ಜಾತ್ಯತೀತತೆ ಎಂದರೆ ಧರ್ಮ ಬಿಡಿ ಎಂದಲ್ಲ– ಸಿದ್ದರಾಮಯ್ಯ

ಮಂಗಳವಾರ, ಜೂನ್ 18, 2019
31 °C

ಜಾತ್ಯತೀತತೆ ಎಂದರೆ ಧರ್ಮ ಬಿಡಿ ಎಂದಲ್ಲ– ಸಿದ್ದರಾಮಯ್ಯ

Published:
Updated:
ಜಾತ್ಯತೀತತೆ ಎಂದರೆ ಧರ್ಮ ಬಿಡಿ ಎಂದಲ್ಲ– ಸಿದ್ದರಾಮಯ್ಯ

ಮೈಸೂರು: ಜಾತ್ಯತೀತತೆ ಎಂದರೆ ಧರ್ಮ ಬಿಟ್ಟು ಬಿಡಿ ಎಂದರ್ಥವಲ್ಲ. ಸಹಿಷ್ಣುತೆಯಿಂದ ಸಹಬಾಳ್ವೆ ನಡೆಸುವಂತಹ ವ್ಯವಸ್ಥೆ ನಿರ್ಮಾಣವಾಗಬೇಕು ಎಂಬುದೇ ಜಾತ್ಯತೀತತೆಯ ಅರ್ಥ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯಾಖ್ಯಾನಿಸಿದರು.

ಜಿಲ್ಲಾ ಬ್ರಾಹ್ಮಣ ಮಹಾಸಭಾ ಹಾಗೂ ಇತರ ಸಂಘ–ಸಂಸ್ಥೆಗಳ ವತಿಯಿಂದ ಭಾನುವಾರ ಇಲ್ಲಿ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.

‘ನಾನು ನಾಸ್ತಿಕ ಅಲ್ಲ. ದೇವರಿದ್ದಾನೆ ಎಂದು ನಂಬುತ್ತೇನೆ. ಆ ದೇವರು ಗುಡಿಯಲ್ಲಿ ಮಾತ್ರವೇ ಇಲ್ಲ. ಎಲ್ಲೆಲ್ಲೂ ಇದ್ದಾನೆ. ಪ್ರತಿಯೊಬ್ಬರಲ್ಲೂ ದೇವರಿದ್ದಾನೆ. ಎಲ್ಲ ಧರ್ಮದವರನ್ನು ಗೌರವಿಸಿದರೆ ದೇವರನ್ನು ಗೌರವಿಸಿದಂತೆ’ ಎಂದು ಹೇಳಿದರು.

‘ನಾನು ಯಾವುದೇ ಜಾತಿಯ ವಿರೋಧಿಯಲ್ಲ. ವಿರೋಧ ಪಕ್ಷದವರು ಸಿದ್ದರಾಮಯ್ಯ ಹಿಂದೂಗಳ ವಿರೋಧಿ, ಬ್ರಾಹ್ಮಣ ವಿರೋಧಿ ಎಂದು ಹೇಳುತ್ತಾರೆ. ನಾನು ಶೋಷಕ ವ್ಯವಸ್ಥೆಯ ವಿರುದ್ಧವೇ ಹೊರತು ಬ್ರಾಹ್ಮಣರ ವಿರೋಧಿ ಅಲ್ಲ’ ಎಂದು ಸ್ಪಷ್ಟಪಡಿಸಿದರು.

ಬ್ರಾಹ್ಮಣರಿಗೆ ಮೀಸಲಾತಿ, ಅಭಿವೃದ್ಧಿ ನಿಗಮ ಸಾಧ್ಯವಿಲ್ಲ: ಬ್ರಾಹ್ಮಣರ ಅಭಿವೃದ್ಧಿಗೆ ಯಾವುದೇ ಅಭಿವೃದ್ಧಿ ನಿಗಮ ಸ್ಥಾಪಿಸಲು ಸಾಧ್ಯವಿಲ್ಲ. ಸಂವಿಧಾನದಲ್ಲಿ ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ಹಿಂದುಳಿದವರಿಗೆ ಮೀಸಲಾತಿ ಕಲ್ಪಿಸಿ ಎಂದಿರುವುದರಿಂದ ಮೀಸಲಾತಿ ಕಲ್ಪಿಸುವುದೂ ಆಗದು. ಆದರೆ, ಬ್ರಾಹ್ಮಣರಲ್ಲಿರುವ ಬಡವರ ಏಳಿಗೆಗೆ ಯಾವ ಕಾರ್ಯಕ್ರಮ ರೂಪಿಸಬೇಕು ಎನ್ನುವುದನ್ನು ದಿನೇಶ್‌ ಗುಂಡೂರಾವ್ ಜತೆ ಚರ್ಚಿಸಿ ಸದ್ಯದಲ್ಲೇ ತೀರ್ಮಾನ ಪ್ರಕಟಿಸಲಾಗುವುದು ಎಂದು ಭರವಸೆ ನೀಡಿದರು.

ಇದಕ್ಕೂ ಮುನ್ನ ಸಿದ್ದರಾಮಯ್ಯ ಅವರನ್ನು ವೇದಘೋಷದ ಮೂಲಕ ಸ್ವಾಗತಿಸಲಾಯಿತು. ನಂತರ ಅವರು ಗಾಯತ್ರಿ ದೇವತೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು.

ಬ್ರಾಹ್ಮಣ, ಅರಸು, ವೈಶ್ಯರು ಅವಕಾಶಗಳಿಂದ ವಂಚಿತರು: ದಿನೇಶ್‌ ಗುಂಡೂರಾವ್ 

ಬ್ರಾಹ್ಮಣ, ಅರಸು ಹಾಗೂ ವೈಶ್ಯ ಜನಾಂಗದವರು ಅವಕಾಶಗಳಿಂದ ವಂಚಿತರಾಗಿದ್ದಾರೆ. ಇವರಿಗೆ ಯಾವುದೇ ಸರ್ಕಾರಿ ಯೋಜನೆಗಳಿಲ್ಲ. ಈ ಜನಾಂಗದ ಬಡವರು ನಿಜವಾಗಿಯೂ ಕಷ್ಟದಲ್ಲಿದ್ದಾರೆ. ಇವರ ಏಳಿಗೆಗೆ ಯೋಜನೆಗಳನ್ನು ರೂಪಿಸಬೇಕು ಎಂದು ಕಾಂಗ್ರೆಸ್‌ ಪಕ್ಷದ ಕಾರ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ಮನವಿ ಮಾಡಿದರು.

ಈ ವೇಳೆ ಸಚಿವ ತನ್ವೀರ್ ಸೇಠ್, ಮುಖ್ಯಮಂತ್ರಿ ಅವರ ಜತೆ ಮಾತನಾಡುತ್ತಿದ್ದಾಗ, ‘ಈಗಲಾದರೂ ನಮಗೆ ಸಿ.ಎಂ ಅವರನ್ನು ಬಿಟ್ಟುಕೊಡಿ’ ಎಂದು ದಿನೇಶ್‌ ಗುಂಡೂರಾವ್ ಕೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ತನ್ವೀರ್‌ ಸೇಠ್, ‘ನಿಮ್ಮ ಸಮಸ್ಯೆಗಳನ್ನು ಸಿ.ಎಂ.ಅವರಿಗೆ ವಿವರಿಸುತ್ತಿದ್ದೇನೆ’ ಎಂದು ಹೇಳಿದರು.

ರಾಮಾನುಜಾಚಾರ್ಯರಿಂದ ದಲಿತರಿಗೆ ದೀಕ್ಷೆ: ಸಮಾರಂಭದಲ್ಲಿ ಮಾತನಾಡಿದ ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮದ ಅಧ್ಯಕ್ಷ ಎಂ.ಕೆ.ಸೋಮಶೇಖರ್, ‘ಬಸವಣ್ಣನವರಿಗಿಂತ ಮುಂಚೆ ರಾಮಾನುಜಾಚಾರ್ಯರು ದಲಿತರಿಗೆ ದೀಕ್ಷೆ ನೀಡುವ ಮೂಲಕ ಬ್ರಾಹ್ಮಣ ಸಮುದಾಯಕ್ಕೆ ಅವರನ್ನು ಬರಮಾಡಿಕೊಂಡರು. ಬ್ರಾಹ್ಮಣರ ಆಶೀರ್ವಾದದಿಂದ ನಾನು ಶಾಸಕನಾಗಲು ಸಾಧ್ಯವಾಯಿತು’ ಎಂದು ಹೇಳಿದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry