ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಟ್ಟಗೆರೆ ಬಡಾವಣೆಯಲ್ಲಿ ಸೊಳ್ಳೆಗಳ ಹಾವಳಿ

Last Updated 30 ಅಕ್ಟೋಬರ್ 2017, 6:05 IST
ಅಕ್ಷರ ಗಾತ್ರ

ನರಸಿಂಹರಾಜಪುರ: ಪಟ್ಟಣದ ಬೆಟ್ಟಗೆರೆ ಬಡಾವಣೆ ವ್ಯಾಪ್ತಿಯ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಬಿಸಿಯೂಟದ ಉಳಿಕೆ ಅನ್ನ, ಸಾಂಬರು ಹಾಗೂ ಕೈತೊಳೆಯುವ ನೀರು ನೆರವಾಗಿ ಚರಂಡಿಗೆ ಬಿಡುತ್ತಿರುವುದರಿಂದ ಸೊಳ್ಳೆಗಳ ಹಾವಳಿ ಹೆಚ್ಚಳವಾಗಿದೆ ಎಂದು ಬಡಾವಣೆ ನಿವಾಸಿಗಳು ದೂರಿದ್ದಾರೆ.

ಪಟ್ಟಣದ 6ನೇ ವಾರ್ಡಿಗೆ ಸೇರಿದ ಬೆಟ್ಟಗೆರೆ ಬಡಾವಣೆಯಲ್ಲಿ ಸುಮಾರು 80ಕ್ಕೂ ಅಧಿಕ ಮನೆಗಳಿದ್ದು, 250ಕ್ಕೂ ಹೆಚ್ಚು ಮಂದಿ ವಾಸವಿದ್ದಾರೆ. ಈ ವ್ಯಾಪ್ತಿಯ ಪ್ರೌಢಶಾಲೆಯ ಬಿಸಿಯೂಟದ ಉಳಿಕೆಯ ಆಹಾರವು ಸಂಗ್ರಹಿಸಲು ಯಾವುದೇ ರೀತಿಯ ಗುಂಡಿಯನ್ನು ತೆಗೆದು ವ್ಯವಸ್ಥೆ ಮಾಡಿಕೊಳ್ಳದೆ. ನೆರವಾಗಿ ಚರಂಡಿಗೆ ಹರಿಯಬಿಡುತ್ತಿರುವುದರಿಂದ ಇದು ಸರಾಗವಾಗಿ ಹರಿಯದೆ ದುರ್ನಾತ ಬೀರುತ್ತಿದೆ’ ಎಂದು ಆರೋಪಿಸಿದ್ದಾರೆ.

ಕೊಳಚೆ ನೀರಿನಿಂದ ಸೊಳ್ಳೆಗಳ ಹಾವಳಿ ವಿಪರೀತವಾಗಿದ್ದು, ಇದರಿಂದ ಈ ಭಾಗದಲ್ಲಿ ಡೆಂಗೆ ಕಾಣಿಸಿಕೊಂಡಿದ್ದು, ಈಗಾಗಲೇ ಒಬ್ಬರು ಮೃತಪಟ್ಟಿದ್ದಾರೆ. ಈ ಬಗ್ಗೆ ಕ್ರಮ ತೆಗೆದುಕೊಳ್ಳುವಂತೆ ಸಂಬಂಧಪಟ್ಟವರ ಗಮನಕ್ಕೆ ತಂದರೂ ಯಾವುದೇ ಪ್ರಯೋಜವಾಗಿಲ್ಲ ಎಂದು ಬಡಾವಣೆ ನಿವಾಸಿಗಳು ದೂರುತ್ತಾರೆ.

‘ಸೊಳ್ಳೆಗಳ ಹಾವಳಿ ವಿಪರೀತವಾಗಿ ಹೆಚ್ಚಾಗಿರುವುದರಿಂದ ಪಟ್ಟಣ ಪಂಚಾಯಿತಿಯವರಿಗೆ ಮನವಿ ಸಲ್ಲಿಸಿದ್ದರೂ ಪ್ರಯೋಜವಾಗಿಲ್ಲ. ಚುನಾಯಿತ ಜನಪ್ರತಿನಿಧಿಗಳು ಸಮಸ್ಯೆ ಬಗೆಹರಿಸುವ ಭರವಸೆ ನೀಡುತ್ತಾರೆ ಹೊರತು ಸಮಸ್ಯೆ ಬಗೆಹರಿದಿಲ್ಲ. ‘ಈ ಬಗ್ಗೆ ಜಿಲ್ಲಾಧಿಕಾರಿಗಳಿಗೂ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ’ ಎಂದು ಬಡಾವಣೆ ನಿವಾಸಿ ಅನಿದ್ ‘ಪ್ರಜಾವಾಣಿ’ಗೆ ತಿಳಿಸಿದರು.

ಬಡಾವಣೆಯ ವ್ಯಾಪ್ತಿಯಲ್ಲಿ ಚರಂಡಿ ನೀರನ್ನು ಸರಾಗವಾಗಿ ಹರಿಯುವ ವ್ಯವಸ್ಥೆ ಇಲ್ಲದಿರುವುದರಿಂದ ನೀರು ನಿಂತು ದುರ್ನಾತ ಬೀರುತ್ತಿದೆ ಎನ್ನು ತ್ತಾರೆ ಬಡಾವಣೆ ನಿವಾಸಿ ಸೈಯದ್ ಅಹಮ್ಮದ್.

‘ಬಿಸಿಯೂಟದ ಉಳಿಕೆ ಆಹಾರ ಚರಂಡಿಗೆ ಬಿಡುವುದರ ಬದಲು ಶಾಲೆಯ ವ್ಯಾಪ್ತಿಯಲ್ಲಿಯೇ ಗುಂಡಿ ನಿರ್ಮಿಸಿಕೊಂಡು ಸ್ವಚ್ಛತೆ ಕಾಪಾಡುವಂತೆ ಶಾಲಾಭಿವೃದ್ಧಿ ಸಮಿತಿಗೆ ಸಾಕಷ್ಟು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜವಾಗಿಲ್ಲ.

ಶಾಲೆಯ ಜಾಗದೊಳಗೆ ಪಟ್ಟಣ ಪಂಚಾಯಿತಿಯಿಂದ ಕಾಮಗಾರಿ ಕೈಗೊಳ್ಳಲು ಸಾಧ್ಯವಾಗುವುದಿಲ್ಲ. ಶಾಲಾಭಿವೃದ್ಧಿ ಸಮಿತಿಯವರೇ ಸಮಸ್ಯೆ ಬಗೆಹರಿಸ ಬೇಕು ಎಂದು 6ನೇ ವಾರ್ಡ್ ಸದಸ್ಯ ಬಿ.ಅಬ್ಧುಲ್ ಸುಬಾನ್ ‘ಪ್ರಜಾವಾಣಿ’ಗೆ ತಿಳಿಸಿದರು. ಸಂಬಂಧಪಟ್ಟವರು ಕೂಡಲೇ ಇತ್ತ ಗಮನಹರಿಸಿ ಬಡಾವಣೆ ನಿವಾಸಿಗಳಿಗಾಗುತ್ತಿರುವ ಸಮಸ್ಯೆಯನ್ನು ಬಗೆಹರಿಸಬೇಕು ಎಂಬುದು ನಿವಾಸಿಗಳ ಒತ್ತಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT