ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿವೇಕಾನಂದರ ಕೆಲಸ ಮುಂದುವರಿಸಿದ ನಿವೇದಿತಾ

Last Updated 30 ಅಕ್ಟೋಬರ್ 2017, 6:15 IST
ಅಕ್ಷರ ಗಾತ್ರ

ದಾವಣಗೆರೆ: ಸಣ್ಣ ವಯಸ್ಸಿನಲ್ಲೇ ವಿವೇಕಾನಂದರು ತೀರಿ ಹೋದಾಗ ಶಿಷ್ಯೆ ನಿವೇದಿತಾ, ಸ್ವಾಮೀಜಿ ಅವರ ಕಾರ್ಯಗಳನ್ನು ಮುಂದುವರಿಸಿದರು; ಭವ್ಯ ಭಾರತ ಕಟ್ಟಲು ಶ್ರಮಿಸಿದರು ಎಂದು ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಹೇಳಿದರು.

ಇಲ್ಲಿನ ಬಕ್ಕೇಶ್ವರ ಕಲ್ಯಾಣ ಮಂಟಪದಲ್ಲಿ ಭಾನುವಾರ ಸೋದರಿ ನಿವೇದಿತಾರ 150ನೇ ಜನ್ಮ ವರ್ಷಾಚರಣೆ ಅಂಗವಾಗಿ ಏರ್ಪಡಿಸಿದ್ದ ಸಮಾರಂಭದಲ್ಲಿ ಅವರು ಮಾತನಾಡಿದರು.

ನಿವೇದಿತಾ ವಿದೇಶಿ ಮಹಿಳೆಯಾದರೂ ಭಾರತೀಯ ಧರ್ಮದ ಪುನರುತ್ಥಾನ ಹಾಗೂ ರಾಷ್ಟ್ರೀಯತೆ ಬೆಳೆಸಲು ಅವರು ಪಟ್ಟ ಶ್ರಮ ಅಪಾರ. ನಿವೇದಿತಾ ಅವರ ತಾತಾ ಐರಿಷ್‌ ಸ್ವಾತಂತ್ರ್ಯ ಹೋರಾಟಗಾರ, ತಂದೆ ಚರ್ಚ್‌ನಲ್ಲಿ ಪಾದ್ರಿಯಾಗಿದ್ದರು. ರಾಷ್ಟ್ರೀಯತೆ ಹಾಗೂ ಅಧ್ಯಾತ್ಮಗಳೆರಡೂ ನಿವೇದಿತಾರಿಗೆ ರಕ್ತಗತವಾಗಿ ಬಂದಿದ್ದವು ಎಂದರು.

ಪ್ರಧಾನಿ ಮೋದಿ ಅವರ ಮಹತ್ವಪೂರ್ಣ ಯೋಜನೆಗಳಾದ ಸ್ವಚ್ಛ ಭಾರತ, ಸ್ಕಿಲ್‌ ಇಂಡಿಯಾಗಳ ಆಶಯ ನಿವೇದಿತಾ ಅವರ ಕಾರ್ಯಗಳಲ್ಲಿ ಅಡಗಿದ್ದವು. ಸ್ವಚ್ಛತೆ ಬಗ್ಗೆ ಭಾರತೀಯರಲ್ಲಿ ಅರಿವು ಮೂಡಿಸಲು ಶ್ರಮಿಸಿದ್ದರು. ಬಂಗಾಳದ ಯುವಕರಿಗೆ ಕೌಶಲಗಳನ್ನು ಕಲಿಸಲು ವಿದೇಶಗಳಲ್ಲಿ ತರಬೇತಿಗಳನ್ನು ಆಯೋಜಿಸಿದ್ದರು ಎಂದು ಹೇಳಿದರು.

ಬೆಂಗಳೂರು ಜಿಲ್ಲೆಯ ಹಲಸೂರು ಶ್ರೀರಾಮಕೃಷ್ಣ ಮಠದ ಸ್ವಾಮಿ ತ್ಯಾಗೀಶ್ವರಾನಂದಜೀ ಮಹಾರಾಜ್‌ ಇದಕ್ಕೂ ಮುನ್ನ ನಡೆದ ಗೋಷ್ಠಿಯಲ್ಲಿ ಮಾತನಾಡಿ, ‘ನಿವೇದಿತಾ ದೇಹ ವಿದೇಶದ್ದೂ ಮನಸ್ಸು ಭಾರತೀಯಳದ್ದೂ ಆಗಿತ್ತು. ಆಕೆ ನೋಡಲಿಕ್ಕೆ ಪರಕೀಯಳು; ಆದರೆ, ಅಂತರಂಗದಲ್ಲಿ ದೇಸಿ ಹೆಣ್ಣು. ಇಂತಹ ಮಹಿಳೆ ನಮ್ಮಲ್ಲಿ ರಾಷ್ಟ್ರೀಯ ಭಾವನೆ ಬೆಳೆಸಲು ಶ್ರಮಿಸಿದ್ದಾಳೆ. ಆದರೆ, ದೇಶದ ಯುವ ಪೀಳಿಗೆ ನೋಡಲಿಕ್ಕೆ ನಮ್ಮವರು. ಆದರೆ, ಅಂತರಂಗದಲ್ಲಿ ಪಾಶ್ಚಾತ್ಯ ಸಂಸ್ಕೃತಿಯ ಅನುಕರಣೆ ಮಾಡುವವರಾಗಿದ್ದಾರೆ’ ಎಂದು ವಿಷಾದಿಸಿದರು.

ಮಂಗಳೂರು ರಾಮಕೃಷ್ಣಾಶ್ರಮದ ಸ್ವಾಮಿ ಜಿತಕಾಮಾನಂದಜೀ ಮಹಾರಾಜ್‌ ಅಧ್ಯಕ್ಷತೆ ವಹಿಸಿದ್ದರು. ಊಟಿ ರಾಮಕೃಷ್ಣಾಶ್ರಮದ ಸ್ವಾಮಿ ರಾಘವೇಶಾನಂದಜೀ ಮಹಾರಾಜ್‌ ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು. ದಾವಣಗೆರೆ ರಾಮಕೃಷ್ಣಾಶ್ರಮದ ಎ.ಕಿರಣ್‌ಕುಮಾರ್, ಬಿ.ಎಂ.ಮಂಜುನಾಥ್, ಆರ್‌.ವೀರೇಶ್ ಹಾಜರಿದ್ದರು.

ಉದ್ಘಾಟನಾ ಸಮಾರಂಭದಲ್ಲಿ ಸ್ವಾಮಿ ಮುಕ್ತಿದಾನಂದಜೀ ಮಹಾರಾಜ್‌, ಸ್ವಾಮಿ ಬೋಧಸ್ವರೂಪಾನಂದಜೀ ಮಹಾರಾಜ್, ಸ್ವಾಮಿ ಜಿತಕಾಮಾನಂದಜೀ ಮಹಾರಾಜ್‌, ಆರ್‌.ಆರ್‌.ರಮೇಶ್‌ಬಾಬು, ಹೇಮಂತ್‌ ಮಹರಾಜ್‌, ಪಿ.ಗೋವಿಂದಪ್ಪ ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT