ಆಯುಷ್ ಆಸ್ಪತ್ರೆಯ ಕಟ್ಟಡಕ್ಕೆ ಬೇಕಿದೆ ‘ಕಾಯಕಲ್ಪ’ !

ಮಂಗಳವಾರ, ಜೂನ್ 18, 2019
31 °C

ಆಯುಷ್ ಆಸ್ಪತ್ರೆಯ ಕಟ್ಟಡಕ್ಕೆ ಬೇಕಿದೆ ‘ಕಾಯಕಲ್ಪ’ !

Published:
Updated:
ಆಯುಷ್ ಆಸ್ಪತ್ರೆಯ ಕಟ್ಟಡಕ್ಕೆ ಬೇಕಿದೆ ‘ಕಾಯಕಲ್ಪ’ !

ಚಿತ್ರದುರ್ಗ: ತಾರಸಿ ಕಿತ್ತು ಹೋಗಿದೆ. ಮಳೆ ಬಂದಾಗ ಸೋರುತ್ತದೆ‌. ಮಳೆಗಾಲದಲ್ಲಿ ಈ ಕಟ್ಟಡದಲ್ಲಿ ವಿದ್ಯುತ್ ಇರುವುದಿಲ್ಲ. ಗಾಳಿ– ಬೆಳಕು ಕಡಿಮೆ.. ಈ ಪರಿಸ್ಥಿತಿಯಲ್ಲಿಯೇ ಮೊಬೈಲ್ ಫೋನ್ ಟಾರ್ಚ್ ಬಳಸಿ ವೈದ್ಯರು ರೋಗಿಯನ್ನು ಪರೀಕ್ಷೆ ಮಾಡುವ ದುಃಸ್ಥಿತಿ!.

ಇದು ನಗರದ ಜಿಲ್ಲಾ ಆಸ್ಪತ್ರೆಯ ಆವರಣದ ಮೂಲೆಯಲ್ಲಿರುವ ಆಯುಷ್ ಆಸ್ಪತ್ರೆಯ ಕಟ್ಟಡ. ಇಂಥ ಶಿಥಿಲ ಕಟ್ಟಡದಲ್ಲಿ ಮೂವರು ವೈದ್ಯರ ಕೊಠಡಿಗಳಿವೆ. ಎರಡು ಚಿಕಿತ್ಸಾ ವಿಭಾಗಗಳಿವೆ. ಒಂದು ಔಷಧ ವಿತರಿಸುವ ಕೇಂದ್ರವಿದೆ. ಈ ಎಲ್ಲಾ ಕೊಠಡಿಗಳಲ್ಲಿನ ಸಿಮೆಂಟ್‌ ಸೂರು ಕಿತ್ತು ಹೋಗಿದೆ. ಯಾವ ಕ್ಷಣದಲ್ಲಾದರೂ ಮೇಲೆ ಬೀಳುವಂಥ ಪರಿಸ್ಥಿತಿ ಇದೆ.

1937ರಲ್ಲಿ ಕಟ್ಟಿರುವ ಕಟ್ಟಡ : ಚಿತ್ರದುರ್ಗ ಕೋ–ಆಪರೇಟಿವ್ ಸೊಸೈಟಿಯವರು ಬೆಳ್ಳಿಹಬ್ಬದ ನೆನಪಿಗಾಗಿ ಕಟ್ಟಿಸಿಕೊಟ್ಟಿರುವ ವಾರ್ಡ್ ಇದು. 80 ವರ್ಷ ಪೂರೈಸಿರುವ ಈ ಕಟ್ಟಡವನ್ನು ದಶಕದಿಂದೀಚೆಗೆ ಆಯುಷ್ ಕೇಂದ್ರವನ್ನಾಗಿ ಬದಲಾಯಿಸಿದ್ದಾರೆ. ಕಟ್ಟಡದ ಹಿಂಭಾಗದಲ್ಲಿ ವಿಶಾಲವಾದ ಪ್ರಾಂಗಣವಿದ್ದು, ಅದು ಪಾಳುಬಿದ್ದಿದೆ. ಆಸ್ಪತ್ರೆಯೊಳಗೆ ಇಡಲಾಗದ ಬೃಹತ್ ವಸ್ತುಗಳನ್ನು (ಪಳೆಯುಳಿಕೆಗ­ಳನ್ನು) ಈ ಆವರಣದಲ್ಲಿ ಇಡಲಾಗಿದೆ.

ನ್ಯಾಚುರೋಪತಿ ಚಿಕಿತ್ಸೆಯಲ್ಲಿ ಬೆನ್ನು ನೋವು ನಿವಾರಿಸುವ ಉಪಕರಣವನ್ನು ಖರೀದಿಸಲಾಗಿದ್ದು, ಅದನ್ನು ಕಟ್ಟಡದೊಳಗೆ ಇಡಲು ಜಾಗವಿಲ್ಲದೇ, ಇದೇ ಪ್ರಾಂಗಣದಲ್ಲಿಟ್ಟಿದ್ದಾರೆ. ಆಯುಷ್ ಆಸ್ಪತ್ರೆಯಲ್ಲಿರಬೇಕಾದ ಉಪಕರಣ ಇದೇ ಪ್ರಾಂಗಣದಲ್ಲಿ  ತಮ್ಮ ಆಯಸ್ಸನ್ನು ಸವೆಸುತ್ತಿದೆ. ಹೀಗಾಗಿ ಇದೊಂದು ತರಹ ‘ಪಳೆಯುಳಿಕೆಗಳ ಪ್ರದರ್ಶನ’ ಪ್ರಾಂಗಣದಂತೆ ಕಾಣುತ್ತದೆ. ಇದೇ ಆವರಣದ ಸುತ್ತಲಿನ ಕಟ್ಟಡದ ಚಾವಣಿಗಳಲ್ಲಿ ಬಿರುಕು ಕಾಣಿಸಿಕೊಂಡಿದೆ. ಪ್ರಾಂಗಣದ ಒಂದು ಭಾಗದ ಗೋಡೆ ಬಿರುಕು ಬಿಟ್ಟಿದ್ದು, ಅದರ ಹಿಂದೆಯೇ ಮುಖ್ಯ ಆಸ್ಪತ್ರೆಯ ಐಸಿಯು ಘಟಕವೂ ಇದ.

ಚಿಕಿತ್ಸಾ ಕೊಠಡಿಗಳ ಸೂರು ಶಿಥಿಲ : ಕೆಲವು ತಿಂಗಳ ಹಿಂದೆ ವೈದ್ಯರು ಕುಳಿತುಕೊಳ್ಳುವ ಕೊಠಡಿಯ ಸೂರು ಕಳಚಿ ಬಿದ್ದಿದೆ. ‘ಅದೃಷ್ಟವಷಾತ್ ಅಂದು ವೈದ್ಯರು ಕೊಠಡಿಯಲ್ಲಿರಲಿಲ್ಲ. ಇದ್ದಿದ್ದರೆ ಅನಾಹುತವೇ ಸಂಭವಿಸುತ್ತಿತ್ತು’ ಎಂದು ಘಟನೆ ನೋಡಿದ ಆಸ್ಪತ್ರೆ ಸಿಬ್ಬಂದಿ ಆತಂಕದಿಂದ ವಿವರಿಸುತ್ತಾರೆ.

ಪಂಚಕರ್ಮ ಸೇರಿದಂತೆ ವಿವಿಧ ಚಿಕಿತ್ಸೆಗಳನ್ನು ನೀಡಲು ಪುರುಷ – ಮಹಿಳೆಯರಿಗೆ ಪ್ರತ್ಯೇಕ ಕೊಠಡಿಗಳಿವೆ. ಅವುಗಳ ಸೂರು ಶಿಥಿಲವಾಗಿದೆ. ಕೊಠಡಿಗೆ ಹೋಗುವ ಓಣಿಯ ಮೇಲ್ಭಾಗದಲ್ಲಿ ಸಿಮೆಂಟ್ ಹಾಸು ಕಿತ್ತು ತೂಗಾಡುತ್ತಿದೆ.

ಮಳೆ ಬಂದಾಗ ಅದ್ವಾನ : ಈ ವರ್ಷ ಸುರಿದ ಮಳೆಗೆ ಇಡೀ ಕಟ್ಟಡ ಸೋರಿಕೆಯಾಗಿ ಮಳೆ ನೀರು ಆಸ್ಪತ್ರೆ ಒಳಗೆ ನುಗ್ಗಿದೆ. ಇದರಿಂದ ಬಿಲ್ಡಿಂಗ್ ನಲ್ಲಿ ಕರೆಂಟ್ ಶಾಕ್ ಉಂಟಾಗಿದ್ದು, ಒಂದೆರಡು ದಿನಗಳ ಕಾಲ ವಿದ್ಯುತ್ ಬಂದ್ ಆಗಿತ್ತು. ಕರೆಂಟ್ ಇಲ್ಲದಿದ್ದರೆ, ಆಸ್ಪತ್ರೆಯಲ್ಲಿ ಬೆಳಕು ಇರುವುದಿಲ್ಲ. ಹಾಗಾಗಿ ವೈದ್ಯರು ಟಾರ್ಚ್ ಬೆಳಕಿನಲ್ಲಿ ರೋಗಿಗಳನ್ನು ಪರೀಕ್ಷಿಸುತ್ತಾರೆ.

‘ಒಂದು ಕಟ್ಟಡ ಅಲ್ಲ ಸರ್. ಇಡೀ ಬಿಲ್ಡಿಂಗ್‌ ಸೋರುತ್ತದೆ. ಕಟ್ಟಡವನ್ನು ಲೋಕೋಪಯೋಗಿ ಪರಿಶೀಲಿಸಿ, ಅದು ವಾಸಕ್ಕೆ ಯೋಗ್ಯವಿಲ್ಲ ಎನ್ನುವುದನ್ನು ದೃಢಪಡಿಸಬೇಕು. ಈಗಿರುವ ಕಟ್ಟಡ ತೆರವುಗೊಳಿಸಿ ಹೊಸದಾಗಿ ಕಟ್ಟುವುದೊಂದೇ ಪರಿಹಾರ’ ಎನ್ನುತ್ತಾರೆ ಆಯುರ್ವೇದ ವೈದ್ಯ ಡಾ. ಸುರೇಶ್.

ಕೇಂದ್ರ ಸರ್ಕಾರ ಆಯುಷ್ ಆಸ್ಪತ್ರೆಗಳನ್ನು ನಿರ್ಮಿಸಲು ಚಿಂತನೆ ನಡೆಸುತ್ತಿದೆ. ಏಮ್ಸ್ ರೂಪದಲ್ಲೂ ಆಯುಷ್ ಆಸ್ಪತ್ರೆ ಆರಂಭಿಸುವ ಯೋಚನೆಯಲ್ಲಿದೆ. ಇಂಥ ವೇಳೆಯಲ್ಲಿ ಜಿಲ್ಲಾ ಕೇಂದ್ರದಲ್ಲಿನ ಆಯುಷ್ ಆಸ್ಪತ್ರೆಯ ಅವವಸ್ಥೆಯ ಬಗ್ಗೆ ಜನ ಮಾತಾಡಿಕೊಳ್ಳುವಂತಾಗಿದೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry