ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೀನುಗಳ ವೈವಿಧ್ಯಕ್ಕೆ ಅಣೆಕಟ್ಟು ಅಡ್ಡಿ

Last Updated 29 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಭೂಮಿಯ ಮೇಲೆ ಇರುವ ಎಲ್ಲ ಜೀವರಾಶಿಗಳಿಗೆ ನೀರು ಅವಶ್ಯಕ. ನೀರಿಲ್ಲದೇ ಜೀವನವಿಲ್ಲ. ಭೂಮಿಯ ಮೇಲೆ ವಾಸಿಸುವ ನಮಗೇ ನೀರಿನ ಅವಶ್ಯಕತೆ ಇಷ್ಟರಮಟ್ಟಿಗೆ ಇರಬೇಕಾದರೆ, ಇನ್ನು ನೀರಲ್ಲೇ ವಾಸಿಸುವ ಜಲಚರಗಳಿಗೆ ಜಲವೇ ಪ್ರಪಂಚ. ಆ ಪ್ರಪಂಚದಿಂದ ಒಂದು ನಿಮಿಷ ಅವುಗಳನ್ನು ಹೊರತೆಗೆದರೂ, ಅವುಗಳ ಪ್ರಾಣಕ್ಕೆ ಅಪಾಯ ತಪ್ಪಿದ್ದಲ್ಲ.

ಆದರೆ, ಜನಸಂಖ್ಯೆ ಹೆಚ್ಚಾದಂತೆ, ಕುಡಿಯುವ ನೀರಿನ ಅವಶ್ಯಕತೆಯೂ ಹೆಚ್ಚಾಗುತ್ತಿದೆ. ಜನರಿಗೆ ದಿನನಿತ್ಯ ನೀರು ಪೂರೈಸುವ ಸಲುವಾಗಿ ಸರ್ಕಾರ ವಿವಿಧ ಯೋಜನೆಗಳತ್ತ ಮುಖ ಮಾಡಿದೆ. ಈ ಯೋಜನೆಗಳು, ಜನರಿಗೆ ಕುಡಿಯುವ ನೀರು ಕಲ್ಪಿಸಿ ಕೊಡುವ ಭರವಸೆ ಮೂಡಿಸುವ ಬೆನ್ನಲ್ಲೇ, ಜಲಚರಗಳ ಸುಗಮ ಜೀವನಕ್ಕೆ ಸಂಚಕಾರ ತಂದರೆ? ಇತ್ತೀಚಿನ ಒಂದು ಸಂಶೋಧನೆ ಈ ವಿಚಾರವನ್ನು ಎತ್ತಿಹಿಡಿಯುತ್ತಿದೆ.

ಜಲಾನಯನ ತಡೆಗೋಡೆಗಳಾದ ಆಣೆಕಟ್ಟೆಗಳಿಂದ ಮತ್ಸ್ಯ ವೈವಿಧ್ಯದಲ್ಲಿ ಇಳಿಕೆ ಕಂಡುಬರುತ್ತಿದೆ ಮತ್ತು ಆಮ್ಲಜನಕ ಪ್ರಮಾಣದ ಇಳಿಕೆಯಿಂದಾಗಿ ನದಿನೀರು ಜೀವನಕ್ಕೆ ಯೋಗ್ಯವಿಲ್ಲವೆಂದು ಇತ್ತೀಚಿನ ಒಂದು ಸಂಶೋಧನೆ ತಿಳಿಸುತ್ತದೆ. ಮತ್ಸ್ಯ ವೈವಿಧ್ಯದಲ್ಲಿ ಏರಿಕೆ ಕಾಣಬೇಕಾದರೆ ಉಪನದಿಗಳಿಂದ ಕಲ್ಮಷರಹಿತ ಹಾಗೂ ಅಡೆತಡೆರಹಿತ ನೀರು ಹರಿಯಬೇಕು.

ಸಾಮಾನ್ಯವಾಗಿ ಎರಡು ಪ್ರಮುಖ ಸನ್ನಿವೇಶಗಳಲ್ಲಿ ನದಿಗಳಿಗೆ ಅಡ್ಡಲಾಗಿ ಆಣೆಕಟ್ಟುಗಳನ್ನು ನಿರ್ಮಿಸಲಾಗುತ್ತದೆ. ಒಂದು, ವಿದ್ಯುತ್ ಶಕ್ತಿ ಉತ್ಪಾದಿಸುವ ಸಾಮರ್ಥ್ಯವನ್ನು ಅನ್ವೇಷಿಸುವುದು ಮತ್ತು ಇನ್ನೊಂದು ಅದರ ಪೂರ್ಣ ಬಳಕೆ ಮಾಡುವುದು.

ಭಾರತದ ಇಂಧನ ಸಚಿವಾಲಯದ ಪ್ರಕಾರ, ದೇಶದಲ್ಲಿ, ಈವರೆಗೆ, ಕೇವಲ ಶೇ 26 ಜಲವಿದ್ಯುತ್ ಸಾಮರ್ಥ್ಯವನ್ನು ಪರಿಶೋಧಿಸಲಾಗಿದೆ. ಇನ್ನೊಂದು ಪ್ರಮುಖ ಕಾರಣವೆಂದರೆ, ಆಣೆ
ಕಟ್ಟುಗಳನ್ನು ಕಟ್ಟುವ ಮುಖೇನ, ಕೆಲ ನದಿಗಳ ನೀರಿನ ದಿಕ್ಕನ್ನು ಬದಲಾಯಿಸಿ, ನೀರಿನ ಕೊರತೆಯಿರುವ ಪ್ರದೇಶಗಳಿಗೆ ನೀರು ಸರಬರಾಜು ಮಾಡುವುದು.

ದೇಶದಲ್ಲಿ ಎಷ್ಟೋ ಪ್ರದೇಶಗಳಲ್ಲಿ ನೀರಿನ ಅಭಾವವಿರುವುದರಿಂದ ಸದ್ಯದಲ್ಲಿಯೇ ಎಷ್ಟೋ ನದಿಗಳಿಗೆ ಅಡ್ಡಲಾಗಿ ಅಣೆಕಟ್ಟುಗಳನ್ನು ಕಟ್ಟುವ ಸೂಚನೆಗಳಿವೆ. ಇದು ಗಂಭೀರ ವಿಷಯವಾದ್ದರಿಂದ ಇದರಿಂದ ಆಗುವ ಪ್ರಭಾವಗಳ ಕುರಿತು ಈಗಾಗಲೇ ನದಿಗಳ ಅಡ್ಡಲಾಗಿ ನಿರ್ಮಿಸಿರುವ ಜಲಾನಯನ ತಡೆಗೋಡೆಗಳ ಮೇಲೆ ಒಂದು ವಿಸ್ತಾರವಾದ ಅನ್ವೇಷಣೆ ನಡೆಸುವ ಅಗತ್ಯವಿದೆ. ಇದರಲ್ಲಿ ಗಮನಿಸಬೇಕಾದ ಒಂದು ಮುಖ್ಯ ಅಂಶವೆಂದರೆ ಇಂತಹ ಜಲಾನಯನ ಅಡೆತಡೆಗಳಿಂದ ಮತ್ಸ್ಯಗಳ ಮೇಲೆ ಆಗುವ ಪ್ರಭಾವ ಮತ್ತು ಇಂತಹ ಯೋಜನೆಗಳನ್ನು ಕೈಗೆತ್ತಿಕೊಳ್ಳುವ ಮುನ್ನ ಇದರ ಸೂಕ್ಷ್ಮತೆಯನ್ನು ಅರಿತುಕೊಳ್ಳಬೇಕು.

ಜಲಾನಯನ ಅಡೆತಡೆಗಳಿಂದ ಆಗುವ ಪರಿಣಾಮಗಳ ಬಗ್ಗೆ ಒಂದು ನಿರ್ದಿಷ್ಟ ನಿದರ್ಶನದ ಮುಖೇನ ಅರ್ಥೈಸಿಕೊಳ್ಳಲು ಬೆಂಗಳೂರಿನ ಅಶೋಕ ಟ್ರಸ್ಟ್ ಫಾರ್ ರಿಸರ್ಚ್ ಇನ್ ಇಕಾಲಜಿ ಆ್ಯಂಡ್ ಎನ್ವಿರಾನ್ಮೆಂಟ್ (ATREE), ಪಶ್ಚಿಮ ಘಟ್ಟಗಳ ಮಲಪ್ರಭಾ ನದಿಯ ಮೇಲೆ ನಿರ್ಮಿಸಲಾಗಿರುವ ಸಣ್ಣ ಹಾಗೂ ದೊಡ್ಡ ಪ್ರಮಾಣದ ಜಲಾನಯನ ಅಡೆತಡೆಗಳು ಮತ್ಸ್ಯ ವೈವಿಧ್ಯ‌ದ ಮೇಲೆ ಉಂಟಾಗುವ ಪರಿಣಾಮಗಳ ಮೇಲೆ ಒಂದು ಸಂಶೋಧನೆ ನಡೆಸಿದೆ.

ಈ ಸಂಶೋಧನೆಯ ಮುಖ್ಯ ಸಂಶೋಧಕರಾದ ಡಾ. ವಿದ್ಯಾಧರ ಅಟ್ಕೋರೆ, ‘ಪಶ್ಚಿಮ ಘಟ್ಟಗಳ ನದಿಗಳಲ್ಲಿ, ಸುಮಾರು ಶೇ 64 ಗಿಂತಲೂ ಹೆಚ್ಚು ಸ್ಥಳೀಯ ಮತ್ಸ್ಯ ಪ್ರಭೇದಗಳು ಇವೆ. ಹಾಗೆಯೇ ಇದರಲ್ಲಿನ ಎಷ್ಟೋ ಪ್ರಭೇದಗಳು ನದಿ ಜಲಾನಯನ ಮೂಲತೊರೆ ಪ್ರದೇಶಗಳಲ್ಲಿ ಇರುತ್ತವೆ. ಆದರೆ ಈ ಪ್ರದೇಶಗಳೇ ಜಲವಿದ್ಯುತ್ ಯೋಜನೆಗಳಿಗೆ ಪ್ರಮುಖ ಸ್ಥಳಗಳು. ಇಂತಹ ಪ್ರದೇಶಗಳಲ್ಲಿ ವಾಸಿಸುವಂತಹ ಸ್ಥಳೀಯ ಮತ್ಸ್ಯ ಪ್ರಭೇದಗಳ ಮೇಲೆ ಒಂದು ವಿಸ್ತಾರವಾದ ಮೌಲ್ಯ ಮಾಪನ ನಡೆಸಬೇಕಿದೆ. ಇದರಿಂದ ಇಂತಹ ಪ್ರದೇಶಗಳಲ್ಲಿ ಕಂಡುಬರುವ ಅಪರೂಪದ ಪ್ರಭೇದಗಳನ್ನು ಮತ್ತದರ ಸಂತತಿಗಳ ಸಂರಕ್ಷಣಾ ಕಾರ್ಯಗಳಿಗೆ ನೆರವಾಗುತ್ತದೆ. ಮತ್ಸ್ಯಗಳ ಕುರಿತಾದ ಈ ಮಾಹಿತಿ ನೀತಿ ನಿರ್ಮಾಪಕರಿಗೆ ಲಭ್ಯವಾದರೆ, ಇಂತಹ ಅಪರೂಪದ ಪ್ರಭೇದಗಳ ದೀರ್ಘಕಾಲಿಕ ಉಸ್ತುವಾರಿ ಮತ್ತು ಸಂರಕ್ಷಣೆಗೆ ಸೂಕ್ತ ನಿಯಮಗಳನ್ನು ರೂಪಿಸಲು ಸಹಾಯವಾಗುತ್ತದೆ’ ಎನ್ನುತ್ತಾರೆ.

ಇದನ್ನು ಸರಿಯಾಗಿ ಅರ್ಥೈಸಿಕೊಳ್ಳಲು ಸಂಶೋಧಕರು ಮುಕ್ತವಾಗಿ ಹರಿಯುವ ನದಿಯ ನೀರಿನ ಮತ್ಸ್ಯ ವೈವಿಧ್ಯ ಹಾಗೂ ಅಣೆಕಟ್ಟೆಯಿಂದ ಹರಿಯುವ ನೀರಿನ ನಡುವಿನ ಮತ್ಸ್ಯ ವೈವಿಧ್ಯವನ್ನು ಹೋಲಿಸಿ ನೋಡಿದರು.

ಹಾಗೆಯೇ ಮತ್ಸ್ಯ ಪ್ರಭೇದಗಳನ್ನು ಉಳಿಸಲು ಒಂದು ಮಾಪನವನ್ನು ಸಹ ರೂಪಿಸಿದರು. ಈ ಸಂಶೋಧನೆಯ ಮುಖೇನ ಹೊರಬಿದ್ದ ಅಂಶಗಳು ಕುತೂಹಲಕಾರಿಯಾಗಿದ್ದವು. ಮುಕ್ತವಾಗಿ ಹರಿಯುವ ನೀರಿಗೆ ಹೋಲಿಸಿದರೆ, ಆಣೆಕಟ್ಟು ಅಥವಾ ಬೇರೆ ಅಡೆತಡೆಗಳಿಂದ ಹರಿಯುವ ನೀರಿನಲ್ಲಿ, ಮೀನುಗಳ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿತ್ತು. ಇದಲ್ಲದೇ ಇನ್ನೊಂದು ಆಶ್ಚರ್ಯಕರ ವಿಷಯವೆಂದರೆ, ಆಣೆಕಟ್ಟು ಅಥವಾ ತಡೆಗೋಡೆಗಳಿಂದ ಹರಿಯುವ ನೀರಿನಲ್ಲಿ ಆಮ್ಲಜನಕದ ಪ್ರಮಾಣವು ಕಡಿಮೆಯಾಗಿತ್ತು. ಇಂತಹ ಅಡೆತಡೆಗಳಿಂದ ಸ್ವಲ್ಪ ದೂರದಲ್ಲಿ ಮಾಪಿಸಿದಾಗ ಈ ಕೆಳತೊರೆ ನೀರಿನಲ್ಲಿ ಕಂಡುಬಂದ ಮೀನುಗಳ ಪ್ರಮಾಣವು ಮುಕ್ತವಾಗಿ ಹರಿಯುವ ನೀರಿನಲ್ಲಿನ ಪ್ರಮಾಣದಷ್ಟೇ ಇತ್ತೆಂಬ ಆಶ್ಚರ್ಯಕರ ಸಂಗತಿ ಹೊರಬಿದ್ದಿದೆ. ಇದಕ್ಕೆ ಕಾರಣವೆಂದರೆ, ಆಮ್ಲಜನಕದ ಅಗತ್ಯ ಅಥವಾ ಹೆಚ್ಚಿರುವ ಪ್ರಮಾಣ, ಮತ್ತು ಕಡಿಮೆ ಮಟ್ಟದಲ್ಲಿ ಕಂಡುಬಂದ ಕ್ಷಾರೀಯತೆ.

ಪ್ರಭೇದ ವೈವಿಧ್ಯದ ಉಳಿಕೆಯತ್ತ ಕೊಂಡೊಯ್ಯುವ ಮುಖ್ಯವಾದ ಅಂಶವೆಂದರೆ ಆಣೆಕಟ್ಟುಗಳ ರಹಿತ ನದಿಗಳನ್ನು ಸೇರುವ ಉಪನದಿಗಳ ಸಂಖ್ಯೆ. ಈ ಉಪನದಿಗಳಲ್ಲಿ ಯಾವುದೇ ತರಹದ ಅಡೆತಡೆಗಳಿಲ್ಲದ ಕಾರಣ, ಇದರಲ್ಲಿ, ಮೀನುಗಳ ಉಳಿಕೆಗೆ ಹಾಗೂ ಸಂತತಿಯನ್ನು ಹೆಚ್ಚಿಸಲು ಅಗತ್ಯವಿರುವ ಪ್ರಶಸ್ತ ಪರಿಸ್ಥಿತಿಗಳು ಇರುತ್ತವೆ ಎಂದು ಅಂದಾಜಿಸಲಾಗಿದೆ. ಇದರಿಂದ, ಪ್ರಭೇದಗಳ ಉಳಿಕೆಗೆ ಹಾಗೂ ನದಿಗಳಲ್ಲಿನ ಪ್ರಭೇದಗಳ ಸಂಯೋಜನೆಗೆ ಸಹಾಯವಾಗುತ್ತದೆ. ‘ಈ ತಡೆರಹಿತ ಉಪನದಿಗಳ ಮೇಲ್ಮೈ ಹರಿವು ಆಮ್ಲಜನಕದ ಪ್ರಮಾಣ ಹೆಚ್ಚಿಸಲು ಮತ್ತು ಕ್ಷಾರೀಯತೆ ತಗ್ಗಿಸಲು ಅನುಕೂಲಕರವಾಗಿದೆ’ ಎನ್ನುತ್ತಾರೆ ಡಾ. ಅಟ್ಕೋರೆ.

ಅಣೆಕಟ್ಟುಗಳು ಮೀನುಗಳ ಮೇಲೆ, ತಮ್ಮ ನೈಸರ್ಗಿಕ ಗೂಡಿನಿಂದ ಹೊರಬಂದು ಬೇರೆ ಪ್ರದೇಶಗಳಿಗೆ ಹೊಂದಿಕೊಳ್ಳಬೇಕಾದ ಪರಿಸ್ಥಿತಿ ನಿರ್ಮಿಸಿ, ಕೃತಕ ಆಯ್ಕೆಯನ್ನು ಬಲವಂತವಾಗಿ ಹೇರಿ, ಸ್ಥಳೀಯ ವಿನಾಶಕ್ಕೆ ಕಾರಣವಾಗಬಹುದು ಎನ್ನುವುದು ಸಂಶೋಧಕರ ಅನಿಸಿಕೆಯಾಗಿದೆ.

* ಆಣೆಕಟ್ಟೆಗಳಿಂದ ಮತ್ಸ್ಯ ವೈವಿಧ್ಯದಲ್ಲಿ ಇಳಿಕೆ ಕಂಡುಬರುತ್ತಿದೆ. ಆಮ್ಲಜನಕ ಪ್ರಮಾಣದ ಇಳಿಕೆಯಿಂದಾಗಿ ನದಿ ನೀರು ಮಾನವನ ಬಳಕೆಗೆ ಹೆಚ್ಚು   ಯೋಗ್ಯ ಇಲ್ಲವೆಂದು ಇತ್ತೀಚಿನ ಒಂದು ಸಂಶೋಧನೆ ತಿಳಿಸುತ್ತದೆ.

ಗುಬ್ಬಿ ಲ್ಯಾಬ್ಸ್‌

( ಸಂಶೋಧನಾ ಚಟುವಟಿಕೆಗಳಲ್ಲಿ ತೊಡಗಿರುವ ಒಂದು ಸಾಮಾಜಿಕ ಉದ್ಯಮ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT