ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರದ್ದಾದ ನೋಟುಗಳ ಪರಿಶೀಲನೆ ಪ್ರಗತಿಯಲ್ಲಿದೆ...’

Last Updated 29 ಅಕ್ಟೋಬರ್ 2017, 19:42 IST
ಅಕ್ಷರ ಗಾತ್ರ

ನವದೆಹಲಿ: ನೋಟು ರದ್ದತಿಯ ನಂತರ ಬ್ಯಾಂಕುಗಳಿಗೆ ಹಿಂದಿರುಗಿಸಲಾದ ರದ್ದಾದ ನೋಟುಗಳನ್ನು ಪರಿಶೀಲಿಸುವಕೆಲಸ ನಡೆಯುತ್ತಿದೆ. ನೋಟು ಪರಿಶೀಲನೆಯ ಅತ್ಯಾಧುನಿಕ ವ್ಯವಸ್ಥೆ ಬಳಸಿಕೊಂಡು ಈ ಕೆಲಸವನ್ನುಅತ್ಯಂತ ಎಚ್ಚರಿಕೆಯಿಂದ ಮಾಡಲಾಗುತ್ತಿದೆ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ)ಹೇಳಿದೆ. ನವೆಂಬರ್‌ 8ಕ್ಕೆ ನೋಟು ರದ್ದತಿಯಾಗಿ ಒಂದು ವರ್ಷ ತುಂಬಲಿದೆ.

ಎರಡೆರಡು ಪಾಳಿಯಲ್ಲಿ ಕೆಲಸ ಮಾಡಲಾಗುತ್ತಿದೆ. ಲಭ್ಯ ಇರುವಎಲ್ಲ ಯಂತ್ರಗಳನ್ನೂ ಇದಕ್ಕೆ ಬಳಸಿಕೊಳ್ಳಲಾಗುತ್ತಿದೆ ಎಂದು ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ಪಿಟಿಐ ಸುದ್ದಿ ಸಂಸ್ಥೆ ಸಲ್ಲಿಸಿದ ಅರ್ಜಿಗೆ ಆರ್‌ಬಿಐ ಉತ್ತರ ನೀಡಿದೆ.

ರದ್ದಾದ ನೋಟುಗಳ ಎಣಿಕೆಯ ಮಾಹಿತಿ ಕೋರಿ ಪಿಟಿಐ ಅರ್ಜಿ ಸಲ್ಲಿಸಿತ್ತು. ಎಣಿಕೆ ಪೂರ್ಣಗೊಳಿಸಲು ಗಡುವು ಹಾಕಿಕೊಳ್ಳಲಾಗಿದೆಯೇ ಎಂಬ ಪ್ರಶ್ನೆಗೆ, ‘ಚಲಾವಣೆಯಿಂದ ಹಿಂದಕ್ಕೆ ಪಡೆದಿರುವ ನೋಟುಗಳ ಎಣಿಕೆ ಮತ್ತು ಪರಿಶೀಲನೆ ಪ್ರಕ್ರಿಯೆ ಪ್ರಗತಿಯಲ್ಲಿದೆ’ ಎಂದಷ್ಟೇ ಆರ್‌ಬಿಐ ಹೇಳಿದೆ. ಒಟ್ಟು 66 ಯಂತ್ರಗಳನ್ನು ಬಳಸಿ ಎಣಿಕೆ ನಡೆಸಲಾಗುತ್ತಿದೆ. ನೋಟು ರದ್ದತಿಯ ಬಳಿಕ ಜಮೆಯಾದ ರದ್ದಾದ ನೋಟುಗಳಲ್ಲಿ ಖೋಟಾ ನೋಟುಗಳು ಎಷ್ಟಿದ್ದವು ಎಂಬುದನ್ನು ಪತ್ತೆ ಮಾಡುವುದಕ್ಕಾಗಿ ಈ ಪರಿಶೀಲನೆ ನಡೆಯುತ್ತಿದೆ.

ಕಾಂಗ್ರೆಸ್‌ ಮತ್ತು ಮಮತಾ ಬ್ಯಾನರ್ಜಿ ಅವರ ಟಿಎಂಸಿ ಸೇರಿ ಹಲವು ಪಕ್ಷಗಳು ನೋಟು ರದ್ದತಿಯ ಮೊದಲ ವಾರ್ಷಿಕವಾದ ನವೆಂಬರ್‌ 8ರಂದು ಕರಾಳ ದಿನ ಆಚರಿಸುವುದಾಗಿ ಹೇಳಿವೆ. ನೋಟು ರದ್ದತಿಯಿಂದಾಗಿ ಅರ್ಥ ವ್ಯವಸ್ಥೆಯ ಮೇಲೆ ಆಗಿರುವ ದುಷ್ಪರಿಣಾಮಗಳತ್ತ ಗಮನ ಸೆಳೆಯುವುದಕ್ಕಾಗಿ ದೇಶದಾದ್ಯಂತ ಪ್ರತಿಭಟನೆ ನಡೆಸುವುದಾಗಿ ತಿಳಿಸಿವೆ.

ಇದಕ್ಕೆ ತಿರುಗೇಟು ನೀಡುವುದಕ್ಕಾಗಿ ಆಡಳಿತಾರೂಢ ಬಿಜೆಪಿ, ನವೆಂಬರ್‌ 8ರಂದು ‘ಕಪ್ಪುಹಣ ವಿರೋಧಿ ದಿನ’ ಆಚರಿಸುವುದಾಗಿ ತಿಳಿಸಿದೆ.

ರದ್ದಾದ ನೋಟುಗಳ ಪೈಕಿ ₹15.28 ಲಕ್ಷ ಕೋಟಿ ಮೌಲ್ಯದ ನೋಟುಗಳು (ಶೇ 99ರಷ್ಟು) ಬ್ಯಾಂಕುಗಳಿಗೆ ವಾಪಸಾಗಿವೆ. ₹16,050 ಕೋಟಿ ಮೌಲ್ಯದ ನೋಟುಗಳು ಮಾತ್ರ ಬ್ಯಾಂಕುಗಳಿಗೆ ಜಮೆ ಆಗಿಲ್ಲ ಎಂದು ಆಗಸ್ಟ್‌ 30ರಂದು ಬಿಡುಗಡೆಯಾದ 2016–17ರ ವಾರ್ಷಿಕ ವರದಿಯಲ್ಲಿ ಆರ್‌ಬಿಐ ತಿಳಿಸಿತ್ತು.

ಕಳೆದ ನವೆಂಬರ್‌ 8ಕ್ಕೆ ಮೊದಲು ₹500 ಮುಖಬೆಲೆಯ 1,716.5 ಕೋಟಿ ಮತ್ತು ₹1,000 ಮುಖಬೆಲೆಯ 685.8 ಕೋಟಿ ನೋಟುಗಳು ಚಲಾವಣೆಯಲ್ಲಿದ್ದವು. ಇವುಗಳ ಒಟ್ಟು ಮೌಲ್ಯ 15.44 ಲಕ್ಷ ಕೋಟಿ ಆಗಿತ್ತು.

ಮುದ್ರಣದ ಖರ್ಚು ₹7,965 ಕೋಟಿ

ನೋಟು ರದ್ದತಿಯ ಬಳಿಕ ₹500 ಮತ್ತು ₹2,000 ಮುಖಬೆಲೆಯ ಹೊಸ ನೋಟುಗಳ ಮುದ್ರಣಕ್ಕೆ ಆರ್‌ಬಿಐ ₹7,965 ಕೋಟಿ ಖರ್ಚು ಮಾಡಿದೆ. ಅದಕ್ಕೂ ಹಿಂದಿನ ವರ್ಷ ನೋಟು ಮುದ್ರಣಕ್ಕಾಗಿ ₹3,421 ಕೋಟಿ ವೆಚ್ಚ ಆಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT