ನಗರದ ರಸ್ತೆಗಳಲ್ಲಿ ಗುಂಡಿಗಳ ದರ್ಬಾರು!

ಶುಕ್ರವಾರ, ಮೇ 24, 2019
32 °C

ನಗರದ ರಸ್ತೆಗಳಲ್ಲಿ ಗುಂಡಿಗಳ ದರ್ಬಾರು!

Published:
Updated:
ನಗರದ ರಸ್ತೆಗಳಲ್ಲಿ ಗುಂಡಿಗಳ ದರ್ಬಾರು!

ಬಾಗಲಕೋಟೆ: ನಗರದ ರಸ್ತೆಗಳಲ್ಲಿ ಗುಂಡಿಗಳದ್ದೇ ಕಾರುಬಾರು. ದಿನನಿತ್ಯ ನೂರಾರು ಜನರು, ವಾಹನಗಳು ಸಂಚರಿಸುತ್ತವೆ. ಆದರೆ ಗುಂಡಿಗಳಿಂದ ತಪ್ಪಿಸಿಕೊಳ್ಳಲು ಮಾತ್ರ ಸಾಧ್ಯವಿಲ್ಲ. ಯಮಕಿಂಕರನಂತೆ ಬಾಯಿ ತೆರೆದು ಕುಳಿತಿರುವ ಗುಂಡಿಗಳು ಬಲಿಗಾಗಿ ಕಾಯುತ್ತಿವೆ.

ಈ ರಸ್ತೆಯಲ್ಲಿ ಸಂಚರಿಸುವ ಪ್ರಯಾಣಿಕರ ಬೆನ್ನು, ಸೊಂಟ ಮುರಿದುಕೊಳ್ಳುವಷ್ಟು ಯಾತನೆಯ ಅನುಭವ. ಚಾಲಕರು ಹರಸಾಹಸ ಪಟ್ಟುಕೊಂಡು ಪ್ರಯಾಣ ಮಾಡಬೇಕು. ಇದು ಯಾವುದೋ ಹಳ್ಳಿಗೆ ಪ್ರಯಾಣಿಸುವ ರಸ್ತೆಯ ಕಥೆ ಅಲ್ಲ.. ಬದಲಿಗೆ ಇಲ್ಲಿನ ನವನಗರದ ರಸ್ತೆಗಳ ದುಸ್ಥಿತಿ.

ರಸ್ತೆಗಳೆಲ್ಲ ಹಾಳಾಗಿದ್ದು, ವಾಹನ ಸವಾರರು ಬಿದ್ದು ಗಾಯಗೊಂಡಿರುವ ಘಟನೆಗಳು ಸಹಿತ ನಡೆದಿವೆ. ಆದರೆ ಅಧಿಕಾರಿಗಳು, ಜನಪ್ರತಿನಿಧಿಗಳು ಸಮಸ್ಯೆಗೆ ಸ್ಪಂದಿಸದೇ ಜಾಣ ಕುರುಡುತನ ಪ್ರದರ್ಶಿಸುತ್ತಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಾರೆ.

ಅವೈಜ್ಞಾನಿಕ ಹಾಗೂ ಕಳಪೆ ಕಾಮಗಾರಿಯಿಂದಾಗಿ ರಸ್ತೆ ಕಿತ್ತು ಹೋಗಿದೆ. ಇದರಿಂದ ಅಪಘಾತ ಸಂಭವಿಸಿ ವಾಹನ ಸವಾರರು ತೊಂದರೆ ಅನುಭವಿಸುವಂತಾಗಿದೆ. ಅಧಿಕಾರಿಗಳು ಅವುಗಳನ್ನು ಮುಚ್ಚುವ ಪ್ರಯತ್ನ ಮಾಡುತ್ತಿಲ್ಲ. ಗುಣಮಟ್ಟದ ಕಾಮಗಾರಿ ಮಾಡಿದ್ದರೆ ಈ ಸಮಸ್ಯೆ ಉಂಟಾಗುತ್ತಿರಲಿಲ್ಲ ಎಂಬುದು ವಾಹನ ಸವಾರರ ಆರೋಪ.

ನಗರದ ರಸ್ತೆಗಳ ಸ್ಥಿತಿಗತಿ ಕೇಳುವವರೇ ಇಲ್ಲದಂತಾಗಿದೆ. ಕೆಲವು ಕಡೆ ನಿರ್ಮಾಣ ಮಾಡಿರುವ ಹಂಪ್ಸ್‌ ಕೂಡ ಅವೈಜ್ಞಾನಿಕವಾಗಿವೆ. ಇದರಿಂದ ವಾಹನ ಸವಾರರು ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ. ಸ್ವಲ್ಪ ಎಚ್ಚರ ತಪ್ಪಿದರೆ ಕೈ ಕಾಲು ಮುರಿದುಕೊಳ್ಳುವುದು ಖಚಿತ. ದೊಡ್ಡ ವಾಹನಗಳು ಚಾಲಕನ ನಿಯಂತ್ರಣ ತಪ್ಪಿದರೆ ಪ್ರಯಾಣಿಕರಿಗೆ ಸಾವು ನೋವು ತಪ್ಪಿದ್ದಲ್ಲ. ಹಾಗಾಗಿ ಅಪಾಯದ ಮುನ್ಸೂಚನೆ ಅರಿತು ಕೂಡಲೇ ಹಾಳಾದ ರಸ್ತೆಗಳ ದುರಸ್ತಿಗೆ ಸಂಬಂಧಪಟ್ಟವರು ಮುಂದಾಗಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.

ಮಹಾಂತೇಶ ಮಸಾಲಿ

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry