ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜೆಡಿಎಸ್‌ನಲ್ಲಿ ಉಸಿರುಗಟ್ಟಿಸುವ ವಾತಾವರಣ’

Last Updated 30 ಅಕ್ಟೋಬರ್ 2017, 4:56 IST
ಅಕ್ಷರ ಗಾತ್ರ

ವಿಜಯಪುರ: ‘ಜೆಡಿಎಸ್‌ನಲ್ಲಿ ಉಸಿರುಗಟ್ಟಿಸುವ ವಾತಾವರಣದಿಂದ ಬೇಸತ್ತು ಪಕ್ಷದಿಂದ ಹೊರಬಂದಿದ್ದೇನೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವೇ ಪುನಃ ಅಧಿಕಾರಕ್ಕೆ ಬರಲಿದ್ದು, ಮುಸ್ಲಿಂ ಸಮುದಾಯದವರು ಒಗ್ಗಟ್ಟಿನಿಂದ ಕಾಂಗ್ರೆಸ್‌ ಪಕ್ಷವನ್ನು ಬೆಂಬಲಿಸಬೇಕು’ ಎಂದು ಶಾಸಕ ಜಮೀರ್ ಅಹಮದ್ ಅವರು ವಿಶ್ವಾಸ ವ್ಯಕ್ತಪಡಿಸಿದರು.

ಇಲ್ಲಿನ 22ನೇ ವಾರ್ಡಿನ ಮಹೆಬೂಬ್ ನಗರದಲ್ಲಿ ಭಾನುವಾರ ಆಯೋಜಿಸಿದ್ದ ಆಜಾದ್ ಸೋಷಿಯಲ್ ವರ್ಕ್ ಸಂಘದ ಉದ್ಘಾಟನೆ ಸಮಾರಂಭದಲ್ಲಿ ಅವರು ಮಾತನಾಡಿದರು. ಜೆಡಿಎಸ್‌ನಲ್ಲಿ ನಾಯಕರಿಗೆ ಚಿತ್ರಹಿಂಸೆ ಇದೆ. ಇಕ್ಭಾಲ್ ಅನ್ಸಾರಿ, ಸಿ.ಎಂ.ಇಬ್ರಾಹಿಂ, ಅಜೀಂ ಸಾಬ್, ರೋಷನ್ ಬೇಗ್ ಸೇರಿದಂತೆ ಬಹುತೇಕ ಮುಸ್ಲಿಂ ನಾಯಕರನ್ನು ಪಕ್ಷದಲ್ಲಿ ನಿರ್ನಾಮ ಮಾಡಲು ಹೊರಟಿದ್ದರು ಎಂದು ದೂರಿದರು.

‘ಎಚ್.ಡಿ. ದೇವೇಗೌಡ, ಎಚ್.ಡಿ.ಕುಮಾರಸ್ವಾಮಿ ನನ್ನನ್ನು ರಾಜಕೀಯವಾಗಿ ಮುಗಿಸಲು ಹುನ್ನಾರ ನಡೆಸಿದ್ದರು. ಮೇಲ್ಮನೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆಮತ ನೀಡುವಂತೆ ಹೇಳಿದ್ದ ಕುಮಾರಸ್ವಾಮಿ ನನ್ನ ಮೇಲೆ ಇಲ್ಲಸಲ್ಲದ ಆರೋಪ ಮಾಡಿದರು’ ಎಂದರು.

‘ಪಕ್ಷ ಬಿಡುವುದು ಅನಿವಾರ್ಯವಾಗಿತ್ತು. ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷ ಎಂಬ ಎರಡು ಅವಕಾಶಗಳು ನನಗಿದ್ದವು. ಮುಸ್ಲಿಮರು ಸೇರಿದಂತೆ ಎಲ್ಲಾ ವರ್ಗಗಳಿಗೆ ಸಾಮಾಜಿಕ ನ್ಯಾಯ ಕಲ್ಪಿಸುವ ಏಕೈಕ ಪಕ್ಷ ಕಾಂಗ್ರೆಸ್ ಆಗಿದ್ದರಿಂದ ಕಾಂಗ್ರೆಸ್‌ನೊಂದಿಗೆ ಉತ್ತಮ ಒಡನಾಟ ಇಟ್ಟುಕೊಂಡಿದ್ದೇನೆ’ ಎಂದು ತಿಳಿಸಿದರು.

ಬಿಜೆಪಿ ಸರ್ಕಾರದ ಅವಧಿಯಲ್ಲಿ ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಸದಾನಂದಗೌಡರು ಟಿಪ್ಪು ಸುಲ್ತಾನ್ ಜಯಂತಿ ಮಾಡಿದ್ದರು. ಖಡ್ಗ ಹಿಡಿದು ವೀರಾವೇಷ ಪ್ರದರ್ಶನ ಮಾಡಿದ್ದರು. ಈಗ ಅವರೇ ವಿರೋಧ ವ್ಯಕ್ತಪಡಿಸುತ್ತಿರುವುದು ಹಾಸ್ಯಾಸ್ಪದವಾಗಿದೆ ಎಂದು ಟೀಕಿಸಿದರು.

‘ಹಿಂದೂ, ಮುಸ್ಲಿಂ, ಕ್ರೈಸ್ತ, ಜೈನ, ಧರ್ಮಗಳ ಜನರು ಸೇರಿದಂತೆ ಎಲ್ಲಾ ಜಾತಿ ವರ್ಗದ ಜನರು ಒಟ್ಟಾಗಿ ಸಹೋದರತೆಯಿಂದ ಬಾಳುತ್ತಿರುವ ದೇಶವಿದ್ದರೆ ಅದು ಭಾರತ ಮಾತ್ರ. ಈ ದೇಶ ಯಾರ ಸ್ವತ್ತಲ್ಲ. ಇದು ನಮ್ಮ ದೇಶ, ಜಾತ್ಯತೀತತೆಯ ಹೆಸರು ಹೇಳುವ ಆರ್.ಎಸ್.ಎಸ್. ಒಡೆದು ಆಳುವ ನೀತಿಗೆ ಕೈ ಹಾಕಿದೆ’ ಎಂದರು.

ದೇಶಕ್ಕೆ ಒಳ್ಳೆಯ ದಿನಗಳು ಬಂದೇ ಬರುತ್ತದೆ ಎಂದು ಹೇಳಿದ್ದ ಪ್ರಧಾನಿ ನರೇಂದ್ರ ಮೋದಿ ಏನು ಮಾಡುತ್ತಿದ್ದಾರೆ. ಕಪ್ಪು ಹಣ ಬರಲಿಲ್ಲ. ವಿದೇಶಿ ಬ್ಯಾಂಕುಗಳಲ್ಲಿದ್ದ ಹಣ ಏನಾಯಿತು ಎಂದು ಅವರು ಕೇಳಿದರು. ಮುಂದೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವುದರ ಮೂಲಕ ಅಚ್ಛೇ ದಿನ್ ಇಲ್ಲಿ ಬರಲಿದೆ ಎಂದು ತಿಳಿಸಿದರು.

ಕಾಂಗ್ರೆಸ್ ನಾಯಕ ವಿ.ಮಂಜುನಾಥ್ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಬೇಕಾದರೆ ಅಲ್ಪಸಂಖ್ಯಾತರು ಮುಖ್ಯವಾಗಿದ್ದಾರೆ. ಮುಂದಿನ ಚುನಾವಣೆಯಲ್ಲೂ ಒಗ್ಗಟ್ಟು ಪ್ರದರ್ಶನ ಮಾಡಬೇಕು. ಕಾಂಗ್ರೆಸ್ ಪುನಃ ಅಧಿಕಾರಕ್ಕೆ ಬರಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಲ್ಪಸಂಖ್ಯಾತರ ಏಳಿಗೆಗಾಗಿ ಅನೇಕ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದಾರೆ. ಇವುಗಳನ್ನು ಜನರಿಗೆ ಮನವರಿಕೆ ಮಾಡಿಕೊಡುವ ಕಾರ್ಯಕರ್ತರು ಮಾಡಬೇಕು ಎಂದರು.

ಉರ್ದು ಶಾಲೆಗಳ ಸಂಖ್ಯೆ ಹೆಚ್ಚಾಗಬೇಕು. ಟಿಪ್ಪು ಸಾಹಿಬ್ ಎಂದೂ ಕರೆಯಲ್ಪಡುತ್ತಿದ್ದ ಟಿಪ್ಪು ಸುಲ್ತಾನ್ ಬ್ರಿಟಿಷ್ ಸಾಮ್ರಾಜ್ಯಶಾಹಿಯ ವಿರುದ್ಧ ಹೋರಾಡಿದ ಪ್ರಮುಖರು. ಇದರ ಪರಿಣಾಮವಾಗಿ ಟಿಪ್ಪುವಿಗೆ ಶೇರ್-ಎ- ಮೈಸೂರ್ (ಮೈಸೂರ ಹುಲಿ) ಎಂಬ ಬಿರುದು ಕೊಡಲಾಗಿದೆ ಎಂದರು.

ಅವರ ಜಯಂತಿ ಆಚರಣೆಗೆ ಅಡ್ಡಿಪಡಿಸುವುದು ಸರಿಯಲ್ಲ. ಟಿಪ್ಪುಸುಲ್ತಾನ್ ಮೈಸೂರನ್ನು ರಕ್ಷಿಸಲು ಬ್ರಿಟಿಷರೊಂದಿಗೆ ಹೋರಾಡಿದವರು. ಯುದ್ಧದಲ್ಲಿ ರಾಕೆಟ್ ತಂತ್ರಜ್ಞಾನ ಪರಿಚಯಿಸಿದ ಮೊದಲ ವ್ಯಕ್ತಿ. ಮೈಸೂರು ರಾಜ್ಯಕ್ಕೆ ರೇಷ್ಮೆಯನ್ನು ಪರಿಚಯಿಸಿದ್ದರು ಎಂದರು.

500 ಮಂದಿ ಬಡವರಿಗೆ ಸೀರೆಗಳು, ಶಾಲಾ ಮಕ್ಕಳಿಗೆ ನೋಟ್ ಪುಸ್ತಕ ವಿತರಿಸಿದರು. ನಾಲ್ಕು ಮಂದಿ ಬಡವರಿಗೆ ಆಟೊ ರಿಕ್ಷಾಗಳ ಖರೀದಿಗಾಗಿ ಎರಡು ಲಕ್ಷ ರೂಪಾಯಿ, ಐದು ಮಂದಿ ಅಂಗವಿಕಲರಿಗೆ ತಲಾ ₹10 ಸಾವಿರ ಸಹಾಯಧನ ನೀಡಿದರು.

ಇಲ್ಲಿನ ಪ್ರವಾಸಿಮಂದಿರದಿಂದ ಅದ್ದೂರಿ ಮೆರವಣಿಗೆ ನಡೆಸಲಾಯಿತು. ಪಟಾಕಿ ಸಿಡಿಸುವ ಮೂಲಕ ಭವ್ಯ ಸ್ವಾಗತ ನೀಡಿದ ಕಾರ್ಯಕರ್ತರು, ತೆರೆದ ವಾಹನದಲ್ಲಿ ವೇದಿಕೆಗೆ ಕರೆ ತಂದರು. ಪುರಸಭಾ ಸದಸ್ಯರಾದ ಎಂ.ಸತೀಶ್ ಕುಮಾರ್, ಮಹೇಶ್ ಕುಮಾರ್, ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ವಿ.ಎಂ.ನಾಗರಾಜ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT