೆಗೂ ಆರಂಭಿಕ ಷೇರು ವಿತರಿಸಲಿದೆ. ವಿತರಣೆ ಬೆಲೆ ₹275 ರಿಂದ ₹290 ರ ಅಂತರದಲ್ಲಿ ಮತ್ತು ಅರ್ಜಿಯನ್ನು 50 ಮತ್ತು ಅದರ ಗುಣಕಗಳಲ್ಲಿ ಸಲ್ಲಿಸಬಹುದಾಗಿದೆ.

ಬೋನಸ್ ಷೇರು:  ಕ್ಯಾಸ್ಟ್ರಾಲ್ ಇಂಡಿಯಾ ಕಂಪನಿ ನವೆಂಬರ್ 7 ರಂದು ಷೇರುದಾರರಿಗೆ ಬೋನಸ್ ಷೇರು ವಿತರಣೆಯನ್ನು ಪರಿಶೀಲಿಸಲಿದೆ.

ಮುಖಬೆಲೆ ಸೀಳಿಕೆ: ಅಟ್ಲಾಸ್ ಸೈಕಲ್ಸ್ (ಹರಿಯಾಣ) ಕಂಪನಿಯು ಷೇರಿನ ಮುಖಬೆಲೆಯನ್ನು ₹10 ರಿಂದ ₹5 ಕ್ಕೆ ಸೀಳಲು ಈ ತಿಂಗಳ 31ನಿಗದಿತ ದಿನ.

ಹಕ್ಕಿನ ಷೇರು: ಎಚ್‌ಸಿಎಲ್ ಇನ್ಫೊ ಸಿಸ್ಟಮ್ಸ್‌ ಲಿಮಿಟೆಡ್ ಕಂಪನಿ ಪ್ರತಿ ಷೇರಿಗೆ ₹47 ರಂತೆ ವಿತರಿಸಲಿರುವ 10:21 ರ ಅನುಪಾತದ ಹಕ್ಕಿನ ಷೇರಿಗೆ ನವೆಂಬರ್ 1 ನಿಗದಿತ ದಿನ.

ವಾರದ ವಿಶೇಷ

ಪೇಟೆಗಳು ಉತ್ತುಂಗದಲ್ಲಿದ್ದಾಗ ಕಂಪನಿಗಳು ಅಧಿಕ- ಅತ್ಯಧಿಕ ಪ್ರೀಮಿಯಂ ನಲ್ಲಿ ಆರಂಭಿಕ ಷೇರು ವಿತರಣೆಗೆ ಪ್ರಯತ್ನಿಸುತ್ತವೆ.  ಈ ಸಂದರ್ಭದಲ್ಲಿ ಆರ್ಥಿಕ ಸಾಕ್ಷರತೆ ಅಗತ್ಯ. ಎಲ್ಲಾ ಐಪಿಒ ಗಳು ಲಾಭದಾಯಕವಾಗಿರುತ್ತವೆ ಎಂಬ ಭಾವನೆ ತಪ್ಪು.  ಕಂಪನಿಗಳ ಬಗ್ಗೆ, ಅದರ ಚಟುವಟಿಕೆ, ಅದರ ಉತ್ಪಾದನೆಗೆ ಇರುವ ಅವಕಾಶಗಳ ಜೊತೆಗೆ ವಿತರಿಸುತ್ತಿರುವ ಕಂಪನಿಯ ಷೇರಿನ ಮುಖಬೆಲೆ, ವಿತರಣೆ  ಬೆಲೆಗಳನ್ನು ಸಹ ಪರಿಗಣಿಸಿ ಅದರ ಅರ್ಹತೆಯನ್ನು ನಿರ್ಧರಿಸಬಹುದು.  ಈ ವಾರ ಲಿಸ್ಟಿಂಗ್ ಮೂಲಕ ಪೇಟೆಯ ವಹಿವಾಟಿಗೆ ಬಿಡುಗಡೆಯಾದ ಜನರಲ್ ಇನ್ಶುರನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಇತ್ತೀಚಿಗೆ ₹5  ರ ಮುಖಬೆಲೆ ಷೇರನ್ನು ₹912 ರಂತೆ  ಸಾರ್ವಜನಿಕರಿಗೆ ವಿತರಿಸಿತ್ತು.  ಆದರೆ ಷೇರಿನ ಬೆಲೆ ₹ 780 ರವರೆಗೂ ಕುಸಿದು ನಂತರ ಸ್ವಲ್ಪ ಚೇತರಿಕೆ ಕಂಡುಕೊಂಡಿತಾದರೂ  ವಿತರಣೆ ಬೆಲೆ ತಲುಪದಾಯಿತು. 

ಖಾದಿಮ್ ಇಂಡಿಯಾ ಲಿಮಿಟೆಡ್  ಕಂಪನಿ ಪ್ರತಿ ಷೇರಿಗೆ ₹745 ರಿಂದ ₹750 ರ ಅಂತರದಲ್ಲಿ ವಿತರಣೆ ಮಾಡುತ್ತಿದ್ದು  ಈ ಬೆಲೆಯು ವಲಯದ  ಅಗ್ರಮಾನ್ಯ ಕಂಪನಿ ಬಾಟಾ ಇಂಡಿಯಾದ ಷೇರಿನ ಬೆಲೆಗೆ  ಸಮೀಪವಿದೆ.  ಇಲ್ಲಿ ಒಂದು ವ್ಯತ್ಯಾಸವಿದೆ.  ಖಾದಿಮ್ ಇಂಡಿಯಾ ಲಿಮಿಟೆಡ್ ಷೇರಿನ ಮುಖಬೆಲೆ ₹10 ಆದರೆ ಬಾಟಾ ಇಂಡಿಯಾದ ಷೇರಿನ ಮುಖಬೆಲೆ ₹ 5.   ಬಾಟಾ ಇಂಡಿಯಾ ತನ್ನ ಷೇರುದಾರರಿಗೆ ನಿರಂತರವಾಗಿ ಕಾರ್ಪೊರೇಟ್ ಫಲಗಳನ್ನು ನೀಡುತ್ತಿದೆ. ಆದರೆ ಖಾದಿಮ್ ಇಂಡಿಯಾ ಲಿಮಿಟೆಡ್ ಬಗ್ಗೆ ಹೆಚ್ಚು ಮಾಹಿತಿ ಇರುವುದಿಲ್ಲ.  ಹಾಗೆಯೇ  ಲಿಬರ್ಟಿ ಶೂಸ್ ಎಂಬ ಬ್ರಾಂಡೆಡ್ ಕಂಪನಿ ಷೇರಿನ ಬೆಲೆ ₹246 ರ ಸಮೀಪವಿದೆ.

ಇತ್ತೀಚಿಗೆ ಪ್ರತಿ ಷೇರಿಗೆ ₹661 ರಂತೆ ವಿತರಣೆ ಮಾಡಿದ ಐಸಿಐಸಿಐ ಲೋಂಬಾರ್ಡ್‌ ಜನರಲ್ ಇನ್ಶುರನ್ಸ್‌ ಕಂಪನಿ ತೃಪ್ತಿದಾಯಕವಾದ ಫಲ ನೀಡಲಿಲ್ಲ.  ಹೀಗಿರುವಾಗ ನ್ಯೂ ಇಂಡಿಯಾ ಅಶ್ಯುರನ್ಸ್‌ ಕಂಪನಿ ಲಿಮಿಟೆಡ್ ₹5 ರ ಮುಖಬೆಲೆಯ ಷೇರನ್ನು ₹770 ರಿಂದ ₹800 ರಲ್ಲಿ ವಿತರಿಸಲು ಮುಂದಾಗಿದ್ದು, ಹೂಡಿಕೆಗೆ ಮುನ್ನ ಇದು ಎಷ್ಟರ ಮಟ್ಟಿಗೆ ಲಾಭ ತಂದುಕೊಡಬಹುದು ಎಂದು ಆಲೋಚನೆ ಮಾಡಿದ ನಂತರ ನಿರ್ಧರಿಸಿ.  ಐಪಿಒ ಗಳ ಪ್ರೀಮಿಯಂ ಕಂಪನಿಗಳ ಪ್ರತಿಷ್ಠೆಯ ವಿಷಯವಾಗಿದ್ದು, ಬ್ರ್ಯಾಂಡೆಡ್ ಕಂಪನಿಗಳು ಅಧಿಕ ಪ್ರೀಮಿಯಂನಲ್ಲಿ ವಿತರಿಸಲು ಮುಂದಾಗುವ ವಿಷಯ ಅರಿತು ನಿರ್ಧರಿಸಿ.

(9886313380, ಸಂಜೆ 4.30 ರನಂತರ)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry