ಬೆಳೆಗಳ ಮಾಹಿತಿಗಾಗಿ ಜಿಪಿಎಸ್ ಕಾರ್ಯ

ಮಂಗಳವಾರ, ಜೂನ್ 25, 2019
23 °C

ಬೆಳೆಗಳ ಮಾಹಿತಿಗಾಗಿ ಜಿಪಿಎಸ್ ಕಾರ್ಯ

Published:
Updated:
ಬೆಳೆಗಳ ಮಾಹಿತಿಗಾಗಿ ಜಿಪಿಎಸ್ ಕಾರ್ಯ

ಕೂಡ್ಲಿಗಿ: ಮುಂಗಾರು ಹಂಗಾಮಿನ ಬೆಳೆ ಹಾಗೂ ಹಾನಿಯ ಕುರಿತು ಖಚಿತ ಮಾಹಿತಿಗಾಗಿ ಎಲ್ಲೆಡೆ ಬೆಳೆಗಳ ಜಿಪಿಎಸ್ ಸಮೀಕ್ಷಾ ಕಾರ್ಯ ನಡೆದಿದೆ. ತಾಲ್ಲೂಕಿನಲ್ಲಿ ಕಂದಾಯ ಇಲಾಖೆ ಸಿಬ್ಬಂದಿ ಹಾಗೂ ಸರ್ವೆದಾರರು ಪ್ರತಿಯೊಂದು ಹೊಲಗಳಿಗೆ ತೆರಳಿ ಬೆಳೆ ಸಮೀಕ್ಷೆ ಕಾರ್ಯವನ್ನು ಭರದಿಂದ ನಡೆಸುತ್ತಿದ್ದಾರೆ.

ಈ ಹಿಂದೆ ನಡೆಯುತ್ತಿದ್ದ ಬೆಳೆ ಹಾನಿ ಸಮೀಕ್ಷೆಗಳಲ್ಲಿ ಸಾಕಷ್ಟು ವ್ಯತ್ಯಾಸ ಕಂಡು ಬರುತ್ತಿತ್ತು. ಸಮೀಕ್ಷೆ ಕಾರ್ಯಕ್ಕೆ ನಿಯೋಜಿತರಾಗಿದ್ದ ಸಿಬ್ಬಂದಿ ಅಂದಾಜಿನ ಮೇಲೆ ಮಾಹಿತಿ ಸಂಗ್ರಹಿಸುತ್ತಿದ್ದರು.‌ ಆದರೆ, ಈಗ ಜಿಪಿಎಸ್‌ ಮೂಲಕ ಸಮೀಕ್ಷೆ ನಡೆಸುವುದರಿಂದ ನಿಖರವಾಗಿರಲಿದೆ.

ತಾಲ್ಲೂಕಿನಲ್ಲಿ 37 ಮಂದಿ ಗ್ರಾಮ ಲೆಕ್ಕಾಧಿಕಾರಿಗಳು, 6 ಜನ ಕೃಷಿ ಇಲಾಖೆಯ ಅಧಿಕಾರಿಗಳು ಹಾಗೂ ಇಬ್ಬರು ಗ್ರಾಮೀಣ ಸೇವಾ ಕೇಂದ್ರದ ಪ್ರತಿನಿಧಿಗಳು ಸಮೀಕ್ಷಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಪ್ರತಿ ದಿನ ನೂರಾರು ಎಕರೆ ಜಮೀನಿಗೆ ಭೇಟಿ ನೀಡಿ ಸಮೀಕ್ಷೆ ನಡೆಸುತ್ತಿದ್ದಾರೆ.

ಸಮೀಕ್ಷೆ ನಡೆಸುವವರು ಬಂದಾಗ ರೈತರು ಉಪಸ್ಥಿತಿ ಇರಬೇಕು. ಒಂದು ವೇಳೆ ಬೆಳೆ ಕಟಾವು ಮಾಡಿದ್ದರೆ, ಹೊಲದಲ್ಲಿ ಹಿಂದೆ ಯಾವ ಬೆಳೆ ಬೆಳೆಯಾಗಿತ್ತು ಎಂಬುದನ್ನು ಮಾಹಿತಿ ನೀಡಬೇಕು. ಒಂದು ವೇಳೆ ರೈತರು ಸಿಗದಿದ್ದರೂ ಬೆಳೆಯ ಪೋಟೊ ತೆಗೆದು ನಂತರ ಅವರ ಆಧಾರ್ ಸಂಖ್ಯೆ ಪಡೆದು ತುಂಬಬಹುದು.

ಸಿಬ್ಬಂದಿ ಕೊರತೆ: ತಾಲ್ಲೂಕಿನಲ್ಲಿ ಒಟ್ಟು 86 ಕಂದಾಯ ಗ್ರಾಮಗಳಿದ್ದು, ಸುಮಾರು 131 ಉಪ ಗ್ರಾಮಗಳಿವೆ. ಆದರೆ, 45 ಜನ ಮಾತ್ರ ಗ್ರಾಮ ಲೆಕ್ಕಾಧಿಕಾರಿಗಳು ಇದ್ದು, ಇವರಲ್ಲಿ 7 ಜನ ತಾಲ್ಲೂಕು ಕಚೇರಿ ಕೆಲಸ ನಿರ್ವಹಿಸುತ್ತಾರೆ. 11 ಹುದ್ದೆಗಳು ಖಾಲಿ ಇವೆ.

ಇದರಿಂದ ಒಬ್ಬಬ್ಬ ಗ್ರಾಮ ಲೆಕ್ಕಾಧಿಕಾರಿ ಎರಡರಿಂದ ಮೂರು ಕಂದಾಯ ಗ್ರಾಮಗಳಲ್ಲಿ ಬೆಳೆ ನಮೂದು ಮಾಡಬೇಕಾಗಿದೆ. ಕೂಡ್ಲಿಗಿ ಹೋಬಳಿಯಲ್ಲಿ 18,184. ಕಾನಹೊಸಹಳ್ಳಿ 33,509, ಗುಡೇಕೋಟೆ 22.130, ಹಾಗೂ ಕೊಟ್ಟೂರು ಹೋಬಳಿಯಲ್ಲಿ 34,106 ಸೇರಿ ಒಟ್ಟು 107, 929 ಪಹಣಿಗಳಿವೆ. ಇವುಗಳನ್ನು ಜಿಪಿಎಸ್ಮೂಲಕ ಪಹಣಿ ಸಂಖ್ಯೆ ಆಳವಡಿಸಿ ಅದೇ ಹೊಲದಲ್ಲಿ ನಿಂತು ಪೋಟೊ ತೆಗೆಯೆಬೇಕು. ನಂತರ ಬೆಳೆ ವಿವರ ಹಾಕಿ ಅದನ್ನು ಆ್ಯಪ್‌ನಲ್ಲಿ ಅಪ್‌ಲೋಡ್‌ ಮಾಡಬೇಕು.

ಕೈಕೊಡುವ ಬ್ಯಾಟರಿ, ನೆಟ್‌ವರ್ಕ್‌: ನವೆಂಬರ್ 5ರೊಳಗೆ ಸಮೀಕ್ಷೆ ಮುಗಿಸಬೇಕು ಎಂದು ಗಡುವು ನೀಡಲಾಗಿದೆ. ಇದರಿಂದಾಗಿ ನಿರಂತರವಾಗಿ ಮೊಬೈಲನ್ನು ಆನ್ ಮಾಡಿಕೊಂಡೆ ಇಟ್ಟುಕೊಳ್ಳುವುದರಿಂದ ಮೂರ್ನಾಲ್ಕು ತಾಸುಗಳಲ್ಲಿ ಬ್ಯಾಟರಿ ಚಾರ್ಜ್ ಮುಗಿದು ಹೋಗುತ್ತದೆ. ಮತ್ತೆ ಬ್ಯಾಟರಿ ಚಾರ್ಜ್ ಮಾಡಿಕೊಳ್ಳಲು ಮನೆಗೆ ಬರಬೇಕು.

ಗುಡ್ಡಗಾಡು ಪ್ರದೇಶಗಳಲ್ಲಿ ಮೊಬೈಲ್ ಟವರ್ ದೂರ ಇರುವ ಹೊಲಗಳಲ್ಲಿ ನೆಟ್‌ವರ್ಕ್ ಸಿಗುವುದಿಲ್ಲ. ಇದರಿಂದ ಬೆಳೆ ಪೋಟೊ ತೆಗೆದುಕೊಂಡು, ಮಾಹಿತಿ ಕಲೆ ಹಾಕಿಕೊಂಡು ಬಂದು ನೆಟ್‌ವರ್ಕ್ ಸಿಗುವ ಜಾಗದಲ್ಲಿ ಅಪ್‌ಲೋಡ್ ಮಾಡಬೇಕಾದ ಸ್ಥಿತಿ ಇದೆ. ಕೆಲವೊಂದು ಕಡೆ ರೈತರು ತಮ್ಮ ಆಧಾರ್ ಸಂಖ್ಯೆಯನ್ನು ನೀಡುವುದು ಕೂಡ ತಡವಾಗುತ್ತದೆ. ಇದರಿಂದ ನಿಗದಿತ ಸಮಯಕ್ಕೆ ಸರಿಯಾಗಿ ಸಮೀಕ್ಷಾ ಕಾರ್ಯ ಮುಗಿಸುವುದು ಸಾಧ್ಯವಾಗುವುದಿಲ್ಲ’ ಎಂದು ಕಂದಾಯ ಇಲಾಖೆಯ ಅಧಿಕಾರಿಗಳು ಹೇಳುತ್ತಾರೆ.

ಕಾಡು ಪ್ರಾಣಿಗಳ ಹೆದರಿಕೆ: ತಾಲ್ಲೂಕಿನಲ್ಲಿ ಅನೇಕ ಕಡೆ ಕರಡಿ, ಕಾಡು ಹಂದಿ, ಚಿರತೆಯಂತಹ ಕಾಡು ಪ್ರಾಣಿಗಳು ಬೆಳೆಗಳಲ್ಲಿ ಸೇರಿಕೊಂಡಿರುತ್ತವೆ. ಗುಡೇಕೋಟೆ ಹೋಬಳಿ ವ್ಯಾಪ್ತಿಯಲ್ಲಿ ಅನೇಕ ಕಡೆ ಹೊಲಗಳಲ್ಲಿ ಕರಡಿಗಳು ಕಂಡು ಬಂದಿವೆ. ಜೋಳ, ಸಜ್ಜೆ, ಮೆಕ್ಕೆ ಜೋಳದಂತಹ ಬೆಳೆಗಳಲ್ಲಿ ಒಳ ಹೊಕ್ಕು ಪೋಟೊ ತೆಗೆಯಬೇಕಾಗುತ್ತದೆ. ಈ ಸಂದರ್ಭದಲ್ಲಿ ದಾಳಿ ಮಾಡುವ ಸಂಭವವಿದೆ. ಅದ್ದರಿಂದ ನಾಲ್ಕೈದು ಜನ ರೈತರನ್ನು ಜೊತೆಗೆ ಕರೆದುಕೊಂಡೇ ಹೋಗಬೇಕು ಎನ್ನುತ್ತಾರೆ’ ಕೂಡ್ಲಿಗಿ ಗ್ರಾಮ ಲೆಕ್ಕಾಧಿಕಾರಿ ನವೀನ್ ಕುಮಾರ್.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry