80 ಅಡಿ ರಸ್ತೆ ಕಾಮಗಾರಿ ನನೆಗುದಿಗೆ

ಶನಿವಾರ, ಮೇ 25, 2019
28 °C

80 ಅಡಿ ರಸ್ತೆ ಕಾಮಗಾರಿ ನನೆಗುದಿಗೆ

Published:
Updated:
80 ಅಡಿ ರಸ್ತೆ ಕಾಮಗಾರಿ ನನೆಗುದಿಗೆ

ಹಾಸನ: ನಗರದ ಉತ್ತರ ಬಡಾವಣೆಯಲ್ಲಿರುವ ಸಕಲೇಶಪುರ ರಸ್ತೆಯಿಂದ ಬೇಲೂರು ಹೊರ ವರ್ತುಲ ರಸ್ತೆಗೆ ಸಂಪರ್ಕ ಕಲ್ಪಿಸುವ 4.5 ಕಿ.ಮೀ ಉದ್ದದ, 80 ಅಡಿ ರಸ್ತೆ ಅಭಿವೃದ್ಧಿ ಕಾಮಗಾರಿ ನನೆಗುದಿಗೆ ಬಿದ್ದಿದೆ. ಸುಮಾರು 12 ವರ್ಷಗಳಿಂದ ರಸ್ತೆ ಅಭಿವೃದ್ಧಿ ಕಾಣದೆ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ. ಭೂಸ್ವಾಧೀನ ಪರಿಹಾರ ವಿಚಾರವಾಗಿ ಹಬಿಬಿಯಾ ಶಾಮೀಲ್ ಮಾಲೀಕರು ನ್ಯಾಯಾಲಯದ ಮೆಟ್ಟಿಲೇರಿದ್ದರು.

ಮೂರು ವರ್ಷದ ಹಿಂದೆ ಈ ವಿವಾದಕ್ಕೆ ತೆರೆ ಬಿತ್ತು. 1.5 ಕಿ.ಮೀ. ನಗರ ವ್ಯಾಪ್ತಿಗೆ ಸೇರಿದರೆ, 3 ಕಿ.ಮೀ. ತಮ್ಲಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುತ್ತದೆ.

ರಸ್ತೆಗೆ ಅನುದಾನ ಮೀಸಲಿಡುವ ವಿಚಾರವಾಗಿ ಜಿಲ್ಲಾ ಉಸ್ತುವಾರಿ ಸಚಿವ ಎ.ಮಂಜು ಮತ್ತು ಶಾಸಕ ಎಚ್.ಎಸ್. ಪ್ರಕಾಶ್‌ ಅವರ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿದೆ.

ನಗರೋತ್ಥಾನ ಯೋಜನೆಯ ₹ 7 ಕೋಟಿ ಅನುದಾನವನ್ನು ರಸ್ತೆ ಅಭಿವೃದ್ಧಿಗೆ ಬಳಸಲು ಸಚಿವ ಎ.ಮಂಜು ನಿರ್ಧರಿಸಿದ್ದರು. ಇದಕ್ಕೆ ಶಾಸಕ ಹಾಗೂ ನಗರಸಭೆ ಅಧ್ಯಕ್ಷ ಎಚ್.ಎಸ್. ಅನಿಲ್‌ ಕುಮಾರ್ ಆಕ್ಷೇಪ ವ್ಯಕ್ತಪಡಿಸಿದರು.

‘ನಗರೋತ್ಥಾನ ಯೋಜನೆ ಅನುದಾನವನ್ನು ನಗರಸಭೆಯ ಎಲ್ಲಾ ವಾರ್ಡ್‌ಗಳಿಗೂ ಸಮಾನವಾಗಿ ಹಂಚಿಕೆ ಮಾಡಬೇಕು. ಹಬಿಬಿಯಾ ಸಾಮಿಲ್ ರಸ್ತೆ ಡಾಂಬರೀಕರಣ ಕಾಮಗಾರಿಗೆ ಹೆದ್ದಾರಿ ಪ್ರಾಧಿಕಾರದಿಂದ ಅನುದಾನ ತರಲು ಯತ್ನಿಸಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವರಿಗೆ ಶಾಸಕ ಪ್ರಕಾಶ್‌ ತಿರುಗೇಟು ನೀಡಿದ್ದರು.

‘ರಸ್ತೆ ಡಾಂಬರೀಕರಣಕ್ಕೆ ಸುಮಾರು ₹ 7.5 ಕೋಟಿ ವಿಸ್ತ್ರತ ಯೋಜನಾ ವರದಿ (ಡಿಪಿಆರ್) ಸಿದ್ದಪಡಿಸಿ ಮಂಜೂರಾತಿಗೆ ರಾಜ್ಯ ಸರ್ಕಾರಕ್ಕೆ ಕಳುಹಿಸಲಾಗಿದೆ. ಎರಡು ತಿಂಗಳಲ್ಲಿ ಅನುಮತಿ ಸಿಗುವ ಸಾಧ್ಯತೆ ಇದೆ’ ಎಂದು ನಗರಸಭೆ ಅಧ್ಯಕ್ಷ ಎಚ್‌.ಎಸ್‌. ಅನಿಲ್‌ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

80 ಅಡಿ ರಸ್ತೆ ಅಭಿವೃದ್ಧಿ ಕಾಮಗಾರಿ ಅರ್ಧಕ್ಕೆ ನಿಂತಿರುವ ಕಾರಣ ಸಾರ್ವಜನಿಕರು ಗುಂಡಿ ಬಿದ್ದಿರುವ ಮಣ್ಣಿನ ರಸ್ತೆಯಲ್ಲಿಯೇ ಸಂಚಾರ ಮಾಡುತ್ತಿದ್ದಾರೆ. ಕೆಲವು ಕಡೆ ರಸ್ತೆಯ ಅಕ್ಕಪಕ್ಕದಲ್ಲಿ ಮಣ್ಣಿನ ರಾಶಿ ಮತ್ತು ತ್ಯಾಜ್ಯ ಸುರಿಯಲಾಗಿದೆ. ರಸ್ತೆ ಮೇಲೆ ಚರಂಡಿ ನೀರು ಹರಿಯುತ್ತಿದೆ. ಈ ಭಾಗದ ಜನರಿಗೆ ಸಂಕಷ್ಟ ಮಾತ್ರ ತಪ್ಪಿಲ್ಲ.

‘ರಸ್ತೆ ಕಾಮಗಾರಿ ಪೂರ್ಣಗೊಂಡರೆ ಹುಣಸಿನಕೆರೆಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಹೆಚ್ಚಲಿದೆ. ಕಿರಿದಾದ ಹೊಸಲೈನ್ ರಸ್ತೆಯಲ್ಲಿ ವಾಹನ ದಟ್ಟಣೆ ಕಡಿಮೆ ಆಗಲಿದೆ' ಎಂದು ಸ್ಥಳೀಯ ನಿವಾಸಿಗಳು ಹೇಳುತ್ತಾರೆ. ಅಲ್ಲದೆ, ಉದ್ದೇಶಿತ ‘ಎ.ಪಿ.ಜೆ ಅಬ್ದುಲ್‌ ಕಲಾಂ’ ಅವರ ಹೆಸರು ಇಡಬೇಕು ಎಂದು ಸ್ಥಳೀಯ ನಿವಾಸಿಗಳು ಅಭಿಪ್ರಾಯಪಟ್ಟರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry