ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀಗಳಿಂದ ಚುನಾವಣೆ ಸಿದ್ಧತೆ

Last Updated 30 ಅಕ್ಟೋಬರ್ 2017, 4:49 IST
ಅಕ್ಷರ ಗಾತ್ರ

ಬಾಗಲಕೋಟೆ: ‘ಕಾಂಗ್ರೆಸ್‌ನವರು ಕರೆದು ಟಿಕೆಟ್ ಕೊಟ್ಟರೂ ಆ ಪಕ್ಷದಿಂದ ಸ್ಪರ್ಧಿಸುವುದಿಲ್ಲ. ರಾಜ್ಯದಲ್ಲಿ ಮಠಾಧೀಶರಿಗೂ ಬಿಜೆಪಿಗೂ ಅವಿನಾಭಾವ ಸಂಬಂಧವಿದೆ. ಹಾಗಾಗಿ ಬೀಳಗಿ ಕ್ಷೇತ್ರದಿಂದ ಬಿ-ಫಾರಂ ಕೇಳುತ್ತಿರುವೆ’ ಎಂದು ಹೇಳುತ್ತಾ ತಾಲ್ಲೂಕಿನ ರಾಮಾರೂಢ ಮಠದ ಪರಮರಾಮಾರೂಢ ಶ್ರೀಗಳು ಹಳ್ಳಿ ಹಳ್ಳಿ ಸುತ್ತುತ್ತಿದ್ದಾರೆ. ಇದು ಬಿಜೆಪಿ ಮುಖಂಡರ ನಿದ್ದೆಗೆಡಿಸಿದೆ.

‘ಬಿ– ಫಾರಂ ಹಂಚಿಕೆಯ ಕೊನೆ ಕ್ಷಣದವರೆಗೂ ಬಿಜೆಪಿ ಟಿಕೆಟ್‌ಗಾಗಿ ಪ್ರಯತ್ನಿಸುವೆ. ಟಿಕೆಟ್‌ ಸಿಗದಿದ್ದರೆ ಪಕ್ಷೇತರನಾಗಿಯೇ ಸ್ಪರ್ಧಿಸುವೆ’ ಎನ್ನುವ ಶ್ರೀಗಳು, ಆಗಸ್ಟ್ 24ರಿಂದ ಕ್ಷೇತ್ರದಲ್ಲಿ ಪ್ರಚಾರ ಆರಂಭಿಸಿದ್ದಾರೆ. ‘ಈಗಾಗಲೇ 120 ಹಳ್ಳಿಗಳಿಗೆ ಹೋಗಿ ಬಂದಿರುವೆ. ಎರಡನೇ ಹಂತದಲ್ಲಿ ಮನೆ ಮನೆ ಪ್ರಚಾರ ಆರಂಭಿಸುವೆ’ ಎನ್ನುತ್ತಾರೆ.

ಅಮಿತ್‌ಶಾ ಮೇಲೆ ಭರವಸೆ: ‘ಬೀಳಗಿಯಲ್ಲಿ ಮಾಜಿ ಸಚಿವ ಮುರುಗೇಶ ನಿರಾಣಿ ಅವರೇ ಪಕ್ಷದ ಅಭ್ಯರ್ಥಿ’ ಎಂದು ಇತ್ತೀಚೆಗೆ ಜಿಲ್ಲೆಗೆ ಬಂದಿದ್ದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಹೇಳಿದ್ದಾರೆ. ಬದಲಿಗೆ, ಯಾವುದೇ ಮಠಾಧೀಶರಿಗೂ ಟಿಕೆಟ್ ನೀಡುವುದಿಲ್ಲ ಎಂದೂ ಸ್ಪಷ್ಟಪಡಿಸಿದ್ದಾರೆ. ಆದರೂ ಸ್ವಾಮೀಜಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರತ್ತ ಕೈ ತೋರುತ್ತಾರೆ.

‘ಅಷ್ಟಕ್ಕೂ ಟಿಕೆಟ್ ಕೊಡುವ ಅಧಿಕಾರವನ್ನು ಯಡಿಯೂರಪ್ಪ ಅವರಿಗೆ ಹೈಕಮಾಂಡ್‌ ಕೊಟ್ಟಿಲ್ಲ. ಪಕ್ಷ ಸಂಘಟಿಸಿ ಕಾರ್ಯಕರ್ತರನ್ನು ಚುನಾವಣೆಗೆ ಸಿದ್ಧಗೊಳಿಸುವುದಷ್ಟೇ ಅವರ ಜವಾಬ್ದಾರಿ. ರಾಜ್ಯದಲ್ಲಿ 15 ಮಂದಿ ಸನ್ಯಾಸಿಗಳಿಗೆ ಟಿಕೆಟ್ ನೀಡುವುದಾಗಿ ಶಾ ಈ ಹಿಂದೆ ಹೇಳಿಕೆ ನೀಡಿದ್ದಾರೆ. ಅವರ ಮಾತಿನ ಮೇಲೆ ಭರವಸೆ ಇಟ್ಟಿರುವೆ. ಖಂಡಿತವಾಗಿಯೂ ನನಗೇ ಟಿಕೆಟ್‌ ಸಿಗಲಿದೆ’ ಎನ್ನುತ್ತಾರೆ.

ವಿಫಲ ಯತ್ನ: ಆದಿಚುಂಚನಗಿರಿ ಮಠಕ್ಕೆ ಇತ್ತೀಚೆಗೆ ಅಮಿತ್‌ ಶಾ ಬಂದಾಗ ಅವರನ್ನು ಭೇಟಿಯಾಗಲು ಶ್ರೀಗಳು ತೆರಳಿದ್ದರು. ಆದರೆ ಆಗ ಅವಕಾಶ ಸಿಕ್ಕಿರಲಿಲ್ಲ. ಯಡಿಯೂರಪ್ಪ ಅವರನ್ನು ಭೇಟಿಯಾಗಿ ಕೋರಿಕೆ ಸಲ್ಲಿಸಿದ್ದಾರೆ. ‘ಶೀಘ್ರ ದೆಹಲಿಗೆ ತೆರಳುವೆ. ನಾನೂ ಟಿಕೆಟ್ ಆಕಾಂಕ್ಷಿ ಎಂಬುದನ್ನು ಅಮಿತ್‌ಶಾ ಅವರಿಗೂ ಮನದಟ್ಟು ಮಾಡುವೆ’ ಎಂದು ಹೇಳುತ್ತಾರೆ.

‘ಈ ಹಿಂದೆ ಚಿತ್ರದುರ್ಗ ಬಳಿ ಪರಮರಾಮಾರೂಢ ಶ್ರೀಗಳ ಕಾರು ಅಪಘಾತಕ್ಕೀಡಾಗಿತ್ತು. ಆ ಪ್ರಕರಣದಲ್ಲಿ ತೊಂದರೆಗೀಡಾದವರಿಗೆ ಶ್ರೀಗಳು ₹80 ಲಕ್ಷ ಪರಿಹಾರ ನೀಡಬೇಕಿದೆ. ಆ ಹಣ ಸಂಗ್ರಹಿಸುವ ಸಲುವಾಗಿ ಶ್ರೀಗಳು ಚುನಾವಣೆಗೆ ಸ್ಪರ್ಧಿಸಲು ಮುಂದಾಗಿದ್ದಾರೆ’ ಎಂದು ಅವರ ವಿರೋಧಿಗಳು ಆರೋಪಿಸುತ್ತಾರೆ. ಅದರೆ ಇದನ್ನು ತಳ್ಳಿಹಾಕುವ ಶ್ರೀಗಳು, ‘ಅದು ರಾಜಕೀಯಕ್ಕೆ ಸಂಬಂಧವಿಲ್ಲದ ವ್ಯವಹಾರ. ಅಷ್ಟಕ್ಕೂ ಆ ಪ್ರಕರಣಕ್ಕೆ ಧಾರವಾಡ ಹೈಕೋರ್ಟ್‌ನಲ್ಲಿ ತಡೆಯಾಜ್ಞೆ ಸಿಕ್ಕಿದೆ. ಇದೆಲ್ಲಾ ಹಣದ ಮೇಲೆ ರಾಜಕೀಯ ಮಾಡಲು ಹೊರಟಿರುವವರ ಅಪಪ್ರಚಾರ’ ಎನ್ನುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT