ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕುಂಚಿಟಿಗರ ಹೋರಾಟ ಯಾರ ವಿರುದ್ಧವೂ ಅಲ್ಲ’

Last Updated 30 ಅಕ್ಟೋಬರ್ 2017, 5:00 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ಕುಂಚಿಟಿಗ ಸಮುದಾಯ ಹಿಂದುಳಿದ ವರ್ಗಗಳ ಪಟ್ಟಿಗೆ ಸೇರುವುದಕ್ಕಾಗಿ ಸಂಘಟನೆ ಮತ್ತು ಹೋರಾಟ ನಡೆಸುತ್ತಿದೆಯೇ ಹೊರತು ಯಾರ ವಿರುದ್ಧವೂ ಅಲ್ಲ ಎಂದು ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಮುರುಳಿಧರ ಹಾಲಪ್ಪ ಹೇಳಿದರು.

ತಾಲ್ಲೂಕು ಕುಂಚಿಟಿಗರ ಸಂಘದ ವತಿಯಿಂದ ನಗರದಲ್ಲಿ ಭಾನುವಾರ ನಡೆದ ಪ್ರತಿಭಾ ಪುರಸ್ಕಾರ, ತಾಲ್ಲೂಕು ಕುಂಚಿಟಿಗ ಸರ್ಕಾರಿ ನೌಕರರ ಸಂಘ ಹಾಗೂ ಕುಂಚಿಟಿಗ ಯುವ ಘಟಕದ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕುಂಚಿಟಿಗ ಸಮುದಾಯ ಒಗ್ಗಟ್ಟಾಗುತ್ತಿದೆ. ಸಮುದಾಯವನ್ನು ಒಬಿಸಿ ವರ್ಗಕ್ಕೆ ಸೇರಿಸಲು ಕೇಂದ್ರ ಸರ್ಕಾರ ರಾಜ್ಯ ಸರ್ಕಾರಕ್ಕೆ ವರದಿಯನ್ನು ಕೇಳಿದೆ. ರಾಜ್ಯ ಸರ್ಕಾರ ವಿಳಂಬ ಮಾಡದೆ ಕೇಂದ್ರಕ್ಕೆ ವರದಿ ಕಳುಹಿಸಬೇಕು ಎಂದು ಅವರು ಹೇಳಿದರು.

ಎಲೆರಾಂಪುರದ ಕುಂಚಿಟಿಗರ ಸಂಸ್ಥಾನ ಮಠ ಹನುಮಂತನಾಥಸ್ವಾಮಿ ಮಾತನಾಡಿ, ಕುಂಚಿಟಿಗ ಸರ್ಕಾರಿ ನೌಕರರ ಸಂಘ ಹಾಗೂ ಯುವ ಘಟಕದ ಸ್ಥಾಪನೆ ಶ್ಲಾಘನೀಯ. ಮುಂದಾಳತ್ವ ವಹಿಸುವವರು ಪ್ರಾಮಾಣಿಕರಾಗಿದ್ದಾಗ ಮಾತ್ರ ಸಂಘಟನೆಗಳ ಬೆಳವಣಿಗೆ ಸಾಧ್ಯ ಎನ್ನುವುದನ್ನು ಅಧ್ಯಕ್ಷ ಹಾಗೂ ಪದಾಧಿಕಾರಿಗಳು ಅರಿಯುವಂತಾಗ
ಬೇಕಿದೆ ಎಂದರು.

ಯಾವುದೇ ಪಕ್ಷ, ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದರೂ ಸಮುದಾಯಕ್ಕೆ ತೊಂದರೆಯಾದಾಗ ಎಲ್ಲರೂ ಒಂದಾಗಬೇಕಿದೆ. ಯುವ ಸಮುದಾಯದ ಪಾತ್ರ ಪ್ರಮುಖ ಎಂದರು.ಕಾರ್ಯಕ್ರಮಕ್ಕೆಂದು ಕಟ್ಟಲಾಗಿದ್ದ ಬ್ಯಾನರ್‌ಗಳನ್ನು ರಾತ್ರೋರಾತ್ರಿ ಹರಿದು ಹಾಕಿದ್ದಾರೆ. ಬ್ಯಾನರ್ ಹರಿದ ಮಾತ್ರಕ್ಕೆ ಸಂಘಟನೆಯನ್ನು ಒಡೆಯಬಹುದೆಂದು ತಿಳಿದಿದ್ದರೆ ಮೂರ್ಖತನ.

ಶಾಂತಿಪ್ರಿಯರಾದ ಕುಂಚಿಟಿಗರ ತಂಟೆಗೆ ಬಂದರೆ ಸಿಡಿದು ನಿಲ್ಲಬೇಕಾಗುವುದು ಎಂದು ತಾಲ್ಲೂಕು ಕುಂಚಿಟಿಗರ ಸಂಘದ ಅಧ್ಯಕ್ಷ ಸಿ.ವಿ.ಲಕ್ಷ್ಮೀಪತಯ್ಯ ಎಚ್ಚರಿಕೆ ನೀಡಿದರು.
ಕುಂಚಗಿರಿ ಕುಂಚಿಟಿಗರ ಸಂಸ್ಥಾನಮಠದ ಶಾಂತವೀರಮಹಾ ಸ್ವಾಮಿ, ಕುಂಚ ಮಹಾಮಂಡಲದ ಕಾರ್ಯಾಧ್ಯಕ್ಷ ನಾಗರಾಜ್, ಬಿಬಿಎಂಪಿಸದಸ್ಯ ಲೋಕೇಶ್, ಕುಂಚಿಟಿಗ ಸಂಘದ ರಾಜ್ಯ ಅಧ್ಯಕ್ಷ ವಿನಯ್‌ಕುಮಾರ್ ಪೂಜಾರ್, ಗೌರವ ಅಧ್ಯಕ್ಷ ವಿ.ಅಂಜಿನಪ್ಪ, ಕಾರ್ಯಾಧ್ಯಕ್ಷ ಆರ್‌.ಕೆಂಪರಾಜ್, ತಾಲ್ಲೂಕು ಪಂಚಾಯಿತಿ ಸದಸ್ಯ ಮಹೇಶ್, ಉಪಾಧ್ಯಕ್ಷ ವೀರಖ್ಯಾತಪ್ಪ, ಬಿ.ಎಸ್‌.ಸಿದ್ದಗಂಗಯ್ಯ, ಮುಖಂಡರಾದ ಮುನಿರಾಜ್, ಭೀಮರಾಜ್, ವೆಂಕಟರಾಮ್, ಲಕ್ಷ್ಮಣ್, ಶಿವು, ಮುತ್ತರಾಜು, ಹನುಮಂತರಾಯಪ್ಪ, ವಿನೋದ್‌ಕುಮಾರ್ ಹಾಜರಿದ್ದರು.

ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿ ವರ್ಷ ಪ್ರತಿಭಾ ಪುರಸ್ಕಾರ ಆಯೋಜಿಸಲು ಕಾರ್ಯಾಧ್ಯಕ್ಷ ನಾಗರಾಜ್ ಮತ್ತು ಮುರುಳಿಧರ ಹಾಲಪ್ಪ ಧನಸಹಾಯ ನೀಡಿದರು. ಬಿಬಿಎಂಪಿ ಸದಸ್ಯ ಲೋಕೇಶ್ ಸಂಘದ ಕಚೇರಿ ನಿರ್ಮಿಸಲು ನಿವೇಶನ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT