ಶಿಕ್ಷಣ, ಶಿಸ್ತು, ಶಿಷ್ಟಾಚಾರ ಮಹಿಳೆಗೆ ಅಗತ್ಯ

ಸೋಮವಾರ, ಮೇ 27, 2019
33 °C

ಶಿಕ್ಷಣ, ಶಿಸ್ತು, ಶಿಷ್ಟಾಚಾರ ಮಹಿಳೆಗೆ ಅಗತ್ಯ

Published:
Updated:

ಧಾರವಾಡ: ‘ಮಹಿಳೆಯರು ಶಿಕ್ಷಣ, ಶಿಸ್ತು, ಶಿಷ್ಟಾಚಾರ ಕಲಿತರೆ ಮಾತ್ರ ಸಮಾಜದ ಬೆಳವಣಿಗೆ ಸಾಧ್ಯ’ ಎಂದು ಹೃದ್ರೋಗ ತಜ್ಞೆ ಡಾ. ವಿಜಯಲಕ್ಷ್ಮಿ ಬಾಳೆಕುಂದ್ರಿ ಅಭಿಪ್ರಾಯಪಟ್ಟರು. ಕರ್ನಾಟಕ ವಿದ್ಯಾವರ್ಧಕ ಸಂಘದ ಮಹಿಳಾ ಮಂಟಪವು ಭಾನುವಾರ ಆಯೋಜಿಸಿದ್ದ ಮಹಿಳಾ ಸಮಾವೇಶದಲ್ಲಿ ‘ಸಮಕಾಲೀನ ಸಂದರ್ಭದಲ್ಲಿ ಮಹಿಳೆ’ ವಿಷಯ ಕುರಿತು ಏರ್ಪಡಿಸಿದ್ದ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

‘ನಮ್ಮ ಜೀವನದಲ್ಲಿ ಹುದುಗಿರುವ ಕೆಟ್ಟ ಮನೋಭಾವನೆಗಳನ್ನು ಓಡಿಸುವ ಆಯುಧವೇ ನಗು. ಎಂಥದ್ದೇ ಕಷ್ಟಗಳು ಎದುರಾದರೂ ಅವುಗಳನ್ನು ನಗುನಗುತ್ತಲೇ ಎದುರಿಸುವುದುನ್ನು ರೂಢಿಸಿಕೊಳ್ಳಬೇಕು. ಆಸ್ತಿಕ ಮತ್ತು ನಾಸ್ತಿಕ ಎನ್ನುವುದನ್ನು ಬಿಟ್ಟು ಸಮಾಜದ ಉನ್ನತಿಗೆ ಪ್ರತಿಯೊಬ್ಬರೂ ಕ್ರಿಯಾಶೀಲರಾಗಿ ದುಡಿಯಬೇಕು’ ಎಂದು ಹೇಳಿದರು.

‘ತಾಯಿಯೇ ಮೊದಲ ಗುರು, ಮನೆಯೇ ಮೊದಲ ಪಾಠಶಾಲೆ ಎಂಬುದನ್ನು ನಮ್ಮ ಹಿರಿಯರು ಕಲಿಸಿಕೊಟ್ಟಿದ್ದಾರೆ. ಸಮಾಜದ ಸ್ವಾಸ್ಥ್ಯ ಕಾಪಾಡುವ ಜವಾಬ್ದಾರಿ ತಾಯಂದಿರ ಕೈಯಲ್ಲಿದೆ. ಜತೆಗೆ ಸಂಸ್ಕೃತಿ ಉಳಿವು ಕೂಡಾ ಮಹಿಳೆಯರ ಕೈಯಲ್ಲಿದೆ. ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರು ಹೋಗದೆ ನಮ್ಮ ತನವನ್ನು ನಾವು ಉಳಿಸಿಕೊಳ್ಳಬೇಕು’ ಎಂದು ಡಾ. ವಿಜಯಲಕ್ಷ್ಮಿ ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಾ. ಪಾಟೀಲ ಪುಟ್ಟಪ್ಪ ಮಾತನಾಡಿ, ‘ನಾನು ಇಂದು ಈ ಮಟ್ಟಕ್ಕೆ ಬೆಳೆದಿದ್ದೇನೆ ಎಂದರೆ ಅದಕ್ಕೆ ನನ್ನ ಪತ್ನಿಯೇ ಕಾರಣ. ಹೀಗಾಗಿ ನಾನು ಯಾವಾಗಲೂ ಮಹಿಳಾ ಪಕ್ಷಪಾತಿ. ಬದುಕು ರೂಪಿಸಲು ಪ್ರೇರಣೆಯಾದ ಮಹಿಳೆ, ಸರಳ ಜೀವನವನ್ನು ಅಳವಡಿಸಿಕೊಂಡು ಮಾದರಿಯಾಗಬೇಕು. ಮಕ್ಕಳಿಗಾಗಿ ಆಸ್ತಿಯನ್ನು ಮಾಡದೆ, ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಬೇಕು’ ಎಂದರು.

ಪತ್ರಕರ್ತ ರವಿಕುಮಾರ ಕಗ್ಗಣ್ಣವರ ಮಾತನಾಡಿ, ‘ಮಾನಸಿಕ ಹಾಗೂ ದೈಹಿಕವಾಗಿ ಬಳಲುವುದರಿಂದ ಮಹಿಳೆಯರು ಖಿನ್ನತೆಗೆ ಒಳಗಾಗುತ್ತಿದ್ದಾರೆ. ಕೌಟುಂಬಿಕ ಸಮಸ್ಯೆ ಅವರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಇದರಿಂದ ಮುಕ್ತಿ ಸಿಗಬೇಕೆಂದರೆ ಸಮಾಜಮುಖಿಯಾಗಿರಬೇಕು. ಮಹಿಳೆ ಆರೋಗ್ಯವಾದರೆ ಆ ಕುಟುಂಬವೇ ಆರೋಗ್ಯವಾಗಿದ್ದಂತೆ ಎಂಬುದು ಮನಗಾಣಬೇಕು’ ಎಂದರು.

ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾ ಘಟಕದ ಅಧ್ಯಕ್ಷ ಲಿಂಗರಾಜ ಅಂಗಡಿ, ಕೋಶಾಧ್ಯಕ್ಷ ಕೃಷ್ಣ ಜೋಶಿ, ಸಂಚಾಲಕಿ ವಿಶ್ವೇಶ್ವರಿ ಹಿರೇಮಠ, ಡಾ. ಮಹೇಶ ಜೋಶಿ, ಡಾ. ಇಸಾಬೆಲ್ಲಾ ಝೇವ್ಹಿಯರ್‌, ಡಾ.ಜಿನದತ್ತ ಹಡಗಲಿ, ಲಲಿತಾ ಪಾಟೀಲ, ಭಾಗೀರತಿ ಕಲಕಾಮಕರ, ಪದ್ಮಜಾ ಉಮರ್ಜಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry