ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಚ್. ರಾಂಪುರಕ್ಕೆ ಕೊನೆಗೂ ದೊರಕದ ‘ರಸ್ತೆ ಭಾಗ್ಯ’

Last Updated 30 ಅಕ್ಟೋಬರ್ 2017, 6:19 IST
ಅಕ್ಷರ ಗಾತ್ರ

ಮಾಯಕೊಂಡ: ಹೋಬಳಿಯ ಗಡಿ ಗ್ರಾಮವಾಗಿರುವ ಎಚ್. ರಾಂಪುರ ಗ್ರಾಮಸ್ಥರು ರಸ್ತೆಯಿಲ್ಲದೇ ದಿಕ್ಕುದಪ್ಪಿದಂತಾಗಿದ್ದಾರೆ. ರಸ್ತೆ ಅವ್ಯವಸ್ಥೆಯಿಂದ ಜನಜೀವನ, ಮಕ್ಕಳ ಶಿಕ್ಷಣಕ್ಕೆ ಕುತ್ತುಬಂದಿದೆ ಎಂದು ಗ್ರಾಮಸ್ಥರು ನೊಂದುಕೊಳ್ಳುತ್ತಾರೆ. ಜನ ದಶಕಗಳಿಂದ ಪರದಾಡುತ್ತಿದ್ದರೂ ಬವಣೆ ನೀಗಲು ಮುಂದಾಗದ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ರೋಸಿ, ಗ್ರಾಮಸ್ಥರು ಚುನಾವಣಾ ಬಹಿಷ್ಕಾರಕ್ಕೆ ಸಿದ್ಧರಾಗುತ್ತಿದ್ದಾರೆ.

ದಾವಣಗೆರೆಯ ಜಿಲ್ಲೆಯ ಗಡಿಯಲ್ಲಿರುವ ಎಚ್. ರಾಂಪುರ ಹುಚ್ಚವನಹಳ್ಳಿ ಗ್ರಾಮ ಪಂಚಾಯ್ತಿಗೆ ಸೇರಿದ ಕುಗ್ರಾಮ. 52 ಮನೆಗಳಿದ್ದು, ಸುಮಾರು 250 ಜನಸಂಖ್ಯೆ ಹೊಂದಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡದ ಜನರೂ ಹೆಚ್ಚಾಗಿದ್ದಾರೆ.

‘ಮಾಯಕೊಂಡದಲ್ಲಿ ಹಾದುಹೋಗಿರುವ ಜಿಲ್ಲಾ ಮುಖ್ಯ ರಸ್ತೆಯಿಂದ ಹೆದ್ನೆ ಮಾರ್ಗವಾಗಿ ಈ ಎಚ್. ರಾಂಪುರಕ್ಕೆ ಹೋಗಲು 4 ಕಿ.ಮೀ ಕಾಡುರಸ್ತೆಯಿದೆ. ಇದೊಂದೇ ರಸ್ತೆ ಈ ಕುಗ್ರಾಮವನ್ನು ಜಗತ್ತಿಗೆ ಸೇರಿಸಲು ಇರುವ ಏಕೈಕ ಕಾಡುರಸ್ತೆ. ಗ್ರಾಮ ಹುಟ್ಟಿದಾಗಿನಿಂದ ರಸ್ತೆ ನಿರ್ಮಾಣಕ್ಕೆ ನಿರಂತರ ಬೇಡಿಕೆಯಿಟ್ಟರೂ ಮತ ಪಡೆದುಕೊಂಡು ಹೋದವರು ನಮ್ಮ ಅಳಲು ಕೇಳಿಲ್ಲ’ ಎಂದು ಗ್ರಾಮಸ್ಥರ ಆಕ್ರೋಶ ವ್ಯಕ್ತಪಡಿಸುತ್ತಾರೆ.

ಹಾದಿಯುದ್ದ ಕ್ಕೂ ಭಾರೀ ಗಾತ್ರದ ಗುಂಡಿ, ಹೊಂಡಗಳಿದ್ದು ಜನ, ವಾಹನ ಓಡಾಡುವುದು ದುಸ್ತರವಾಗಿದೆ. ಕಾರು, ಬೈಕ್ ಗಳೂ 4 ಕಿ.ಮೀ ಉದ್ದದ ಈ ಕಾಡುರಸ್ತೆ ದಾಟಲು ಕನಿಷ್ಠ 30 ನಿಮಿಷ ಬೇಕಾಗುತ್ತೆ! ಮಳೆ ಬಂದರೆ ಬೈಕ್ ಓಡಾಡಲು ಸಾಧ್ಯವೇಯಿಲ್ಲ. ಅಲ್ಲಲ್ಲಿ ಚಿಕ್ಕ ಪೈಪ್ ಸೇತುವೆ ಹಾಕಲಾಗಿದ್ದು, ಅವೂ ಕೂಡಾ ಪೈಪ್ ಒಡೆದು ಹಾಳಾಗಿವೆ. ಎರಡೂ ಕಡೆ ಅಡಕೆ ತೋಟ, ಜಂಗಲ್ ಬೆಳೆದು ನಿಂತಿದ್ದು, ಓಡಾಡಲು ಭಯವಾಗುತ್ತಿದೆ. ಕಾಡು ಪ್ರಾಣಿ, ವಿಷಜಂತುಗಳ ಉಪಟಳ ಹೆಚ್ಚಿದೆ.

ರಸ್ತೆ ಸರಿಯಿಲ್ಲದ್ದರಿಂದ ಬಸ್ ಗಳೂ ಊರಿಗೆ ಬರುವುದಿಲ್ಲ. ಆಸ್ಪತ್ರೆಗೆ 6ಕಿ.ಮೀ ದೂರದ ಮಾಯಕೊಂಡಕ್ಕೆ, ನ್ಯಾಯ ಬೆಲೆ ಅಂಗಡಿಗೆ 8 ಕಿ.ಮೀ ದೂರದ ಎಚ್.ಬಸವಾಪುರಕ್ಕೆ ಹೋಗಿ ಬರಲು ಅರ್ಧ ದಿನವೇ ಬೇಕು. ಮುದುಕರು, ಮಹಿಳೆಯರು ತೊಂದರೆಗೀಡಾದರೆ ಈ ಹಾದಿಯಲ್ಲಿ ಅಂಬುಲೆನ್ಸ್ ಕೂಡಾ ಬರುವುದು ಕಷ್ಟ’ ಎಂದು ಗ್ರಾಮದ ಮುಖಂಡರಾದ ಮಹೇಶ್ವರಪ್ಪ, ವೀರಭದ್ರಪ್ಪ, ನಾಗರಾಜಪ್ಪ, ರಮೇಶ್, ಸಿದ್ದೇಶ್, ನಟರಾಜಪ್ಪ ಮತ್ತಿತರರು ಅಳಲು ತೋಡಿಕೊಂಡರು.


ಮಕ್ಕಳನ್ನು ಓದಿಸೋದನ್ನೇ ಬಿಟ್ಟಿದ್ದೇವೆ…
ನಮ್ಮೂರಲ್ಲಿ 1ರಿಂದ 4 ತರಗತಿ ವರೆಗಿನ ಏಕೋಪಧ್ಯಾಯ ಶಾಲೆ ಮಾತ್ರ ಇದೆ. ಹೈಸ್ಕೂಲ್, ಕಾಲೇಜ್ ಗೆ ಮಾಯಕೊಂಡಕ್ಕೆ ಕಳಿಸಬೇಕು ಹೆಣ್ಣು ಮಕ್ಕಳು ಈ ದಾರಿಯಲ್ಲಿ ನಡೆದು ಊರಿಂದ ಹೋಗೋದು ಬರೋದು ತುಂಬಾ ಕಷ್ಟ. ಕೆಟ್ಟ ಕಾಲ ಏಕೆ ಬೇಕು ಅಂಥಾ ಮಕ್ಕಳನ್ನು ನೆಂಟರ ಮನೆಗೋ, ದಾವಣಗೆರೆ ಹಾಸ್ಟೆಲ್ ನಲ್ಲೋ ಇರಿಸಿ ಓದಿಸಬೇಕಾದ ಅನಿವಾರ್ಯ ಉಂಟಾಗಿದೆ. ಬಹುತೇಕರು ಶಾಲೆ ಬಿಡಿಸಿ ಮಕ್ಕಳ ಭಿವಿಷ್ಯ ಹಾಳು ಮಾಡಿಕೊಂಡಿದ್ದಾರೆ’ ಎಂದು ಗ್ರಾಮದ ಗೌಡ್ರ ವಾಮದೇವಪ್ಪ, ನಿರಂಜನ ಮೂರ್ತಿ, ರುದ್ರಮುನಿ ನೊಂದುಕೊಂಡರು.

ಚುನಾವಣೆಗೆ ಬಹಿಷ್ಕಾರ ಮಾಡ್ತೀವೆ…, ಆವಾಗ ಗೊತ್ತಾಗುತ್ತೆ…
‘ಜಿಲ್ಲಾ ಉಸ್ತುವಾರಿ ಸಚಿವರು, ಮಂತ್ರಿಗಳು, ಎಂ.ಪಿ. ಸಿದ್ಧೇಶ್ವರ್, ಶಾಸಕ ಕೆ. ಶಿವಮೂರ್ತಿ, ಮಾಜಿ ಶಾಸಕ ಬಸವರಾಜ ನಾಯ್ಕ ಜಿಲ್ಲಾ, ತಾಲ್ಲೂಕು ಪಂಚಾಯ್ತಿ ಸದಸ್ಯರು ನಮ್ಮ ಊರಿಗೆ ಪ್ರಚಾರಕ್ಕೆ ಬಂದಿದ್ದಾರೆ. ನಮ್ಮ ಪರದಾಟ ನೋಡಿದ್ದಾರೆ. ಹತ್ತು ಸಾರಿ ಅಲೆದರೂ ಯಾರೂ ಈ ರಸ್ತೆ ಮಾಡಿಸಿ ನಮ್ಮ ಸಮಸ್ಯೆ ನೀಗಿಲ್ಲ. ಇವರಿಗೆಲ್ಲಾ ವೋಟು ಹಾಕೋದಾದರೂ ಏಕೆ? ಚುನಾವಣಾ ಬಹಿಷ್ಕಾರ ಹಾಕಿಯೇ ತೀರುತ್ತೇವೆ. ಆವಾಗ ಗೊತ್ತಾಗುತ್ತೆ ಎನ್ನುತ್ತಾ ವೀರಭದ್ರಜ್ಜ, ಗೌಡ್ರ ವಾಮದೇವಪ್ಪ ಕಿಡಿಕಾರಿದರು. .
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT