ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕಾಮಗಾರಿ ನನೆಗುದಿಗೆ ಬೀಳಿಸುವುದು ಕಾಂಗ್ರೆಸ್ ಸಂಸ್ಕೃತಿ’

Last Updated 30 ಅಕ್ಟೋಬರ್ 2017, 5:31 IST
ಅಕ್ಷರ ಗಾತ್ರ

ಬೀದರ್: ‘ಅಭಿವೃದ್ಧಿ ಕಾಮಗಾರಿಗಳನ್ನು ನನೆಗುದಿಗೆ ಬೀಳಿಸುವುದು ಕಾಂಗ್ರೆಸ್ ಸಂಸ್ಕೃತಿ’ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಟೀಕಿಸಿದರು. ನಗರದಲ್ಲಿ ಭಾನುವಾರ ಬೀದರ್-ಕಲಬುರ್ಗಿ ರೈಲು ಮಾರ್ಗ ಉದ್ಘಾಟಿಸಿದ ನಂತರ ನೆಹರೂ ಕ್ರೀಡಾಂಗಣದಲ್ಲಿ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಿದರು.

‘ಅಟಕಾನಾ, ಲಟಕಾನಾ, ಭಟಕಾನಾ (ಸಿಕ್ಕಿಸುವುದು, ತೂಗು ಹಾಕುವುದು, ಅಲೆದಾಡಿವುದು) ಕಾಂಗ್ರೆಸ್ ಶೈಲಿ ಆಗಿದೆ. ಇದಕ್ಕೆ ಜನ ತಿಲಾಂಜಲಿ ನೀಡದ ಹೊರತು ಪ್ರಗತಿ ಸಾಧ್ಯ ಇಲ್ಲ. ಈಗ ನಾವು ಹೊಣೆ ಹೊತ್ತುಕೊಂಡಿದ್ದೇವೆ. ಇನ್ನು ಅಂಥದ್ದು ನಡೆಯದು’ ಎಂದು ತಿಳಿಸಿದರು.

‘ಮಹತ್ವದ ಯೋಜನೆಗಳನ್ನು ಸಾಧ್ಯವಾದಷ್ಟು ಕಡಿಮೆ ಅವಧಿಯೊಳಗೆ ಪೂರ್ಣಗೊಳಿಸಲು ಎಲ್ಲ ಕ್ರಮ ಕೈಗೊಳ್ಳಲಾಗುವುದು. ನನೆಗುದಿಗೆ ಬಿದ್ದಿದ್ದ ನೀರಾವರಿಗೆ ಸಂಬಂಧಿಸಿದ 90 ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಕಾಮಗಾರಿಗೆ ವೇಗ ಕೊಡಲಾಗಿದೆ’ ಎಂದು ಹೇಳಿದರು. ‘ಬೀದರ್-ಕಲಬುರ್ಗಿ ರೈಲು ಮಾರ್ಗದ ಶೇಕಡ 65 ರಷ್ಟು ಕಾಮಗಾರಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ಆಗಿದೆ’ ಎಂದು ತಿಳಿಸಿದರು.

‘ಹೊಸ ರೈಲು ಮಾರ್ಗದ ಆರಂಭದಿಂದ ಬೀದರ್ ಜನತೆಗೆ ಬೆಂಗಳೂರು ಜತೆಗೆ ಮುಂಬಯಿ ಸಹ ಹತ್ತಿರವಾಗಲಿದೆ’ ಎಂದು ಹೇಳಿದರು. ‘ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿ ಆಗಿದ್ದಾಗ ಬೀದರ್-ಕಲಬುರ್ಗಿ ಹೊಸ ರೈಲು ಮಾರ್ಗ ನಿರ್ಮಾಣದ ನಿರ್ಣಯ ಕೈಗೊಳ್ಳಲಾಗಿತ್ತು. 20 ವರ್ಷಗಳ ನಂತರ ಈ ಭಾಗದ ಜನರ ಕನಸು ನನಸಾಗಿದೆ. ಕೊನೆಗೂ ರೈಲು ಮಾರ್ಗ ಶುರುವಾಗಿರುವುದು ಒಂದೆಡೆ ಸಂತಸ ಉಂಟು ಮಾಡಿದರೆ, ಮತ್ತೊಂದೆಡೆ ಸುದೀರ್ಘ ಅವಧಿ ತೆಗೆದುಕೊಂಡಿರುವುದು ಬೇಸರದ ಸಂಗತಿಯಾಗಿದೆ’ ಎಂದು ಹೇಳಿದರು.

‘₹ 400 ಕೋಟಿ ವೆಚ್ಚದಲ್ಲಿ ಪೂರ್ಣಗೊಳ್ಳಬೇಕಿದ್ದ ಯೋಜನೆಗೆ 300 ಪಟ್ಟು ಹೆಚ್ಚು ಅನುದಾನ ಖರ್ಚು ಮಾಡಬೇಕಾಯಿತು. 3 ವರ್ಷಗಳಲ್ಲಿ ಆಗಬೇಕಿದ್ದ ಕೆಲಸಕ್ಕೆ 20 ವರ್ಷ ಹಿಡಿಯಿತು. ಹಿಂದೆ ಅಧಿಕಾರದಲ್ಲಿ ಇದ್ದವರು ಸ್ವಲ್ಪವೂ ಗಂಭೀರವಾಗಿ ತೆಗೆದುಕೊಂಡಿದ್ದರೆ ಏಳು ವರ್ಷಗಳ ಹಿಂದೆಯೇ ಯೋಜನೆ ಮುಗಿಯುತ್ತಿತ್ತು’ ಎಂದು ತಿಳಿಸಿದರು.

‘ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ ರಾಜ್ಯದಲ್ಲಿ ಅನುಷ್ಠಾನಗೊಳ್ಳುವ ರೈಲ್ವೆ ಯೋಜನೆಗಳಿಗೆ ರಾಜ್ಯ ಸರ್ಕಾರದಿಂದ ಶೇ 50 ರಷ್ಟು ಅನುದಾನ ಒದಗಿಸಲು ಒಪ್ಪಿಗೆ ನೀಡಿದ್ದರು. ಆದರೂ, ಕಾಮಗಾರಿ ವೇಗ ಪಡೆದುಕೊಳ್ಳಲಿಲ್ಲ’ ಎಂದು ಟೀಕಿಸಿದರು.

ಬೀದರ್‌ ಸಂಸದ ಭಗವಂತ ಖೂಬಾ ಸಕ್ರಿಯರಾಗಿದ್ದಾರೆ. ರಾಜ್ಯದ ಅನೇಕ ಸಂಸದರು ನನ್ನನ್ನು ಭೇಟಿ ಮಾಡಿ ರೈಲು ಮಾರ್ಗವನ್ನು ಬೇಗ ಪೂರ್ಣಗೊಳಿಸಲು ಮನವಿ ಮಾಡಿದ್ದರು’ ಎಂದು ನೆನಪಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT