ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಡಾಡಿ ದನಗಳಿಗೆ ಇಲ್ಲ ಕಡಿವಾಣ

Last Updated 30 ಅಕ್ಟೋಬರ್ 2017, 5:40 IST
ಅಕ್ಷರ ಗಾತ್ರ

ಚಾಮರಾಜನಗರ: ನಗರದಲ್ಲಿ ಬಿಡಾಡಿ ದನಗಳು ಮತ್ತು ಮೇಕೆಗಳ ಹಾವಳಿ ಹೆಚ್ಚಾಗಿದ್ದು, ನಾಗರಿಕರು ತೊಂದರೆ ಅನುಭವಿಸುವಂತಾಗಿದೆ. ರಸ್ತೆಯ ಮಧ್ಯೆಯೇ ನಿಂತುಕೊಳ್ಳುವ, ಮನೆಗಳ ಕಾಂಪೌಂಡ್‌ ಹಾರಿ ಗಿಡಗಳನ್ನು ತಿನ್ನುವ ದನ ಮತ್ತು ಮೇಕೆಗಳು ನಾಗರಿಕರು ಹಾಗೂ ವಾಹನ ಸವಾರರಿಗೆ ಕಿರಿಕಿರಿ ಉಂಟುಮಾಡುತ್ತಿವೆ.

ಬಿ. ರಾಚಯ್ಯ ಜೋಡಿ ರಸ್ತೆ, ಭುವನೇಶ್ವರಿ ವೃತ್ತ, ಸಂತೇಮರಹಳ್ಳಿ ವೃತ್ತ, ಗುಂಡ್ಲುಪೇಟೆ ವೃತ್ತ, ಅಂಗಡಿಬೀದಿ, ಕೆ.ಎಸ್‌.ಆರ್.ಟಿ.ಸಿ. ಬಸ್‌ ನಿಲ್ದಾಣ ಮತ್ತು ವಿವಿಧ ಬಡಾವಣೆಗಳಲ್ಲಿ ದನಗಳು ಎಗ್ಗಿಲ್ಲದೆ ಅಡ್ಡಾಡುತ್ತಿವೆ. ಬೆಳಿಗ್ಗೆಯಿಂದಲೇ ರಸ್ತೆಗಿಳಿಯುವ ದನಗಳನ್ನು ಅವುಗಳ ಮಾಲೀಕರು ಸಂಜೆ ಹಾಲು ಕರೆಯಲು ಎಳೆದೊಯ್ಯುತ್ತಾರೆ. ಅಲ್ಲಿಯವರೆಗೂ ಅವುಗಳ ಕಾಟವನ್ನು ಸಹಿಸಿಕೊಳ್ಳುವುದು ನಾಗರಿಕರಿಗೆ ಅನಿವಾರ್ಯ.

ಅಂಗಡಿ ಮತ್ತು ಹೋಟೆಲ್‌ನವರು ಹಳಸಲು ಮತ್ತು ವ್ಯರ್ಥ ಪದಾರ್ಥಗಳನ್ನು ಇವುಗಳಿಗೆ ತಿನ್ನಲು ನೀಡುತ್ತಾರೆ. ಹೀಗಾಗಿ, ಈ ಸ್ಥಳಗಳ ಮುಂದೆಯೇ ಅವು ಹೆಚ್ಚು ಠಿಕಾಣಿ ಹೂಡುತ್ತವೆ.

ವಾಹನ ಸವಾರರಿಗೆ ಕಿರಿಕಿರಿ: ರಸ್ತೆಯಲ್ಲಿ ತಿರುಗಾಡುವ ದನಗಳು ಎಲ್ಲೆಂದರಲ್ಲಿ ನಿಲ್ಲುವುದು, ಮಲಗುವುದು ಮಾಡುತ್ತವೆ. ಇದರಿಂದ ಗಾಡಿ ಓಡಿಸಲು ತೀವ್ರ ಕಿರಿಕಿರಿ ಉಂಟಾಗುತ್ತದೆ ಎನ್ನುವುದು ವಾಹನ ಸವಾರರ ಆರೋಪ. ವಾಹನ ಚಲಾಯಿಸುವಾಗ ಇದ್ದಕ್ಕಿದ್ದಂತೆ ಅಡ್ಡ ಬರುತ್ತವೆ. ಎಷ್ಟೇ ಹಾರ್ನ್‌ ಮಾಡಿದರೂ ಕದಲುವುದಿಲ್ಲ. ಅವು ಬದಿಗೆ ಹೋದಾಗಲಷ್ಟೇ ಮುಂದೆ ಸಾಗಬೇಕು. ಇಂತಹ ಪರಿಸ್ಥಿತಿಯಿಂದ ಸಂಚಾರ ದಟ್ಟಣೆ ಉಂಟಾದ ನಿದರ್ಶನಗಳಿವೆ.

ಕಾಂಪೌಂಡ್‌ ಹಾರುವ ಮೇಕೆಗಳು ಒಳನುಗ್ಗಿ ಹೂವಿನ ಗಿಡಗಳನ್ನು ತಿಂದು ಹಾಕುತ್ತವೆ. ಇವುಗಳನ್ನು ನಿಯಂತ್ರಿಸಲು ಆಗುತ್ತಿಲ್ಲ ಎಂದು ದೂರುತ್ತಾರೆ ನಿವಾಸಿಗಳು. ಕುರಿ ಮತ್ತು ಮೇಕೆಗಳ ಹಿಂಡು ರಸ್ತೆ ದಾಟುವಾಗ ವೇಗವಾಗಿ ಸಾಗುವ ವಾಹನಗಳಿಗೆ ಸಿಕ್ಕಿ ಸಾಯುತ್ತಿವೆ. ಇನ್ನು ಕೆಲವೊಮ್ಮೆ ಕುರಿಗಳಿಗೆ ಡಿಕ್ಕಿ ಹೊಡೆಯವುದನ್ನು ತಪ್ಪಿಸಲು ಹೋಗಿ ವಾಹನ ಸವಾರರು ಅಪಘಾತಕ್ಕೀಡಾಗಿದ್ದಾರೆ. ಇಷ್ಟೆಲ್ಲಾ ಅವಘಡಗಳು, ತೊಂದರೆಗಳು ಸಂಭವಿಸುತ್ತಿದ್ದರೂ ಇವುಗಳ ಹಾವಳಿಗೆ ಕಡಿವಾಣ ಹಾಕಲು ನಗರಸಭೆ ಮುಂದಾಗುತ್ತಿಲ್ಲ ಎನ್ನುವುದು ಸಾರ್ವಜನಿಕರ ಆರೋಪ.

ಸಭೆಯಲ್ಲಿ ಚರ್ಚೆ: ನಗರದಲ್ಲಿನ ಬಿಡಾಡಿ ದನಗಳ ಹಾವಳಿ ಬಗ್ಗೆ ಜಿಲ್ಲಾಧಿಕಾರಿಗಳ ಫೋನ್‌ ಇನ್‌ ಕಾರ್ಯಕ್ರಮದ ವೇಳೆ ಪೊಲೀಸ್‌ ವರಿಷ್ಠಾಧಿಕಾರಿ ಪ್ರಸ್ತಾಪಿಸಿದ್ದರು. ಈ ಬಗ್ಗೆ ಕ್ರಮ ತೆಗೆದುಕೊಳ್ಳುವಂತೆ ಜಿಲ್ಲಾಧಿಕಾರಿ ಸೂಚಿಸಿದ್ದರು.

ದೊಡ್ಡಿ ನಿರ್ಮಾಣದ ಉದ್ದೇಶ: ಬಿಡಾಡಿ ದನಗಳನ್ನು ಕೂಡಿಹಾಕಲು ದೊಡ್ಡಿ ನಿರ್ಮಾಣಕ್ಕೆ ನಗರಸಭೆ ಚಿಂತನೆ ನಡೆಸಿದೆ. ‘ರಾಮಸಮುದ್ರದಲ್ಲಿ ಇರುವ ನಗರಸಭೆ ಜಾಗದಲ್ಲಿ ದೊಡ್ಡಿ ನಿರ್ಮಾಣ ಮಾಡುವ ಆಲೋಚನೆ ಇತ್ತು. ಆದರೆ, ನಂಜನಗೂಡು ರಸ್ತೆಯಲ್ಲಿ ನಿರ್ಮಿಸುವಂತೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ. ದೊಡ್ಡಿ ನಿರ್ಮಾಣಕ್ಕೆ ಕನಿಷ್ಠ ಅರ್ಧ ಎಕರೆ ಜಾಗ ಬೇಕು. ಜಾನುವಾರುಗಳಿಗೆ ಮೇವು ಮತ್ತು ನೀರು ಪೂರೈಸಲು ವ್ಯವಸ್ಥೆ ಇರಬೇಕು’ ಎಂದು ಪೌರಾಯುಕ್ತ ಎಂ. ರಾಜಣ್ಣ ‘ಪ್ರಜಾವಾಣಿ’ಗೆ ತಿಳಿಸಿದರು.

‘ಯಡಬೆಟ್ಟದಲ್ಲಿರುವ ತ್ಯಾಜ್ಯ ವಿಲೇವಾರಿ ಘಟಕದಲ್ಲಿ 2 ಎಕರೆ ಜಾಗವಿದೆ. ಸುತ್ತಲೂ ಕಾಂಪೌಂಡ್‌ ಇರುವುದರಿಂದ ದೊಡ್ಡಿ ನಿರ್ಮಾಣಕ್ಕೆ ಅದು ಸೂಕ್ತ ಸ್ಥಳ’ ಎಂದು ಹೇಳಿದರು.
‘ರಸ್ತೆಯಲ್ಲಿ ಅಡ್ಡಾಡಿ ತೊಂದರೆ ಉಂಟುಮಾಡುವ ದನಗಳನ್ನು ದೊಡ್ಡಿಗೆ ಸೇರಿಸಲಾಗುವುದು. ಮಾಲೀಕರಿಗೆ ದಂಡ ವಿಧಿಸಲಾಗುವುದು. ದನ ಬಿಡಿಸಿಕೊಳ್ಳಲು ಮೂರು ದಿನಗಳ ಒಳಗೆ ಬಾರದಿದ್ದರೆ ಅವುಗಳನ್ನು ಹರಾಜು ಹಾಕಲಾಗುವುದು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT