ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಥಳೀಯ ಸುದ್ದಿ ವಾಹಿನಿ ಮಾಲೀಕ, ವರದಿಗಾರ ಸೆರೆ

ಮಧ್ಯರಾತ್ರಿ ಅಬ್ಬರದ ಸಂಗೀತ * ಪ್ರಶ್ನೆ ಮಾಡಿದ ಪೊಲೀಸರಿಗೆ ಧಮಕಿ
Last Updated 29 ಅಕ್ಟೋಬರ್ 2017, 19:36 IST
ಅಕ್ಷರ ಗಾತ್ರ

ಬೆಂಗಳೂರು: ರಸ್ತೆಮಧ್ಯೆ ವಾಹನ ನಿಲ್ಲಿಸಿ ಹುಟ್ಟುಹಬ್ಬದ ಆಚರಣೆ ಮಾಡುತ್ತಿರುವುದನ್ನು ಪ್ರಶ್ನಿಸಿದ ಪೊಲೀಸರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಸುದ್ದಿ ವಾಹಿನಿಯೊಂದರ ಮಾಲೀಕ ಮುರಳಿ (28) ಹಾಗೂ ವರದಿಗಾರ ಅಭಿಷೇಕ್ (26) ಎಂಬುವರನ್ನು ಬ್ಯಾಡರಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ಕರ್ನಾಟಕ ಕನ್ನಡ ರಕ್ಷಣಾ ವೇದಿಕೆ ಎಂಬ ಸಂಘಟನೆ ಕಟ್ಟಿಕೊಂಡಿರುವ ಅಂದ್ರಹಳ್ಳಿಯ ಮುರಳಿ, ಆರು ತಿಂಗಳಿನಿಂದ ‘ಆರ್‌ ಚಾನೆಲ್’ ಎಂಬ ಸುದ್ದಿ ವಾಹಿನಿ ನಡೆಸುತ್ತಿದ್ದಾರೆ. ಅಭಿಷೇಕ್ ಅಲ್ಲಿ ವರದಿಗಾರರಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಶನಿವಾರ ರಾತ್ರಿ ಮುರಳಿ ಅವರ ಹುಟ್ಟುಹಬ್ಬ ಆಚರಿಸಲು ಸ್ನೇಹಿತರೆಲ್ಲ ಕಚೇರಿ ಬಳಿ ಪಾರ್ಟಿ ಆಯೋಜಿಸಿದ್ದರು. ಅಬ್ಬರದ ಸಂಗೀತದಿಂದ ಬೇಸತ್ತ ಸ್ಥಳೀಯರು, ಬ್ಯಾಡರಹಳ್ಳಿ ಠಾಣೆಗೆ ಕರೆ ಮಾಡಿ ವಿಷಯ ತಿಳಿಸಿದ್ದರು. ತಕ್ಷಣ ಹೆಡ್‌ಕಾನ್‌ಸ್ಟೆಬಲ್ ಜ್ಯೋತಿಪ್ರಕಾಶ್ ಹಾಗೂ ಕಾನ್‌ಸ್ಪೆಬಲ್ ಚಂದ್ರಕುಮಾರ್ ಅವರು ಸ್ಥಳಕ್ಕೆ ತೆರಳಿದ್ದರು ಎಂದು ಪೊಲೀಸರು ವಿವರಿಸಿದ್ದಾರೆ.

ರಸ್ತೆ ಮಧ್ಯೆ ನಿಲ್ಲಿಸಿರುವ ವಾಹನ ತೆಗೆಯುವಂತೆ ಸೂಚಿಸಿದ್ದಕ್ಕೆ ಮುರಳಿ ಹಾಗೂ ಸ್ನೇಹಿತರು, ‘ನಾವೇನೂ ನಿಮ್ಮ ಮನೆ ಮುಂದೆ ಬಂದು ಪಾರ್ಟಿ ಮಾಡ್ತಿಲ್ಲ. ನಿಮ್ಮ ಬ್ಯಾಡ್ಜ್‌ ನಂಬರ್ ಕೊಡ್ರಿ. ಬೆಳಿಗ್ಗೆ ನಾವೇ ಠಾಣೆಗೆ ಬಂದು ಸಾಹೇಬ್ರ ಹತ್ರ ಮಾತಾಡ್ತೀವಿ. ಇಲ್ಲಿಂದ ಸುಮ್ಮನೆ ಹೋಗ್ಲಿಲ್ಲ ಅಂದ್ರೆ ನಾಳೆ ಆಗೋ ಪರಿಣಾಮನೇ ಬೇರೆ’ ಎಂದು ಧಮಕಿ ಹಾಕಿದ್ದರು. ಅವರ ವರ್ತನೆಯನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಂಡ ಸಿಬ್ಬಂದಿ, ಅದನ್ನು ಇನ್‌ಸ್ಪೆಕ್ಟರ್‌ ಸತ್ಯನಾರಾಯಣ ಅವರಿಗೆ ಕಳುಹಿಸಿದ್ದರು.

ಸಿಬ್ಬಂದಿ ಜತೆ ಸ್ಥಳಕ್ಕೆ ತೆರಳಿದ ಇನ್‌ಸ್ಪೆಕ್ಟರ್, ಮುರಳಿ ಹಾಗೂ ಅಭಿಷೇಕ್ ಅವರನ್ನು ವಶಕ್ಕೆ ಪಡೆದರು. ಪಾರ್ಟಿಯಲ್ಲಿದ್ದ ಬಾಗೇಪಲ್ಲಿಯ ರೌಡಿಶೀಟರ್ ಪ್ರಶಾಂತ್ ಹಾಗೂ ಇಬ್ಬರು ಯುವತಿಯರು ಪರಾರಿಯಾಗಿದ್ದಾರೆ.

ಸುಲಿಗೆ: ‘ನಾಲ್ಕು ತಿಂಗಳ ಹಿಂದೆ ಇವರು ನೆಲಮಂಗಲದ ಹೋಟೆಲ್‌ವೊಂದಕ್ಕೆ ನುಗ್ಗಿ ಮಾಲೀಕನಿಂದ ಹಣ ಕಿತ್ತಿದ್ದಾರೆ. ಅದೇ ರೀತಿ ಮಾಗಡಿ ರಸ್ತೆಯಲ್ಲಿರುವ ದಾವಣಗೆರೆ ಬೆಣ್ಣೆ ದೋಸೆ ಹೋಟೆಲ್‌ಗೆ ಹಾಗೂ ಕಾಮಾಕ್ಷಿಪಾಳ್ಯದ ಕಾರ್ಖಾನೆಯೊಂದಕ್ಕೆ ನುಗ್ಗಿ ಸುಲಿಗೆ ಮಾಡಿದ್ದಾರೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT